ಸಚಿವರ ಮನೆಗೆ 10ರಂದು ಮುತ್ತಿಗೆ

ಗುರುವಾರ , ಜೂನ್ 27, 2019
30 °C

ಸಚಿವರ ಮನೆಗೆ 10ರಂದು ಮುತ್ತಿಗೆ

Published:
Updated:
Prajavani

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆಯಲ್ಲಿರುವ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಮನೆಗೆ ಮುತ್ತಿಗೆ ಹಾಕಲು ರೈತ ಸಂಘ ನಿರ್ಧರಿಸಿದೆ. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ರಾಜ್ಯಸರ್ಕಾರ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಲು ಯತ್ನಿಸುತ್ತಿದೆ. ರೈತರಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮಂತ್ರಿ ಆಗಿ ಒಂದು ವರ್ಷ ಕಳೆದರೂ ಜಿಲ್ಲೆಯ ರೈತರ ಸಭೆ ಕರೆದಿಲ್ಲ. ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು. 

‘ಜಿಲ್ಲೆಯ ಎಲ್ಲ ಕೆರೆಗಳ ಹೂಳೆತ್ತಿಸಿ, ಅವುಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಸಾಲಮನ್ನಾ ಮಾಡುತ್ತೇವೆ ಎಂದು ಸರ್ಕಾರ ಹೇಳಿದ್ದರೂ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದರು. 

‘ಇತ್ತೀಚೆಗೆ ಬೀಸಿದ ತೀವ್ರ ಗಾಳಿ ಮಳೆಯಿಂದ ರೈತರಿಗೆ ಸಾಕಷ್ಟು ಬೆಳೆ ನಷ್ಟವಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ, ಉಸ್ತುವಾರಿ ಸಚಿವರು, ಶಾಸಕರು ರೈತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಅವರು ಹೇಳಿದರು. 

‘ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಇದೇ 10ರಂದು ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಲಿದ್ದೇವೆ. ಯಳಂದೂರಿನ ಮಾರಮ್ಮನ ದೇವಸ್ಥಾನದಿಂದ ಉಪ್ಪಿನಮೋಳೆವರೆಗೂ ಮೆರವಣಿಗೆ ಹೋಗಿ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ. ರೈತರ ಸಭೆಯನ್ನು ಕರೆಯಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಅದಕ್ಕೆ ಒಪ್ಪುವರೆಗೂ ಮನೆ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಗುರುಪ್ರಸಾದ್‌ ಮಾತನಾಡಿ, ‘ತೋಟಗಾರಿಕಾ ಇಲಾಖೆಯಲ್ಲಿ ನರೇಗಾ ಅಡಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಕೃಷಿ ಇಲಾಖೆ ಹನಿನೀರಾವರಿ ಪದ್ಧತಿ ಅಳವಡಿಸಲು ವಿಫಲವಾಗಿದೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಗಣಿ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗಣಿ ಮಾಲೀಕರು ಸರಿಯಾಗಿ ರಾಜಧನ ಕೊಡುತ್ತಿಲ್ಲ. ಒಂದು ಟ್ರಿಪ್‌ನ ಬಿಲ್‌ ಹಿಡಿದುಕೊಂಡು 20 ಲೋಡ್‌ಗಳಷ್ಟು ಕಲ್ಲನ್ನು ಸಾಗಿಸುತ್ತಾರೆ. ಜಿಲ್ಲೆಯಲ್ಲಿ ಗಣಿಗಾರಿಕೆ ಆರಂಭವಾಗಿ 40 ವರ್ಷವಾಗಿದ್ದರೂ ಒಂದೇ ಒಂದು ತಪಾಸಣೆ ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಆರೋಪಿಸಿದರು.

ರೈತ ಸಂಘದ ಖಜಾಂಚಿ ಎಸ್‌.ಮಾಡ್ರಳ್ಳಿ ಮಹದೇವಪ್ಪ, ಚಾಮರಾಜನಗರ ತಾಲ್ಲೂಕು ಘಟಕದ ಉಪಾಧ್ಯಕ್ಷ ಪೃಥ್ವಿ, ಖಜಾಂಚಿ ವಿಜಯ್‌ಕುಮಾರ್‌ ಹೆಗ್ಗೋಠಾರ ಇದ್ದರು.

ಜಿಲ್ಲಾಧಿಕಾರಿ, ಸಿಇಒಗೆ ಕೃತಜ್ಞತೆ
ಹನೂರು ತಾಲ್ಲೂಕಿನ ಕುಗ್ರಾಮ ಹಾಗೂ ಮೂಲಸೌಕರ್ಯಗಳಿಂದ ವಂಚಿತವಾಗಿರುವ ದೊಡ್ಡಾಣೆಗೆ ಭೇಟಿ ನೀಡಿ, ಜನರೊಂದಿಗೆ ಸಮಾಲೋಚನೆ ನಡೆಸಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್‌.ಲತಾ ಕುಮಾರಿ ಮತ್ತು ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಅವರಿಗೆ ಹೊನ್ನೂರು ಪ್ರಕಾಶ್‌ ಅವರು ಕೃತಜ್ಞತೆ ಸಲ್ಲಿಸಿದರು.

‘ಉನ್ನತ ಅಧಿಕಾರಿಗಳು ಭೇಟಿ ನೀಡಿ ಗ್ರಾಮಕ್ಕೆ ರಸ್ತೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಈ ವಿಚಾರವಾಗಿ ನಾವು ಹಲವು ಸಮಯದಿಂದ ಹೋರಾಟ ಮಾಡುತ್ತಾ ಬಂದಿದ್ದೆವು. ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ಅಲ್ಲಿಗೆ ಭೇಟಿ ನೀಡಿಲ್ಲ. ಕನಿಷ್ಠ ಪಕ್ಷದ ಅಧಿಕಾರಿಗಳು ಗ್ರಾಮಸ್ಥರ ಕಷ್ಟ ಪರಿಹರಿಸಲು ಮುಂದಾಗಿರುವುದು ಸಂತಸ ತಂದಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !