ಲೈವ್‌ಬ್ಯಾಂಡ್‌ ಯುವತಿಯರ ಸಂಗಕ್ಕಾಗಿ ಸುಲಿಗೆ!

7
ಮೆಜೆಸ್ಟಿಕ್‌ನ ಬೀದಿ ವ್ಯಾಪಾರಿ ಸೇರಿ ಮೂವರ ಬಂಧನ

ಲೈವ್‌ಬ್ಯಾಂಡ್‌ ಯುವತಿಯರ ಸಂಗಕ್ಕಾಗಿ ಸುಲಿಗೆ!

Published:
Updated:

ಬೆಂಗಳೂರು: ಲೈವ್‌ ಬ್ಯಾಂಡ್‌ ಯುವತಿಯರ ಜತೆ ಮೋಜು– ಮಸ್ತಿ ಮಾಡುವುದಕ್ಕಾಗಿ ಹಣ ಹೊಂದಿಸಲು ಸುಲಿಗೆ ಮಾಡುತ್ತಿದ್ದ ಆರೋ‍ಪದಡಿ ಮೂವರನ್ನು ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ.ನಗರ ಬಳಿಯ ಗಂಗಾನಗರದ ಆಸೀಖಾನ್ (35), ಮೆಹಬೂಬ್ ಪಾಷಾ (29) ಹಾಗೂ ಅಲ್ತಾ ಮೊಹಮ್ಮದ್ ಸುಹೇಲ್ (36) ಬಂಧಿತರು. ಅವರಿಂದ 1.88 ಕೆ.ಜಿ ಚಿನ್ನಾಭರಣ, ₹45 ಸಾವಿರ ನಗದು  ಹಾಗೂ 2 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಅವರ ಬಂಧನದಿಂದ ನಗರದ 14 ಠಾಣೆಗಳಲ್ಲಿ ದಾಖಲಾಗಿದ್ದ 30 ಪ್ರಕರಣಗಳು ಪತ್ತೆಯಾಗಿವೆ.

‘ಆರೋಪಿ ಆಸೀಖಾನ್, ಮೆಜೆಸ್ಟಿಕ್‌ ಬಳಿ ಬೀದಿ ಬದಿಯಲ್ಲಿ ಬಟ್ಟೆಗಳ ಮಾರಾಟ ಮಾಡುತ್ತಿದ್ದ. ದುಡಿದ ಹಣವನ್ನೆಲ್ಲ ಲೈವ್‌ಬ್ಯಾಂಡ್‌ಗೆ ಖರ್ಚು ಮಾಡುತ್ತಿದ್ದ. ಹಣ ಸಾಲದಿದ್ದಾಗ ಸುಲಿಗೆ ಮಾಡಲಾರಂಭಿಸಿದ್ದ. ಆತ ಒಬ್ಬನೇ 28 ಕಡೆಗಳಲ್ಲಿ ಕೃತ್ಯ ಎಸಗಿದ್ದಾನೆ. ಉಳಿದ ಇಬ್ಬರು ಆರೋಪಿಗಳು, 2 ಕೃತ್ಯಗಳಲ್ಲಿ ಆತನಿಗೆ ಸಹಕಾರ ನೀಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

‘ಬೈಕ್‌ಗಳಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಕಾರುಗಳು ಹಾಗೂ ಒಬ್ಬಂಟಿಯಾಗಿ ಹೋಗುತ್ತಿದ್ದ ವೃದ್ಧರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ತಮ್ಮ ಬಳಿ ಆ್ಯಸಿಡ್ ಹಾಗೂ ಮಾರಕಾಸ್ತ್ರಗಳಿರುವುದಾಗಿ ಹೇಳುತ್ತಿದ್ದರು. ಹಣ, ಚಿನ್ನ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು’ ಎಂದರು.

ಕರೆ ಮಾಡಿ ಸಿಕ್ಕಿಬಿದ್ದ: ಆರೋಪಿ ಆಸೀಖಾನ್‌ನನ್ನು 2010ರಲ್ಲಿ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಬಂಧಿಸಿದ್ದರು. ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿ, ಕೆಲ ತಿಂಗಳ ಹಿಂದಷ್ಟೇ ಅಶೋಕನಗರ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ ಸುಲಿಗೆ ಮಾಡಿದ್ದ’ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

‘ಮನೆ ಮಾಲೀಕರ ಮೊಬೈಲ್‌ ನಂಬರ್‌ ತಿಳಿದುಕೊಂಡು ಹೋಗಿದ್ದ ಆರೋಪಿ, ಕೆಲವು ದಿನಗಳ ಹಿಂದಷ್ಟೇ ಮಾಲೀಕರಿಗೆ ಕರೆ ಮಾಡಿ ಕಿರುಕುಳ ನೀಡಲಾರಂಭಿಸಿದ್ದ. ₹3 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದ. ನೊಂದ ಮಾಲೀಕರು, ಅಶೋಕನಗರ ಪೊಲೀಸರಿಗೆ ವಿಷಯ ತಿಳಿಸಿದ್ದರು. ಮೊಬೈಲ್ ನೆಟ್‌ವರ್ಕ್‌ ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು. ವಿಚಾರಣೆ ವೇಳೆಯೇ ಮತ್ತಷ್ಟು ಕಡೆಗಳಲ್ಲಿ ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !