ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

ಶುಕ್ರವಾರ, ಏಪ್ರಿಲ್ 26, 2019
24 °C
ವಿಜ್ಞಾನಕ್ಕೇ ಆದ್ಯತೆ, ಹುಡುಗಿಯರೇ ಜಾಣೆಯರು

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆ

Published:
Updated:

ಮಂಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಶೇ 90.91 ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಶೇ 92.20 ಫಲಿತಾಂಶ ದಾಖಲಿಸಿ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷ ಶೇ 91.41 ಫಲಿತಾಂಶ ದಾಖಲಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶದ ಪ್ರಮಾಣದಲ್ಲಿ ತುಸು ಇಳಿಕೆ  ಕಂಡು ಬಂದಿದ್ದರೆ, ಅತ್ತ ಉಡುಪಿ ಜಿಲ್ಲೆ ಪ್ರಗತಿ ದಾಖಲಿಸಿದೆ. 2016–17ರ ಸಾಲಿನಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಶೇ 89.92 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು. ಆದರೆ ಅದಕ್ಕೆ ಮುಂಚಿನ ಸತತ ಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು.

2015–16ರಲ್ಲಿ ಶೇ 90.48 ಫಲಿತಾಂಶ ಪಡೆದರೆ, 2014–15ರಲ್ಲಿ ಶೇ 93.09 ಫಲಿತಾಂಶ ಪಡೆದು ರಾಜ್ಯದ ಜನತೆಯ ಹುಬ್ಬೇರುವಂತೆ ಮಾಡಿತ್ತು. 2013–14ರಲ್ಲಿ ಶೇ 86.04 ಫಲಿತಾಂಶ ಬಂದರೂ ಮೊದಲ ಸ್ಥಾನ ಕಾಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

ಸಾಮಾನ್ಯವಾಗಿ ಫಲಿತಾಂಶದ ಸಂದರ್ಭದಲ್ಲಿ ಹುಡುಗಿಯರ ಮೇಲುಗೈ ಎಂಬ ಉಲ್ಲೇಖವಿದ್ದರೂ ಈ ಬಾರಿಯ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಪರೀಕ್ಷೆ ಬರೆದ ಹುಡುಗರ ಸಂಖ್ಯೆಯೇ ಹೆಚ್ಚು. ಈ ಬಾರಿ 19,153 ಮಂದಿ ಹುಡುಗರು ಪರೀಕ್ಷೆ ಬರೆದರೆ, 18,916 ಮಂದಿ ಹುಡುಗಿಯರು ಪರೀಕ್ಷೆ ಬರೆದಿದ್ದಾರೆ. ಆದರೆ ಹುಡುಗಿಯರ ಫಲಿತಾಂಶ ಶೇ 90.61 ದಾಖಲಾದರೆ ಹುಡುಗರ ಫಲಿತಾಂಶ ಶೇ 83.27 ದಾಖಲಾಗಿ ಸುಮಾರು ಶೇ 6ರಷ್ಟು ವ್ಯತ್ಯಾಸ ಗಮನಿಸಬಹುದು. 

ಅದೇ ರೀತಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಪಾಸಾದ ಪ್ರಮಾಣ ಶೇ 88.72 ಮತ್ತು ಕನ್ನಡ ಮಾಧ್ಯಮದ ಮಕ್ಕಳಲ್ಲಿ ಪಾಸಾದ ಪ್ರಮಾಣ ಶೇ 78.59. ಕಲಾವಿಭಾಗದಲ್ಲಿ ಆಂಗ್ಲ ಮಾಧ್ಯಮಕ್ಕಿಂತ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಸಂಖ್ಯೆಯೇ ಹೆಚ್ಚು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಜಿಲ್ಲೆಯಲ್ಲಿ ಕಲಾವಿಭಾಗವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದವರ ಸಂಖ್ಯೆಯೇ ಕೇವಲ 4,831.

ವಿಜ್ಞಾನವನ್ನು ಅತೀ ಹೆಚ್ಚು ವಿದ್ಯಾರ್ಥಿಗಳು ಅಂದರೆ 16,712 ಮಂದಿ ಆಯ್ಕೆ ಮಾಡಿಕೊಂಡಿದ್ದರೆ, ವಾಣಿಜ್ಯ ವಿಷಯವನ್ನು 16,526 ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ವಾಣಿಜ್ಯಕ್ಕಿಂತ ವಿಜ್ಞಾನ ವಿಷಯದಲ್ಲಿ ಫಲಿತಾಂಶ ಪ್ರಮಾಣ ಚೆನ್ನಾಗಿದೆ. ಶೇ 89.63 ರಷ್ಟು ವಿಜ್ಞಾನ ವಿದ್ಯಾರ್ಥಿಗಳು ಫಲಿತಾಂಶ ದಾಖಲಿಸಿದ್ದಾರೆ. ವಾಣಿಜ್ಯದಲ್ಲಿ ಶೇ 86.81 ಫಲಿತಾಂಶ ದಾಖಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 38,069 ಮಂದಿ ಪರೀಕ್ಷೆ ಬರೆದಿದ್ದು 33,088 ಮಂದಿ ಪಾಸಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದ 2,334 ವಿದ್ಯಾರ್ಥಿಗಳ ಪೈಕಿ 1,220 ಮಂದಿ ಪಾಸಾಗಿ ಶೇ 52.27 ಫಲಿತಾಂಶ ದಾಖಲಾಗಿದೆ. 2,305 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ 82.60 ಫಲಿತಾಂಶ ದಾಖಲಿಸಿದ್ದಾರೆ. ಪರಿಶಿಷ್ಟ ಪಂಗಡದ 1,243 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ 86.16 ಫಲಿತಾಂಶ ದಾಖಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !