ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕೊ ಮೆಟ್ರೊದಲ್ಲಿ ಕಲಾವತರಣ

Last Updated 12 ಸೆಪ್ಟೆಂಬರ್ 2019, 11:10 IST
ಅಕ್ಷರ ಗಾತ್ರ

ನಾನು ಮಾಸ್ಕೊ ನಗರವನ್ನು ಪ್ರವೇಶಿಸಿದ್ದು ರೈಲು ಮಾರ್ಗವಾಗಿ. ಅಲ್ಲಿಂದ ನಾನು ವಾಸ್ತವ್ಯ ಮಾಡುವ ಹಾಸ್ಟೆಲ್‌ಗೆ ಮೆಟ್ರೊ ರೈಲಿನಲ್ಲಿ ಹೋಗಬೇಕಿತ್ತು. ಹಾಗಾಗಿ ನಿಲ್ದಾಣ ಹುಡುಕುತ್ತಿದ್ದೆ. ಅಲ್ಲಿದ್ದವರೊಬ್ಬರು, ‘ಆ ಕಡೆ ಹೋಗಿ’ ಎಂದು ಕೈ ತೋರಿದರು. ಅವರು ತೋರಿದ ದಿಕ್ಕಿನ ಕಡೆಗೆ ನೋಡಿದರೆ, ಅರಮನೆಯಂತೆ ಕಾಣುವ ಬೃಹತ್ ದ್ವಾರ ಕಂಡಿತು. ನನಗೆ ಸಂಶಯ ಮೂಡಿತು. ಅಲ್ಲಿ ಎಲ್ಲಿಯೂ ‘ಮೆಟ್ರೊ’ ಸೂಚನೆ ಇರಲಿಲ್ಲ. ಆದರೂ ಜನರು ಒಳಗೆ ಹೋಗುತ್ತಿದ್ದರು. ಕೊನೆಗೆ, ನಾನು ಅವರನ್ನು ಅನುಸರಿಸಿದೆ.

ಸುರಕ್ಷತೆಯ ಯಂತ್ರಗಳನ್ನು ದಾಟಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಯಾವುದೋ ಅರಮನೆಯ ಆವಾರ ಹೊಕ್ಕಂತಾಯಿತು. ವಿಶಾಲವಾದ ಪ್ರಾಂಗಣ. ಗೋಡೆಗಳ ಮೇಲೆ ಕಲಾಕೃತಿಗಳು. ಜಗಮಗಿಸುವ ಚಾಂಡಲಿಯರ್ ವಿದ್ಯುತ್ ದೀಪಗಳು ಕಣ್ಣು ಕೊರೈಸುವಂತಿತ್ತು. ಒಮ್ಮೆಲೇ ಸ್ವಚ್ಛ ಹಾಗೂ ಕಲಾತ್ಮಕ ವಾತಾವರಣದ ಅನಾವರಣ.

ಇದೆಲ್ಲವೂ ಸಾಮಾನ್ಯ ಎಂಬಂತೆ ತಮ್ಮ ಪಾಡಿಗೆ ತಾವು ತಲುಪುವ ಗಮ್ಯದೆಡೆಗೆ ಜನ ತೆರಳುತ್ತಿದ್ದರು. ಸುದೀರ್ಘವಾದ ಎಸ್ಕಲೇಟರ್‌ಗಳಲ್ಲಿ ಸುರಂಗದಲ್ಲಿರುವ ಮೆಟ್ರೊದತ್ತ ತಲುಪಿದಾಗಲೂ ಇದೇ ಭವ್ಯತೆಯ ದರ್ಶನ. ಪ್ರತಿಯೊಂದು ತಿರುವಿನಲ್ಲಿಯೂ ಕಲಾತ್ಮಕ ವಾತಾವರಣ. ಮೆಟ್ರೊ ಬೋಗಿ ಒಳಗಡೆ ನಮ್ಮ ಬೆಂಗಳೂರಿನ ಮೆಟ್ರೊದಂತೆ ಇದ್ದರೂ, ಇಲ್ಲಿಯ ನಿಲ್ದಾಣಗಳು ಯಾಕೆ ಇಷ್ಟು ಭವ್ಯವಾಗಿವೆ ಎಂಬ ಪ್ರಶ್ನೆ ಮನದೊಳಗೆ ಕಾಡುತ್ತಿತ್ತು.

ಕಮ್ಯುನಿಸ್ಟ್‌ ಕ್ರಾಂತಿಯ ನಂತರ ಸ್ಟಾಲಿನ್ ಯುಗದಲ್ಲಿ ಈ ಮೆಟ್ರೊ ನಿರ್ಮಾಣವಾಗಿದೆ. ಇಂಥ ಭವ್ಯವಾದ ಸಂಚಾರ ವ್ಯವಸ್ಥೆ ಮಾಸ್ಕೊದಲ್ಲಿರಬೇಕು ಎಂಬುದು ಅವರ ಕನಸಾಗಿತ್ತಂತೆ. ಆಗಲೇ ಖ್ಯಾತಿ ಪಡೆದಿದ್ದ ಲಂಡನ್ ನಗರದ ಸುರಂಗಮಾರ್ಗ ನಿರ್ಮಿಸಿದ ತಾಂತ್ರಿಕ ಪರಿಣಿತ ಎಂಜಿನಿಯರ್‌ಗಳನ್ನು ಕರೆತಂದು ಅವರ ಸಹಾಯದಿಂದ ಇದನ್ನು ನಿರ್ಮಿಸಲಾಯಿತು. ಹೊರ ದೇಶದವರ ಸಹಾಯ ಪಡೆಯುವುದು ಸೋವಿಯತ್ ಒಕ್ಕೂಟದ ನಿಯಮಕ್ಕೆ ವಿರುದ್ಧ. ಆದರೂ ಸರ್ವಾಧಿಕಾರಿ ಸ್ಟಾಲಿನ್, ಬೆಂಬಲ ಇದ್ದಿದ್ದರಿಂದ ಇದಕ್ಕೆ ಅನುಮತಿ ನೀಡಲಾಯಿತು. ಇದರ ಜತೆಗೆ, ಜನರಿಗೆ ಕಲೆ ಸವಿಯುವ ಅವಕಾಶ ಸಿಗಲಿ ಎಂಬ ಉದ್ದೇಶವಿದ್ದ ಕಾರಣ ಪ್ರತಿ ಮೆಟ್ರೊ ನಿಲ್ದಾಣವನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದೆ. ಇದರಿಂದ ಇಲ್ಲಿಯ ಸೊಬಗು, ಕಲಾದೃಷ್ಟಿಯನ್ನು ಜಗತ್ತಿನ ಬೇರೆ ಮೆಟ್ರೊಗಳಲ್ಲಿ ಕಾಣಲು ಸಾಧ್ಯವಿಲ್ಲ.

ಲಂಡನ್ ನಗರದ ಸುರಂಗಮಾರ್ಗ ಅತ್ಯಂತ ಹಳೆಯದಾದರೂ ಅಲ್ಲಿ ನಿರಸ ವಾತಾವರಣವಿದೆ. ಟೋಕಿಯೊ, ನ್ಯೂಯಾರ್ಕ್‌ ನಗರಗಳಲ್ಲಿಯೂ ಬೃಹತ್ ಪ್ರಮಾಣದ ಮೆಟ್ರೊ ಜಾಲವಿದೆ, ಆದರೆ ನನಗೆ ಮಾಸ್ಕೊ ಮೆಟ್ರೊದ ಅನುಭವ ಆದ ಮೇಲೆ ಇವೆಲ್ಲ ಸಪ್ಪೆ ಎನ್ನಿಸಿತು.

ಬೃಹತ್ ಸಂಚಾರ ಮಾರ್ಗ

1935ರಲ್ಲಿ ಆರಂಭವಾದ ಈ ಮೆಟ್ರೊ 360 ಕಿ.ಮೀ ಜಾಲ ಹೊಂದಿದೆ. 14 ವಿವಿಧ ಲೈನ್ ಮತ್ತು 212 ನಿಲ್ದಾಣಗಳಿವೆ. ಇವುಗಳಲ್ಲಿ 44 ನಿಲ್ದಾಣಗಳು ಐತಿಹಾಸಿಕ ಮಹತ್ವ ಹೊಂದಿವೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಮಾಸ್ಕೊ ನಗರದ ಮೇಲೆ ವಿಮಾನದಿಂದ ಬಾಂಬ್ ದಾಳಿ ನಡೆದಾಗ, ಈ ಸುರಂಗ ಮಾರ್ಗಗಳನ್ನು ಜನರು ಸುರಕ್ಷಿತ ಅಡಗುತಾಣಗಳನ್ನಾಗಿ ಬಳಸಿಕೊಂಡರು. ಪ್ರತಿ ದಿನ 9 ದಶಲಕ್ಷ ಜನ ಪಯಣಿಸುವ ಈ ಜಾಲ ಇತರ ದೇಶಗಳ ಮೆಟ್ರೊ ಸಂಚಾರಕ್ಕೆ ಹೋಲಿಸಿದಾಗ ಬಹಳ ಅಗ್ಗ. ಒಂದು ದಿನದಲ್ಲಿ ಬೇಕಾದಷ್ಟು ತಿರುಗಾಡಿದರೂ 55 ರೊಬಲ್ ಅಂದರೆ ₹55 ವೆಚ್ಚವಾಗುತ್ತದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಜನದಟ್ಟಣೆ ಕಡಿಮೆ ಇರುತ್ತದೆ. ಈ ವೇಳೆಯಲ್ಲಿ ಮೆಟ್ರೊ ನಿಲ್ದಾಣದ ಕಲಾಕೃತಿಗಳನ್ನು ಆಸ್ವಾದಿಸಲು ಸರಿಯಾದ ಸಮಯ.

ಮಾಸ್ಕೊ ಮೆಟ್ರೊದಲ್ಲಿ ಪ್ರಯಾಣ ಮಾಡುವುದು ಎಂದರೆ ಹೊಸ ಲೋಕವನ್ನು ಪ್ರವೇಶಿಸಿದಂತೆ. ಏಕೆ ಗೊತ್ತಾ, ಮೆಟ್ರೊ ಒಳಗಡೆ ಎಲ್ಲಾ ಉದ್ಘೋಷಣೆಗಳೂ ರಷ್ಯನ್‌ ಭಾಷೆಯಲ್ಲಿ ಇರುತ್ತವೆ. ಲಿಪಿಯೂ ಇಂಗ್ಲಿಷ್‌ನ ಹಾಗೆ ಕಂಡರೂ, ಬೇರೆಯದೇ ಆಗಿರುತ್ತದೆ. ಹಾಗಾಗಿ ನಾವು ಇಳಿಯಬೇಕಾದ ಸ್ಥಳ ಯಾವುದೆಂದು ಪತ್ತೆ ಮಾಡುವುದು ಸುಲಭವಲ್ಲ. ಆದರೆ ಇದಕ್ಕೆಲ್ಲ ಮೊಬೈಲ್‌ ಅಪ್ಲಿಕೇಷನ್‌ಗಳಿವೆ. ಇವು ಇಂಗ್ಲಿಷ್‌ನಲ್ಲಿ ಇರುವುದರಿಂದ ನಾವು ಹೋಗಬೇಕಾದ ಸ್ಥಳಕ್ಕೆ ಪಯಣಿಸುವುದು ಸುಲಭ.

ನೆರವಾಗುವ ಮೊಬೈಲ್ ಆ್ಯಪ್‌

ಮೊದಲಿಗೆ ನನಗೂ ಈ ಜಾಲದಲ್ಲಿ ಎಲ್ಲಿ ಕಳೆದು ಹೋಗುತ್ತೇನೋ ಎಂಬ ಭೀತಿ ಇತ್ತು. ಆದರೆ ಎರಡನೆಯ ದಿನ ಅದರ ಮೂಲ ರಚನೆ ಅರ್ಥವಾದ ನಂತರ ಸುಲಭವಾಗಿ ಎಲ್ಲಿ ಬೇಕಾದರೂ ಪ್ರಯಾಣ ಮಾಡಲು ಸಾಧ್ಯ ಎಂಬ ಅರಿವಾಯಿತು. ಕೆಲವೆಡೆ ಸಮಸ್ಯೆ ಎದುರಾದಾಗ ಜನರನ್ನು ಕೇಳಿದಾಗ ಅವರು ಸಹಾಯ ಮಾಡಲು ಸದಾ ಸಿದ್ಧರಿರುವುದು ಖುಷಿ ನೀಡಿತು. ಹೀಗಾಗಿ ಭಾಷೆ ಬಾರದಿರುವುದು ಪ್ರವಾಸದಲ್ಲಿ ತೊಂದರೆ ಅನಿಸಲಿಲ್ಲ.

ಇತರ ದೇಶಗಳ ಹಾಗೆ ಮೆಟ್ರೊ ಪ್ರಯಾಣಿಕರು ತಮ್ಮ ಮೊಬೈಲ್‌ ಲೋಕದಲ್ಲೇ ಮುಳುಗಿರುವುದರಿಂದ ಅವರ ಮುಖವನ್ನು, ಹಾವಭಾವನ್ನು ಅವಲೋಕಿಸುದೇ ನನ್ನ ಹವ್ಯಾಸವಾಗಿತ್ತು. ಒಂದೆಡೆ ರೈಲಿನ ಒಳಗಡೆ ಹೆಣ್ಣು ಮಗಳೊಬ್ಬಳು ತನ್ನ ಅಂಗವಿಕಲ ಮಗುವನ್ನು ಹಿಡಿದುಕೊಂಡು ಹಣ ಕೇಳುವ ದೃಶ್ಯ ಮನ ಕರಗಿಸುವಂತಿತ್ತು. ಪ್ರತಿ ಪ್ರಜೆಯ ಹಿತವನ್ನು ರಕ್ಷಿಸಲು ನಡೆದ ಕಮ್ಯುನಿಸ್ಟ್‌ ಕ್ರಾಂತಿಯ ನಂತರ ಇಂದು ರಷ್ಯಾದ ನಿಜ ಪರಿಸ್ಥಿತಿಯ ಅರಿವು ಮಾಡಿಕೊಡುವಂತ್ತಿತ್ತು!

ಇದೆಲ್ಲಕ್ಕಿಂತ ವಿಚಿತ್ರವೆನಿಸಿದ್ದು, ರಷ್ಯಾ ದೇಶದ ಅಸ್ಮಿತೆಯ ದ್ಯೋತಕವಾಗಿರುವ ಈ ಮಾಸ್ಕೊ ಮೆಟ್ರೊದ ಭವ್ಯತೆ. ಅಲ್ಲಿನ ಕಲಾಕೃತಿಗಳನ್ನು ಸವಿಯುವ, ಆಸ್ವಾದಿಸುವ ಸಮಯ, ಆಭಿರುಚಿ ಇಂದಿನ ಜನಾಂಗಕ್ಕೆ ಇದೆಯೆ ಎಂಬ ಪ್ರಶ್ನೆ. ವೇಗದ ಜೀವನಕ್ಕೆ ಜೀವ ತುಂಬುವ ಮೆಟ್ರೊದ ಪಯಣಿಗರಿಗಿಂತ ವಿದೇಶದಿಂದ ಬಂದ ಪ್ರವಾಸಿಗರನ್ನು ಈ ಕಲಾ ವಾತಾವರಣ ಹೆಚ್ಚು ಆಕರ್ಷಿಸುತ್ತಿದೆ!ನೀವು ಎಂದಾದರೂ ಮಾಸ್ಕೊಗೆ ಹೋದರೆ ಅಲ್ಲಿನ ಮೆಟ್ರೊದ ಅನುಭವ ಪಡೆಯು ವುದನ್ನು ಮರೆಯಬೇಡಿ. ಅದೊಂದು ವಿಶಿಷ್ಟ ಅನುಭವ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT