ಶನಿವಾರ, ಏಪ್ರಿಲ್ 17, 2021
30 °C
ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನ; ಡಾ.ಸಿ.ಎಸ್.ದ್ವಾರಕನಾಥ್ ಅಭಿಮತ

ಬಡ್ತಿ ಮೀಸಲಾತಿ: ವಿರೋಧ ಬಿಡಿ, ಹೋರಾಟ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಹಿಂದುಳಿದ ವರ್ಗದವರು ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿಗೆ ವಿರೋಧ ಮಾಡುವುದನ್ನು ಬಿಟ್ಟು, ತಮಗೂ ಬಡ್ತಿ ಮೀಸಲಾತಿ ನೀಡುವಂತೆ ಹೋರಾಟ ಮಾಡಬೇಕು’ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಸಂಘ, ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನ, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಸ್ವತಂತ್ರ ಬಂದು, ಸಂವಿಧಾನ ರಚನೆಯಾದಾಗಿನಿಂದ ಸಂವಿಧಾನ ನೀಡಿರುವ ಮೀಸಲಾತಿ ವಿರುದ್ಧ ಅನೇಕ ತೀರ್ಪುಗಳು ಬಂದಿವೆ. ಆದರೆ ಬಡ್ತಿ ಮೀಸಲಾತಿ ತೀರ್ಪಿನ ಬಗ್ಗೆ ಹಚ್ಚಿದಷ್ಟು ಕಿಡಿಯನ್ನು ಯಾವ ತೀರ್ಪು ಕೂಡ ಹಚ್ಚಿರಲಿಲ್ಲ. 1998ರಿಂದ ಮೊದಲಾಗಿ ಬಡ್ತಿ ಮೀಸಲಾತಿ ಕುರಿತು ಹೋರಾಟ ನಡೆಯುತ್ತಿದೆ. ಆದರೆ ಅಸ್ಪೃಶ್ಯತೆ ಅನುಭವ ಹಾಗೂ ಸೂಕ್ತ ಮಾಹಿತಿ ಇಲ್ಲದ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಬಡ್ತಿ ಮೀಸಲಾತಿ ಕುರಿತು ತಪ್ಪಾಗಿ ಅರ್ಥೈಸುತ್ತಾ ಬಂದಿದ್ದಾರೆ. ಹೀಗಾಗಿ 21 ವರ್ಷ ಕಳೆದರೂ ಬಡ್ತಿ ಮೀಸಲಾತಿ ಎಂಬುದು ಸಮಸ್ಯೆಯಾಗಿಯೇ ಉಳಿದಿದೆ’ ಎಂದರು.

‘ಸ್ಪೃಶ್ಯರಿಂದ ಈ ಅಸ್ಪೃಶ್ಯತೆ ಎಂಬ ರೋಗ ಬಂದಿದೆ. ಈ ಅಸ್ಪೃಶ್ಯತೆ ತೊಲಗಿಸುವ ಉದ್ದೇಶದಿಂದಾಗಿಯೇ ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಎಂಬ ಪ್ರಾತಿನಿಧ್ಯವನ್ನು ಜಾರಿಗೆ ತರಲಾಗಿದೆ. ಇದನ್ನು ಹಿಂದುಳಿದ ವರ್ಗಗಳು ವಿರೋಧಿಸುವುದು ಸರಿಯಾದ ಕ್ರಮವಲ್ಲ. ಹಿಂದುಳಿದ ವರ್ಗಗಳಿಗೂ ಅಂಬೇಡ್ಕರ್ ಮೀಸಲಾತಿ ಒದಗಿಸಿಕೊಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 25 ಸಾವಿರ ಹಾಗೂ ಪರಿಶಿಷ್ಟ ಪಂಗಡದ 28 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಉಳಿದಿವೆ. ಆದರೂ ಬಡ್ತಿ ಮೀಸಲಾತಿ ಹಾಗೂ ಮೀಸಲಾತಿ ವಿರುದ್ಧ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಈ ಕುರಿತು ಒಂದು ರೈಲ್ವೆ ವ್ಯಾಗನ್‌ನಷ್ಟು  ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ’ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮನ್ವಯ ಸಮಿತಿಯ ಕಾನೂನು ಸಲಹೆಗಾರ ಡಿ.ಚಂದ್ರಶೇಖರಯ್ಯ ಮಾತನಾಡಿ, ‘ತೆರೆದಸಮುದಾಯದ ಸವಲತ್ತುಗಳನ್ನು ಅರ್ಹತೆಯಿಲ್ಲದ ಸಮುದಾಯದ ಜನರು ಕಸಿದುಕೊಳ್ಳುತ್ತಿದ್ದಾರೆ ಎಂದು ಕೆಲ ನ್ಯಾಯಾಧೀಶರು ಸಂವಿಧಾನಕ್ಕೆ ವಿರೋಧಿಯಾಗಿ ಮಾತನಾಡುತ್ತಾರೆ. ಶೇ 15 ಮೀಸಲಾತಿಯಲ್ಲಿ ಶೇ 11 ರಷ್ಟು ಮೀಸಲಾತಿ ಪರಿಶಿಷ್ಟ ಜಾತಿಗೆ ಸಿಕ್ಕಿದ್ದು, 4,500 ಜನರಿಗೆ ಬಡ್ತಿ ಮಿಸಲಾತಿ ದೊರೆತಿಲ್ಲ. ಪರಿಶಿಷ್ಟ ಪಂಗಡದ ಶೇ 3ರಷ್ಟು ಮೀಸಲಾತಿಯಲ್ಲಿ ಶೇ 2.9 ರಷ್ಟು ಮೀಸಲಾತಿ ದೊರೆತಿದ್ದು, 7,416 ಜನರು ಬಡ್ತಿ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಸಾಮಾಜಿಕ ನ್ಯಾಯದ ಪರವಾಗಿದೆ’ ಎಂದರು.

ಮೈಸೂರು ಬಹುಜನ ಪೀಠದ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ, ಚಲವಾದಿ ಮಠದ ಬಸವನಾಗಿ ಸ್ವಾಮೀಜಿ, ಕಂದಾಯ ಇಲಾಖೆ ಎಸ್ಸಿ–ಎಸ್‌ಟಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗಸಿದ್ಧಾರ್ಥ ಹೊಲೆಯಾರ್, ನಿವೃತ್ತ ಎಂಜಿನಿಯರ್ ಎಸ್.ಸಿ.ಜಯಚಂದ್ರ, ನಿವೃತ್ತ ಕಾರ್ಯದರ್ಶಿ ಎಸ್.ಜೆ.ಚನ್ನಬಸಪ್ಪ, ಎಂಜಿನಿಯರ್‌ಗಳಾದ ರುದ್ರಯ್ಯ, ಮುನಿಅಂಜನಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿರಘುನಂದನ್, ಮುಖಂಡರಾದ ಎಂ.ಕೃಷ್ಣಮೂರ್ತಿ, ವೆಂಕಟಗಿರಿಯಯ್ಯ, ಎಂ.ಬಿ.ಶ್ರೀನಿವಾಸ್, ತಾಳಶಾಸನ ಮೋಹನ್, ಸುಂಡಹಳ್ಳಿ ನಾಗರಾಜು, ನಂಜುಂಡಸ್ವಾಮಿ, ಸತೀಶ್, ಜಯರಾಮು, ಚಲುವರಾಜು ಇದ್ದರು.

*********

ಮೀಸಲಾತಿ ಪಡೆದವರು ಸಂವಿಧಾನ ಉಳಿಸಲಿ

‘ದೇಶದಲ್ಲಿ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಯಬೇಕು. ಶೇ 20 ರಷ್ಟಿರುವ ಪರಿಶಿಷ್ಟರು ಮಾತ್ರ ಹೋರಾಟ ಮಾಡುತ್ತಿದ್ದಾರೆ. ಆದರೆ ಬ್ರಾಹ್ಮಣ ಸಮುದಾಯದ ಮಹಿಳೆಯರು, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು ಕೂಡ ಸಂವಿಧಾನದಿಂದ ಮೀಸಲಾತಿ ಪಡೆದಿದ್ದಾರೆ ಎನ್ನುವುದನ್ನು ಮರೆತಂತಿದೆ. ಸಂವಿಧಾನದಿಂದ ಸವಲತ್ತು ಪಡೆದ ನಾವೆಲ್ಲರೂ ಸಂವಿಧಾನ ಉಳಿವಿಗಾಗಿ ಹೋರಾಟ ಮಾಡುವ ಅಗತ್ಯವಿದೆ. ಮಹಿಳೆಯರು ಸೇರಿ, ಎಲ್ಲಾ ವರ್ಗದವರನ್ನು ತುಳಿದು ಆಡಳಿತ ಮಾಡುತ್ತಿರುವ ವರ್ಗಕ್ಕೆ ಬುದ್ಧಿ ’ಎಂದು ಕಂದಾಯ ಇಲಾಖೆ ಎಸ್ಸಿ, ಎಸ್‌ಟಿ ನೌಕರರ ಸಂಘ ರಾಜ್ಯ ಘಟಕದ ಅಧ್ಯಕ್ಷ ನಾಗಸಿದ್ಧಾರ್ಥ ಹೊಲೆಯಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು