ಗುರುವಾರ , ಅಕ್ಟೋಬರ್ 17, 2019
24 °C

ಅಮೆರಿಕಾದಲ್ಲೊಂದು ಬಣ್ಣದ ಮನೆಗಳ ಲೋಕ ಕಾಟೇಜ್ ವಿಲೇಜ್

Published:
Updated:

ಎಲ್ಲಿ ನೋಡಿದರೂ ಗಾಢ ಬಣ್ಣದ ಮನೆಗಳು. ಒಂದಕ್ಕಿಂತಲೂ ಮತ್ತೊಂದು ಹೆಚ್ಚು ಆಕರ್ಷಣೀಯವಾಗಿವೆ. ಶೈಲಿಯಲ್ಲೂ ವಿಭಿನ್ನ. ಮನೆಯ ಮುಂದಿನ ವಿಶಾಲ ರಸ್ತೆಗಳ ಬದಿಯಲ್ಲಿ ಓಕ್ ಮರಗಳಿವೆ. ಈ ಮನೆಗಳನ್ನು ನೋಡಲೆಂದೇ ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತದೆ. ಈ ಮನೆಗಳಲ್ಲಿ ವಾಸವಿದ್ದು, ಬೇಸಿಗೆಯನ್ನು ಆರಾಮವಾಗಿ ಕಳೆಯುತ್ತಾರೆ.

ಅಮೆರಿಕದ ಮೆಸಚುಸೆಟ್ಸ್‌ ರಾಜ್ಯದ ಕೇಪ್‌ಕಾಡ್‌ ನಗರದ ದಕ್ಷಿಣಕ್ಕಿರುವ ಡ್ಯೂಕ್ಸ್‌ ಜಿಲ್ಲೆಯಲ್ಲಿರುವ ಒಂದು ದ್ವೀಪ ಮಾರ್ಥಾಸ್ ವಿನಿಯಾರ್ಡ್. 226 ಕಿ.ಮೀ ವಿಸ್ತೀರ್ಣವುಳ್ಳ ಈ ದ್ವೀಪ,‌ ಅಮೆರಿಕದ ಪೂರ್ವ ಕರಾವಳಿಯ ಮೂರನೇ ಅತಿ ದೊಡ್ಡ ದ್ವೀಪವಾಗಿದೆ. ಅನೇಕ ವಿಶೇಷತೆಗಳನ್ನು ಒಳಗೊಂಡಿರುವ ವಿನಿಯಾರ್ಡ್‌ಗೆ ಮೊದಲು ಸಮ್ಮರ್ ಕಾಲೊನಿ ಎಂದು ಹೆಸರುವಾಸಿಯಾಗಿತ್ತು.

ಮಾರ್ಥಾಸ್ ವಿನಿಯಾರ್ಡ್‌ನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಮೆಸಚುಸೆಟ್ಸ್‌ ರಾಜ್ಯದ ಪ್ರಥಮ ‘ಲೈಟ್ ಹೌಸ್’ ಇರುವ ಎಡ್ಗರ್ ಟೌನ್, ವಿಶಾಲವಾದ ಕಡಲ ಕಿನಾರೆಗಳು, ಜಪಾನೀಯರ ಉದ್ಯಾನ, ಆಕರ್ಷಕ ಮನೆಗಳು, ವಿಶಾಲವಾದ ಬೀದಿಗಳು, ಕುರಿ ಮತ್ತು ಒಂಟೆಯ ಮಿಶ್ರ ತಳಿಯಂತೆ ಕಾಣುವ ‘ಆಲ್ಪಾಕಾ’ ಪ್ರಾಣಿಗಳನ್ನು ಬೆಳೆಸುತ್ತಿರುವ ‘ಐಲ್ಯಾಂಡ್ ಆಲ್ಪಾಕಾ’, ಐಷಾರಾಮಿ ಹೋಟೆಲ್‌ಗಳು, ನೈಟ್ ಕ್ಲಬ್ ಗಳು... ಹೀಗೆ ಹಲವು ಆಕರ್ಷಣೆಗಳಿವೆ. ಇವೆಲ್ಲವಕ್ಕೂ ಮಿಗಿಲಾಗಿ ‘ಓಕ್ ಬ್ಲಫ್ಸ್‌’ನಲ್ಲಿರುವ  ‘ಜಿಂಜರ್ ಬ್ರೆಡ್’ ಮನೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ.

ಮನೆಗಳ ಶೈಲಿ ವಿಭಿನ್ನ

‘ಜಿಂಜರ್ ಬ್ರೆಡ್’ ಮನೆಗಳು ವೆಸ್ಲಿಯನ್ ಸಮುದಾಯದ ಇತಿಹಾಸ ಹಾಗೂ ಧಾರ್ಮಿಕ ವಿಷಯಗಳನ್ನು ಪರಿಚಯಿಸುತ್ತವೆ. ಗಾಢ ಬಣ್ಣಗಳ ಮನೆಗಳು ಪ್ರಥಮ ನೋಟದಲ್ಲೇ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪ್ರತ್ಯೇಕವಾಗಿ ಅಲಂಕರಿಸಲ್ಪಟ್ಟ ಕುಟೀರಗಳು, ಕ್ಯಾಂಡಿ ರೀತಿಯ ಸ್ತಂಭಗಳು ಮತ್ತು ವಿಶಿಷ್ಟವಾದ ಅಲಂಕಾರ, ಕಣ್ಣು ಕುಕ್ಕುವಂತಹ ಢಾಳ ಬಣ್ಣಗಳು ಮನೆಗಳ ವಿಶೇಷ.

ಎಲ್ಲಾ ಮನೆಗಳನ್ನು ಮರದ ಹಲಗೆಗಳಿಂದ ಕಟ್ಟಿದ್ದಾರೆ ನೂರಾರು ವರ್ಷಗಳ ಹಳೆಯ ಮನೆಗಳಾದರೂ ನೋಡಲು ಹೊಸ ಮನೆಗಳಂತೆ ಕಾಣುತ್ತವೆ. ಇಲ್ಲಿನ ಮನೆಗಳ ಮುಂದೆ ತೂಗು ಹಾಕಲಾದ ಹೂವಿನ ಕುಂಡಗಳು, ಚಾವಣಿಯ ಮೇಲೆ ನೇತಾಡುವ ಸುರುಳಿಯಾಕಾರದ ಮರದ ಅಲಂಕಾರಗಳು ಮನೆಯ ಅಂದ ಹೆಚ್ಚಿಸಿವೆ. ಅಂಗಳದ ಹೂತೋಟದಲ್ಲಿರುವ ಬಣ್ಣ ಬಣ್ಣದ ಹೂಗಳು ಮನಸೆಳೆಯುತ್ತವೆ. ಎಲ್ಲ ಮನೆಗಳ ಸುತ್ತಲೂ ಗೂಟಗಳಿಂದ ನಿರ್ಮಿಸಲಾದ ಫೆನ್ಸಿಂಗ್, ಇಳಿಜಾರಾದ ಮನೆಯ ಚಾವಣಿಗಳು, ಡೇರೆಗಳ ಸೂರನ್ನು ನೆನಪಿಸುತ್ತವೆ. 

ಇಷ್ಟೆಲ್ಲ ತಿಳಿದ ಮೇಲೆ ಹೊರಟಿದ್ದು..

ಕಾಟೇಜ್‌ ವಿಲೇಜ್‌ ಬಗ್ಗೆ ಇಷ್ಟೆಲ್ಲ ಮಾಹಿತಿ ಸಂಗ್ರಹಿಸಿದ ಮೇಲೆ ಅಲ್ಲಿಗೆ ಹೋಗಲು ತೀರ್ಮಾನಿಸಿದ್ದೆವು. ನಾವು ಉಳಿದಿದ್ದು ಅಮೆರಿಕದ ಮೆಸಚುಸೆಟ್ಸ್‌ ರಾಜ್ಯದ ಬಾಸ್ಟ್‌ನ ನಗರದ ವಾಲ್ತಾಮ್‌ನಲ್ಲಿರುವ ಹಯಾತ್‌ಹೌಸ್‌ ಹೋಟೆಲ್‌ನಲ್ಲಿ. ಅಲ್ಲಿಂದ ಮಾರ್ಥಾಸ್‌ ವಿನಿಯಾರ್ಡ್‌ಗೆ(ಕಾಟೇಜ್‌ ವಿಲೇಜ್‌)‌ ಹೊರಟೆವು. ಒಂದು ದಿನದ ಪ್ರವಾಸಕ್ಕೆ ಬೇಕಾದ ಪ್ಲಾನ್‌ ಮಾಡಿ ಮೊದಲೇ ಟಿಕೆಟ್ ಕಾದಿರಿಸಿದ್ದೆವು.

ವಾಲ್ತಾಮ್‌ನಿಂದ ಸುಮಾರು 112 ಕಿ.ಮೀ ದೂರದಲ್ಲಿರುವ ‘ಕ್ವಿನ್ಸಿ ಮಾರ್ಕೆಟ್’ನಿಂದ ಬಸ್ಸು ಹೊರಡುತ್ತದೆ. ನಾವು ಮುಂಜಾನೆ ಹೋಟೆಲ್‌ನಿಂದ ಕಾರಿನಲ್ಲಿ ಹೊರಟು ಏಳು ಗಂಟೆಗೆ ‘ಕ್ವಿನ್ಸಿ ಮಾರ್ಕೆಟ್’ ತಲುಪಿದೆವು. 7.30ಕ್ಕೆ ಪ್ರವಾಸಿಗರನ್ನು ಹೊತ್ತ ಬಸ್ಸು, ಒಂದು ಗಂಟೆ ಪ್ರಯಾಣದ ನಂತರ ‘ವುಡ್ಸ್ ಹೋಲ್ ಹೆವೆನ್’ ತಲುಪಿತು. ಮಾರ್ಥಾಸ್ ತಲುಪಲು ಪ್ರವಾಸಿಗರು ಫೆರ‍್ರಿ ಅಥವಾ ವಿಮಾನ ಬಳಸಬೇಕು. ನಮ್ಮ ತಂಡದ 50 ಪ್ರವಾಸಿಗರು ಫೆರ‍್ರಿ ಮೂಲಕ ಹೊರಟೆವು. 505 ಮಂದಿ ಪ್ರವಾಸಿಗರನ್ನು ಹೊತ್ತು ಹೊರಟ ಫೆರ‍್ರಿ,  ಸಾ ಅಟ್ಲಾಂಟಿಕ್ ಸಾಗರದ ತಿಳಿ ನೀಲಿ ಬಣ್ಣದ ನೀರಿನಲ್ಲಿ ಸಾಗುತ್ತಿತ್ತು. ಸುಮಾರು 45 ನಿಮಿಷಗಳ ಈ ಪ್ರಯಾಣ ಅವಿಸ್ಮರಣಿಯ. ಪ್ರಯಾಣದಲ್ಲಿ ವಿಶ್ವದ ಅನೇಕ ದೇಶಗಳ ಪ್ರವಾಸಿಗರು ಪರಿಚಯವಾದರು. ಅವರ ದೇಶದ ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ಅವರ ಬಾಯಿಂದಲೇ ಕೇಳಿ ತಿಳಿದುಕೊಂಡಿದ್ದು ಆಸಕ್ತಿದಾಯಕ ಎನ್ನಿಸಿತು.

ಫೆರ‍್ರಿಯಿಂದ ಇಳಿದ ನಮ್ಮ ತಂಡ ನಮ್ಮ ಸಾರಿಗೆ ಬಸ್‌ ಮೂಲಕ ಗೈಡ್‌ ನೆರವಿನೊಂದಿಗೆ ‘ಓಕ್ ಬ್ಲಫ್ಸ್’ ಪಟ್ಟಣಕ್ಕೆ ಹೊರಟಿತು. ಓಕ್‌ ಬ್ಲಫ್ಸ್‌ ತಲುಪಿದ ನಂತರ ನಡೆದುಕೊಂಡೆ ‘ವಿಲೇಜ್ ಕಾಟೇಜ್’ ತಲುಪಿದೆವು. ಕಾಟೇಜ್ ಆವರಣ ಪ್ರವೇಶಿಸುತ್ತಲೇ ಬಿಳಿ, ಕೆಂಪು, ನೀಲಿ, ಹಳದಿ, ಕೆನೆ ಬಣ್ಣ.. ಹೀಗೆ ಹಲವು ಬಣ್ಣಗಳ ಮನೆಗಳನ್ನು ಕಂಡೆವು. ‘ಲಾವೈ ಎನ್ ರೋಸ್’ ಗುಲಾಬಿ ಬಣ್ಣದ ಮನೆಯ ಹೆಸರಾದರೆ, ನೇರಳೆ ಬಣ್ಣದ ಮನೆಯ ಹೆಸರು ‘ಪರ್ಪಲ್ ಏಂಜಲ್’. ಬಿಳಿ ಬಣ್ಣದ ಮನೆಯ ಹೆಸರು ‘ಕಾಸಾಬ್ಲಾಂಕಾ’.

ಪ್ರತಿ ಮನೆಗೆ ಇಟ್ಟಿರುವ ಹೆಸರಿನ ಹಿಂದೆ ದೊಡ್ಡ ಇತಿಹಾಸವೇ ಇತ್ತು. ಅದನ್ನು ಗೈಡ್‌ನಿಂದ ತಿಳಿದುಕೊಳ್ಳುವಾಗ ಮೈ ಮನಸ್ಸು ರೋಮಾಂಚನಗೊಳ್ಳುತ್ತಿತ್ತು. ಸುಸ್ಥಿತಿಯಲ್ಲಿರುವ, ಅಂದವಾಗಿರುವ, ಐತಿಹಾಸಿಕ ಮಹತ್ವ ಪಡೆದಿರುವ 200 ವರ್ಷಗಳಷ್ಟು ಹಳೆಯದಾದ ಈ ಮನೆಗಳನ್ನು ನೋಡುವುದೇ ಒಂದು ಸಂಭ್ರಮ.

ಅಲ್ಲೊಂದು ಮನೆಗೆ ‘ಕಾಟೇಜ್ ಮ್ಯೂಸಿಯಂ’ ಎಂದು ಫಲಕವಿತ್ತು. ಆ ಮನೆಯನ್ನು ಸುಮಾರು 80 ವರ್ಷದ ವೃದ್ದೆಯೊಬ್ಬರು ನಿರ್ವಹಿಸುತ್ತಿದ್ದರು. ಆ ಮನೆ ಆಕೆಯದ್ದೆ. ತನ್ನ ಮನೆಯನ್ನೇ ಸಂಗ್ರಹಾಲಯ ಮಾಡಿದ್ದರು. ಮನೆಯಲ್ಲಿ ನಾಲ್ಕು ತಲೆಮಾರುಗಳ ಐತಿಹಾಸಿಕ ಮಹತ್ವವುಳ್ಳ ವಸ್ತುಗಳನ್ನು ಶೇಖರಿಸಿ ಇಟ್ಟಿದ್ದಾರೆ. ಈ ಮನೆಯಲ್ಲಿ ನಾವೆಲ್ಲರೂ ಅಡ್ಡಾಡಿ ಅಂದಿನ ಕಾಲದ ಸೊಬಗನ್ನು ಸವಿದೆವು. ಈ ಸಂಗ್ರಹಾಲಯವನ್ನು ವೀಕ್ಷಿಸಲು 3 ಡಾಲರ್ ಪ್ರವೇಶ ಶುಲ್ಕ ನೀಡಿದೆವು.
ಬಾಡಿಗೆಗೂ ದೊರೆಯುತ್ತವೆ

ಇದನ್ನೂ ಓದಿ: ಅಮೆರಿಕಾ-ಯೊಸೆಮಿಟಿ ನ್ಯಾಷನಲ್ ಪಾರ್ಕ್ ಸಾಹಸಿ ಪ್ರವಾಸಿಗರ ಸ್ವರ್ಗ

4-5 ಜನರು ವಾಸಿಸಲು ಅಗತ್ಯವಿರುವ ಫ್ರಿಡ್ಜ್, ವಾಶಿಂಗ್ ಮಶಿನ್, ರೂಂ ಹೀಟರ್, ಏರ್ ಕಂಡೀಷನರ್, ಪೀಠೋಪಕರಣಗಳು, ಸುಸಜ್ಜಿತ ಅಡುಗೆ ಮನೆ ಹೀಗೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಹಲವು ಮನೆಗಳು ಬಾಡಿಗೆಗೂ ದೊರೆಯುತ್ತವೆ. ಒಂದು ವಾರಕ್ಕೆ 700 ಡಾಲರ್. ನಮಗೆ ಬೇಕಾದ ಮನೆಯನ್ನು ಮುಂಗಡವಾಗಿ ಆನ್‌ಲೈನ್ ಮೂಲಕ ಕಾದಿರಿಸಬೇಕು. ವಾಸವಿರುವ ಮನೆಗಳ ಒಳಾಂಗಣವನ್ನು ವೀಕ್ಷಿಸಲು ಪ್ರವಾಸಿಗರನ್ನು ತುಂಬು ಹೃದಯದಿಂದ ನಿವಾಸಿಗಳು ಸ್ವಾಗತಿಸುತ್ತಾರೆ. ಇದಕ್ಕಾಗಿ ಯಾವುದೇ ಶುಲ್ಕ ತೆರಬೇಕಾಗಿಲ್ಲ.

ಬೇಸಿಗೆ ಸೂಕ್ತ ಸಮಯ

‘ಕಾಟೇಜ್ ವಿಲೇಜ್’ಗೆ ಭೇಟಿ ನೀಡಲು ಬೇಸಿಗೆ ಸೂಕ್ತಕಾಲ. ಇದನ್ನು ಅರಿತ ನಂತರವೇ ನಾನು ಜುಲೈ ತಿಂಗಳಲ್ಲಿ ಹಲವು ಐತಿಹಾಸಿಕ ಮಹತ್ವದ ತಾಣಗಳನ್ನು ಹೊಂದಿರುವ ‘ಮಾರ್ಥಾಸ್ ವಿನಿಯಾರ್ಡ್’ನಲ್ಲಿ ಒಂದು ದಿನದ ಪ್ರವಾಸ ಮಾಡಿದೆ. ಇದೊಂದು ಪ್ರವಾಸಿ ಕೇಂದ್ರವಾಗಿದ್ದು, ಪ್ರವಾಸಿಗರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿ ಲಭ್ಯ. ದ್ವೀಪದಲ್ಲಿ ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯೂ ಇದೆ. ಇಲ್ಲಿಗೆ ಬರಲು ಅಮೆರಿಕದ ಹಲವು ಊರುಗಳಿಂದ ವಿಮಾನ ಸೌಲಭ್ಯವೂ ಇದೆ.

‘ಜಿಂಜರ್ ಬ್ರೆಡ್’ ಮನೆಗಳ ಇತಿಹಾಸ

1835ರಲ್ಲಿ ಹಳ್ಳಿಯಾಗಿದ್ದ ಈ ಭಾಗದಲ್ಲಿ ಪ್ರತಿ ಬೇಸಿಗೆಯಲ್ಲಿ ಮೆಥೋಡಿಸ್ಟ್‌‌ಗಳು ಧಾರ್ಮಿಕ ಸಭೆಗಳನ್ನು ನಡೆಸುತ್ತಿದ್ದರಂತೆ. ಮೊದಲಿಗೆ ಡೇರೆಗಳನ್ನು ಹಾಕಿಕೊಂಡು ಶಿಬಿರ ನಡೆಸಲಾಗುತ್ತಿತ್ತು. ಕಾಲಘಟ್ಟದಲ್ಲಿ ಈ ಪ್ರದೇಶ ಅಮೆರಿಕದ ಅತಿ ದೊಡ್ಡ ಶಾಶ್ವತ ಶಿಬಿರ ತಾಣಗಳಲ್ಲಿ ಒಂದಾಯಿತು. 1870 ರ ಹೊತ್ತಿಗೆ ಜನಪ್ರಿಯವಾಗಿದ್ದ ‘ಗೋಥಿಕ್’ ಶೈಲಿಯಲ್ಲಿ ಕುಟೀರ ಅಥವಾ ಮನೆಗಳನ್ನು ನಿರ್ಮಿಸಿದರು. ಮನೆಗಳ ನಡುವೆ ಜಾಗ ಬಿಡದೆ, ಸಾಲಾಗಿ ಒಂದಕ್ಕೊಂದು ತಾಗಿರುವಂತೆ ನಿರ್ಮಿಸಲಾಗಿರುವ ಮನೆಗಳು ಅನ್ಯೋನ್ಯತೆಯ ಸಂಕೇತವಾಗಿವೆ. ಇದನ್ನು 1880ರಲ್ಲಿ ‘ಕಾಟೇಜ್ ವಿಲೇಜ್‌’ ಎಂದು ನಾಮಕರಣ ಮಾಡಲಾಯಿತು. ನಂತರ 1907 ರಲ್ಲಿ ‘ಓಕ್ ಬ್ಲಫ್ಸ್’ ಎಂದು ಮರು ನಾಮಕರಣ ಮಾಡಲಾಯಿತು. ಆದರೆ ಇಂದಿಗೂ ಪ್ರವೇಶ ದ್ವಾರದ ಕಮಾನಿನಲ್ಲಿ ‘ಕಾಟೇಜ್ ವಿಲೇಜ್’ ಎಂಬ ಹೆಸರನ್ನೇ ಉಳಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಓಕ್ ಮರಗಳು ಇರುವುದರಿಂದ ‘ಓಕ್ ಬ್ಲಫ್ಸ್’ ಎಂಬ ಹೆಸರು ಬಂದಿರಲೂಬಹುದು.
ಮೊದಲಿಗೆ ಈ ಪ್ರದೇಶದಲ್ಲಿ 500 ಕುಟೀರಗಳಿದ್ದವು. ಈಗ 34 ಎಕರೆ ಪ್ರದೇಶದಲ್ಲಿ 318 ವಿಕ್ಟೋರಿಯನ್ ಕುಟೀರಗಳು ಹಾಗೂ ಮೆಥೋಡಿಸ್ಟ್ ಚರ್ಚ್ ಇದೆ. ಜನರ ಬಾಯಲ್ಲಿ ‘ಕಾಟೇಜ್ ವಿಲೇಜ್’ ಎಂದೇ ಪ್ರಖ್ಯಾತವಾಗಿದೆ.

ಚಿತ್ರಗಳು: ಲೇಖಕರವು

Post Comments (+)