ಭಾನುವಾರ, ಏಪ್ರಿಲ್ 18, 2021
33 °C

ಮಾರುಕಟ್ಟೆಯಲ್ಲೀಗ ನೇರಳೆ ಸವಿ...

ಪ್ರದೀಪ ಟಿ.ಕೆ Updated:

ಅಕ್ಷರ ಗಾತ್ರ : | |

Prajavani

ಜೂನ್, ಜುಲೈ ತಿಂಗಳೆಂದರೆ ನೇರಳೆ ಹಣ್ಣಿನ ಸುಗ್ಗಿ. ನೋಡಿದಾಕ್ಷಣ ಬಾಯಲ್ಲಿ ನೀರೂರಿಸುವ, ತಿನ್ನಲು ಅಷ್ಟೇ ರುಚಿಯಾದ ನೇರಳೆ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾತ್ರವಲ್ಲ ನಗರದ ತುಂಬೆಲ್ಲ ಈಗ ನೇರಳೆ ಹಣ್ಣಿನದ್ದೇ ಕಾರುಭಾರು. ಹಣ್ಣಿನ ಅಂಗಡಿ, ಫುಟ್‌ಪಾತ್, ತಳ್ಳುಗಾಡಿ, ಶಾಲಾಕಾಲೇಜುಗಳ ಮುಂಭಾಗ ಹೀಗೆ ಎಲ್ಲೆಲ್ಲೂ ನೇರಳೆಯದ್ದೇ ದರ್ಬಾರ್. ಮಳೆ ಕೊರತೆಯಿಂದ ಆವಕ ಪ್ರಮಾಣ ಕಡಿಮೆಯಿದ್ದರೂ ಭಾರೀ ಬೇಡಿಕೆ ಇದೆ ಎನ್ನುತ್ತಾರೆ ತಳ್ಳುಗಾಡಿ ವ್ಯಾಪಾರಿ ಮುನಿಸಿದ್ಧಯ್ಯ.

ಉಪಯೋಗಗಳು

ನೇರಳೆ ಖನಿಜಾಂಶಗಳು ಮತ್ತು ಪೋಷಕಾಂಶಗಳ ಆಗರ. ಹಲವಾರು ರೋಗಗಳಿಗೆ ದಿವ್ಯೌಷಧಿ. ಇದರಲ್ಲಿ ಮಧುಮೇಹ, ಕ್ಯಾನ್ಸರ್‌, ಹೃದಯಾಘಾತ, ಸಂಧಿವಾತ, ಭೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳಿವೆ. ನೇರಳೆ ಬೀಜಗಳನ್ನು ಆಯುರ್ವೇದ ಔಷಧಿಗಳಲ್ಲೂ ಬಳಕೆ ಮಾಡಲಾಗುತ್ತದೆ. ಇದು ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆಯಾಗಿ ಮಧುಮೇಹಕ್ಕೆ ರಾಮಬಾಣ. ಇದರಲ್ಲಿರುವ ಕಬ್ಬಿಣಾಂಶವು ಋತುಚಕ್ರದ ವೇಳೆ ಮಹಿಳೆಯರಲ್ಲಿ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುತ್ತದೆ. ರಕ್ತಹೀನತೆಯಿಂದ ಬಳಲುವವರು ನೇರಳೆಯನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹತ್ತು ಹಲವಾರು ಉಪಯುಕ್ತ ಗುಣಗಳಿಂದಾಗಿ ನೇರಳೆಗೆ ಬೇಡಿಕೆಯೂ ಹೆಚ್ಚು.

ಸೌಂದರ್ಯ ವರ್ಧಕ

ನೇರಳೆ ಹಣ್ಣಿನ ರಸವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ಕಲೆಗಳು ನಿವಾರಣೆಯಾಗುತ್ತವೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹಲ್ಲಿನ ಆರೋಗ್ಯಕ್ಕೆ ನೆರವಾಗುವುದಲ್ಲದೆ ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಮಾತ್ರವಲ್ಲ ನೇರಳೆ ಹಣ್ಣು ಸೇವಿಸುವುದರಿಂದ ಮುಖದಲ್ಲಿನ ಎಣ್ಣೆ ಅಂಶ ಕಡಿಮೆಯಾಗಿ ತ್ವಚೆ ಕಾಂತಿಯುತವಾಗುತ್ತದೆ.

ಸಹಜವಾಗಿ ಹಣ್ಣಾಗುವುದು

ನೇರಳೆಯನ್ನು ಯಾವುದೇ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸದೆ ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ಇದನ್ನು ಇತರೆ ಹಣ್ಣುಗಳಂತೆ ರಾಸಾಯನಿಕ ಬಳಸಿ ಹಣ್ಣು ಮಾಡುವುದಿಲ್ಲ. ಮರದಲ್ಲೇ ಕೆಂಪು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗಿದ ಹಣ್ಣನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತರಲಾಗುತ್ತದೆ. ಒಂದೆರಡು ದಿನದ ಅಂತರದಲ್ಲೇ ಅದು ಕಡುನೀಲಿ ಬಣ್ಣಕ್ಕೆ ತಿರುಗಿ ಸಂಪೂರ್ಣ ಹಣ್ಣಾಗಿರುತ್ತದೆ.

ಇದರ ರುಚಿಯೂ ಹೆಚ್ಚು.

ನೇರಳೆ ತನ್ನ ಔಷಧೀಯ ಗುಣ ಹಾಗೂ ರುಚಿಯಿಂದ ನಗರದಲ್ಲಿ ಬೇಡಿಕೆ ಸೃಷ್ಟಿಸಿದೆ. ಋತುಮಾನ ಆಧಾರಿತ ಬೆಳೆಯಾಗಿರುವ ಇದು ಮೇ–ಜೂನ್ ತಿಂಗಳಲ್ಲಷ್ಟೆ ಲಭ್ಯ. ನಗರದ ಬೆರಳೆಣಿಕೆಯಷ್ಟು ಉದ್ಯಾನಗಳಲ್ಲಿ ಬಿಟ್ಟರೆ ಬೇರೆಲ್ಲೂ ನೇರಳೆ ಮರಗಳಿಲ್ಲ. ಇನ್ನೇನು ಜೂನ್ ತಿಂಗಳ ಅಂತ್ಯಕ್ಕೆ ನೇರಳೆ ಸೀಸನ್ ಮುಗಿಯುವುದರಿಂದ ಗ್ರಾಹಕರು ಹೆಚ್ಚು ಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸೀಸನ್ ಮುಗಿಯುವುದರೊಳಗೆ ಸಾದ್ಯವಾದಷ್ಟು ನೇರಳೆ ಸವಿಯಬೇಕೆನ್ನುವುದು ಗ್ರಾಹಕರ ಅಂಬೋಣ.  

**

ಹಿಂದೆ ಮಕ್ಕಳು ಮಾತ್ರ ಹೆಚ್ಚು ಇಷ್ಟ ಪಡುತ್ತಿದ್ದ ನೇರಳೆ ಹಣ್ಣನ್ನು ಈಗ ದೊಡ್ಡವರೂ ಹೆಚ್ಚು ಕೊಳ್ಳುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಲಾಭ ಹೆಚ್ಚಿದೆ. ಆದರೂ ಹೆಚ್ಚು ದಿನ ಸಂಗ್ರಹಿಸಿಡಲಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಮಾರಬೇಕಿರುತ್ತದೆ.
ಕೆಂಪಮ್ಮ, ವ್ಯಾಪಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು