ಭಾನುವಾರ, ಮೇ 16, 2021
22 °C
ಬಂಧನಕ್ಕೆ ಒಳಗಾಗಿರುವ ಸಾಲೂರು ಮಠಧ ಕಿರಿಯ ಶ್ರೀಗಳ ಬಗ್ಗೆ ಹಿರಿಯ ಶ್ರೀಗಳ ಮಾತು

20 ವರ್ಷಗಳಿಂದ ಹಗೆ ಸಾಧಿಸುತ್ತಿದ್ದ, ದೇವರೇ ಶಿಕ್ಷೆ ನೀಡಿದ್ದಾನೆ: ಗುರುಸ್ವಾಮಿ

ಜಿ ಪ್ರದೀಪ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ದುರಂತ ಪ್ರಕರಣದಲ್ಲಿ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಶ್ರೀ ಇಮ್ಮಡಿ ಮಹಾದೇವಸ್ವಾಮಿ (ದೇವಣ್ಣ ಬುದ್ಧಿ) ಅವರ ಬಂಧನವಾಗುತ್ತಿದ್ದಂತೆಯೇ ಅವರು ಹಾಗೂ ಮಠದ ಹಿರಿಯ ಶ್ರೀಗಳಾದ ಗುರುಸ್ವಾಮಿ ಅವರ ನಡುವಿನ ವೈಮನಸ್ಸು ಕೂಡ ಬಹಿರಂಗವಾಗಿದೆ.

ಮಠ ಹಾಗೂ ಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಜನರು ಈ ವಿಚಾರದ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ. ಸ್ವತಃ ಗುರುಸ್ವಾಮಿ ಅವರೇ, ಕಿರಿಯ ಶ್ರೀಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಹಿಂದಿನ ಹಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರ ಕಾಲಾ ನಂತರ ಮಠದ ಪೀಠಕ್ಕಾಗಿ ಆತ ನನ್ನೊಂದಿಗೆ ಹಲವು ಬಾರಿ ಜಗಳ ಮಾಡಿದ್ದಾನೆ. ನಾನು ಯಾರ ವಿರೋಧಿಯೂ ಅಲ್ಲ; ನನಗೆ ಯಾವ ಆಸೆಯೂ ಇಲ್ಲ. ನನಗಿಂತ ವಯಸ್ಸಿನಲ್ಲಿ ಕಿರಿಯವನಾಗಿದ್ದರಿಂದ ಮಠದ ವಿದ್ಯಾಸ್ಥಂಸ್ಥೆಗಳನ್ನೆಲ್ಲಾ ಅವನ ಸುಪರ್ದಿಗೆ ಬಿಟ್ಟು, ದೇವಾಲಯದ ಆಡಳಿತದ ಜವಾಬ್ದಾರಿಯನ್ನು ನನ್ನ ವಶಕ್ಕೆ ನೀಡಲಾಗಿತ್ತು’ ಎಂದು ಗುರುಸ್ವಾಮಿ ಅವರು ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಇದರಿಂದ ತೃಪ್ತನಾಗದ ಆತ‌, 20 ವರ್ಷಗಳಿಂದಲೂ ನನ್ನ ಮೇಲೆ ಹಗೆ ಸಾಧಿಸಿಕೊಂಡೇ ಬರುತ್ತಿದ್ದ. ಸಣ್ಣ ಪುಟ್ಟ ವಿಚಾರಗಳಿಗೂ ನನ್ನ ಮೇಲೆ ಹೌಹಾರುತ್ತಿದ್ದ. ಭಕ್ತರ ಬಳಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದ. ಆದರೂ ಭಕ್ತರು ಈ ವಿಚಾರಗಳ ಬಗ್ಗೆ ಕಿವಿ ಕೊಟ್ಟಿರಲಿಲ್ಲ. ಇದನ್ನು ಸಹಿಸದೇ ನನ್ನ ಹತ್ತಿರ ಬರುವ ಭಕ್ತರ ಮೇಲೆ ಹಲ್ಲೆ ಮಾಡಲು ಆರಂಭಿಸಿದ. ಕೆಲವು ತಿಂಗಳ ಹಿಂದೆ ನನ್ನ ಭಕ್ತ ಸಂಗಮೇಶ್‌ ಎಂಬುವವನ ಕಪಾಳಕ್ಕೆ ಸಾರ್ವಜನಿಕವಾಗಿ ಹೊಡೆದು ಅವಮಾನಿಸಿದ್ದ’ ಎಂದು ಹೇಳಿದರು.

‘ಈತ ಈ ಮಟ್ಟಿನ ನೀಚ (ಪ್ರಸಾದಕ್ಕೆ ವಿಷ ಬೆರೆಸಿರುವುದು) ಕೆಲಸ ಮಾಡುತ್ತಾನೆ ಎಂಬುದು ನನಗೆ ತಿಳಿದಿರಲಿಲ್ಲ. ನನ್ನನ್ನು ಎಷ್ಟು ಹೀಯಾಳಿಸುತ್ತಿದ್ದರೂ ಸಹಿಸಿಕೊಂಡು ಬರುತ್ತಿದ್ದೆ. ಮಠದಲ್ಲಿ ಸಣ್ಣ ಜಗಳವಾದರೂ ಇವನ ಸಹಚರರು ಹಾಜರಿರುತ್ತಿದ್ದರು. ಅಕ್ಕ ಪಕ್ಕದ ಗ್ರಾಮಗಳ ಜನರಿಗೆ ಬೆದರಿಕೆ ಹಾಕುತ್ತಿದ್ದರು. ಆ ದೇವರೇ ಆತನಿಗೆ ತಕ್ಕ ಶಿಕ್ಷೆ ನೀಡಿದ್ದಾನೆ’ ಎಂದು ಹೇಳಿದರು.

ಮಠಕ್ಕೆ ಕೆಟ್ಟ ಹೆಸರು: ಇಮ್ಮಡಿ ಮಹಾದೇವಸ್ವಾಮಿಯಿಂದಾಗಿ ಮಠಕ್ಕೆ ಕೆಟ್ಟ ಹೆಸರು ಬಂತು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಸಾಲೂರು ಮಠ ಕೂಡ ಮಹದೇಶ್ವರಸ್ವಾಮಿ ದೇವಾಲಯದಷ್ಟೇ ಪ್ರಚಲಿತದಲ್ಲಿತ್ತು. ಆದರೆ, ದೇವಣ್ಣ ಬುದ್ಧಿಯ ಕೆಟ್ಟ ಕೆಲಸಗಳಿಂದಾಗಿ ಮಠಕ್ಕೆ ಬರುತ್ತಿದ್ದ ಮಹಿಳೆಯರ ಸಂಖ್ಯೆ ಕ್ಷೀಣಿಸಿತು. ಇಂತಹ ಪೀಠಾಧಿಪತಿಗಳನ್ನು ಬೆಳೆಯಲು ಬಿಡಬಾರದು. ಗೂಂಡಾಗಿರಿ ಮೂಲಕ ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಅವರ ವಿರುದ್ಧ ಮಾತನಾಡುತ್ತಿರುವವರನ್ನು ಹೆದರಿಸುತ್ತಿದ್ದರು’ ಎಂದು ಹೆಸರು ಹೇಳಲು ಇಚ್ಛಿಸದ ಭಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು

ಗಮನ ಕೊಡುತ್ತಿರಲಿಲ್ಲ: ಮಹದೇಶ್ವರ ಬೆಟ್ಟದಲ್ಲಿ ಮಠದ ವತಿಯಿಂದ ನಡೆಯುತ್ತಿದ್ದ ಶಾಲೆಗಳ ಬಗ್ಗೆ ಕಿರಿಯ ಶ್ರೀ ಗಮನಕೊಡುತ್ತಿರಲಿಲ್ಲ ಎಂದೂ ಭಕ್ತರು ದೂರಿದ್ದಾರೆ. ಶೈಕ್ಷಣಿಕವಾಗಿ ಶಾಲೆ ಹಿಂದುಳಿಯಲು ಕೂಡ ಅವರೇ ಕಾರಣ ಎಂದು ಅವರು ಹೇಳಿದ್ದಾರೆ.

ಪೀಠಾಧ್ಯಕ್ಷ ಹುದ್ದೆಯ ಮೇಲೆ ಕಣ್ಣು

ಇಮ್ಮಡಿ ಮಹಾದೇವಸ್ವಾಮಿ ಅವರು ಮಠದ ಪೀಠಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಹಿರಿಯ ಸ್ವಾಮೀಜಿ ನಿಧನ ಹೊಂದಿದ್ದ ಸಂದರ್ಭದಲ್ಲಿ ಗುರುಸ್ವಾಮಿ ಅವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದು ಕಿರಿಯ ಶ್ರೀಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ, ಹಿರಿಯ ಶ್ರೀಗಳ ವಿರುದ್ಧ ಘರ್ಷಣೆಗೆ ನಿಂತಿದ್ದರು ಎಂದು ಹೇಳುತ್ತವೆ ಮಠದ ಮೂಲಗಳು.

ನಿಧನ ಹೊಂದಿರುವ ಹಿರಿಯ ಸ್ವಾಮೀಜಿ ಅವರ ಸಂಬಂಧಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಅವರು ಬಾಲ್ಯದಿಂದಲೇ ಸಾಲೂರು ಮಠದಲ್ಲಿ ಬೆಳೆದವರು. ಹಾಗಾಗಿ, ಮಠದ ಎಲ್ಲ ಆಗು ಹೋಗುಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಸಾಲೂರು ಮಠದ ಪೀಠಾಧಿಪತಿಯಾಗುವುದು ಅವರ ಏಕೈಕ ಗುರಿಯಾಗಿತ್ತು. ಹಾಗಾಗಿ, ಹಿರಿಯ ಶ್ರೀಗಳೊಂದಿಗೆ ಆಗಾಗ ಜಗಳಕ್ಕೆ ಬರುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 

ಪೀಠದಿಂದ ಕೆಳಗಿಳಿಸಲು ಆಗ್ರಹ

ಪ್ರಸಾದದಲ್ಲಿ ವಿಷಬೆರೆಸಿ 15 ಜನರ ಸಾವಿಗೆ ಕಾರಣರಾಗಿರುವ ಮಠದ ಕಿರಿಯ ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.

ಇವರಿಂದಾಗಿ ಮಠದ ಘನತೆಗೆ ಚ್ಯುತಿ ಬಂದಿದೆ. ಸ್ವಾಮೀಜಿಯಾಗಿ ಮುಂದುವರಿಯುವ ಯಾವ ಅರ್ಹತೆಯೂ ಅವರಿಗಿಲ್ಲ ಎಂಬುದು ಅವರ ವಾದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು