ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಮಂಟಪ: ಜನ್ನನ ಕಾವ್ಯಕೃಷಿಗೆ ಪ್ರೇರಣೆ

Last Updated 28 ಜನವರಿ 2018, 10:31 IST
ಅಕ್ಷರ ಗಾತ್ರ

ಹಳೇಬೀಡು: ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಬಸ್ತಿಹಳ್ಳಿಯ ವಿಜಯಿ ಪಾರ್ಶ್ವನಾಥ ಬಸದಿ ಎದುರಿನ ಮುಖಮಂಟಪ ಜನ್ನ ಕವಿ ಕಾವ್ಯರಚನೆ ಮಾಡಿದ ಮಹತ್ವದ ಸ್ಥಳವಾಗಿದೆ.

ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದ್ದರೂ ಕನ್ನಡ ಸಾಹಿತ್ಯ ಲೋಕಕ್ಕೆ ಆಮೂಲ್ಯವಾದ ಕಾವ್ಯ ಗ್ರಂಥ ನೀಡಿದ ಆಕರ್ಷಕ ಮಂಟಪ ಸಾಹಿತ್ಯಾಸಕ್ತರು ಹಾಗೂ ಸಂಶೋಧಕರನ್ನು ಸೆಳೆಯುತ್ತಿದೆ.

12ನೇ ಶತಮಾನದ ಅಂತ್ಯ ಹಾಗೂ 13ನೇ ಶತಮಾನದ ಆರಂಭದಲ್ಲಿ ಜನ್ನ ಕವಿ ಹೊಯ್ಸಳರ ರಾಜಶ್ರಯ ಪಡೆದು, ಎರಡನೇ ವೀರಬಲ್ಲಾಳನ ಕಾಲದಲ್ಲಿ ಆಸ್ಥಾನ ಕವಿಯಾಗಿದ್ದನು. ಜನ್ನನ ಸೋದರ ಅಳಿಯ ಶಬ್ಧಮಣಿ ದರ್ಪಣ ರಚಿಸಿದ ಕೇಶಿರಾಜನಾದರೆ, ರಾಮಚಂದ್ರ ದೇವಮುನಿ ಧರ್ಮ ಗುರು ವಾಗಿದ್ದನು. ಎರಡನೇ ನಾಗವರ್ಮನಿಗೆ ಶಿಷ್ಯ. ತಂದೆ ಶಂಕರ ಸುಮನೋಬಾಣ, ತಾಯಿ ಗಂಗಾದೇವಿ, ಪತ್ನಿ ಲಕುಮಾದೇವಿ ಕಾವ್ಯ ರಚನೆಗೆ ಬೆನ್ನೇಲುಬಾಗಿದ್ದರು.

‘ಹೊಯ್ಸಳ ಸಾಮ್ರಾಜ್ಯದಲ್ಲಿ ಜನ್ನನ ಬರವಣಿಗೆಗೆ ಪ್ರಾಮುಖ್ಯತೆ ದೊರಕಿತ್ತು. ವಿಜಯಿ ಪಾರ್ಶ್ವನಾಥ ಬಸದಿಯ ಮುಖ ಮಂಟಪ ಜನ್ನನ ಬರವಣಿಗೆಗೆ ಪ್ರಶಸ್ತ ಸ್ಥಳವಾಗಿತ್ತು. ಹೀಗಾಗಿ ಜನ್ನ ಈ ಸ್ಥಳದಲ್ಲಿ ಜೈನಧರ್ಮದ 14 ನೇ ತೀರ್ಥಂಕರ ಅನಂತನಾಥ ತೀರ್ಥಂಕರರ ಪುರಾಣ ರಚಿಸಿದ ಎಂಬ ಮಾಹಿತಿಯಿದೆ’ ಎನ್ನು ತ್ತಾರೆ ಪುರಾತತ್ವ ಶಾಸ್ತ್ರಜ್ಞ ಪಿ.ಅರವಝಿ.

‘ವಿಜಯಿ ಪಾರ್ಶ್ವನಾಥ ಬಸದಿಯ ಮುಖಮಂಟಪವನ್ನು ಜನ್ನ ಕವಿಯೇ ನಿರ್ಮಿಸಿ ಅನಂತನಾಥ ಪುರಾಣ ರಚನೆ ಮಾಡಿದ್ದನು. 1000 ತಾಳೆಗರಿಯ ಪ್ರತಿಗಳನ್ನು ಬರೆಸಿ ಗೌರವಧನದೊಂದಿಗೆ ವಿದ್ವಾಂಸರಿಗೆ ನೀಡಿ ಪ್ರಾಚೀನ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದ’ ಎನ್ನುತ್ತಾರೆ ವಿದ್ವಾಂಸರು.

ಜನ್ನ ಆಸ್ಥಾನ ಕವಿ ಮಾತ್ರವಲ್ಲದೇ ಹೊಯ್ಸಳರ ನರಸಿಂಹ ಬಲ್ಲಾಳನ ಕಾಲದಲ್ಲಿ ಸೇನಾಧಿಪತಿ ನಂತರ ಮಂತ್ರಿಯೂ ಆಗಿದ್ದನು. ವಿಜಯಿ ಪಾರ್ಶ್ವನಾಥ ಬಸದಿಯ ಜೀರ್ಣೋದ್ಧಾರ ಕೆಲಸ ಮಾಡಿಸಿದ್ದ. ಅಮೃತಪುರದಲ್ಲಿರುವ ಶಿಲಾ ಶಾಸನ ಜನ್ನನಿಂದ ರಚಿತಗೊಂಡಿದ್ದು, ಯಶೋಧರ ಚರಿತೆ ಎಂಬ ಕಂದ ಪದ್ಯಗಳ ಕಾವ್ಯರಚನೆಗೆ ಎರಡನೇ ವೀರಬಲ್ಲಾಳನ ಕಾಲದಲ್ಲಿ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಗೌರವಿಸಲಾಗಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಎಚ್‌.ಎಸ್‌.ಅನಿಲ್‌ ಕುಮಾರ್‌

* * 

ತೀರ್ಥಂಕರರ ಪುರಾಣದೊಂದಿಗೆ ಹೊಯ್ಸಳರ ಸಾಮ್ರಾಜ್ಯದಲ್ಲಿಯೇ ನಡೆದ ಘಟನೆಗಳನ್ನು ಆಧರಿಸಿ ಯಶೋಧರ ಚರಿತೆ ಕಾವ್ಯವನ್ನು ರಸವತ್ತಾಗಿ ಜನ್ನ ರಚಿಸಿರಬಹುದು.
ಪಿ.ಅರವಝಿ ಪುರಾತತ್ವ ಶಾಸ್ತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT