ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುವಾಗಿಲು ಕಟ್ಟೆ

Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮನೆಗೆ ಅತಿಥಿಗಳು ಬಂದಿದ್ದರು. ಮರುದಿನ ಮಧ್ಯಾಹ್ನ ಊಟ ಮಾಡಿ ಹೊರಡುವೆವೆಂದರು. ಏನೋ ಮಾತಿನ ಮಧ್ಯೆ ಮೈಸೂರಿನ ಬಳಿಯ ಕಾವೇರಿ ನದಿಯ ಕಟ್ಟೆ ‘ಬಲಮುರಿ’ಯ ಪ್ರಸ್ತಾಪ ಬಂತು. ಅಂತಹದ್ದೇ ಒಂದು ಕಟ್ಟೆ ಸನಿಹದಲ್ಲೇ ಇದೆ ಎಂದಾಗ ಆಶ್ಚರ್ಯ ಅವರಿಗೆ. ಈ ಬಗ್ಗೆ ಕೇಳಿಯೇ ಇಲ್ಲವಲ್ಲ ಅನ್ನುವ ಉದ್ಗಾರ. ಮಧ್ಯಾಹ್ನ ಹೊರಡುವವರೆಗೆ ಸಮಯವಿದೆಯಲ್ಲಾ, ಹೋಗಿ ನೋಡಿ ಬರಬಹುದೇ ಎಂದೂ ಕೇಳಿದರು. ಒಂದೆರಡು ಗಂಟೆ ಸಮಯವಿದ್ದರೂ ಸಾಕು ಎಂದೆ.

ಮರುದಿನ ಬೆಳಿಗ್ಗೆ ತಿಂಡಿ ತಿಂದು ಹೊರಟೆವು. ಕಾರಿನಲ್ಲಿ ಹೋಗುತ್ತಾ ಹಾಲುವಾಗಿಲು ಕಟ್ಟೆ ಕಥೆ ಹೇಳಲು ಶುರುಮಾಡಿದೆ.

ಚಿಕ್ಕಮಗಳೂರು ಬಳಿಯ ಬಾಬಾಬುಡನ್‌ಗಿರಿಯಲ್ಲಿ ಹುಟ್ಟುವ ಯಗಚಿ ನದಿ, ಹೇಮಾವತಿಯ ಪ್ರಮುಖ ಉಪನದಿ. ಇದಕ್ಕೆ ಬದರಿ ಅಂತಲೂ ಹೆಸರಿದೆ. ಬೇಲೂರಿನ ಮೂಲಕ ಹರಿದು ಹಾಸನ ಜಿಲ್ಲೆಯನ್ನು ಸೇರುತ್ತದೆ. ಇಲ್ಲಿಂದ ಮುಂದೆ ಹರಿದು ಗೊರೂರಿನ ಬಳಿ ಹೇಮಾವತಿ ನದಿಯನ್ನು ಕೂಡಿಕೊಳ್ಳುತ್ತದೆ. ಬೇಲೂರಿನಲ್ಲಿ ಯಗಚಿ ನದಿಗೆ ದೊಡ್ಡ ಅಣೆಕಟ್ಟೆಯನ್ನು ಕಟ್ಟಿದ್ದಾರೆ. ಆದರೆ ಬಹಳ ಹಿಂದೆಯೇ ಈ ನದಿಗೆ ಮೂರು ಚಿಕ್ಕ ಅಣೆಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಅದರಲ್ಲೊಂದು ಹಾಸನ ನಗರದ ಸನಿಹದಲ್ಲೇ ಇರುವ ಹಾಲುವಾಗಿಲು ಕಟ್ಟೆ.

ಹಾಸನ ಜಿಲ್ಲೆ ಮತ್ತು ತಾಲ್ಲೂಕಿನ ತಟ್ಟೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ, ಯಗಚಿ ನದಿಯ ದಂಡೆಯ, ಗ್ರಾಮ ಹಾಲುವಾಗಿಲು. ಗಿಡ್ಡಮ್ಮ, ವೀರಭದ್ರೇಶ್ವರ, ಆಂಜನೇಯ, ಲಕ್ಷ್ಮಿ, ಬಸವ ಇತ್ಯಾದಿ ಹಲವು ದೇವಾಲಯಗಳು ಇಲ್ಲಿವೆ. ಸುಮಾರು ಎರಡು ಸಾವಿರದೊಳಗಿನ ಜನಸಂಖ್ಯೆ. ಹೆಚ್ಚಿನವರು ಕೃಷಿಯ ಮೇಲೆ ಅವಲಂಬಿತರಾಗಿದ್ದವರು. ಈಚೆಗೆ ಉದ್ಯೋಗ ಅರಸಿ ಪಟ್ಟಣ, ನಗರಗಳಿಗೆ ತೆರಳುತ್ತಿದ್ದಾರೆ.

ಇಷ್ಟು ಹೇಳುತ್ತಿರುವಾಗ ಹಾಸನದಿಂದ ಐದು ಕಿಲೋಮೀಟರ್ ದಾರಿ ಕ್ರಮಿಸಿದ್ದೆವು. ಹಾಸನ ನಗರದ ಒಳಚರಂಡಿಯ ಕೊಳಚೆ ನೀರಿನ ದುರ್ವಾಸನೆ ಬರಲು ಶುರುವಾಯಿತು. ಅದನ್ನು ಸಹಿಸಿಕೊಳ್ಳುವ ಹೊತ್ತಿಗೆ, ಹಾಲುವಾಗಿಲು ಗ್ರಾಮ ಸಿಕ್ಕಿತು. ಅಲ್ಲಿಂದ ಎಡಕ್ಕೆ ತಿರುಗಿ ಮತ್ತೊಂದು ಕಿಲೋಮೀಟರ್ ಸಾಗಿದಾಗ ನೀರು ಹರಿಯುವ ಶಬ್ದ ಕೇಳಲು ಶುರುವಾಯಿತು. ‘ಬಂತು ನೋಡಿ ಹಾಲುವಾಗಿಲು ಕಟ್ಟೆ’ ಎಂದೆ.

ಕಾರಿನಿಂದಿಳಿದು ಅರ್ಧ ಫರ್ಲಾಂಗಿನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದಾಗ ವಿಶಾಲವಾದ ಸರೋವರದಂತಹ ನೀರಿನ ಹರಹು ಕಾಣುತ್ತದೆ. ಏಳೆಂಟು ಮೆಟ್ಟಿಲು ಇಳಿದರೆ ಕಟ್ಟೆಯ ಮೇಲ್ಭಾಗಕ್ಕೆ ತಲುಪುತ್ತೇವೆ. ಸುಮಾರು ಹತ್ತು ಅಡಿಗಳಷ್ಟು ಎತ್ತರ, ಇಪ್ಪತ್ತು ಅಡಿಗಳಷ್ಟು ಅಗಲವಿರುವ ಅರ್ಧ ವೃತ್ತಾಕಾರದ ಕಟ್ಟೆಯಿದು. ಹಾಸನ ನಗರಕ್ಕೆ ನೀರು ಸರಬರಾಜು ಇಲ್ಲಿಂದಲೇ ಆಗುತ್ತಿತ್ತು. ನೀರು ಶುದ್ಧೀಕರಣ ಕೇಂದ್ರ ಈಗಲೂ ಇದೆ. ಆದರೆ ಸರಿಯಾದ ನಿರ್ವಹಣೆ ಇಲ್ಲ. ನದಿ ಇಲ್ಲಿ ಬಲತಿರುವು ತೆಗೆದುಕೊಂಡು ಹರಿವ ಕಾರಣ ಸಾಕಷ್ಟು ಮರಳಿನ ಸಂಗ್ರಹ ಕಟ್ಟೆ ಇರುತ್ತದೆ.

ಯಗಚಿ ನದಿಗೆ ಬೇಲೂರಿನಲ್ಲಿ ಅಣೆಕಟ್ಟೆ ಕಟ್ಟಿದ ಮೇಲೆ ಹಾಲುವಾಗಿಲಿನಲ್ಲಿನ ನೀರಿನ ಹರಿವು ಅಣೆಕಟ್ಟೆಯಿಂದ ಬಿಡುವ ನೀರಿನ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಹೆಚ್ಚು ನೀರಿದ್ದಾಗ ಕಟ್ಟೆಯ ಮೇಲೆ ಹರಿದು, ಜಲಪಾತದಂತೆ ಬಿದ್ದು ಮುಂದಕ್ಕೆ ಹರಿಯುತ್ತದೆ. ಅದೊಂದು ನಯನ ಮನೋಹರ ನೋಟ. ಕಟ್ಟೆ ಅರ್ಧ ಚಂದ್ರಾಕಾರದಲ್ಲಿರುವುದು ಸೊಬಗನ್ನು ಇನ್ನೂ ಹೆಚ್ಚಿಸುತ್ತದೆ. ಬೆಳ್ಳಕ್ಕಿ, ನೀರು ಕಾಗೆಗಳಂತಹ ಕೆಲವು ನೀರ ಹಕ್ಕಿಗಳನ್ನೂ ಇಲ್ಲಿ ಕಾಣಬಹುದು. ಕುರುಕಲು ತಿಂಡಿ ಅಥವಾ ಊಟ ಕಟ್ಟಿಕೊಂಡು ಹೋಗಿದ್ದರೆ ವನಭೋಜನದ ಆನಂದವನ್ನೂ ಅನುಭವಿಸಬಹುದು.

ಅರಣ್ಯ ಇಲಾಖೆಯ ಸುವ್ಯವಸ್ಥಿತ ನರ್ಸರಿ ಪಕ್ಕದಲ್ಲೇ ಇದೆ. ಸಾಕಷ್ಟು ಮರಗಳನ್ನು ಬೆಳೆಸಿರುವುದಲ್ಲದೆ, ಸಸಿಗಳನ್ನು ಬೆಳೆಸಿ ಸರಬರಾಜು ಮಾಡುತ್ತಾರೆ.

ಒಟ್ಟಿನಲ್ಲಿ ಗೆಳೆಯರೊಂದಿಗೆ, ಕುಟುಂಬದೊಂದಿಗೆ ತೆರಳಿ ಅರ್ಧ ದಿನದ ಪಿಕ್‌ನಿಕ್ ಮಾಡಲು ಸೂಕ್ತವಾದ ತಾಣ ಹಾಲುವಾಗಿಲು ಕಟ್ಟೆ. ನೀರಾಟ ಆಡುವಾಗ ಎಚ್ಚರ, ಪರಿಸರದ ಬಗ್ಗೆ ಕಾಳಜಿ ಇರಲೆಂದು ಇಲ್ಲಿಗೆ ಹೋಗುವವರಲ್ಲಿ ಪ್ರಾರ್ಥನೆ.

ಹಾಲುವಾಗಿಲು ಕಟ್ಟೆಗೆ, ಹಾಸನದಿಂದ 6 ಕಿ.ಮೀ, ಬೆಂಗಳೂರಿನಿಂದ ಸುಮಾರು 190 ಕಿ.ಮೀ ದೂರ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT