ದುರುಗುಟ್ಟಿದ ಸುನೀಲ್‌ನ ಕಿವಿ ಹಿಂಡಿದ ಅಲೋಕ್!

ಶನಿವಾರ, ಏಪ್ರಿಲ್ 20, 2019
27 °C
ಮುಂಜಾಗ್ರತಾ ಕ್ರಮವಾಗಿ ರೌಡಿ ಪರೇಡ್

ದುರುಗುಟ್ಟಿದ ಸುನೀಲ್‌ನ ಕಿವಿ ಹಿಂಡಿದ ಅಲೋಕ್!

Published:
Updated:
Prajavani

ಬೆಂಗಳೂರು: ‘ಏನೋ ಗುರಾಯಿಸ್ತಿಯಾ. ನೀನು ಕಣ್ಣು ಅಗಲ ಬಿಟ್ಬಿಟ್ರೆ ನಾವು ಭಯ ಬೀಳಲ್ಲ. ಲಾಕಪ್‌ಗೆ ಹಾಕಿ ಒದ್ದು ಬುದ್ಧಿ ಕಲಿಸ್ತೀವಿ’ ಎಂದು ಕುಖ್ಯಾತ ರೌಡಿ ಸೈಲೆಂಟ್ ಸುನೀಲ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್, ಆತ ದುರುಗುಟ್ಟಿ ನೋಡುವುದನ್ನು ನಿಲ್ಲಿಸದಿದ್ದಾಗ ಕಿವಿ ಹಿಂಡಿ ಕಚೇರಿಯೊಳಗೆ ಎಳೆದೊಯ್ದರು.

ಲೋಕಸಭಾ ಚುನಾವಣೆಗೆ ಸಮೀಪಿಸುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ರೌಡಿ ಪರೇಡ್ ನಡೆಸಿದ ಸಿಸಿಬಿ ಪೊಲೀಸರು, ‘ಎಲ್ಲರೂ ವೋಟ್ ಹಾಕ್ಬೇಕು. ಅದೊಂದನ್ನು ಬಿಟ್ಟು ಚುನಾವಣೆಗೆ ಸಂಬಂಧಿಸಿದ ಬೇರೆ ಯಾವುದೇ ಪ್ರಕ್ರಿಯೆಯಲ್ಲೂ ನೀವು ತಲೆ ಹಾಕುವಂತಿಲ್ಲ. ಅಭ್ಯರ್ಥಿಗಳ ಹಿಂದೆ ಸುತ್ತುವುದು, ಕುಡಿದು ದಾಂದಲೆ ಮಾಡುವುದು, ಮತದಾರರನ್ನು ಬೆದರಿಸುವಂತಹ ಕೆಲಸ ಮಾಡಿದರೆ ಕಂಬಿ ಎಣಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸೈಲೆಂಟ್’ ಆದ ಸುನೀಲ್: ಮೋಹನ್ ಅಲಿಯಾಸ್ ಡಬ್ಬಲ್ ಮೀಟ್ರು, ಕುಣಿಗಲ್ ಗಿರಿ, ಮಾರ್ಕೆಟ್ ವೇಲು, ಕೋತಿ ರಾಮ, ಗುಬ್ಬಚ್ಚಿ ಸೀನ, ಮಾರೇನಹಳ್ಳಿ ಜಗ್ಗ, ಸಿ.ಡಿ ನರಸಿಂಹ, ತಿಮ್ಮೇಶ, ಶಿವಾಜಿನಗರದ ತನ್ವೀರ್ ಸೇರಿದಂತೆ 300ಕ್ಕೂ ಹೆಚ್ಚು ರೌಡಿಗಳು ಪರೇಡ್‌ನಲ್ಲಿ ಪಾಲ್ಗೊಂಡಿದ್ದರು.

ಒಬ್ಬೊಬ್ಬರಿಗೇ ಬುದ್ಧಿ ಹೇಳುತ್ತ ಬಂದ ಅಲೋಕ್, ಕೊನೆಯಲ್ಲಿ ಕೈಕಟ್ಟಿ ನಿಂತಿದ್ದ ಸುನೀಲ್‌ನ ಎದುರು ಬಂದರು. ‘ಏನೋ ಕುಡಿದು ಕುಡಿದು ಮುಖ ಊದಿಕೊಂಡಿದಿಯಲ್ಲೋ’ ಎಂದು ಅವರು ಹೇಳಿದಾಗ, ‘ಡ್ರಿಂಕ್ಸ್ ಮಾಡಲ್ಲ ಸರ್. ತೂಕ ಜಾಸ್ತಿ ಆಗಿದೆ ಅಷ್ಟೇ’ ಎಂದು ಏರು ಧ್ವನಿಯಲ್ಲೇ ಪ್ರತಿಕ್ರಿಯಿಸಿದ್ದ.

‘ಕಸದ ಕಾಂಟ್ರ್ಯಾಕ್ಟ್ ತುಂಬ ತಗೋತಿದ್ದೀಯಾ. ಕೈತುಂಬ ಹಣ ಸಿಗ್ತಿದೆ. ಜಾಸ್ತಿ ಸುಖದಲ್ಲಿದ್ದೀಯಾ. ಅದಕ್ಕೆ ಮೈ ಬೆಳೀತಿದೆ’ ಎಂದ ಅಲೋಕ್, ‘ಇವನನ್ನು ಒಳಗೆ ಕರೆದುಕೊಂಡು ಹೋಗ್ರಿ. ಸ್ವಲ್ಪ ವಿಚಾರಣೆ ನಡೆಸಬೇಕು’ ಎಂದರು. ಈ ವೇಳೆ ಸುನೀಲ್ ದಿಟ್ಟಿಸಿ ನೋಡಿದ್ದರಿಂದ ಅವರು ಕೆಂಡಾಮಂಡಲರಾದರು.

‘ಯಾಕೋ ಸೊಕ್ಕ ನಿಂಗೆ. ಕಣ್ಣು ಗುಡ್ಡೆ ಕಿತ್ತಾಕ್ತೀನಿ. ಮೊದ್ಲು ಸರಿಯಾಗಿ ನಿಂತ್ಕೊ’ ಎನ್ನುತ್ತಲೇ ಹೊಡೆಯುವವರಂತೆ ಕೈ ಎತ್ತಿಕೊಂಡು ಆತನ ಬಳಿ ಹೋದ ಅವರು, ಕೊನೆಗೆ ಸಿಟ್ಟಿನಲ್ಲೇ ಕಿವಿ ಹಿಂಡಿದರು. ‘ಇವನ ಎಲ್ಲ ವ್ಯವಹಾರಗಳನ್ನೂ ಪರಿಶೀಲಿಸಿ. ಯಾರ‍್ಯಾರ ಬಳಿ ಕಾಂಟ್ರ್ಯಾಕ್ಟ್ ತಗೋಂಡಿದಾನೆ? ಯಾರ‍್ಯಾರಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ ತಿಳಿದುಕೊಂಡು ಕೇಸ್ ದಾಖಲಿಸಿ. ಒಳಗೆ ಹಾಕಿ ಒದ್ದರೆ ಬುದ್ಧಿ ಬರುತ್ತೆ’ ಎಂದು ಎಸಿಪಿ ಬಾಲರಾಜ್‌ ಅವರಿಗೆ ಸೂಚಿಸಿದರು.

ಬೆಟ್ಟಿಂಗ್ ಬಗ್ಗೆ ಬಾಯ್ಬಿಟ್ಟ ಗಿರಿ: ಕುಣಿಗಲ್‌ ಗಿರಿಯನ್ನು ಮಾತನಾಡಿಸಿದ ಅಲೋಕ್‌, ‘ಏನೋ ಮೊನ್ನೆ ಐಪಿಎಲ್‌ನಲ್ಲಿ ಮುಂಬೈ ಟೀಂ ಪರ ಬೆಟ್ಟಿಂಗ್ ಕಟ್ಟಿ ₹ 2 ಲಕ್ಷ ಗೆದ್ದಿದ್ದೀಯಂತೆ. ಎಲ್ಲಿಟ್ಟಿದ್ದಿಯಾ ದುಡ್ಡು’ ಎಂದು ಪ್ರಶ್ನಿಸಿದರು. ‘ಇಲ್ಲ.. ಇಲ್ಲ..’ ಎನ್ನುತ್ತಲೇ ಇದ್ದ ಗಿರಿ, ಕೊನೆಗೂ ಬೆಟ್ಟಿಂಗ್‌ನಲ್ಲಿ ಹಣ ಬಂದಿರುವುದಾಗಿ ಒಪ್ಪಿಕೊಂಡ. ನಂತರ ‍ಪೊಲೀಸರು ಆತನನ್ನೂ ವಶಕ್ಕೆ ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 46

  Happy
 • 7

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !