ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಿಜ: ಪೋಪ್ ಫ್ರಾನ್ಸಿಸ್

ವಿಶೇಷ ವಿಮಾನ (ಎನ್ವೈಟಿ ನ್ಯೂಸ್): ‘ಕೆಲವು ಪಾದ್ರಿಗಳು ಹಾಗೂ ಬಿಷಪ್ಗಳಿಂದ ಕ್ರೈಸ್ತ ಸನ್ಯಾಸಿನಿಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಇಂತಹ ಪ್ರಕರಣಗಳಿಂದಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ಸಮಸ್ಯೆ ಎದುರಿಸುತ್ತಲೇ ಇದೆ’ ಎಂದು ಪೋಪ್ ಫ್ರಾನ್ಸಿಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೈಸ್ತ ಸನ್ಯಾಸಿನಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಕುರಿತಂತೆ ಪೋಪ್ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ನೀಡಿ ರೋಮ್ಗೆ ವಿಶೇಷ ವಿಮಾನದಲ್ಲಿಮರಳುತ್ತಿರುವ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಭಾರತ, ಆಫ್ರಿಕಾ, ಅಮೆರಿಕ ಮತ್ತು ಇಟಲಿಯಲ್ಲಿ ಪಾದ್ರಿ ಹಾಗೂ ಬಿಷಪ್ಗಳಿಂದ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಕ್ಯಾಥೋಲಿಕ್ ಸನ್ಯಾಸಿನಿಯರು ಆರೋಪ ಮಾಡಿದ್ದರು. ವ್ಯಾಟಿಕನ್ ಮೂಲದ ನಿಯತಕಾಲಿಕೆಯೊಂದು ಇತ್ತೀಚೆಗೆ ಇದೇ ವಿಷಯಕ್ಕೆ ಸಂಬಂಧಿಸಿ ವರದಿ ಪ್ರಕಟಿಸಿತ್ತಲ್ಲದೇ, ಕೆಲವು ಸನ್ಯಾಸಿನಿಯರು ಗರ್ಭಪಾತಕ್ಕೆ ಒಳಗಾಗಿದ್ದು, ಇನ್ನೂ ಕೆಲವರು ಮಕ್ಕಳಿಗೆ ಜನ್ಮ ನೀಡಿದ್ದನ್ನುಉಲ್ಲೇಖಿಸಿತ್ತು. ಈ ಬಗ್ಗೆ ಗಮನ ಸೆಳೆದಾಗ, ‘ಇದು ನಿಜ. ಇಂತಹ ಕೃತ್ಯಗಳಿಗೆ ಕೊನೆ ಹಾಡುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ’ ಎಂದು ಉತ್ತರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.