ಪರವಾನಗಿ ಇದ್ದರೆ ವಿದ್ಯುತ್-–-ನೀರು ಕೊಡಿ

7
ವಸತಿ ಪ್ರದೇಶದಲ್ಲಿರುವ ಅನಧಿಕೃತ ಮಳಿಗೆ ಮುಚ್ಚಿಸಿ: ಸಚಿವ ಪರಮೇಶ್ವರ ಸೂಚನೆ

ಪರವಾನಗಿ ಇದ್ದರೆ ವಿದ್ಯುತ್-–-ನೀರು ಕೊಡಿ

Published:
Updated:
Prajavani

ಬೆಂಗಳೂರು: ‘ಉದ್ದಿಮೆ ಪರವಾನಗಿ ಪಡೆಯದ ವ್ಯಾಪಾರಿ ಮಳಿಗೆಗಳಿಗೆ ಇನ್ನು‌ಮುಂದೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ನೀಡುವಂತಿಲ್ಲ. ವಸತಿ ಪ್ರದೇಶಗಳಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಹಾಗೂ ಅನಧಿಕೃತವಾಗಿ ವಾಣಿಜ್ಯ ವಹಿವಾಟು ನಡೆಸುವ ಮಳಿಗೆಗಳನ್ನು ಮುಲಾಜಿಲ್ಲದೆ ಮುಚ್ಚಿಸಿ’ ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ನೀಡಿರುವ ಕಟ್ಟುನಿಟ್ಟಿನ ಆದೇಶವಿದು.

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವ ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿಯಾಗುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಬಿಬಿಎಂಪಿ, ಬಿಡಿಎ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.

ಉದ್ದಿಮೆ ಪರವಾನಗಿ ಇಲ್ಲದ ಮಳಿಗೆಗಳಿಗೆ ವಿದ್ಯುತ್ ಹಾಗೂ‌ ನೀರಿನ ಸಂಪರ್ಕ ನೀಡಿರುವ ಬಗ್ಗೆ ಸಚಿವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅನಧಿಕೃತ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.

ಕೆಳಮಹಡಿಯನ್ನು ವಾಹನ ನಿಲ್ದಾಣಕ್ಕೆ ಮೀಸಲಿಡಬೇಕು. ಆ ಜಾಗವನ್ನೂ ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳುವುದು ಕಂಡುಬಂದರೆ ಅಂತಹವರ ಉದ್ದಿಮೆ ಪರವಾನಗಿ ರದ್ದುಗೊಳಿಸಿ ಎಂದರು.

‘ನಗರದ ಬಹುತೇಕ ರಸ್ತೆಗಳ ಪಾದಚಾರಿ‌ ಮಾರ್ಗಗಳನ್ನು ಪಕ್ಕದ ಮಳಿಗೆಗಳು ಒತ್ತುವರಿ ಮಾಡಿಕೊಂಡಿವೆ. ಎಲ್ಲೆಲ್ಲಿ ಇಂತಹ ಒತ್ತುವರಿ ನಡೆದಿದೆ ಎಂಬ ಬಗ್ಗೆ ನಿಮಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಶೀಘ್ರವೇ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ’ ಎಂದು ಸೂಚನೆ ನೀಡಿದರು.

‘ಸಂಚಾರ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಮಾಡುವವರನ್ನು ವಶಕ್ಕೆ ಪಡೆದು ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಸೇರಿಸಬೇಕು. ಈ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯ ನೆರವು ಪಡೆದು ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ 8 ಸಾವಿರ ಕಿ.ಮೀ. ಉದ್ದದಷ್ಟು ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ)  ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. ಅನಧಿಕೃತ ಒಎಫ್‌ಸಿ ತೆರವು ಕಾರ್ಯ ಮುಂದುವರಿಸುವಂತೆ ಸಚಿವರು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಇದು ಜಾರಿಯಾಗಬೇಕು. ಈ ಸಂಬಂಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

 

‘ಎಸ್‌ಸಿಪಿ-ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಿರಿ’

‘ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಎಸ್‌ಸಿಪಿ-ಟಿಎಸ್‌ಪಿ) ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ‌ ಮಾಡುವಂತಿಲ್ಲ. ಈ ಅನುದಾನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮನೆ ನಿರ್ಮಿಸಲು, ಅವರ ಶಿಕ್ಷಣಕ್ಕೆ ನೆರವಾಗಲು ಹಾಗೂ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಕಾಲೊನಿಗಳಿಗೆ ರಸ್ತೆ ಹಾಗೂ ಕುಡಿಯುವ ನೀರು ಪೂರೈಸುವುದಕ್ಕೆ ಮಾತ್ರ ಬಳಕೆ ಆಗಬೇಕು’ ಎಂದು ಪರಮೇಶ್ವರ್ ಸೂಚಿಸಿದರು.

‘ಕೆರೆಗೆ ಕೊಳಚೆ ನೀರು ಬಿಡುವ ಕಾರ್ಖಾನೆಗೆ ಬೀಗ ಹಾಕಿ’

‘ಕೆರೆಗಳಿಗೆ ಕೊಳಚೆ ನೀರನ್ನು ಹರಿಬಿಡುವ ಕೈಗಾರಿಕೆ, ಕಾರ್ಖಾನೆಗಳಿಗೆ ಕೇವಲ ನೋಟಿಸ್ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಅವುಗಳಿಗೆ ಬೀಗ ಹಾಕಿಸಿ. ಮಾಲಿನ್ಯ‌ ನಿಯಂತ್ರಣ ಮಂಡಳಿಯವರು ಪೊಲೀಸರೊಂದಿಗೆ ಇಂತಹ ಕೈಗಾರಿಕೆಗಳಿಗೆ ರಾತ್ರೋರಾತ್ರಿ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಬೇಕು. ಆಗ ಮಾತ್ರ ಕೊಳಚೆ ನೀರನ್ನು ಕದ್ದು ಮುಚ್ಚಿ ರಾಜಕಾಲುವೆಗೆ ಅಥವಾ ಕೆರೆಗೆ ಹರಿಯಬಿಡುವುದನ್ನು ನಿಯಂತ್ರಣಕ್ಕೆ ತರಬಹುದು‌’ ಎಂದು ಪರಮೇಶ್ವರ ಸಲಹೆ ನೀಡಿದರು.

ಕೆಲವು ಬಗೆಯ ಪ್ಲಾಸ್ಟಿಕ್‌ ವಸ್ತುಗಳ ತಯಾರಿ ಹಾಗೂ ಮಾರಾಟ ನಿಷೇಧ ಮಾಡಲಾಗಿದೆ. ಆದರೂ ಕೆಲ ಕೈಗಾರಿಕಾ ಘಟಕಗಳು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಯಲ್ಲಿ ತೊಡಗಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !