ವಿಜಯಪುರ: ಡಿ.13ರಿಂದ ಪ್ರಭುಲಿಂಗಲೀಲೆ ವಾಚನ-ವ್ಯಾಖ್ಯಾನ

7

ವಿಜಯಪುರ: ಡಿ.13ರಿಂದ ಪ್ರಭುಲಿಂಗಲೀಲೆ ವಾಚನ-ವ್ಯಾಖ್ಯಾನ

Published:
Updated:

ವಿಜಯಪುರ: ಭಾರತೀಯ ಸಂಸ್ಕೃತಿ ಉತ್ಸವ-5ರ ಅಂಗವಾಗಿ ಇದೇ 14ರಿಂದ 22ರವರೆಗೆ ಇಲ್ಲಿನ ಜ್ಞಾನಯೋಗಾಶ್ರಮದ ಆವರಣದಲ್ಲಿ ಚಾಮರಸನ ಪ್ರಭುಲಿಂಗಲೀಲೆ ವಾಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ ಎಂದು ಪರಂಪರೆ ಸಂಸ್ಥೆಯ ಕಾರ್ಯದರ್ಶಿ ಪಿ.ಕೃಷ್ಣಕುಮಾರ ತಿಳಿಸಿದರು.

ಪರಂಪರೆ ಸಂಸ್ಥೆ ಮತ್ತು ಸಿದ್ಧೇಶ್ವರ ಸಂಸ್ಥೆ ವತಿಯಿಂದ 9 ದಿನ ಸಂಜೆ 5.30 ರಿಂದ 7.30 ರವರೆಗೆ ವಿವಿಧ ವಿಷಯಗಳ ಕುರಿತು ಹಲವರು ವಾಚನ–ವ್ಯಾಖ್ಯಾನ ಮಾಡಲಿದ್ದಾರೆ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಡಿ.14ರಂದು ಸಂಜೆ 5.30ಕ್ಕೆ ನಮನಾಂಜಲಿ, 6ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 15 ರಂದು ಪಾರ್ವತಿಯ ಪ್ರತಿಜ್ಞೆ, ಮಾಯಾದೇವಿಯ ಬಾಲ್ಯ, 16 ರಂದು ಅಲ್ಲಮನಲ್ಲಿ ಮಾಯೆಯ ಮೋಡಿ, ಅಲ್ಲಮನ ವೃತ್ತಾಂತ, 17 ರಂದು ಬಸವಾದಿಗಳ ಅವತಾರ, ಮಹಾದೇವಿಯಕ್ಕನ ವಿರಕ್ತಿ, 18 ರಂದು ಗೊಗ್ಗಯ್ಯ ಮತ್ತು ಮುಕ್ತಾಯಕ್ಕನಿಗೆ ಉಪದೇಶ, 19 ರಂದು ಗೋರಕ್ಷ ಪ್ರಸಂಗ, 20 ರಂದು ಮಹಾದೇವಿಯಕ್ಕನಿಗೆ ಪ್ರಭು ಪ್ರಸನ್ನವಾದುದು, 21ರಂದು ಇಷ್ಟಲಿಂಗ ಮತ್ತು ಪ್ರಾಣಲಿಂಗೋಪದೇಶ, 22ರಂದು ಶೂನ್ಯ ಸಿಂಹಾಸನಾರೋಹಣ ವಿಷಯಗಳ ಕುರಿತು ಉಪನ್ಯಾಸಕರು ವಾಚನ-ವ್ಯಾಖ್ಯಾನ ಮಾಡಲಿದ್ದಾರೆ ಎಂದರು.

ಕನ್ನಡದ ಬಹುಪಾಲು ಕವಿಗಳು ಉತ್ತರ ಕರ್ನಾಟಕ ಪ್ರದೇಶದವರು. ಈಚೆಗೆ ಹಳೆಗನ್ನಡ ಕ್ಷೀಣಿಸುತ್ತಿದೆ. ಅವರ ಕಾವ್ಯಗಳು ಮತ್ತೆ ಈ ಭಾಗದಲ್ಲಿ ಜನ ಮಾನಸದ ಹತ್ತಿರಕ್ಕೆ ಬರಲಿ ಎನ್ನುವ ದೃಷ್ಟಿಯಿಂದ ಪರಂಪರೆ ಸಂಸ್ಥೆ ಕಳೆದ ಜುಲೈನಲ್ಲಿ ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಕುಮಾರವ್ಯಾಸ ಭಾರತದ ವಾಚನ-ವ್ಯಾಖ್ಯಾನ ನೀಡಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಐತಿಹಾಸಿಕ ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ ಚಾಮರಸನ ಪ್ರಭುಲಿಂಗಲೀಲೆಯ ವಾಚನ-ವ್ಯಾಖ್ಯಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಯುವ ಪೀಳಿಗೆಯಲ್ಲಿ ಹಳಗನ್ನಡದ ಕುರಿತು ಆಸಕ್ತಿ ಮೂಡಿಸಲು ಸಂಸ್ಥೆಯಿಂದ ಹಲವು ಶಾಲಾ-ಕಾಲೇಜುಗಳಲ್ಲಿ ಆಯಾ ತರಗತಿಗೆ ನಿಗದಿಯಾಗಿರುವ ಪಠ್ಯಗಳಲ್ಲಿನ ಹಳೆಗನ್ನಡ ಕಾವ್ಯಗಳ ಗಮಕ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ. ಈವರೆಗೆ ಸರ್ಕಾರದಿಂದ ಯಾವುದೇ ನೆರವನ್ನು ಪಡೆದಿಲ್ಲ. ರಾಜಕಾರಣಿಗಳನ್ನು ನಮ್ಮ ಬಳಿ ನುಸುಳಲು ಬಿಟ್ಟಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !