ಕೇರಳದ ಊಟಕ್ಕೆ ‘ಸಾಲ್ಟ್ ಮ್ಯಾಂಗೊ ಟ್ರೀ’

ಸೋಮವಾರ, ಮಾರ್ಚ್ 25, 2019
31 °C
Salt mango tree

ಕೇರಳದ ಊಟಕ್ಕೆ ‘ಸಾಲ್ಟ್ ಮ್ಯಾಂಗೊ ಟ್ರೀ’

Published:
Updated:
Prajavani

ಪುಟ್ಟ್ ಕಡಲಕರಿ, ಪರಿ‍ಪ್ಪ್, ಮಾಂಗಾ ಕರಿ, ಚೆಮ್ಮೀನ್ ಮಾಂಗಾ ಕರಿ, ಕಿಂಗ್ ಫಿಷ್ ತವಾ ಫ್ರೈ, ಥಲಸ್ಸೆರಿ ದಮ್ ಚಿಕನ್ ಬಿರಿಯಾನಿ,  ಕೊತ್ತಂಬರಿ ಪೆಪ್ಪರ್ ಚಿಕನ್, ಎರಾಚಿ ತೆಂಗಿನಕಾಯಿ ಫ್ರೈ, ಮಲಬಾರ್ ಪರೋಟ... ಹೆಸರುಗಳನ್ನು ಓದುತ್ತಿದ್ದಂತೆಯೇ ಬಾಯಲ್ಲಿ ನೀರೂರಿತೇ? ಅರೆ ಇವೆಲ್ಲಾ ಪಕ್ಕಾ ಕೇರಳದ ಖಾದ್ಯಗಳಲ್ಲವೇ? ಬೆಂಗಳೂರಿನಲ್ಲಿ ಆಂಧ್ರದ ನಾಗಾರ್ಜುನ ಗೊತ್ತು, ಪಂಜಾಬಿಗಳ ಡಾಬಾ ಗೊತ್ತು. ಇದೆಲ್ಲಿದೆ ಕೇರಳದ ಹೋಟೆಲ್ ಅಂತೀರಾ?

ಇಂದಿರಾನಗರದ ಎಚ್ಎಎಲ್ 2ನೇ ಹಂತದಲ್ಲಿರುವ ‘ಸಾಲ್ಟ್‌ ಮ್ಯಾಂಗೊ ಟ್ರೀ’ ಎನ್ನುವ ಆಕರ್ಷಕ ಹೆಸರಿನ ಹೋಟೆಲ್ ಅಪ್ಟಟ ಕೇರಳದ ಖಾದ್ಯಗಳಿಗಾಗಿಯೇ ಜನಪ್ರಿಯ. ಬರೀ ಕೇರಳಿಗರಿಗಷ್ಟೇ ಅಲ್ಲ ಬೆಂಗಳೂರಿನ ಆಹಾರ ಪ್ರಿಯರ ಮನವನ್ನೂ ಈ ಹೋಟಲ್ ಗೆದ್ದಿದೆ. ಬಾಹ್ಯ ನೋಟದಲ್ಲಿ ಅಷ್ಟೇನೂ ಆಕರ್ಷಕವಲ್ಲದ ಈ ಹೋಟೆಲ್‌ನಲ್ಲಿ ಹಿರಿಯರಿಂದ ಕಿರಿಯರ ತನಕ ಇಷ್ಟಪಡುವ ಕೇರಳದ ಥರೇವಾರಿ ಖಾದ್ಯಗಳು ಲಭ್ಯ. ಅದರಲ್ಲೂ ಈ ಬೇಸಿಗೆಯಲ್ಲಿ ಹೆಸರಿಗೆ ತಕ್ಕಂತೆ ಮಾವಿನಿಂದ ಮಾಡಿರುವ ಖಾದ್ಯಗಳು ಇಲ್ಲಿ ದೊರೆಯುತ್ತವೆ.

ಕೇರಳ ಕಿಚನ್‌ನ ಮೆನುವನ್ನು ಎಲ್ಲಿಂದ ಆರಂಭಿಸುವುದು ಎಂದು ಯೋಚಿಸುತ್ತಿರುವಾಗ ಹೋಟೆಲ್‌ನ ಮಾಲೀಕರಲ್ಲೊಬ್ಬರಾದ ಅನೂಪ್ ಸಿಂಗ್ ಹರ್ಬಲ್ ನೀರಿನಿಂದ ಆರಂಭಿಸಿ ಎಂದು ಸಲಹೆ ನೀಡಿದರು. ತುಳಸಿ, ಪುದೀನಾ, ಜೀರಿಗೆ ಹಾಕಲ್ಪಟ್ಟ ನೀರು ಬಿಸಿಲಿನ ದಾಹ ತಣಿಸುವಂತಿತ್ತು. ಕೇರಳದ ಮಸಾಲೆಯ ಜತೆಗೆ ತುಸು ಹುಳಿಮಾವು, ತೆಂಗಿನ ಹಾಲಿನ ರಸ ಬೆರೆಸಿ ತಯಾರಿಸಿದ್ದ ಅಲೆಪ್ಪಿ ಫಿಶ್ ಕರಿ ಅನ್ನು ಕೇರಳದ ಪರೋಟಾ ಜತೆ ನೆಂಚಿಕೊಂಡು ತಿನ್ನಲು ರುಚಿಕರವಾಗಿತ್ತು. ಅಡುಗೆಗೆ ತೆಂಗಿನೆಣ್ಣೆ ಬಳಸುವ ಅಭ್ಯಾಸವಿರುವ ಕೇರಳಿಗರ ಊಟ ಹೊರಗಿನವರಿಗೆ ಅಷ್ಟಾಗಿ ಹಿಡಿಸದು ಅನ್ನುವ ಮಾತನ್ನು ಅಲೆಪ್ಪಿ ಫಿಶ್ ಕರಿ ಸುಳ್ಳು ಮಾಡಿತ್ತು.

ಕೇರಳದ ಹೋಟೆಲ್‌ಗಳಂತೆ ಢಾಳಾಗಿ ಮೂಗಿಗೆ ಬಡಿಯುವ ತೆಂಗಿನೆಣ್ಣೆ ಇಲ್ಲಿಲ್ಲ. ಆದರೆ, ಕೇರಳದ ಸ್ವಾದದಲ್ಲಿ ಯಾವುದೇ ರಾಜಿಯಿಲ್ಲ ಎನ್ನುವಂತಿತ್ತು ಆ ಫಿಶ್ ಕರಿ.  ಅಪ್ಪಂ (ದೋಸೆ ರೀತಿಯದ್ದು) ಜತೆಯಾಗಿದ್ದು  ಫಿಶ್ ಮುಳಗಿಟ್ಟದು ಕರಿ ಮತ್ತು ವರ್ತುರಾಚಾ ಕೊಝಿ ಕರಿ (ಬೋನ್‌ಲೆಸ್ ಚಿಕನ್ ಕರಿ). ಇದು ಮುಗಿಯುತ್ತಿದ್ದಂತೆ ಅನ್ನದ ಜತೆಗೆ ಸಾಥ್ ನೀಡಿದ್ದು ಪರಿಪ್ಪ್ ಮ್ಯಾಂಗೊ ಕರಿ. ಮೇಲ್ನೋಟಕ್ಕೆ ದಾಲ್ ರೀತಿ ಕಾಣುವ ಪರಿಪ್ಪ್ ಮ್ಯಾಂಗೊ ಕರಿಯನ್ನು ಅನ್ನದ ಜತೆಗೆ ಕಲಸಿ ತಿಂದಾಗ ಮನಸಿಗೆ ತೃಪ್ತಿ ಅನಿಸಿತು. ಬೇಯಿಸಿರುವ ತೊಗರಿಬೇಳೆಗೆ ಈರುಳ್ಳಿ, ಒಣ ಮೆಣಸಿನಕಾಯಿಯ ಒಗ್ಗರಣೆ ರುಚಿ ಹೆಚ್ಚಿಸಿತ್ತು. ಬೇಳೆಯ ಜತೆಗೆ ಉದ್ದುದ್ದ ಹೆಚ್ಚಿ ಹಾಕಿದ್ದ ಮಾವಿನ ಹಣ್ಣು ತುಸು ಹುಳಿತುಸು ಸಿಹಿಯಾಗಿ ನಾಲಗೆಗೆ ಹಿತವೆನಿಸಿತು. ಊಟದ ಕೊನೆಗೆ ಬಂದ ಪಾಯಸಂ ರುಚಿಕರವಾಗಿತ್ತು. ಬೆಲ್ಲ, ಏಲಕ್ಕಿ ಪುಡಿ, ರೈಸ್ ಫ್ಲೆಕ್ಸ್‌ ನಿಂದ ಮಾಡಿದ್ದ ಪಾಯಸಂ ಊಟಕ್ಕೆ ಮೆರುಗು ನೀಡುವಂತಿತ್ತು.

‘ಸಾಲ್ಟ್ ಮ್ಯಾಂಗೊ ಟ್ರೀ’ ಹೋಟೆಲ್ ಕೇರಳದವರೇ ಆದ ಪ್ರಜೀಶ್ ನಂಬಿಯಾರ್ ಮತ್ತು ಬಿಪಿನ್ ವೇಣುಗೋಪಾಲ್ ಅವರ ಕನಸಿನ ಕೂಸು. ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಕೇರಳದ ಸಾಂಪ್ರದಾಯಿಕ ಅಡುಗೆ ಕಲೆಯನ್ನು ಮರಳಿ ತರಬೇಕು ಹಾಗೂ ಬೆಂಗಳೂರಿಗರಿಗೆ ಕೇರಳದ ಸ್ವಾದ ಉಣಬಡಿಸುವ ಉದ್ದೇಶದಿಂದ ವೈಟ್‌ಫೀಲ್ಡ್‌ನಲ್ಲಿ 2014ರಲ್ಲಿ ಈ ಹೋಟೆಲ್ ಶುರುವಾಯಿತು. ನಂತರ ಇವರಿಬ್ಬರಿಗೆ ಜೊತೆಯಾದವರು ಹಿಮಾಚಲ್ ಪ್ರದೇಶದವರಾದ ಅನೂಪ್ ಸಿಂಗ್. ಲಂಡನ್‌ನಲ್ಲಿ ಉದ್ಯಮಿಯಾಗಿದ್ದ ಅನೂಪ್ 2018ರಲ್ಲಿ ಸಾಲ್ಟ್‌ ಮ್ಯಾಂಗೊ ಟ್ರೀಗೆ ಮ್ಯಾನೇಜಿಂಗ್ ಪಾಲುದಾರರಾದರು. ಸದ್ಯಕ್ಕೆ ಇಂದಿರಾನಗರದ ಹೋಟೆಲ್ ನೋಡಿಕೊಳ್ಳುತ್ತಿರುವ ಅನೂಪ್ ಅವರಿಗೆ ಹೋಟೆಲ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕನಸಿದೆ. ಮುಂಬರುವ ದಿನಗಳಲ್ಲಿ ಮುಂಬೈನಲ್ಲೂ ಶಾಖೆ ತೆರೆಯುವ ಯೋಚನೆಯಿದೆ.

‘ದಿ ವೀಕ್’ ಪತ್ರಿಕೆಯಿಂದ ಬೆಂಗಳೂರಿನ ಅತ್ಯುತ್ತಮ ಹೋಟೆಲ್‌ಗಳಲ್ಲೊಂದು ಎನ್ನುವ ಮೆಚ್ಚುಗೆಗೆ ‘ದಿ ಸಾಲ್ಟ್‌ ಮ್ಯಾಂಗೊ ಟ್ರೀ’ ಭಾಜನವಾಗಿದೆ. ಇಸ್ರೋದ ಮಾಜಿ ಅಧ್ಯಕ್ಷ ರಾಧಾಕೃಷ್ಣನ್, ಮಲಯಾಳಂ ನಟ ವಿನೀತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ಅಪ್ಪಟ ಕೇರಳದ ಸ್ವಾದಕ್ಕೆ ಮರಳಾಗಿದ್ದಾರೆ. ಪಕ್ಕಾ ಕೇರಳ ಶೈಲಿಯ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಈ ಹೋಟೆಲ್ ಪ್ರಸಿದ್ಧಿಯಾಗಿದೆ. ಕೇರಳದವರ ನೆಚ್ಚಿನ ತಾಣವಾಗಿರುವ ಈ ಹೋಟೆಲ್ ಬೆಂಗಳೂರಿಗರಿಗೂ ಅಚ್ಚುಮೆಚ್ಚು.

ಇಲ್ಲಿನ ಅಪ್ಪಂ, ಚೆಮ್ಮೀನ್ ಮಾಂಗಾ ಕರಿ, ಚಿಕನ್ ಘೀ ರೋಸ್ಟ್‌, ಎರಚಿ ಕೊಕನಟ್ ಫ್ರೈಗೆ ಹೆಸರುವಾಸಿ. ಮಧ್ಯಾಹ್ನದ ಊಟವನ್ನು ಬಾಳೆಲೆಯಲ್ಲಿ ಬಡಿಸುವುದು ಇಲ್ಲಿನ ವಿಶೇಷ. ಇದರ ಜತೆಗೆ ಕೇರಳದ ಚಾಯ್ ಕಡಾ, ಬಾಳೆಹಣ್ಣಿನ ವಿವಿಧ ಖಾದ್ಯಗಳು ಪಕ್ಕಾ ಕೇರಳದ ವಾತಾವರಣವನ್ನು ಸೃಷ್ಟಿ ಮಾಡಿವೆ. ಹೋಟೆಲ್ ಒಳಗಿನ ಗೋಡೆಗಳ ಮೇಲಿರುವ ಕೇರಳದ ಗಣ್ಯವ್ಯಕ್ತಿಗಳ ಚಿತ್ರಗಳು, ಕಬ್ಬಿಣದ ಕುರ್ಚಿ, ಮರದ ಟೇಬಲ್, ಸರಳ ಒಳಾಂಗಣ ವಿನ್ಯಾಸ, ಗೋಡೆ ಮೇಲೆ ತೂಗು ಹಾಕಿರುವ ಮಲಯಾಳಂ ಅಕ್ಷರಶಗಳ ಫೋಟೊ ಫ್ರೇಮ್ಸ್, ಅಗಲವಾದ ಕಿಟಕಿಗಳು ಕೇರಳದ ಪರಿಸರವನ್ನು ಪ್ರತಿನಿಧಿಸುತ್ತವೆ. ‘ಸಾಲ್ಟ್ ಮ್ಯಾಂಗೊ ಟ್ರೀ’ ಪ್ರತಿ ವರ್ಷ ಕೇರಳ ಸ್ಟ್ರೀಟ್ ಫುಡ್ ಹಬ್ಬ, ಓಣಂ, ವಿಶು, ಸೀಫುಡ್ ಹಬ್ಬಗಳನ್ನು ಆಯೋಜಿಸುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !