ತಿಂಗಳ ಬಳಿಕ ರವಿ ಪೂಜಾರಿ ಭಾರತಕ್ಕೆ?

7
ಫ್ರೆಂಚ್ ಭಾಷೆಗೆ ದಾಖಲೆಗಳ ಅನುವಾದ

ತಿಂಗಳ ಬಳಿಕ ರವಿ ಪೂಜಾರಿ ಭಾರತಕ್ಕೆ?

Published:
Updated:
Prajavani

ಬೆಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್‌ ದೇಶದಲ್ಲಿ ಇಂಟರ್‌ಪೋಲ್‌ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಇನ್ನೊಂದು ತಿಂಗಳು ಬೇಕಾಗಬಹುದು.

‘ಅಂತರರಾಷ್ಟ್ರೀಯ ಒಪ್ಪಂದಗಳ ನಿಯಮದ ಅನ್ವಯ ಭಾರತ ಹಾಗೂ ಸೆನೆಗಲ್ ದೇಶದ ನಡುವೆ ದಾಖಲೆಗಳ ಹಸ್ತಾಂತರ ಆಗಬೇಕು. ಆ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕವೇ ಅಲ್ಲಿಯ ಪೊಲೀಸರು, ರವಿ ಪೂಜಾರಿಯನ್ನು ಭಾರತದ ಕಸ್ಟಡಿಗೆ ನೀಡಲಿದ್ದಾರೆ’ ಎಂದು ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಸೆನೆಗಲ್‌ ದೇಶದ ಆಡಳಿತ ಭಾಷೆ ಫ್ರೆಂಚ್. ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗುಜರಾತ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಫ್ರೆಂಚ್‌ಗೆ ಅನುವಾದಿಸಬೇಕಾಗಿದೆ. ಆ ಕೆಲಸ ಪ್ರಗತಿಯಲ್ಲಿದೆ. ಆತನ ಬೆರಳಚ್ಚು, ಮುಖ ಚಹರೆ, ಶೈಕ್ಷಣಿಕ ದಾಖಲಾತಿಗಳು ಹಾಗೂ ಕುಟುಂಬಸ್ಥರ ವಿವರವನ್ನೆಲ್ಲ ಕಲೆ ಹಾಕಿ ದಾಖಲೆಗಳೊಂದಿಗೆ ಲಗತ್ತಿಸಬೇಕಿದೆ’ ಎಂದರು.

‘ಪೂಜಾರಿ ವಿರುದ್ಧ ಕರ್ನಾಟಕದಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಗುಪ್ತಚರ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಸಹ ದಾಖಲೆ ಕೊಟ್ಟಿದ್ದಾರೆ. ಕೇರಳ, ಗುಜರಾತ್‌ ಪೊಲೀಸರು ಇನ್ನಷ್ಟು ದಾಖಲೆ ನೀಡಬೇಕಿದೆ’.

‘ಎಲ್ಲ ದಾಖಲೆಗಳನ್ನು ಸೇರಿಸಿ ಸೆನೆಗಲ್‌ನಲ್ಲಿರುವ ಭಾರತೀಯ ರಾಯಭಾರಿಗೆ ಕಳುಹಿಸಬೇಕು. ಅವರು ಆ ದಾಖಲೆಗಳನ್ನು ಅಲ್ಲಿಯ ರಾಷ್ಟ್ರಪತಿ ಕಚೇರಿಗೆ ಹಸ್ತಾಂತರಿಸಲಿದ್ದಾರೆ. ಆ ದಾಖಲೆಗಳ ಪರಿಶೀಲನೆ ಮುಕ್ತಾಯವಾದ ನಂತರವೇ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದು ಅಥವಾ ಒಂದೂವರೆ ತಿಂಗಳು ಬೇಕಾಗಬಹುದು’ ಎಂದು ವಿವರಿಸಿದರು. 

ಗುರುತು ಪತ್ತೆಗೆ ಪರೇಡ್: ‘ಆಂಟೋನಿ ಫರ್ನಾಂಡೀಸ್’ ಎಂದು ಹೆಸರು ಬದಲಾಯಿಸಿಕೊಂಡು ರವಿ ಪೂಜಾರಿ, ಬುರ್ಕಿನ್ ಫಾಸೊದಲ್ಲಿ ನೆಲೆಸಿದ್ದ. ಸ್ಥಳೀಯ ಆಡಳಿತ ಸಂಸ್ಥೆಗಳಿಂದಲೂ ಆತ ಗುರುತಿನ ಚೀಟಿ ಪಡೆದುಕೊಂಡಿದ್ದಾನೆ. ಭಾರತೀಯ ರಾಯಭಾರಿ ನೀಡಿದ್ದ ದಾಖಲೆ ಪ್ರಕಾರ, ಆತ ರವಿ ಪೂಜಾರಿ ಎಂಬುದನ್ನು ಸೆನೆಗಲ್ ಪೊಲೀಸರು ಒಪ್ಪಿಕೊಂಡಿದ್ದಾರೆ.

ಆದರೆ, ಭಾರತವು ಎಲ್ಲ ದಾಖಲೆಗಳನ್ನು ನೀಡಿದ ಬಳಿಕ ರವಿ ಪೂಜಾರಿಯ ಗುರುತು ಪತ್ತೆಗೆ ಪರೇಡ್ ನಡೆಯಲಿದೆ. ಬೆರಳಚ್ಚು, ಮುಖ ಚಹರೆ ಹಾಗೂ ಸಂಬಂಧಿಕರ ಮೂಲಕ ಆತನನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

‘ದಾನಶೂರ’ನೆಂದು ಹೊಗಳಿ ವರದಿ ಪ್ರಕಟ

ಚಾರಿಟಬಲ್ ಟ್ರಸ್ಟ್‌ ಆರಂಭಿಸಿದ್ದ ರವಿ ಪೂಜಾರಿ, ಬರ್ಕಿನ್‌ಫಾಸೊ ಹಾಗೂ ಸೆನೆಗಲ್‌ ದೇಶದಲ್ಲಿ ಸಾಮಾಜಿಕ ಕಾರ್ಯಗಳಿಗೆ ಹಣ ನೀಡುತ್ತಿದ್ದ. ಆತ ‘ದಾನಶೂರ’ ಎಂದು ಹೊಗಳಿ ಸ್ಥಳೀಯ ಪತ್ರಿಕೆಗಳು ವರದಿಗಳನ್ನು ಪ್ರಕಟಿಸುತ್ತಿದ್ದವು. ಆ ವರದಿಯಿಂದಲೂ ಆತನ ಸುಳಿವು ರಾಜ್ಯದ ಪೊಲೀಸರಿಗೆ ದೊರಕಿತ್ತು. 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !