ಪಕ್ಷಿಗಳ ರಕ್ಷಣೆಗಾಗಿ ‘ಪ್ರೀತಿ ಸಿರಿ’ಯ ಅಭಿಯಾನ

7

ಪಕ್ಷಿಗಳ ರಕ್ಷಣೆಗಾಗಿ ‘ಪ್ರೀತಿ ಸಿರಿ’ಯ ಅಭಿಯಾನ

Published:
Updated:

‘ಬೇಸಿಗೆ ಸಮೀಪಿಸುತ್ತಿದೆ. ನಿಮ್ಮ ನಿಮ್ಮ ಮನೆಯ ಮೇಲೆ ಪಾತ್ರೆಗಳಲ್ಲಿ ನೀರಿಡಿ. ಬಾಯಾರಿದ ಹಕ್ಕಿಗಳಿಗೆ ನೀರಾಸರೆಯಾಗುತ್ತದೆ. ಬೊಗಸೆ ಕಾಳು ಇಡಿ. ಹಸಿದ ಹಕ್ಕಿಗಳಿಗೆ ಆಹಾರವಾಗುತ್ತದೆ...’ ಎಂದು ಬೇಸಿಗೆಯಲ್ಲಿ ಶುರುವಾಗುವ ಮಾಹಿತಿ ಅಭಿಯಾನ, ಮಳೆಗಾಲದ ವೇಳೆಗೆ ನಿಧಾನಕ್ಕೆ ಮರೆಯಾಗುತ್ತದೆ.

ಆದರೆ, ಹಕ್ಕಿಗಳಿಗೆ ಮನೆಯಂಗಳದಲ್ಲೇ ಶಾಶ್ವತವಾಗಿ, ಸ್ವಾಭಾವಿಕವಾಗಿ ಆಹಾರ ಲಭ್ಯವಾಗುವಂತಹ ಯೋಜನೆ ಯೊಂದನ್ನು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಬೆಳವಡಿಯ ತನುಜಾ ಮತ್ತು ನವೀನ್ ಕುಮಾರ್‌ ‘ಕಾರಂಜಿ ಟ್ರಸ್ಟ್‌’ ಮೂಲಕ ಆರಂಭಿಸಿದ್ದಾರೆ. ಇದರ ಮೂಲಕ ಪಕ್ಷಿಪ್ರಿಯರಿಗೆ ಉಚಿತವಾಗಿ ಆಹಾರ ಧಾನ್ಯಗಳ ಬೀಜಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಬೀಜ ಕೊಡುವ ಜತೆಗೆ, ಅವುಗಳನ್ನು ಎಲ್ಲಿ, ಹೇಗೆ ಬೆಳೆಸಬೇಕೆಂಬ ಸಲಹೆ ನೀಡುತ್ತಿದ್ದಾರೆ. ಈ ಬೀಜ ಹಂಚಿಕೆಯ ಅಭಿಯಾನಕ್ಕೆ ಪ್ರೀತಿ ‘ಸಿರಿ’ ಎಂದು ಹೆಸರಿಟ್ಟಿದ್ದಾರೆ.

ಆರು ತಿಂಗಳಿಂದ ಈ ಅಭಿಯಾನ ಆರಂಭವಾಗಿದೆ. ಆರಂಭದಲ್ಲಿ ತಮ್ಮ ಊರಿನ ಸಮೀಪವಿರುವ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಪಕ್ಷಿಗಳ ರಕ್ಷಣೆ, ಸಿರಿಧಾನ್ಯ ಆಹಾರದ ಕುರಿತು ಜಾಗೃತಿ ಮೂಡಿಸಿದ್ದಾರೆ. ಸಂಪರ್ಕದಲ್ಲಿರುವ ಗೆಳೆಯರಿಗೆ, ಶಾಲಾ ಶಿಕ್ಷಕರಿಗೆ ಸೇರಿದಂತೆ 500 ಕ್ಕೂ ಹೆಚ್ಚು ಆಸಕ್ತರಿಗೆ ಧಾನ್ಯಗಳ ಬೀಜಗಳನ್ನು ಕಳಿಸಿದ್ದಾರೆ. ಅವುಗಳನ್ನು ತಮ್ಮ ಮನೆಯಂಗಳದಲ್ಲಿ ಬಿತ್ತನೆ ಮಾಡಲು ಹೇಳಿದ್ದಾರೆ. ‘ಎರಡು ತಿಂಗಳ ಹಿಂದೆ ಬೀಜಗಳನ್ನು ಕಳಿಸಿದ್ದೆವು. ಈಗ ಅವೆಲ್ಲ ಮೊಳಕೆಯೊಡೆದು ಬೆಳೆವಣಿಗೆ ಹಂತದಲ್ಲಿವೆ. ಬೇಸಿಗೆ ಹೊತ್ತಿಗೆ ಕಾಳು ಕಟ್ಟುತ್ತವೆ. ಹಕ್ಕಿಗಳಿಗೆ ಆಹಾರವಾಗುತ್ತವೆ’ ಎನ್ನುತ್ತಾರೆ ಟ್ರಸ್ಟ್‌ನ ಪ್ರಮುಖರೊಬ್ಬಲ್ಲರಾದ ತನುಜಾ.

ಯಾವ್ಯಾವ ಧಾನ್ಯಗಳು ?

ಎಲ್ಲ ಹವಾಮಾನಕ್ಕೂ ಒಗ್ಗಿ ಬೆಳೆಯುವ, ಹಕ್ಕಿಗಳಿಗೆ ಪ್ರಿಯವಾಗುವ ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಆರ್ಕ, ಕೊರಲೆ, ಊದಲು, ಬರಗು ಬೀಜಗಳನ್ನು ಕಳುಹಿಸುತ್ತಿದ್ದಾರೆ. ಇದರ ಜತೆಗೆ ಜೋಳ, ಬಣ್ಣದ ಮುಸುಕಿನ ಜೋಳ, ಸೂರ್ಯಕಾಂತಿ ಬೀಜಗಳನ್ನು ಸೇರಿಸುತ್ತಿದ್ದಾರೆ.

ಈ ಧಾನ್ಯಗಳು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಎಲ್ಲ ಹವಾಮಾನಕ್ಕೆ ಒಗ್ಗಿ ಬೆಳೆಯುತ್ತವೆ. ಮನೆಯಂಗಳದಲ್ಲಿ ಇರುವಷ್ಟು ಜಾಗದಲ್ಲೇ ಸುಲಭವಾಗಿ ಬೆಳೆಯಬಹುದು. ಯಾವುದೇ ಆರೈಕೆ ಕೇಳುವುದಿಲ್ಲ. ಮುಖ್ಯವಾಗಿ ಗುಬ್ಬಚ್ಚಿ, ಗೀಜಗದಂತಹ ಪಕ್ಷಿಗಳಿಗೆ ಇದು ಪ್ರಿಯವಾದ ಆಹಾರ. ಹಾಗಾಗಿ ಇವುಗಳ ಬೀಜಗಳನ್ನೇ ಹಂಚುತ್ತಿದ್ದೇವೆ ಎನ್ನುತ್ತಾರೆ ಟ್ರಸ್ಟ್ ಸದಸ್ಯರು.

ಸಿರಿಧಾನ್ಯಗಳನ್ನು ಮನೆಯಂಗಳದಲ್ಲಿ ಬೆಳೆಸುವುದ ರಿಂದ, ಮನೆಯ ಸುತ್ತ ಹಸಿರಿನ ವಾತಾವರಣವಿರುತ್ತದೆ. ಹಕ್ಕಿಗಳು ಚಿಲಿಪಿಲಿ ಗುಟ್ಟತ್ತಾ ಹಾರಾಡುತ್ತಿರುತ್ತವೆ. ಆ ಕಲರವ ಕೇಳುವುದೇ ಒಂದು ಸೊಗಸು. ಪ್ರತಿ ಮನೆಯಲ್ಲೂ ಧಾನ್ಯಗಳನ್ನು ಬೆಳೆಯುವಂತಾದರೆ, ಜೀವವೈವಿಧ್ಯದ ವಾತಾವರಣ ಸೃಷ್ಟಿಯಾಗುತ್ತದೆ. ಹಕ್ಕಿಗಳು ತಿಂದು ಉಳಿಸಿದ ಧಾನ್ಯಗಳನ್ನು ಮನೆಗೆ ಬಳಸಿಕೊಳ್ಳಬಹುದು. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಭಿಯಾನ ಆರಂಭಿಸಿದ್ದೇವೆ ಎನ್ನುತ್ತಾ ಪ್ರೀತಿ ‘ಸಿರಿ’ ಪರಿಕಲ್ಪನೆಯನ್ನು ತನುಜಾ ವಿವರಿಸಿದರು.

ಜಾಲತಾಣಗಳ ಮೂಲಕ ಪ್ರಚಾರ

ಪಕ್ಷಿ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಟ್ರಸ್ಟ್ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಾಟ್ಸಪ್ ನಂಬರ್ ಹಂಚಿಕೊಂಡು, ಪಕ್ಷಿ ಪ್ರಿಯರನ್ನು ಸಂಘಟಿಸಿದ್ದಾರೆ. ‘ನಿಮ್ಮ ಮನೆಯಂಗಳದಲ್ಲಿ, ಹಿತ್ತಲಿನಲ್ಲಿ ಸಿರಿಧಾನ್ಯ ಬೀಜಗಳನ್ನು ಬೆಳೆಸಿರಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ಆಹಾರವಾಗುತ್ತವೆ. ಪಾತ್ರೆಯಲ್ಲಿ ನೀರು ಇಡಿ. ಬಾಯಾರಿದ ಪಕ್ಷಿಗಳಿಗೆ ನೀರಾಸರೆಯಾಗುತ್ತದೆ. ಮಕ್ಕಳಿಗೆ ಪಕ್ಷಿಗಳ ಮತ್ತು ಸಿರಿಧಾನ್ಯಗಳ ಪರಿಚಯವಾಗುತ್ತದೆ. ಭವಿಷ್ಯದ ಪೀಳಿಗೆಗೆ ನಾವು ಪಕ್ಷಿಗಳನ್ನು ಬಳುವಳಿಯಾಗಿ ಬಿಟ್ಟು ಹೋಗಬಹುದು’ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಾರೆ.

ಪಕ್ಷಿಗಳಿಗಾಗಿ ಮನೆಯಂಗಳದಲ್ಲಿ ಆಹಾರ ಧಾನ್ಯ ಬೆಳೆಸಲು ಆಸಕ್ತಿ ಹೊಂದಿರುವವರು ಕಾರಂಜಿ ಟ್ರಸ್ಟ್‌ನ 8792605846 ವಾಟ್ಸ್‌ಆ್ಯಪ್‌ ನಂಬರ್‌ಗೆ ನಿಮ್ಮ ವಿಳಾಸ ಕಳಿಸಬಹುದು.

ಆಸಕ್ತಿ ಹುಟ್ಟಿದ್ದು...

ಎಂಬಿಎ ಪದವೀಧರೆಯಾಗಿರುವ ತನುಜಾ, ಈ ಮೊದಲು ಚಾಮರಾಜನಗರದ ಅಮೃತಭೂಮಿಯ ಲ್ಲಿನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಟ್ರಸ್ಟ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಕಲಿತ ‘ಪರಿಸರ ಪ್ರಿಯ ಕೃಷಿ’ ಪಾಠವನ್ನು ತಮ್ಮ ಜಮೀನಿನಲ್ಲಿ ಅಳವಡಿಸುತ್ತಾ, ಸುತ್ತಲಿನ ಶಾಲಾ ಮಕ್ಕಳಲ್ಲೂ ಪರಿಸರ ಜ್ಞಾನ ಬೆಳೆಸಲು ಮುಂದಾದರು. ಹಿರಿಯ ಸಲಹೆ ಮೇರೆಗೆ ಕಾರಂಜಿ ಟ್ರಸ್ಟ್ ಆರಂಭಿಸಿದರು.

ಕೃಷಿ ಜತೆಗೆ ನರ್ಸರಿ ನಡೆಸುತ್ತಿರುವ ತನುಜಾ ಬ್ರದರ್ಸ್ ಅದರಿಂದ ಬರುವ ಸ್ವಲ್ಪ ಹಣವನ್ನು ಪ್ರೀತಿ ‘ಸಿರಿ’ ಅಭಿಯಾನಕ್ಕೆ ಬಳಸುತ್ತಿದ್ದಾರೆ. ‘ಪ್ರಕೃತಿಯೇ ಗುರು, ತಾಯಿ ಅಂತ ಭಾವಿಸಿದ್ದೇವೆ. ನನ್ನ ಸಹೋದರನೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ಪ್ರೊ.ಎಂಡಿಎನ್, ತೇಜಸ್ವಿ, ದೇವನೂರು ಮಹಾದೇವ ಅವರ ಚಿಂತನೆಗಳೇ ಪ್ರೇರಣೆ. ಸಹಜ ಕೃಷಿಕರಾದ ಕುಳ್ಳೇಗೌಡರು, ಉಗ್ರನರಸಿಂಹಗೌಡರು, ಗ್ರೀನ್‌ಪಾತ್‌ನ ಜಯರಾಂ ಸರ್, ಧಾರವಾಡದ ನೇಚರ್ ಫಸ್ಟ್ ಎಕೊ ವಿಲೇಜ್‌ನ ಪಂಚಾಕ್ಷಯ್ಯ ಹಿರೇಮಠ, ಪ್ರಶಾಂತ್ ಅವರಂತಹ ಅನೇಕರು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ‘ಟ್ರಸ್ಟ್’ ಒಡನಾಡಿಗಳನ್ನು ತನುಜಾ ಸ್ಮರಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !