ರಾಣಿ ಎಲಿಜಬೆತ್‌ ಪತಿ ಪವಾಡಸದೃಶವಾಗಿ ಪಾರು

7
ಬ್ರಿಟನ್‌ನಲ್ಲಿ ಕಾರು ಅಪಘಾತ:

ರಾಣಿ ಎಲಿಜಬೆತ್‌ ಪತಿ ಪವಾಡಸದೃಶವಾಗಿ ಪಾರು

Published:
Updated:
Prajavani

ಲಂಡನ್‌: ಇಲ್ಲಿ ನಡೆದ ಅಪಘಾತದಲ್ಲಿ ಬ್ರಿಟನ್‌ನ ರಾಣಿ ಎಲಿಜಬೆತ್‌ ಅವರ ಪತಿ ರಾಜ ಫಿಲಿಪ್‌ ಅವರು ಪವಾಡಸದೃಶವಾಗಿ ಪಾರಾಗಿದ್ದಾರೆ.

ಗುರುವಾರ ಕ್ವೀನ್ಸ್‌ ಸ್ಯಾಂಡಿರಿಂಗ್‌ಹ್ಯಾಮ್‌ನ ಎಸ್ಟೇಟ್‌ ಸಮೀಪ 97 ವರ್ಷದ ಫಿಲಿಪ್‌ ಅವರು ಚಲಾಯಿಸುತ್ತಿದ್ದ ಲ್ಯಾಂಡ್‌ ರೋವರ್‌ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಕೆಳಗುರುಳಿದೆ. ಈ ವೇಳೆ ಇಬ್ಬರೂ ಮಹಿಳೆಯರು ಗಾಯಗೊಂಡಿದ್ದಾರೆ.

‘ಅಪಘಾತದ ಬಳಿಕ ಫಿಲಿಪ್‌ ಅವರ ಪ್ರಜ್ಞೆ ಹೊಂದಿದ್ದರು. ಆದರೆ, ಆಘಾತಕ್ಕೊಳಗಾಗಿ ದೇಹವಿಡೀ ಕಂಪಿಸುತ್ತಿತ್ತು, ತಕ್ಷಣವೇ ಅವರನ್ನು ಲ್ಯಾಂಡ್‌ ರೋವರ್‌ನಿಂದ ಹೊರಕರೆತರಲಾಯಿತು’ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ಸನ್‌’ ನಿಯತಕಾಲಿಕೆ ವರದಿ ಮಾಡಿದೆ.

‘ಅಪಘಾತದಿಂದ ಮತ್ತೊಂದು ವಾಹನದ ಚಾಲಕ, ಮಹಿಳೆಗೆ ಕೈ ಭಾಗಕ್ಕೆ ಗಾಯವಾಗಿದೆ. ಇಬ್ಬರನ್ನೂ ಕಿಂಗ್ಸ್‌ ಲೈನ್‌ನ ಕ್ವೀನ್‌ ಎಲಿಜಬೆತ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ, ರಾಜ ಫಿಲಿಪ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ ’ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಟನ್‌ನ ಕಾನೂನಿನಲ್ಲಿ ವಾಹನ ಚಾಲನೆ ಮಾಡುವುದಕ್ಕೆ ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ. ಆದರೂ, 70 ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ, ಚಾಲನಾ ಪರವಾನಗಿಯ ಅವಧಿ ಮುಕ್ತಾಯಗೊಳ್ಳುತ್ತದೆ. ಒಂದೊಮ್ಮೆ ಪರವಾನಗಿಯನ್ನು ನವೀಕರಣ ಮಾಡದಿದ್ದರೆ, ವಾಹನ ಚಾಲನೆ ಮಾಡುವಂತಿಲ್ಲ.

97 ವರ್ಷದ ಫಿಲಿಪ್‌ ಅವರು ವಾಹನ ಚಾಲನೆ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

2017ರಿಂದಲೇ ಫಿಲಿಪ್‌ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದಿದ್ದರೂ, ಆಗಾಗ್ಗೆ ತಾವೇ ವಾಹನ ಚಲಾಯಿಸುವ ಮೂಲಕ ಗಮನಸೆಳೆಯುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !