ಕನ್ನಡ ಸಾಹಿತಿಗಳು ಸಿನಿಮಾದಿಂದ ದೂರ: ರಿಷಭ್‌ ಶೆಟ್ಟಿ ಸಿನಿಮಾ ವಿಶ್ಲೇಷಣೆ

7

ಕನ್ನಡ ಸಾಹಿತಿಗಳು ಸಿನಿಮಾದಿಂದ ದೂರ: ರಿಷಭ್‌ ಶೆಟ್ಟಿ ಸಿನಿಮಾ ವಿಶ್ಲೇಷಣೆ

Published:
Updated:
Deccan Herald

ಮಂಗಳೂರು: ಮಲಯಾಳಂ ಸಿನಿಮಾ ಲೋಕ ಹಾಗೂ ಸಾಹಿತಿಗಳು ಅಥವಾ ಬುದ್ಧಿಜೀವಿಗಳ ನಡುವೆ ಅಂತರವಿಲ್ಲ. ಸಾಹಿತಿಗಳು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಕರ್ನಾಟಕದಲ್ಲಿ ಸಾಹಿತಿಗಳಿಗೆ ಸಿನಿಮಾ ಎಂದರೆ ‘ಕೀಳು’ ಎಂಬ ಭಾವನೆಯನ್ನು ಇರುವ ಹಾಗಿದೆ ಎಂದು ರಿಷಭ್‌ ಶೆಟ್ಟಿ ಹೇಳಿದರು.

ಮಂಗಳೂರು ಸಾಹಿತ್ಯೋತ್ಸವದಲ್ಲಿ ಭಾನುವಾರ ಅವರು, ‘ಇಂಡಿಯಾ ಇನ್‌ ಸಿನಿಮಾ’ ಎಂಬ ವಿಷಯದ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ‘ಸಿನಿಮಾ ಮತ್ತು ಬುದ್ಧಿಜೀವಿಗಳ ನಡುವೆ ಈ ದೀರ್ಘವಾದ ಅಂತರ 90ರ ದಶಕದ ಆದಿಭಾಗದಿಂದ ಶುರುವಾಯಿತು ಅನಿಸುತ್ತದೆ. ಅದಕ್ಕೆ ಕಾರಣವೇನೇ ಇರಲಿ. ಆದರೆ  ಉತ್ತಮ ಸ್ಕ್ರಿಪ್ಟ್‌ ಇರುವ ಸಿನಿಮಾ ಕತೆಯನ್ನು ಕೆಟ್ಟದಾದ ತಂತ್ರಗಾರಿಕೆ ಬಳಸಿ ತೆಗೆದರೂ ಅದು ಜನರಿಗೆ ಇಷ್ಟವಾಗುತ್ತದೆ. ಕೋಟಿಗಟ್ಟಲೆ ಹಣ ಹಾಕಿ ಅತ್ಯಾಧುನಿಕ ಉಪಕರಣ ಬಳಸಿ, ವಿದೇಶಿ ಫೈಟ್‌ ಮಾಸ್ಟರ್‌ ಮಾರ್ಗದರ್ಶನದಲ್ಲಿ ಸಿನಿಮಾ ಮಾಡಿದರೂ ಜನರಿಗೆ ಇಷ್ಟವಾಗುವುದು ಗ್ಯಾರಂಟಿ ಇಲ್ಲ’ ಎಂದು ವಿವರಿಸಿದರು.

ಫಾರ್ಮುಲಾಗಳಿಂದ ಹೊರಬಂದು ಮಾಡುವ ಚಿತ್ರಗಳು ಸಾಮಾನ್ಯವಾಗಿ ಜನರಿಗೆ ಇಷ್ಟವಾಗುತ್ತದೆ. ‘ಉಳಿದವರು ಕಂಡಂತೆ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ..’ ಚಿತ್ರಗಳನ್ನು ಮಾಡುವ ಸಂದರ್ಭದಲ್ಲಿ ಫಾರ್ಮುಲಾಗಳನ್ನು ಅನುಸರಿಸಿಲ್ಲ. ಆದ್ದರಿಂದಲೇ ಜನರು ಅವುಗಳನ್ನು ಮೆಚ್ಚಿದರು ಎಂದು ಅವರು ಹೇಳುವಾಗ ಸಭಿಕರೆಲ್ಲ ಚಪ್ಪಾಳೆ ತಟ್ಟಿದರು.

ಪ್ರಶಸ್ತಿಗಿಂತ ಹೆಚ್ಚಾಗಿ ಜನರಿಗೆ ತಲುಪುವ ಸಿನಿಮಾ ಮಾಡಬೇಕು ಎಂಬ ಆಸೆ ನಮ್ಮದು. ಪ‍್ರೇಕ್ಷಕರ ಈ ಚಪ್ಪಾಳೆಯೇ ನಮಗೆ ಪ್ರಶಸ್ತಿ ಎಂದು ಅವರು ಹೇಳುತ್ತಲೇ ಮತ್ತೊಮ್ಮೆ ಚಪ್ಪಾಳೆಯ ಪ್ರಶಸ್ತಿ ದೊರೆಯಿತು. ‘ ವಾಣಿಜ್ಯ ಸಿನಿಮಾ ಎಂದರೆ ಫೈಟ್‌, ಹಾಡು, ಕಾಮಿಡಿ ಇರಲೇಬೇಕು ಎಂದುಕೊಳ್ಳುತ್ತಾರೆ. ಚಿತ್ರೋತ್ಸವಗಳಲ್ಲಿ  ಕಾಣಸಿಗುವ ಕಲಾತ್ಮಕ ಸಿನಿಮಾದಲ್ಲಿಯೂ ಪಾತ್ರಗಳು ಇಂತಹುದೇ ಮಾದರಿಯಲ್ಲಿ ಇರಬೇಕು ಎಂಬ ಫಾರ್ಮುಲಾವನ್ನೇ ಬಳಸುತ್ತಾರೆ. ಹಾಗೆ ನೋಡಿದರೆ ಕಲಾತ್ಮಕ ಸಿನಿಮಾದಲ್ಲಿ ಫಾರ್ಮುಲಾಗಳ ಬಳಕೆ ಹೆಚ್ಚೇ ಆಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

’ಭಾರತೀಯ ಸಿನಿಮಾವನ್ನು ಬಾಲಿವುಡ್‌ ಪ್ರತಿನಿಧಿಸುತ್ತದೆ. ಆದರೆ ಅದನ್ನು ಮೀರಿ  ಸಮೃದ್ಧ ಹೂರಣ ಇರುವ ಸಿನಿಮಾಗಳು ಪ್ರಾದೇಶಿಕ ಭಾಷೆಯಲ್ಲಿ ಬರುತ್ತವೆ. ಜನರ ಜೀವನಕ್ಕೆ ಹತ್ತಿರ ಇರುವ ಸಿನಿಮಾಗಳನ್ನು ಮಾಡಿದಾಗ ಇಷ್ಟವೆನಿಸುತ್ತದೆ.  ಒಟ್ಟಿನಲ್ಲಿ ನಾನು ಏನು ಹೇಳಬೇಕೋ ಅದನ್ನು ಪ್ರಾಮಾಣಿಕವಾಗಿ ಪ್ರತಿಪಾದಿಸಲು ಪ್ರಯತ್ನಿಸಿದ್ದೇನೆ. ಜನರ ಪಲ್ಸ್‌ ಏನು ಎಂದು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಪ್ರತಿ ಹತ್ತುವರ್ಷಗಳಿಗೊಮ್ಮೆ ಕಥೆ ಹೇಳುವ ಶೈಲಿಯಲ್ಲಿ ಬದಲಾವಣೆ ಆಗಿದೆ. ಹೇಳುವ ಭಾವನೆಗಳು ಅದೇ ಆಗಿದ್ದರೂ ಪ್ರಸ್ತುತಪಡಿಸುವ ಶೈಲಿ ವಿಭಿನ್ನವಾಗಿದೆ. ಜನರಿಗೆ ಪ್ರತಿ ಸಾರಿಯೂ ಇನ್ನೊಂದು ಏನೋ ಬೇಕು. ಆ ‘ಇನ್ನೊಂದು’ ಏನು ಎಂಬುದು ಸಿನಿಮಾ ಮಾಡುವವರಿಗಾಗಲೀ, ಪ್ರೇಕ್ಷಕರಿಗಾಗಲೀ ಗೊತ್ತಿರುವುದಿಲ್ಲ.  ಆದ್ದರಿಂದ ಬದಲಾವಣೆಯ ಜೊತೆಗೆ ಸಕಾರಾತ್ಮಕವಾಗಿ ಸಿನಿಮಾವನ್ನು ಕಟ್ಟುತ್ತಾ ಹೋಗುವುದು ಉತ್ತಮವೆನಿಸುತ್ತದೆ’ ಎಂದು ಅವರು ಹೇಳಿದರು.

ರೋಹಿತ್‌ ಪಡಕಿ, ಪ್ರದೀಪ್‌ ಕೆಂಚನೂರು ಇದ್ದರು.

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !