ಜೂಜಿನ ಹಣಕ್ಕೆ ಹತ್ಯೆ; ಏಳು ಮಂದಿ ಸೆರೆ

ಗುರುವಾರ , ಏಪ್ರಿಲ್ 25, 2019
21 °C

ಜೂಜಿನ ಹಣಕ್ಕೆ ಹತ್ಯೆ; ಏಳು ಮಂದಿ ಸೆರೆ

Published:
Updated:

ಬೆಂಗಳೂರು: ಯುಗಾದಿ ಹಬ್ಬದ ದಿನ ಜೂಜಿನ ಹಣದ ವಿಚಾರಕ್ಕೆ ಜಗಳವಾಗಿ, ರಿಯಲ್ ಎಸ್ಟೇಟ್ ಏಜೆಂಟ್ ವಿ.ರಮೇಶ್ (38) ಎಂಬುವರನ್ನು ಕೊಲೆ ಮಾಡಿದ್ದ ಏಳು ಮಂದಿಯನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಬಂಗಾರಪ್ಪನಗರದ ಎಸ್.ಸಂತೋಷ್ ಅಲಿಯಾಸ್ ಗಿರಿ, ಎನ್.ರಾಜು ಅಲಿಯಾಸ್ ಡಾಗು, ಎನ್.ಜೀವನ್ ಅಲಿಯಾಸ್ ಕೋಳಿ, ಕೆ.ರಾಜು ಅಲಿಯಾಸ್ ಹೆಂಡ್ರು, ಕಿರಣ್ ಕುಮಾರ್ ಅಲಿಯಾಸ್ ಮೊಟ್ಟೆ, ಮಹದೇವ ಅಲಿಯಾಸ್ ಗುಡ್ಡೆ ಹಾಗೂ ಜೈ ಕಿರಣ್ ಅಲಿಯಾಸ್ ಕಿರ್ಬಿ ಬಂಧಿತರು.

ಆರೋಪಿಗಳಿಂದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿಗಳಾದ ಪಾಂಡು ಅಲಿಯಾಸ್ ಆ್ಯಕ್ಟಿವ್ ಹಾಗೂ ಹರೀಶ್ ಅಲಿಯಾಸ್ ಡಬರಗ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

₹ 30 ಸಾವಿರಕ್ಕೆ ಜಗಳ: ಹೊಸಕೆರೆಹಳ್ಳಿ ನಿವಾಸಿಯಾದ ರಮೇಶ್, ಏಪ್ರಿಲ್ 6ರ ರಾತ್ರಿ 11.30ರ ಸುಮಾರಿಗೆ ಸ್ನೇಹಿತ ಆರ್.ರಾಮು ಜತೆ ಮನೆ ಸಮೀಪ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ರಾಮು ಅವರಿಗೆ ಕರೆ ಮಾಡಿದ್ದ ಮಗ, ‘ಬಂಗಾರಪ್ಪನಗರದ ಗಣೇಶ ದೇವಸ್ಥಾನದ ಬಳಿ ಇಸ್ಪೀಟ್ ಆಡಲು ಬಂದಿದ್ದೆವು. ಇಲ್ಲಿನ ಹುಡುಗರು ನನಗೆ ಹಾಗೂ ಅಣ್ಣನಿಗೆ ಹೊಡೆದು ₹ 30 ಸಾವಿರ ಕಿತ್ತುಕೊಂಡು ಹೋದರು’ ಎಂದು ಹೇಳಿದ್ದ. ಕೂಡಲೇ ರಾಮು ಹಾಗೂ ರಮೇಶ್ ಸ್ಥಳಕ್ಕೆ ತೆರಳಿದ್ದರು.

ಹಣ ವಾಪಸ್ ಕೊಡಲು ಎದುರಾಳಿಗಳು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಆರೋಪಿಗಳು ಸಹಚರರ ಮೂಲಕ ದೊಣ್ಣೆ, ಮಚ್ಚು–ಲಾಂಗುಗಳನ್ನು ತರಿಸಿಕೊಂಡು ರಮೇಶ್, ರಾಮು ಹಾಗೂ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ, ರಮೇಶ್ ಅವರನ್ನು ಆಟೊದಲ್ಲಿ ಅಪಹರಿಸಿಕೊಂಡೂ ಹೋಗಿದ್ದರು.

ಆಟೊದಲ್ಲೇ ಹೊಡೆದು ಅವರನ್ನು ಸಾಯಿಸಿದ್ದ ಆರೋಪಿಗಳು, ಶವವನ್ನು ಕೃಷ್ಣಪ್ಪ ಲೇಔಟ್‌ನಲ್ಲಿ ಬಿಸಾಡಿದ್ದರು. ಮರುದಿನ ಬೆಳಿಗ್ಗೆ ದೇಹ ಪತ್ತೆಯಾಗಿತ್ತು. ರಾಮು ಕೊಟ್ಟ ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ  ಕೆಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !