ಚಾಮರಾಜನಗರ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಬಿತ್ತನೆ ಆರಂಭಿಸಲು ಒಂದು ಮಳೆ ಸಾಕಾಗುವುದಿಲ್ಲವಾದರೂ ಇನ್ನೂ ಎರಡು ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಮುನ್ಸೂಚನೆ ಮಳೆಯಾಶ್ರಿತ ರೈತರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಚಾಮರಾಜನಗರದ ಬಹುತೇಕ ಕಡೆಗಳಲ್ಲಿ, ಗುಂಡ್ಲುಪೇಟೆ, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಬಿದ್ದಿದೆ. ಇತರ ಕಡೆಗಳಿಗೆ ಹೋಲಿಸಿದರೆ ಯಳಂದೂರು ತಾಲ್ಲೂಕಿನ ಅರಣ್ಯ ಭಾಗದಲ್ಲಿ ಬಿಟ್ಟು ಉಳಿದ ಕಡೆ ಅಷ್ಟು ಮಳೆಯಾಗಿಲ್ಲ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆವರೆಗೆ ಸರಾಸರಿ 7.9 ಮಿ.ಮೀ ಮಳೆಯಾಗಿದೆ. ತಾಲ್ಲೂಕುವಾರು ಮಳೆಯ ಅಂಕಿ– ಅಂಶ ನೋಡಿದರೆ, ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಅಂದರೆ 11.3 ಮಿ.ಮೀ ಮಳೆ ಬಿದ್ದಿದೆ. ಕೊಳ್ಳೇಗಾಲದಲ್ಲಿ (ಹನೂರು ತಾಲ್ಲೂಕು ಸೇರಿದಂತೆ) 7.6 ಮಿ.ಮೀ, ಚಾಮರಾಜನಗರದಲ್ಲಿ 5.8 ಮಿ.ಮೀ ಮಳೆ ಸುರಿದಿದೆ. ಯಳಂದೂರು ತಾಲ್ಲೂಕಿನಲ್ಲಿ ಕಡಿಮೆ ಅಂದರೆ 3.1 ಮಿ.ಮೀ ಮಳೆಯಾಗಿದೆ.

ವಾಡಿಕೆ ಮಳೆ ಕುಂಠಿತ: ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಈ ಬಾರಿ ವಾಡಿಕೆಯಷ್ಟು ಆಗದೇ ಇರುವುದರಿಂದ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಜನವರಿ 1ರಿಂದ ಮೇ 12ರ ವರೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 136 ಮಿ.ಮೀ ಮಳೆಯಾಗುತ್ತದೆ. ಈ ವರ್ಷ 99.96 ಮಿ.ಮೀ ಮಳೆ ಬಿದ್ದಿದೆ. ಶೇ 27ರಷ್ಟು ಮಳೆ ಕೊರತೆ ಉಂಟಾಗಿದೆ.

ಕೃಷಿಗೆ ಮಳೆಯನ್ನೇ ನಂಬಿರುವ ರೈತರು ಬಿತ್ತನೆ ಮಾಡಲು ಮುಂದಾಗಿಲ್ಲ ಹಾಗಾಗಿ, ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ ಶೇ 15.40ರಷ್ಟು ಬಿತ್ತನೆಯಾಗಿದೆಯಷ್ಟೆ.

ಈ ಹಿಂದೆ ಬಿದ್ದ ಒಂದೆರಡು ಮಳೆಗೆ ಭೂಮಿಯನ್ನು ಉಳುಮೆ ಮಾಡಿದ್ದ ರೈತರು, ಬಿತ್ತನೆಗಾಗಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕೆಲವರು ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜವನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಬಿತ್ತನೆ ಮಾಡಿ ಮಳೆ ಬಾರದೆ ಇದ್ದರೆ ಬೆಳೆ ನೆಲಕಚ್ಚುತ್ತದೆ ಎಂಬ ಭೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಅವರು ಹಿಂಜರಿಯುತ್ತಿದ್ದಾರೆ.

ಏನೇನೂ ಸಾಲದು: ‘ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ. ಯಳಂದೂರು ಸುತ್ತಮುತ್ತ ಹಾಗೂ ಇತರೆ ಕೆಲವು ಭಾಗಗಳಲ್ಲಿ ಮಳೆ ಸುರಿದಿಲ್ಲ. ಈಗ ಬಿದ್ದಿರುವ ಮಳೆ ನಂಬಿಕೊಂಡು ಬಿತ್ತನೆ ಮಾಡಲು ಸಾಧ್ಯವಿಲ್ಲ. ಈ ಮಳೆ ಏನೇನೂ ಸಾಲದು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಬಿತ್ತನೆ ಮಾಡಿ, ಮುಂದೆ ಮಳೆ ಬರದೇ ಇದ್ದರೆ ಏನೂ ಪ್ರಯೋಜನವಿಲ್ಲ. ಕಳೆದ ವರ್ಷ ಈ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಈ ಸಲ ಮಳೆಯೇ ಬಿದ್ದಿಲ್ಲ. ಮುಂದೆಯೂ ಉತ್ತಮ ಮಳೆಯಾಗಲಿದೆ ಎಂಬ ನಂಬಿಕೆ ಇಲ್ಲ. ಮೇ, ಜೂನ್, ಜುಲೈ ಅವಧಿಯಲ್ಲಿ ನಮ್ಮ ಭಾಗದಲ್ಲಿ ಗಾಳಿ ಜಾಸ್ತಿ ಇರುತ್ತದೆ. ಸ್ವಲ್ಪ ಸ್ವಲ್ಪ ಮಳೆಯಾಗುತ್ತದೆ. ಕೃಷಿಕರು ಹಿಂಗಾರು ಮಳೆಗಾಗಿ ಕಾಯಬೇಕಾಗಿದೆ’ ಎಂದು ಅವರು ಹೇಳಿದರು.

ನಿರಂತರ ಮಳೆ ಬರಬೇಕು: ‘ಕೆಲವು ಕಡೆಗಳಲ್ಲಿ ಶನಿವಾರ ರಾತ್ರಿ ಚೆನ್ನಾಗಿ ಮಳೆ ಬಂದಿದೆ. ಉತ್ತಮವಾಗಿ ಮಳೆಯಾದ ಕಡೆಗಳಲ್ಲಿ ರೈತರು ಹೆಸರು, ಉದ್ದು, ಜೋಳ, ಎಳ್ಳು ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಬಹುದು. ಇಂತಹ ಮಳೆ ಇನ್ನೂ ಕೆಲವು ದಿನಗಳ ಕಾಲ ನಿರಂತರವಾಗಿ ಬರಬೇಕು’ ಎಂದು ಹೇಳುತ್ತಾರೆ ರಾಮಸಮುದ್ರದ ರೈತ ಬಸವರಾಜು.

‘ಒಂದೆರಡು ಮಳೆಯಾದರೆ ಬಿತ್ತನೆ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ಕೆಲವು ಕಡೆಗಳಲ್ಲಿ ಬಿದ್ದಿರುವ ಮಳೆ ಮಾಗಿ ಉಳುಮೆ ಮಾಡುವುದಕ್ಕೇ ಸಾಲದು. ಬಿತ್ತನೆ ಮಾಡಿದ ನಂತರ ನೀರು ಸಿಗದಿದ್ದರೆ ಬೆಳೆ ನಾಶವಾಗುತ್ತದೆ. ಹಾಗಾಗಿ, ಸರಿಯಾಗಿ ಮಳೆ ಬಾರದೆ ರೈತರು ಬಿತ್ತನೆಗೆ ಮುಂದಾಗುವುದಿಲ್ಲ’ ಎಂದು ಅವರು ಹೇಳಿದರು.

ಆಶಾದಾಯಕ ಬೆಳವಣಿಗೆ: ‘ಜಿಲ್ಲೆಯಾದ್ಯಂತ ಶನಿವಾರ ಮಳೆಯಾಗಿರುವುದು ಆಶಾದಾಯಕ ಬೆಳವಣಿಗೆ. ತೇವಾಂಶ ಇರುವ ಕಡೆಗಳಲ್ಲಿ ಬಿತ್ತನೆ ಮಾಡಲು ಇದು ಸಕಾಲ. ನಮ್ಮ ರೈತರು ಈಗಾಗಲೇ ಬೀಜಗಳನ್ನು ದಾಸ್ತಾನು ಮಾಡಿದ್ದಾರೆ. ಸೂರ್ಯಕಾಂತಿ, ಹೆಸರು, ಅಲಸಂದೆ, ಹತ್ತಿ ಮುಂತಾದ ಬೆಳೆ ಬಿತ್ತನೆ ಮಾಡಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ತಿರುಮಲೇಶ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಮೂರು ದಿನ ಉತ್ತಮ ಮಳೆ

ಮೈಸೂರಿನ ನಾಗನಹಳ್ಳಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರ ಮೇ 10ರಂದು ನೀಡಿರುವ ಮುನ್ಸೂಚನೆ ಪ್ರಕಾರ, ಜಿಲ್ಲೆಯಲ್ಲಿ ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗಲಿದೆ.

13ರಂದು 4 ಮಿ.ಮೀ, 14ರಂದು 12 ಮಿ.ಮೀ ಹಾಗೂ 15ರಂದು 30 ಮಿ.ಮೀಗಳಷ್ಟು ಮಳೆ ಬೀಳಲಿದೆ ಎಂದು ಅದು ಮುನ್ಸೂಚನೆ ನೀಡಿದೆ.

‘ಮಳೆ ಬರುತ್ತದೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮಳೆ ಬರುವ ನಿರೀಕ್ಷೆಯಲ್ಲಿಯೇ ರೈತರು ಬಿತ್ತನೆ ಮಾಡಬೇಕಾಗುತ್ತದೆ. ಮುಂದಿನ 15 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ, ಮಳೆಯಾಗಬಹುದು. ಮಳೆಯಾಗದಿರುವ ಸಾಧ್ಯತೆಯೂ ಇದೆ. ಆದರೆ, ಇತ್ತೀಚೆಗೆ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು, ಮುನ್ಸೂಚನೆ ಬಹುತೇಕ ನಿಜವಾಗುತ್ತಿದೆ. ಹಾಗಾಗಿ ಮಳೆಯನ್ನು ನಿರೀಕ್ಷಿಸಬಹುದು’ ಎಂದು ತಿರುಮಲೇಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.