ನಿವೇಶನ, ಮನೆ, ಕೃಷಿ ಜಮೀನು ದುಬಾರಿ

7
ಮಾರ್ಗಸೂಚಿ ದರ ಪರಿಷ್ಕರಣೆ: ನಗರ, ಪಟ್ಟಣ ಹಾಗೂ ಸುತ್ತಮುತ್ತ ಎರಡು–ಮೂರು ಪಟ್ಟು ಹೆಚ್ಚಳ

ನಿವೇಶನ, ಮನೆ, ಕೃಷಿ ಜಮೀನು ದುಬಾರಿ

Published:
Updated:

ಚಾಮರಾಜನಗರ: ರಾಜ್ಯದಾದ್ಯಂತ ಜನವರಿ 1ರಿಂದ ಜಾರಿಗೆ ಬರುವಂತೆ ‌ಪರಿಷ್ಕರಣೆಯಾಗಿರುವ ಸ್ಥಿರಾಸ್ತಿ ಮಾರ್ಗಸೂಚಿ ದರ ಜಿಲ್ಲೆಯಲ್ಲೂ ಅನುಷ್ಠಾನಕ್ಕೆ ಬಂದಿದೆ. ನಗರ ಪ್ರದೇಶಗಳಲ್ಲಿ  ಮಾರ್ಗಸೂಚಿ ದರ ಶೇ 40ರಿಂದ 100ರಷ್ಟು ಹೆಚ್ಚಳವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲೂ ಶೇ 10ರಿಂದ ಶೇ 40ರಷ್ಟು ಏರಿಕೆಯಾಗಿದೆ. ಹಾಗಾಗಿ, ನಿವೇಶನ, ಮನೆ, ಕೃಷಿ ಜಮೀನು ದುಬಾರಿಯಾಗಲಿದೆ. 

ಎರಡೂವರೆ ವರ್ಷಗಳಿಂದ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಿಸಿರಲಿಲ್ಲ.

ಜಿಲ್ಲೆಯ ಎರಡು ನಗರಸಭೆಗಳು (ಚಾಮರಾಜನಗರ ಮತ್ತು ಕೊಳ್ಳೇಗಾಲ) ಪುರಸಭೆ (ಗುಂಡ್ಲುಪೇಟೆ) ಹಾಗೂ ಪಟ್ಟಣ ಪಂಚಾಯಿತಿಗಳ (ಯಳಂದೂರು ಮತ್ತು ಹನೂರು) ಕೇಂದ್ರ ಭಾಗಗಳಲ್ಲಿ ಪ್ರತಿ ಚದರ ಮೀಟರ್‌ ಸ್ಥಿರಾಸ್ತಿಯ ಮಾರ್ಗಸೂಚಿ ದರ ಎರಡು, ಮೂರು ಪಟ್ಟು ಹೆಚ್ಚಳವಾಗಿದೆ. ತೀರಾ ಗ್ರಾಮೀಣ ಭಾಗಗಳಲ್ಲಿ ದರದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ.

ಈ ಹಿಂದೆ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ನಿಗದಿಪಡಿಸುವಾಗ ಒಂದು ಪ್ರದೇಶ ಅಥವಾ ರಸ್ತೆಯನ್ನು ಪರಿಗಣಿಸಲಾಗಿತ್ತು. ಆದರೆ, ಈ ಬಾರಿ ನಗರ, ಪಟ್ಟಣ ಪ್ರದೇಶಗಳಲ್ಲಿ ಬ್ಲಾಕ್‌/ರಸ್ತೆ/ ಅಡ್ಡರಸ್ತೆ/ ಬಡಾವಣೆ/ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ/ಸಿಐಡಿ) ಗುರುತಿಸಿ ಅದಕ್ಕೆ ದರ ನಿಗದಿಪಡಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಸರ್ವೆ ನಂಬರ್‌ ಅನ್ನು ಪರಿಗಣಿಸಲಾಗಿದೆ.

ಉದಾಹರಣೆಗೆ, ಚಾಮರಾಜನಗರದ ಪ್ರಮುಖ ರಸ್ತೆಯಾದ ಡೀವಿಯೇಷನ್‌ ರಸ್ತೆಯ ಇಕ್ಕೆಲಗಳ ನಿವೇಶನಗಳ ಮಾರ್ಗಸೂಚಿ ದರವನ್ನು ನಿಗದಿಪಡಿಸುವಾಗ ಭುವನೇಶ್ವರಿ ವೃತ್ತದಿಂದ ಶೃಂಗಾರ್‌ ಹೋಟೆಲ್‌ ಕಟ್ಟಡದವರೆಗೆ, ಅಲ್ಲಿಂದ ಉತ್ತರದ ತಿರುವಿನ ರಸ್ತೆಯವರೆಗೆ, ಉತ್ತರದ ತಿರುವಿನಿಂದ ದಕ್ಷಿಣಕ್ಕೆ ಸಂತೇಮರಹಳ್ಳಿ ವೃತ್ತದವರೆಗೆ... ಹೀಗೆ ಗುರುತಿಸಲಾಗಿತ್ತು. ಪರಿಷ್ಕೃತ ದರ ಪಟ್ಟಿಯಲ್ಲಿ ಆಸ್ತಿ ಗುರುತಿನ ಸಂಖ್ಯೆಯನ್ನು ನಮೂದಿಸಿ ಮಾರ್ಗಸೂಚಿ ದರ ನಿಗದಿ ಪಡಿಸಲಾಗಿದೆ.

ಭುವನೇಶ್ವರಿ ವೃತ್ತದಿಂದ ಶೃಂಗಾರ್‌ ಹೋಟೆಲ್‌ ಕಟ್ಟಡದವರೆಗೆ ಈ ಹಿಂದೆ ಪ್ರತಿ ಚದರ ಮೀಟರ್‌ಗೆ ₹ 25,300 ದರ ಇತ್ತು. ಈಗ ಅದು ₹ 45 ಸಾವಿರಕ್ಕೆ ಹೆಚ್ಚಳವಾಗಿದೆ. ಅಲ್ಲಿಂದ ಉತ್ತರಕ್ಕೆ ₹ 15,200 ಇದ್ದುದು, ₹ 40 ಸಾವಿರಕ್ಕೆ ಏರಿದೆ.

ಅಭಿವೃದ್ಧಿ ಹೊಂದಿರುವ, ಹೊಂದುತ್ತಿರುವ ಪ್ರದೇಶ ದುಬಾರಿ: ನಗರಸಭೆ, ಪುರಸಭೆ ಹಾಗೂ ಪಟ್ಟಣ ‍ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಗ್ರಾಮಗಳು ಹಾಗೂ ಸುತ್ತಮುತ್ತ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತಿರುವ ಪ್ರದೇಶಗಳಲ್ಲಿ ನಿವೇಶನ ಹಾಗೂ ಜಮೀನು ಖರೀದಿಸಲು ಜನರು ದೊಡ್ಡ ಮೊತ್ತವನ್ನೇ ತೆಗೆದಿರಿಸಬೇಕಾಗಿದೆ.

ಚಾಮರಾಜನಗರಕ್ಕೆ ಸಮೀಪದಲ್ಲಿರುವ ಉತ್ತುವಳ್ಳಿ ಗ್ರಾಮದಲ್ಲಿ ಈಗ ವೈದ್ಯಕೀಯ ವಿಜ್ಞಾನ ಕಾಲೇಜು ಆರಂಭವಾಗಿದೆ. ಅದೇ ಭಾಗದಲ್ಲಿ ಇನ್ನು ಕೃಷಿ ಕಾಲೇಜು ಹಾಗೂ ನಳಂದ ಬೌದ್ಧ ವಿಶ್ವವಿದ್ಯಾಲಯವೂ ತಲೆ ಎತ್ತಲಿದೆ. ಈ ಭಾಗದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ಮೌಲ್ಯ 16 ಪಟ್ಟು ಹೆಚ್ಚಾಗಿದೆ!

ಈ ಮೊದಲು, ಉತ್ತುವಳ್ಳಿ ಗ್ರಾಮದ ಸುತ್ತಮುತ್ತ ಒಂದು ಎಕರೆಯ ಮಾರ್ಗಸೂಚಿ ದರ ₹ 1.14 ಲಕ್ಷದಿಂದ ₹ 2.25 ಲಕ್ಷವರೆಗೆ ಇತ್ತು. ಅದೀಗ ₹ 17 ಲಕ್ಷದಿಂದ ₹ 20 ಲಕ್ಷದವರೆಗೆ ಹೆಚ್ಚಾಗಿದೆ.

ಅದೇ ರೀತಿ ಕರಿನಂಜನಪುರ ಗ್ರಾಮದ ಸುತ್ತಮುತ್ತಲಿನ ದರ ₹ 3.75 ಲಕ್ಷದಿಂದ ₹ 4.85 ಲಕ್ಷದವರೆಗೆ ಇತ್ತು. ಅದೀಗ ₹ 28 ಲಕ್ಷದಿಂದ 33 ಲಕ್ಷಕ್ಕೆ ಏರಿಕೆ ಕಂಡಿದೆ.

ನೋಂದಣಿಗೂ ತೆರಬೇಕು ಹೆಚ್ಚು ಹಣ

ಸ್ಥಿರಾಸ್ತಿ ಮಾರ್ಗಸೂಚಿ ಹೆಚ್ಚಳವಾಗಿರುವುದರಿಂದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕವೂ ಹೆಚ್ಚಳವಾಗಿದೆ. ನೋಂದಣಿಗೆ ಮೊದಲಿಗಿಂತ ಎರಡು–ಮೂರು ಪಟ್ಟು ಹೆಚ್ಚು ಹಣ ತೆರಬೇಕಾಗಿದೆ.

‘₹ 1 ಲಕ್ಷ ಬೆಲೆ ಬಾಳುವ ಆಸ್ತಿಯ ನೋಂದಣಿಗೆ ಈ ಮೊದಲು ₹ 5,000 ಶುಲ್ಕ ಪಾವತಿಸಬೇಕಿತ್ತು. ಈಗ ಆ ಆಸ್ತಿಯ ಬೆಲೆ ₹ 5 ಲಕ್ಷಕ್ಕೆ ಹೆಚ್ಚಳವಾಗಿದೆ. ಹಾಗಾಗಿ ನೋಂದಣಿಗೆ ₹ 30 ಸಾವಿರ ಆಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉಪ ನೋಂದಣಾಧಿಕಾರಿ ಕಚೇರಿಗೆ ಬಾರದ ಜನ

ಸ್ಥಿರಾಸ್ತಿ ಮಾರ್ಗಸೂಚಿ ಪರಿಷ್ಕೃತ ದರ ಜಾರಿಗೆ ಬರುತ್ತಿದ್ದಂತೆಯೇ ಆಸ್ತಿಗಳ ನೋಂದಣಿಗಾಗಿ ಉಪನೋಂದಣಾಧಿಕಾರಿ ಕಚೇರಿಗೆ ಬರುವವರ ಸಂಖ್ಯೆ ಇಳಿಕೆಯಾಗಿದೆ. 

‘ವಾರದಿಂದ ದೊಡ್ಡ ಮೊತ್ತದ ಆಸ್ತಿ ನೋಂದಣಿಯಾಗಿಲ್ಲ. ಸಣ್ಣ ಮೌಲ್ಯದ ‌ಆಸ್ತಿ ಖರೀದಿದಾರರಷ್ಟೇ ಬರುತ್ತಿದ್ದಾರೆ’ ಎಂದು ಚಾಮರಾಜನಗರ ತಾಲ್ಲೂಕು ಉಪನೋಂದಣಾಧಿಕಾರಿ ಜಿ.ಎನ್‌.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !