ಮಳೆಯಷ್ಟೇ ಕಾಡುವ ‘ಛತ್ರಿ’ ಗೆಳೆಯ!

7

ಮಳೆಯಷ್ಟೇ ಕಾಡುವ ‘ಛತ್ರಿ’ ಗೆಳೆಯ!

Published:
Updated:
ಸದಾಶಿವ

ಆಗೆಲ್ಲಾ ಆಷಾಢದ ಮಳೆ ಶುರುವಾದರೆ ಬಿಡ್ತಾನೇ ಇರಲಿಲ್ಲ. ಮೂರ್‍ನಾಲ್ಕು ದಿನಕ್ಕೆ ಒಂದು ಬ್ರೇಕ್ ತೆಗೆದುಕೊಳ್ಳುತ್ತಿತ್ತು. ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ ನೆನಪು. ಸುರಿಯುವ ಮಳೆಯಲ್ಲಿ ಶಾಲೆಗೆ ಹೋಗಲು ಆಗದ ಸಂದರ್ಭ.

ಆಗ ಛತ್ರಿಗಳು ಈ ಪರಿ ಇರಲಿಲ್ಲ. ಛತ್ರಿ ಹಿಡಿದುಕೊಂಡಿದ್ದವರನ್ನು ನಾವು ಆಶ್ಚರ್ಯದಿಂದ ನೋಡುತ್ತಿದ್ದೆವು. ಅವರು ಶ್ರೀಮಂತರು ಎಂಬುದೇ ನಮ್ಮ ಪ್ರಜ್ಞೆ! ಗೋಣಿ ಚೀಲದ ಅಥವಾ ಪ್ಲಾಸ್ಟಿಕ್ ಚೀಲದ ಗೊಪ್ಪೆಗಳೇ ಮಳೆಯ ಹಾವಳಿಯಿಂದ ಬಚಾವಾಗಲು ನಮ್ಮ ಪಾಲಿಗೆ ಇದ್ದು ವಸ್ತುಗಳು. ಬೆಳಿಗ್ಗೆ ಅವ್ವ ನನಗೊಂದು ಚಿಕ್ಕ ಗೊಪ್ಪೆ ಮಾಡಿ ಹಾಕಿ ಶಾಲೆಗೆ ಕಳುಹಿಸುತ್ತಿದ್ದಳು.

ಶಾಲೆಯ ನಮ್ಮ ಬಳಗದಲ್ಲಿ 'ಸೂರಿ' ಎಂಬುವವನಿದ್ದ. ಇಡೀ ಸ್ಕೂಲಿಗೆ ಛತ್ರಿ ತರುತ್ತಿದ್ದ ಏಕೈಕ ವಿದ್ಯಾರ್ಥಿಯೆಂದರೆ ಸೂರಿ ಒಬ್ಬನೆ! ನಾನೂ ಅವನು ಗೆಳೆಯರು. ಛತ್ರಿಯ ಕಾರಣಕ್ಕೆ ನಾನು ಅವನಿಗೆ ಮತ್ತಷ್ಟು ಹತ್ತಿರದ ಗೆಳೆಯನಾದೆ. ಗಲಾಟೆ ಮಾಡಿದರೆ ಬೋರ್ಡ್ ಮೇಲೆ ಹೆಸರು ಬರದೆ ಇರಲಿ ಅನ್ನುವ ಕಾರಣಕ್ಕೆ ಸೂರಿ ನನಗೆ ಛತ್ರಿಯ ಆಸೆ ತೋರಿಸುತ್ತಿದ್ದ.

ಆತ ಇಡೀ ಸ್ಕೂಲ್‌ನಲ್ಲಿ ಛತ್ರಿಯ ಕಾರಣಕ್ಕೆ ಆಕರ್ಷಣಿಯ ವ್ಯಕ್ತಿಯಾಗಿದ್ದ. ನನ್ನನ್ನು ಬೆಳಗ್ಗೆ ಮನೆಯಿಂದ ಕರೆತರುವುದು, ಮಧ್ಯಾಹ್ನ ಊಟಕ್ಕೆ ಮತ್ತೆ ಮನೆಯವರೆಗೆ ಡ್ರಾಪ್ ಮಾಡುವುದು, ಮತ್ತೆ ಕರೆದುಕೊಂಡು ಹೋಗುವುದು ಸಂಜೆ ಮನೆಗೆ ತಂದು ಬಿಡುವುದು ಇವು ಸೂರಿಯ ಕೆಲಸ. ನಾನು ಅವನಿಗಾಗಿ ತಿನಿಸುಗಳನ್ನು ಕೊಂಡು ತರುತ್ತಿದ್ದೆ.

ಕೆಳಗೆ ಹರಿಯುವ ನೀರು,  ಕೆಸರು ತುಳಿಯುತ್ತಾ ಸಾಗುವುದೇ ನಮಗೊಂದು ಆನಂದ. ಮೇಲೆ ಛತ್ರಿಗೆ ರಪರಪ ಅಂತ ಬೀಳುವ ಹನಿಗಳ ದನಿ ಏನೋ‌ ಒಂದು ಇಂಪು! ಎಲ್ಲಾ ಹುಡುಗರು ನಮನ್ನು ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದ ಪರಿ ನಮಗೆ ಖುಷಿಕೊಡುತ್ತಿತ್ತು. ಛತ್ರಿಯ ಕಡ್ಡಿಗಳ ಅಂಚಿನಿಂದ ಹನಿಯುವ ನೀರನ್ನು ಅಂಗೈಯಲ್ಲಿಳಿಸಿಕೊಂಡು ಕುಡಿಯುತ್ತಾ ಹೋಗುತ್ತಿದ್ದೆವು! ಈಗ ಅವೆಲ್ಲ ಬರೀ ನೆನಪು! ಈಗ ಅಂತಹ ಮಳೆಯೂ ಇಲ್ಲ; ಮಕ್ಕಳ ಪಾಲಿಗೆ ಒಂದೊಳ್ಳೆ ಬಾಲ್ಯ ಮೊದಲೇ ಇಲ್ಲ. ನಮಗೆ ಅಂತಹ ಬಾಲ್ಯವನ್ನು ವರ್ಣಿರಂಜಿತಗೊಳಿಸಿದ ಮಳೆಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು.

-ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !