ಕೇಂದ್ರ ಬಜೆಟ್‌ ಖಂಡಿಸಿ ಖಾಲಿ ಡಬ್ಬ ಪ್ರದರ್ಶನ

ಸೋಮವಾರ, ಜೂಲೈ 22, 2019
27 °C

ಕೇಂದ್ರ ಬಜೆಟ್‌ ಖಂಡಿಸಿ ಖಾಲಿ ಡಬ್ಬ ಪ್ರದರ್ಶನ

Published:
Updated:
Prajavani

ಚಾಮರಾಜನಗರ: ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಜನ ಹಿತಾಶಕ್ತಿ ಹೋರಾಟ ವೇದಿಕೆಯ ಕಾರ್ಯಕರ್ತರು ಖಾಲಿ ಡಬ್ಬ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿದ ಬಳಿಕ ಬಜೆಟ್ ಮಂಡನೆ ಮಾಡುವಾಗ ಜನ ವಿರೋಧಿ ನೀತಿಯನ್ನೇ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ವಿಶೇಷವಾಗಿ ದಲಿತ ಸಮುದಾಯ, ರೈತರು ಮತ್ತು ಬಿಪಿಎಲ್ ಕುಟುಂಬ ವರ್ಗದವರಿಗೆ ಅನುಕೂಲವಾಗಬಹುದು ಎಂಬ ನಿಟ್ಟಿನಲ್ಲಿ ಭಾರಿ ವಿಶ್ವಾಸ ಹೊಂದಲಾಗಿತ್ತು. ಆದರೆ, ಇದು ಸುಳ್ಳಾಗಿ ಕೇವಲ ಬಂಡವಾಳಶಾಹಿಗಳು, ಶ್ರೀಮಂತರು, ಉಳ್ಳವರಿಗೆ ಅನುಕೂಲವಾಗುವಂತೆ ಮಾಡಿ ಜನರ ಕಣ್ಣಿಗೆ ಮಣ್ಣು ಎರಚಿದ್ದಾರೆ ಎಂದು ಆರೋಪಿಸಿದರು.

ಮೋದಿ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರನ್ನು ಉದ್ಧಾರ ಮಾಡುತ್ತಾರೆ ಎಂದು ನಂಬಿದ್ದ ದೇಶದ ಜನರ ಸ್ಥಿತಿ ಚಿಂತಾಜನಕವಾಗಿದೆ. ದಿನ ನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ. ಬಡವರ ಖಾತೆಗೆ  ₹ 15 ಲಕ್ಷ ಬರುತ್ತದೆ. ಉದ್ಯೋಗಗಳ ಸೃಷ್ಟಿಯಾಗಲಿದೆ ಎನ್ನುವ ಭರವಸೆ ಹುಸಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ನೀಡದೆ ಮಲತಾಯಿ ಧೋರಣೆ ಮಾಡಲಾಗಿದೆ. ಕೃಷಿ, ಉದ್ಯೋಗ, ದಲಿತ ಅಭಿವೃದ್ದಿ ಯೋಜನೆಗಳಿಗೆ ಕತ್ತರಿ ಹಾಕಿ ಕೇಂದ್ರ ಬಜೆಟ್ ಸಂಪೂರ್ಣ, ಜನ ವಿರೋಧಿ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜನ ಹಿತಾಶಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ನಿಜಧ್ವನಿ ಗೋವಿಂದರಾಜು, ಸಂಘಸೇನಾ, ಬಂಗಾರಸ್ವಾಮಿ, ಶರೀಫ್, ಜಗದೀಶ್, ನಾಗೇಂದ್ರೆಗೌಡ, ನಿರ್ಮಲಾ, ಶಾಂತರಾಜು, ಸಿದ್ದಪ್ಪಾಜಿ, ಚಂದ್ರಕುಮಾರ್, ಸೋಮಣ್ಣ, ಸಿದ್ದರಾಜು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !