ರಾಕ್‌ ಸಂಗೀತವೇ ನನ್ನುಸಿರು !

7

ರಾಕ್‌ ಸಂಗೀತವೇ ನನ್ನುಸಿರು !

Published:
Updated:

‘ರಾಕ್‌ ಸಂಗೀತವೇ ನನ್ನ ಗುರು. ಅದೇ ನನ್ನ ಆಸಕ್ತಿ ಕ್ಷೇತ್ರ. ಮನೆಯಲ್ಲಿ ಸಂಗೀತದ ವಾತಾವರಣವಿದ್ದ ಕಾರಣ, ಸುಲಭವಾಗಿ ಗಿಟಾರ್ ಕಲಿತೆ’ – ಗಿಟಾರ್ ವಾದಕ ಎ.ಆರ್. ಚರಣ್ ರಾವ್ ಸಂಗೀತದ ಪಯಣದ ಆರಂಭದ ಘಟನೆಗಳನ್ನು ಮೆಲಕು ಹಾಕುತ್ತಾ ಮಾತು ಆರಂಭಿಸಿದರು. ‘ತಂದೆ, ಅಜ್ಜ ಎಲ್ಲರೂ ಸಂಗೀತ ಬಲ್ಲವರು. ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಬಳಿ ತಂದೆ ಕೆಲಸ ಮಾಡಿದ್ದಾರೆ. ಹೀಗಾಗಿಯೇ, ನನಗೂ ಸಂಗೀತ ಒಲಿದಿದೆ..’ ಎನ್ನುತ್ತಾ ಗಿಟಾರ್‌ನ ತಂತಿ ಮೀಟುತ್ತಲೇ ಹಳೆ ನೆನಪುಗಳಿಗೆ ಜಾರಿದರು.

ಚರಣ್ ರಾವ್, ಮೂಲತಃ ಗಿಟಾರ್‌ ವಾದಕ. ಆದರೆ, ಆರು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತರು. ರಾಕ್‌ ಸಂಗೀತ ಎಂದರೆ ಉಸಿರು. ಕನ್ನಡದ ಹಳೆಯ ಚಿತ್ರಗೀತೆಗಳು ಹಾಗೂ ದೇವರನಾಮಗಳಿಗೆ ರಾಕ್‌ ಸಂಗೀತ ಸಂಯೋಜಿಸಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತದ ಸುಧೆ ಹರಿಸಿದ್ದಾರೆ.

ಮನೆಯಲ್ಲಿನ ಸಂಗೀತ ವಾತಾವರಣ ಇವರ ಸಂಗೀತಾಸಕ್ತಿಗೆ ಪ್ರೇರಣೆಯಾಗಿತ್ತು. ಕೊನೆಗೆ ಇದೇ ಅವರ ಆಸಕ್ತಿಯ ಕ್ಷೇತ್ರವಾಯಿತು.

‘ನಾಲ್ಕನೇ ತರಗತಿಯಲ್ಲಿ ಇದ್ದಾಗ ತಂದೆಯಿಂದ ಹಾರ್ಮೋನಿಯಂ ಕಲಿತೆ. ಆರಂಭದಿಂದಲೂ ರಾಕ್ ಸಂಗೀತ ಬಗ್ಗೆ ಒಲವಿತ್ತು. ಅದೇ ಕಾರಣಕ್ಕೆ ಗಿಟಾರ್ ಕೂಡ ಕಲಿತೆ.

ಗಿಟಾರ್‌ ನುಡಿಸುವುದನ್ನು ಕಾಜಿಂಗಾಡು ಉನ್ನಿ ಕೃಷ್ಣನ್ ಅವರ ಬಳಿ ಕಲಿತೆ. ಗಿಟಾರ್‌ ಜತೆಗೆ ಅಫ್ಘಾನ್ ರಬ್ಬಾಬ್, ಈಜಿಪ್ಷಿಯನ್, ಔದ್, ಟರ್ಕಿಷ್ ಸಾಸ್, ಮ್ಯಾಂಡೊಲಿನ್, ಉಕುಲೆಲೆ... ಹೀಗೆ ವಿವಿಧ ವಾದ್ಯಗಳನ್ನು ನುಡಿಸುತ್ತೇನೆ. ಆದರೆ, ಇವುಗಳನ್ನು ಯಾರ ಸಹಾಯದಿಂದಲೂ ಕಲಿತಿಲ್ಲ’ ಎನ್ನುತ್ತಾರೆ ಚರಣ್.

ಪ್ರತಿಭೆ ಗುರುತಿಸಿದ್ದು ಕೆನರಾ ಉತ್ಸವದಲ್ಲಿ...
ಮಂಗಳೂರಿನವರಾದ ಚರಣ್‌, ಅಲ್ಲೇ ಎಲ್ಲ ಹಂತದ ಶಿಕ್ಷಣವನ್ನು ಪೂರೈಸಿದರು. ಕೆನರಾ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ, ಅಲ್ಲಿ ನಡೆಯುತ್ತಿದ್ದ ಕೆನರಾ ಉತ್ಸವದಲ್ಲಿ ‘ಎ ಡೆತ್ ಮೆಟಲ್ (ಗಿಟಾರ್ ಸಂಗೀತದ ಒಂದು ಪ್ರಕಾರ)’ ಎಂಬ ಕಾರ್ಯಕ್ರಮ ನಡೆಸಿಕೊಟ್ಟಿದ್ದರಂತೆ. ‘ಈ ಕಾರ್ಯಕ್ರಮದಲ್ಲಿ ನನ್ನ ಪ್ರತಿಭೆಯನ್ನು ಕೆಲವರು ಗುರುತಿಸಿದರು. ಪದವಿ ಮುಗಿದ ಮೇಲೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದೆ. ಮುಂದೆ ನನ್ನ ಸಂಗೀತದ ಬೆಳವಣಿಗೆ ಇಲ್ಲೇ ಆರಂಭವಾಯಿತು’ ಎಂದು ಚರಣ್ ನೆನಪಿಸಿಕೊಳ್ಳುತ್ತಾರೆ.

ಭಕ್ತಿಗೀತೆಗೂ ರಾಕ್‌ ಸಂಗೀತ ಅಳವಡಿಸಿರುವ ಚರಣ್, ಅದಕ್ಕೊಂದು ಸ್ವಾರಸ್ಯಕರ ಹಿನ್ನೆಲೆಯನ್ನೂ ವಿವರಿಸುತ್ತಾರೆ. ಕೆಲಸಕ್ಕಾಗಿ ಬೆಂಗಳೂರು ಸೇರಿದ ಮೇಲೆ ಅವರ ಆಫೀಸಿನಲ್ಲಿ ಒಬ್ಬರು ಇಸ್ಕಾನ್ ದೇವಾಲಯದ ಆಡಳಿತಕ್ಕೆ ಪರಿಚಯವಿದ್ದರು. ಅವರು ಇವರ ಸಂಗೀತ ಆಸಕ್ತಿ ಗಮನಿಸಿ, ದೇವಾಲಯದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಿದರು. ಆಗಲೇ, ದೇವರನಾಮಗಳನ್ನು ರಾಕ್ ಸಂಗೀತಕ್ಕೆ ಅಳವಡಿಸಿದರು. ನಂತರ ಆಸಕ್ತ ಸಂಗೀತ ಗೆಳೆಯರೊಡಗೂಡಿ ‘ಫೋಕ್ ಫೂಷನ್ ಬ್ಯಾಂಡ್’ ರಚಿಸಿಕೊಂಡು, ಕಾರ್ಯಕ್ರಮ ನೀಡಲು ಆರಂಭಿಸಿದರು.

ಸಂಗೀತಕ್ಕಾಗಿ ಕೆಲಸ ಬಿಟ್ಟರು..
ಯಾವುದೇ ಉದ್ಯೋಗದಲ್ಲಿದ್ದರೂ, ಚರಣ್‌ಗೆ ಸಂಗೀತವೇ ಆದ್ಯತೆಯ ವಿಷಯ. ಒಮ್ಮೆ ಉದ್ಯೋಗಕ್ಕಾಗಿ ದುಬೈಗೆ ಹೋದರು. ಅಲ್ಲಿ ಒಂದು ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದರು. ದಿನಕ್ಕೆ ಹದಿಮೂರು ಗಂಟೆ ಕೆಲಸ. ಮೂರ್ನಾಲ್ಕು ಗಂಟೆ ಟ್ರಾಫಿಕ್‌ನಲ್ಲಿ ಕಳೆಯಬೇಕಿತ್ತು. ಈ ಒತ್ತಡದಲ್ಲಿ ತಾವು ಪ್ರೀತಿಸುತ್ತಿದ್ದ ಸಂಗೀತ ಅಭ್ಯಾಸಕ್ಕೆ ಸಮಯ ಸಿಗುತ್ತಿರಲಿಲ್ಲ. ‘ಕೆಲಸದ ಒತ್ತಡ ಬೇಸರ ತರಿಸಿತು. you live once, do what you want ಎಂಬ ಸಾಲು ನನ್ನನ್ನು ಯಾವಾಗಲೂ ಕಾಡುತ್ತಿತ್ತು. ಕೆಲಸಕ್ಕೆ ನೀಡುವ ಸಮಯವನ್ನು ಸಂಗೀತಕ್ಕೆ ನೀಡಿದರೆ, ಏನಾದರೂ ಸಾಧಿಸಬಹುದು ಎಂದುಕೊಂಡು ಇದ್ದ ಕೆಲಸ ಬಿಟ್ಟು ಬೆಂಗಳೂರಿಗೆ ವಾಪಸ್ಸು ಬಂದೆ. ಪುನಃ ಕಾರ್ಯಕ್ರಮಗಳನ್ನು ಕೊಡಲು ಶುರುಮಾಡಿದೆ. ಒಂದು ಕಾರ್ಯಕ್ರಮದಲ್ಲಿ ನನ್ನ ಪ್ರತಿಭೆ ಗುರುತಿಸಿದ ಗಾಯಕಿ ವಾಣಿ ಹರಿಕೃಷ್ಣ ಸಿನಿಮಾದಲ್ಲಿ ಅವಕಾಶ ನೀಡಿದರು’ ಎನ್ನುತ್ತಾ ಸಂಗೀತ ಕ್ಷೇತ್ರದಲ್ಲಿ ತಾವು ಕಂಡ ಏರಿಳಿತಗಳನ್ನು ತೆರೆದಿಟ್ಟರು.

ಹಳೆಯ ಸಿನಿಮಾ ಹಾಡುಗಳಿಗೆ ರಾಕ್ ಸಂಗೀತ ಸಂಯೋಜಿಸುತ್ತಿದ್ದ ಅವರು, ಆ ವೀಡಿಯೊಗಳನ್ನು ಫೇಸ್‍ಬುಕ್‍ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಇದನ್ನು ನೋಡಿದ ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್, ಶ್ರೀಧರ್ ಸಂಭ್ರಮ್, ಕಿರಣ್ ರವೀಂದ್ರನಾಥ್ ಅವರಂಥವರು ಸಿನಿಮಾಗಳಲ್ಲಿ ಅವಕಾಶ ಕೊಟ್ಟರು. ‘ಯಾವುದೇ ಕ್ಷೇತ್ರ ಇರಲಿ, ಖ್ಯಾತಿ ಸುಖಾ ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ಕಷ್ಟಪಡಬೇಕು. ಜತೆಗೆ, ಕೇವಲ ಪ್ರಭಾವ ಇದ್ದರೆ ಸಾಲದು, ಪ್ರತಿಭೆ ಬೇಕು’ ಎಂಬುದು ಚರಣ್ ನಂಬಿಕೆ.

ಇಂಥದ್ದೊಂದು ನಂಬಿಕೆಯೊಂದಿಗೆ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ. ‘ಎಲ್ಲ ಕ್ಷೇತ್ರಗಳಲ್ಲೂ ರಾಜಕೀಯವಿರುತ್ತದೆ. ಆದರೆ, ನಮ್ಮ ತನವನ್ನು ನಾವು ಬಿಟ್ಟುಕೊಡಬಾರದು. ಸತತ ಅಭ್ಯಾಸ, ಪರಿಶ್ರಮದಿಂದ ಏನನ್ನೂ ಬೇಕಾದರೂ ಸಾಧಿಸಬಹುದು’ ಎಂದು ವಿಶ್ವಾಸದಿಂದ ನುಡಿಯುತ್ತಾರೆ. ಮುಂದೆ ಬೇರೆ ಬೇರೆ ದೇಶದ ವಾದ್ಯಗಳನ್ನು ಕಲಿಯುವ ಹಂಬಲ ಇದೆ. ಅದೇ ತಯಾರಿಯಲ್ಲಿ ಇದ್ದೇನೆ ಎನ್ನುತ್ತಾರೆ ಅವರು. 

ಗಜಲ್‌, ರಾಕ್‌, ಜನಪದ...
ಚರಣ್ ರಾವ್‌ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯಕ್ರಮ ನೀಡಿರುವ ಸಂಗೀತಗಾರಕಾರ್ಯಕ್ರಮಗಳನ್ನು ನೀಡುತ್ತಾರೆ. ಸಿನಿಮಾ ಹಾಡು, ಗಜಲ್‍, ರಾಕ್ ಸಂಗೀತ ಎಲ್ಲ ಕಾರ್ಯಕ್ರಮಕ್ಕೂ ಹೋಗುತ್ತಾರೆ. ಕೆಲವೊಮ್ಮೆ ಖ್ಯಾತ ಹಿನ್ನಲೆ ಗಾಯಕರ ಒಟ್ಟಿಗೂ ಕಾರ್ಯಕ್ರಮ ನೀಡುತ್ತಾರೆ. 

ಕನ್ನಡ, ಮಲೆಯಾಳಂ ಹಾಗೂ ಒಡಿಶಾ ಭಾಷೆಗಳಲ್ಲಿ ಆಲ್ಬಮ್ ಹೊರತಂದಿದ್ದಾರೆ. ದುಬೈ, ಶಾರ್ಜಾ, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇತ್ತೀಚೆಗೆ ಬ್ರಿಟನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತೀಯ ವಿದ್ಯಾಭವನದಲ್ಲೂ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಗೀತ ವಿಚಾರ ಸಂಕಿರಣದಲ್ಲಿ ಪ್ಯಾನೆಲ್ ಸದಸ್ಯರಾಗಿ ಸಹ ಭಾಗವಹಿಸಿದ್ದಾರೆ.

ನಾದಬ್ರಹ್ಮ ಹಂಸಲೇಖ ಅವರ ಜನ್ಮ ದಿನದ ಅಂಗವಾಗಿ 92.7 ಬಿಗ್ ಎಫ್‍ಎಂ ರೂಪಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಚರಣ್ ಹಳೆಯ ಕನ್ನಡ ಹಾಗೂ ಹಿಂದಿ ಹಾಡುಗಳ ರಾಕ್ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದರು.  ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ‘ರುಸ್ತುಂ’ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ.

**

-ಚರಣ್‌ ನುಡಿಸುವ ಸಂಗೀತ ಪರಿಕರಗಳು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !