ಗುರುವಾರ , ಜೂನ್ 17, 2021
22 °C

ಈ ಲೋಕದ ನಂಟಿಲ್ಲದಇ- ಲೋಕದ ಜನಮೇಜಯರು...

ಸಂಕೇತ್ ಗುರುದತ್ತ Updated:

ಅಕ್ಷರ ಗಾತ್ರ : | |

Prajavani

ನಮ್ ಸುಬ್ರಾಮು ಇತ್ತೀಚೆಗೆ ತುಂಬಾ ಬದಲಾಗಿದ್ದಾನೆ. ಅದರಲ್ಲೂ ‘ಫೋರ್ ಜಿ ಆ್ಯಂಡ್ರೈಡ್’ ಮೊಬೈಲ್ ಕೈಗೆ ಸಿಕ್ಕ ಮೇಲಂತೂ ಯಾರ ಮಾತನ್ನು ನೇರವಾಗಿ ಕೇಳಿಸಿಕೊಳ್ಳೋದೇ ಇಲ್ಲ. ಯಾಕಂದ್ರೆ ಯಾವಾಗಲೂ ಕಿವಿಗೆ ‘ಬ್ಲೂ ಟೂತ್’ ಸಿಕ್ಕಿಸಿಕೊಂಡೇ ಇರ್ತಾನೆ. ಹಾಗೂ ಏನಾದರೂ ಅವನನ್ನು ಮಾತಾಡಿಸಲೇಬೇಕೆಂದರೆ ಅವನಿಗೆ ಫೋನ್ ಮಾಡ್ಬೇಕು, ಇಲ್ಲಾಂದ್ರೆ ವಾಟ್ಸ್‌ಆ್ಯಪ್ ಮೆಸೇಜ್ ಕಳಿಸ್ಬೇಕು.

ಅದೂ ಅಲ್ಲದೇ ಮೂರೂ ಹೊತ್ತು ಲ್ಯಾಪ್‍ಟಾಪ್ ಸಾನಿಧ್ಯದಲ್ಲೇ ಇರೋದು ರೂಢಿ ಮಾಡಿಕೊಂಡಿದ್ದಾನೆ. ಹೌದು, ಇದಕ್ಕೆ ‘ಲ್ಯಾಪ್‍ಟಾಪ್’ ಎಂದು ಹೆಸರಿದ್ದರೂ ಒಮ್ಮೆಯೂ ತೊಡೆಯ ಮೇಲೆ ಇಡಲೇ ಇಲ್ಲ. ಒಂದೋ ಟೇಬಲ್ ಮೇಲೆ ಕುಕ್ಕಿಕೊಂಡು ಅದೇನೋ ಕುಟ್ತಾ ಇರ್ತಾನೆ. ಇಲ್ಲಾಂದ್ರೆ ಬೆನ್ಮೇಲೆ ಹೊತ್ತು ತಿರುಗ್ತಾ ಇರ್ತಾನೆ! ಆದ್ರೆ ಎಮ್ಮೆನ್ಸಿಯಲ್ಲಿ ಕೆಲಸ ಮಾಡೋ ಮಹಿಳಾಮಣಿಗಳು ತಮ್ಮ ಪುಟಾಣಿಗಳನ್ನು ಸ್ಟ್ರೋಲರ್‍ನಲ್ಲಿ ತಳ್ಳಿ ತಮ್ಮ ತೊಡೆಯ ಮೇಲೆ ಈ ‘ಲ್ಯಾಪ್‍ಟಾಪ್’ ಅನ್ನೋದನ್ನು ಮುದ್ದಿನಿಂದ ಕೂರಿಸಿಕೊಂಡಿರ್ತಾರೆ. ವಿಶ್ವದ ಎಲ್ಲಾ ವಿಚಾರಗಳ ಸುದ್ದಿಗಳಿಗೆ ಕಣ್ಣು–ಕಿವಿ ಕೊಡುವ ಜನಮೇಜಯರು ತಮ್ಮ ಮನೆಯಲ್ಲಿನ ಸಣ್ಣಪುಟ್ಟ ವಿಷಯಗಳಿಗೂ ಸ್ಪಂದಿಸದೇ ಇರ್ತಾರೆ.

ಅದೂ ಅಲ್ಲದೇ ಇರೋದು ಭೂಮಿಯ ಮೇಲಾದರೂ ಆಕಾಶದಲ್ಲೇ ಹಾರಾಡ್ತಿರ್ತಾರೆ. ಅತಿ ಎತ್ತರದಲ್ಲಿರೋ ಉದ್ದುದ್ದ ‘ಫ್ಲೈ ಓವರ್’ಗಳಲ್ಲಿ ‘ಫ್ಲೈ’ ಮಾಡ್ಕೊಂಡೇ ಹೋಗ್ತಾರೆ. ಯಾವಾಗಂದ್ರೆ ಆವಾಗ ಲ್ಯಾಪ್‍ಟಾಪ್ ಓಪನ್ ಮಾಡಿ ‘ಸ್ಕೈ’ಪ್‌ನಲ್ಲಿಯೇ ವಿಹಾರಿಸುತ್ತಾ ಅಲ್ಲೇ ಕಳೆದುಹೋಗ್ತಾರೆ. ಅಲ್ಲೇನು ನಾರದರೋ, ಸುರಸುಂದರಿಯರೋ, ದೇವಾನುದೇವತೆಗಳೋ, ಯಾರ್ಯಾರು ಇರ್ತಾರೋ? ಯಾರಿಗೆ ಗೊತ್ತು?

ಯಾವುದೇ ಸಾಫ್ಟ್‌ವೇರ್ ಅನ್ನು ಓಪನ್ ಮಾಡಿದ್ರೂ ಕ್ಲೌಡ್ ಬೇಸ್ಡ್ ಆಗಿರುತ್ತೆ. ಎಲ್ಲವೂ ಕ್ಲೌಡ್ ಕಂಪ್ಯೂಟಿಂಗ್ನಲ್ಲೇ ಆಗ್ಬೇಕು. ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ ಅಂತಾ ಯಾವಾಗಲೂ ಕ್ಲೌಡ್‍ನಲ್ಲೇ ಕೂತಿರ್ತಾರೆ. ಮೋಡಗಳನ್ನು ನೋಡುತ್ತಾ ಕವನ ಕಟ್ಟುವ ಕಾಲವೊಂದಿತ್ತು. ಈಗ ಅದೇ ಮೋಡದಲ್ಲೇ ಬ್ಯಾಂಕ್‍ನ ಲಾಕರ್‍ನಲ್ಲಿ ಇಟ್ಟಷ್ಟೇ ಜೋಪಾನವಾಗಿ ತಮ್ಮ ಅತ್ಯಮೂಲ್ಯವಾದ ಕಡತಗಳನ್ನು ತುಂಬಿಸಿಡ್ತಾರಂತೆ! ಎಲ್ಲಾ ಕೆಲಸ–ಕಾರ್ಯಗಳು ಕ್ಲೌಡ್ ಬೇಸ್ಡ್!

ನಮ್ಮ ರಸಿಕ ಕಾಳಿದಾಸ ಆ ಕಾಲದಲ್ಲೇ ಬುದ್ಧಿವಂತ ಅಭಿಯಂತರನೂ ಆಗಿದ್ದನೇನೋ ಯಾರು ಬಲ್ಲರು? ಆ ಕಾಲದಲ್ಲೇ ‘ಮೇಘದೂತ’ ಬರೆದಿದ್ದ. ‘ಕ್ಲೌಡ್’ ಕಂಪ್ಯೂಟಿಂಗ್, ‘ಸ್ಕೈ’ಪ್ ಮೆಸೇಜ್‍ನ ಕಾನ್ಸೆಪ್ಟ್‌ಗಳನ್ನು ಆಗಲೇ ಪ್ರಸ್ತುತಪಡಿಸಿದ್ದನೋ ಏನೋ? ಆದರೆ ಆಗ ಯಾವುದೇ ಲ್ಯಾಪ್‍ಟಾಪ್, ಇಂಟರ್ನೆಟ್‍ಗಳಿಲ್ಲದೇ ‘ಮೇಘದೂತ’ನ ಸಹಾಯದಿಂದ ಮೇಘಸಂದೇಶ ರವಾನಿಸಿದ್ದು ಸೋಜಿಗವಲ್ಲದೆ ಬೇರಿನ್ನೇನು!

ಈಗ ನಾವೆಲ್ಲಾ ‘ಕಾಲ್’ದಾಸರಾಗಿದ್ದೇವೆ. ಎದುರಿಗಿನವರ ಮಾತಿಗಿಂತ ಮೊಬೈಲ್‌ನಲ್ಲಿ ಸ್ಫುರಿಸುವ ಮಾತಿಗೇ ದಾಸರಾಗಿದ್ದೇವೆ. ಮೊಬೈಲ್‍ನ ವಾಕ್ ಸಂದೇಶವು ಭೂಮಿಯಿಂದ ಮೇಘದಲ್ಲಿನ ಸ್ಯಾಟ್‍ಲೈಟ್‍ಗೆ ತಲುಪಿ ಮತ್ತೆ ಅದೇ ಮೇಘದ ಕಡೆಯಿಂದ ನಮ್ಮ ಕಿವಿಗೆ ರವಾನೆಯಾಗುವ ‘ಕಾಲ್’ ಕೂಡ ‘ಮೇಘ ಸಂದೇಶ’ವೇ ಅಲ್ವೇ?

ವಿಷಯಾಂತರ ಆಯಿತಲ್ಲವೇ... ಮತ್ತೆ ಸುಬ್ರಾಮು ವಿಷಯಕ್ಕೆ ಬರೋಣ. ತಾನು ಬುದ್ದಿವಂತನೆಂಬಂತೆಯೂ, ಕ್ಲೌಡ್ ಕಂಪ್ಯೂಟಿಂಗ್‍ನ ಬಗ್ಗೆ ತನಗೆ ಹೆಚ್ಚು ತಿಳಿದಿದೆಯೆಂದೂ ತನ್ನ ಪುಟ್ಟ ಮಗಳು ನೇಹಾಗೆ ಸುಬ್ರಾಮು ವಿವರಿಸಿ ಹೇಳ್ತಿದ್ದ. ಆಗ ಆ ಜಾಣೆ ಮಗಳು, ಡ್ಯಾಡಿ ಮಾತಿಗೆ ಮಧ್ಯದಲ್ಲಿ ಬ್ರೇಕ್ ಹಾಕಿದಳು.

‘ಡ್ಯಾಡಿ, ನಮ್ ಸೈನ್ಸ್ ಮಿಸ್ ಟೋಲ್ಡ್ ಇದ್ದಾರೆ. ಕ್ಲೌಡ್‍ನಿಂದಲೇ ರೈನ್ ಫಾಲ್ ಆಗೋದು ಅಂತಾ... ನೀನು ನೋಡಿದ್ರೆ ಕಂಪ್ಯೂಟರ್‍ನಲ್ಲಿ ಇರೋ ಫೈಲ್‍ನೆಲ್ಲಾ ಕ್ಲೌಡ್‍ನಲ್ಲಿ ಸೇವ್ ಮಾಡಬಹುದು ಅಂತ. ಅಲ್ಲಿಂದಲೇ ವರ್ಕೂ ಡೂ ಬಹುದು ಅಂತಾ ಇದ್ದೀಯಾ? ಕ್ಲೌಡ್‍ನಲ್ಲಿ ರೈನ್ ವಾಟರ್ ಇರೊಲ್ವಾ? ನಿನ್ನ ಫೈಲ್‍ಗಳೆಲ್ಲಾ ವೆಟ್ ಆಗಿ ಸ್ಪಾಯಿಲ್ ಆಗೊಲ್ವಾ?’ ಎಂದಳು.

ಮಗಳಿಗೆ ಈ ವಯಸ್ಸಲ್ಲಿ ಈ ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ಹೇಳಿದ್ದೇ ತಪ್ಪಾಯ್ತೇನೋ ಎನ್ನಿಸಿ ಆ ವಿಷಯವನ್ನು ಅಲ್ಲಿಗೆ ಬಿಟ್ಟ.

ಆದರೆ ಪುಟಾಣಿ ನೇಹಾ ಬಿಡಲಿಲ್ಲ. ‘ಹೌದೂ, ಕ್ಲೌಡ್‍ನಲ್ಲಿ ಮೂನ್ ಇರ್ತಾನಲ್ವಾ ಡ್ಯಾಡಿ, ಅವನೇನಾದರೂ ಅಲ್ಲಿಟ್ಟ ಫೈಲ್‍ಗಳನ್ನು ಓದ್ತಾನೇನೋ? ಅಲ್ದೇ ಅವು ಇನ್‍ಕಂಪ್ಲೀಟ್ ಆಗಿದ್ರೆ, ರಾಂಗ್ ಆಗಿದ್ರೆ ಅವನ್ನೆಲ್ಲಾ ಆ ಮೂನ್ ಕೂತು ಕರೆಕ್ಟ್ ಡೂ ತಾನೇನೋ? ಮತ್ತೆ ಸೇಮ್ ಪ್ಲೇಸ್‍ನಲ್ಲಿ ಪುಟ್ ತಾನೇನೋ? ಅದೂ ಓಕೆ, ಸನ್ ಬಂದ್ರೆ ಎಲ್ಲಾ ಫೈಲ್‍ಗಳೂ ಹೀಟ್ ಆಗಿ ಬರ್ನ್ ಆಗೋದ್ರೆ!’ – ಹೀಗೆ ನೇಹಾ ತನ್ನ ಡೌಟುಗಳನ್ನೆಲ್ಲ ಡ್ಯಾಡೀಗೆ ವರ್ಗಾಯಿಸಿದಳು.

ತಾನಿನ್ನು ಹೆಚ್ಚು ಮಾತಾಡಿದರೆ ಶ್ಯಾನೆ ಕಷ್ಟ ಎಂದರಿತ ಸುಬ್ರಾಮು, ‘ನೇಹಾ ಇವಕ್ಕೆಲ್ಲ ನನಗಿಂತ ನಿಮ್ಮಮ್ಮನೇ ಸರಿಯಾಗಿ ಉತ್ತರ ಕೊಡ್ತಾಳೆ. ನಿನಗೆ ಅರ್ಥವಾಗೋ ಹಾಗೇ ಹೇಳ್ತಾಳೆ, ಓಕೇನಾ?' ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ.

***

‘ಬೆಳಗಾಗೆದ್ದು ಯಾರ್ಯಾರ ನೆನೆಯಲಿ’‍ ಎಂದೋ, ‘ಕರಾಗ್ರೆ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೇ ಸದಾ ಗೌರಿ ಪ್ರಭಾತೇ ಕರ ದರ್ಶನಂ’ ಎಂಬಂತಿದ್ದ ಸುಬ್ರಾಮು ಇತ್ತೀಚೆಗೆ ಬೆಳಗಾಗೆದ್ದು ವೈಫ್‍ ಮುಖಾನೂ ನೋಡದೇ ವೈಫೈ ಆನ್ ಮಾಡ್ತಾನೆ. ಡೇಟಾ ಡೌನ್‍ಲೋಡ್ ಆಗದ ಹೊರತು ಟಾಯ್ಲೆಟ್ ಕಡೆಗೆ ಹೋಗಲ್ಲ, ತಾನೂ ಡೌನ್‍ಲೋಡ್ ಮಾಡಲ್ಲ. ಅಷ್ಟೂ ಸಾಲದೂ ಅಂತಾ ಹೂಸಿದ್ದೂ, ಕೆಮ್ಮಿದ್ದನ್ನೆಲ್ಲಾ ವಿಸ್ತಾರವಾಗಿ ತಿಳಿಯಲು ಗೂಗಲ್ ದೇವನ ಮೊರೆ ಹೋಗ್ತಾನೆ!

ದಿನವೂ ನಡೆದೇ ಹೋಗ್ತಿದ್ದ ಸುಬ್ರಾಮು ಈಗೀಗ ದೇವಸ್ಥಾನಕ್ಕೂ ಜಿಪಿಎಸ್ ಹಾಕಿಯೇ ಹೋಗ್ತಾನೆ. ಜಿಪಿಎಸ್ ನೋಡ್ತಾ ಎಲ್ಲಿ ಮ್ಯಾನ್ ಹೋಲ್‍ನಲ್ಲಿ ಜಾರ್ತಾನೋ ಅನ್ನೋ ಭಯ ಸುಬ್ರಾಮು ಅರ್ಧಾಂಗಿಗೆ. ಅದೂ ಅಲ್ದೇ ಈ ಸುಬ್ರಾಮು ಇತ್ತೀಚೆಗೆ ‘ಕ್ಯಾಷ್‍ಲೆಸ್’ ಆಸಾಮಿ ಆಗಿದ್ದಾನೆ ಅನ್ನೋದೇ ಸುಬ್ರಾಮು ವೈಫ್‍ನ ಕೊರಗು. ದೇವಸ್ಥಾನದ ಮಂಗಳಾರತಿ ತಟ್ಟೆಗೂ ಒಂದು ನಯಾ ಪೈಸೇನಾ ‘ಠಣ್’ ಎಂದು ಬೀಳಿಸಲ್ಲ. ಇನ್ನು ನೋಟಿನ ಮಾತು ಕೇಳುವ ಹಾಗೇ ಇಲ್ಲ. ದೇವಸ್ಥಾನದಲ್ಲೂ ಪೇಟೀಯೆಮ್, ಫೋನ್‍ಪೇಗಳ ಕ್ಯೂಆರ್ ಕೋಡ್‍ಗಳನ್ನು ತಗುಲಿಸಿದ್ದರೆ ಸ್ಕ್ಯಾನ್ ಮಾಡಿ ಒಂದಿಷ್ಟು ಹಣ ಸಂದಾಯ ಮಾಡಿ, ಪೂಜಾರಿ ಮುಖಕ್ಕೂ ಮೊಬೈಲ್ ಹಿಡೀತಿದ್ದ ಅನ್ನೋದು ಖಾತ್ರಿ. ‘ಫೋನ್‍ಪೇ’ ಮಾಡಿದ್ದಕ್ಕೆ ಒಂದಿಷ್ಟು ಪುಣ್ಯವೂ ಬರುತ್ತೆ, ಅದರೊಟ್ಟಿಗೆ ಒಂದಷ್ಟು ಕ್ಯಾಷ್‍ಬ್ಯಾಕೂ ಸಿಗುತ್ತೆ ಅನ್ನೋದು ಸುಬ್ರಾಮು ಲೆಕ್ಕಾಚಾರ!

ಮೊದಲೆಲ್ಲಾ ದೇವರು–ಗುರುಗಳು ಎಂದರೆ ಎಲ್ಲಿಲ್ಲದ ಭಯ. ನಿಜವಾದ ಭಕ್ತಿಯೂ ಇತ್ತು. ಈಗ ತೋರ್ಪಡಿಕೆಯೇ ಹೆಚ್ಚಾಗಿದೆ.

ಈಗ ಪ್ರತಿ ವೀಕ್ ಎಂಡ್‍ನಲ್ಲೂ ಪುರಾತನ ದೇವಾಲಯಗಳಿಗೆ ಪ್ರವಾಸ ಮಾಡಿ ಬರೋದು ಮಾಮಾಲಾಗಿದೆ. ಅಷ್ಟೇ ಅಲ್ಲದೆ ಆ ದೇವಾಲಯಗಳ ವಿಷಯವನ್ನೇ ಇಡೀ ವಾರ ತನ್ನ ಕೊಲೀಗ್‍ಗಳಿಗೆ ಹೇಳುತ್ತಾ ಜಂಬ ಕೊಚ್ಚಿ ಕೊಳ್ತಾನೆ. ಅಲ್ಲದೇ ಗುರುಗಳ ಬಗ್ಗೆ ಕೂಡ ನಿಜವಾದ ಭಕ್ತಿಯೂ ಇತ್ತು. ಆದರೀಗ ಫೇಮಸ್ ಗುರುಗಳ ಟಾಕ್ ಅನ್ನು ಯೂಟ್ಯೂಬ್‍ನಲ್ಲಿ ಹುಡುಕೋದು ಒಮ್ಮೆಯೂ ನೋಡದೇ, ಕೇಳಿಸಿಕೊಳ್ಳದೇ ತನ್ನ ಕೊಲೀಗ್‍ಗಳಿಗೆ ಲಿಂಕ್ ಶೇರ್ ಮಾಡೋದು ಮಾಮೂಲಾಗಿದೆ. ಹಿಂದೆಲ್ಲಾ ಅಡುಗೆಕೋಣೆಯ ಮೂಲೆಯಲ್ಲಿ ಕೂತು ಅಡುಗೆಯ ಘಮ ಘಮ ವಾಸನೆಯನ್ನೂ ಸಹಿಸಿಕೊಂಡು ಏಕಾಗ್ರಚಿತ್ತದಿಂದ ಧ್ಯಾನಾಸಕ್ತನಾಗುತ್ತಿದ್ದ ಸುಬ್ರಾಮು ಹೀಗಾಗಿದ್ದಾನೆ ಅನ್ನೋದೇ ಪರಮಾಶ್ಚರ್ಯ!

ಸುಬ್ರಾಮು ಹೊಸ ಕಾರು ಕೊಂಡ. ತನ್ನಲ್ಲಿರುವ ಗುರುಗಳ ಮೇಲಿನ ಭಕ್ತಿ ಪ್ರದರ್ಶನಕ್ಕಾಗಿ ಹೊಸ ಕಾರಿನ ಹಿಂಭಾಗ ದೊಡ್ಡದಾಗಿ ಚೆಂದದ ಫಾಂಟ್‍ನಲ್ಲಿ ಇಂಗ್ಲೀಷ್‍ನಲ್ಲಿ ‘ಸದ್ಗುರು’ ಎಂದು ಸ್ಟಿಕ್ಕರ್ ಹಾಕಿಸಿ ಆಫೀಸ್‍ಗೆ ‘ಭರ್’ ಅಂತ ಹೊರಟ. ಆದರೆ, ಸ್ಟಿಕ್ಕರ್ ಮಾಡುವ ಹುಡುಗ ‘ಎಸ್‍ ಎ ಡಿ’ ಗ್ಯಾಪ್ ‘ಜಿ ಯು ಆರ್ ಯು’ ಎಂದು ಹಾಕಿದ್ದ! ಆಗದು ‘ಸ್ಯಾಡ್ ಗುರು’ ಎಂದು ಓದಿಸುತ್ತಿತ್ತು. ಸುಬ್ರಾಮು ಮಾತ್ರ ಚೆಂದದ ಸ್ಟಿಕ್ಕರ್ ಹಾಕಿಸಿದ್ದೇನೆ ಎಂಬ ಭಕ್ತಿಭಾವದಲ್ಲಿ ಕಾರನ್ನು ಓಡಿಸುತ್ತಿದ್ದ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.