ಸೀರೆ ಸೀರೆ ಸೀರೆ... ಸಿರಿ

7

ಸೀರೆ ಸೀರೆ ಸೀರೆ... ಸಿರಿ

Published:
Updated:
Deccan Herald

ಸೀ ರೆಗೆ ಒಂದೆರಡಲ್ಲ, ಐದು ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂನದಿ ನಾಗರಿಕತೆಯಿಂದಲೂ ಸೀರೆ ಚಾಲ್ತಿಯಲ್ಲಿತ್ತು. ಹತ್ತಿ ಹಿಂಜಿ, ನೇಯುತ್ತಿದ್ದ ಮಹಿಳೆಯರ ಉಡುಪಿಗೆ ಸತ್ತಿಕಾ ಎಂದು ಕರೆಯಲಾಗುತ್ತಿತ್ತು. ಮೂರು ತುಂಡುಗಳಿರುತ್ತಿದ್ದವು. ಅಂತರೀಯ, ಉತ್ತರೀಯ ಹಾಗೂ ಸ್ತನಪಟ್ಟಿ. ಬುದ್ಧನ ಚಾತಕ ಕತೆಗಳಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ.

ಸಾಡಿ, ಸಾರಿ, ಸೀರೆ ಎಂದು ಕರೆಯಲಾಗುವ ಈ ಉಡುಪಿಗೆ ಇಷ್ಟು ವರ್ಷಗಳ  ಇತಿಹಾಸವಿದೆಯೆನ್ನುವುದೇ ರೋಚಕ ಅಲ್ಲವೇ? ಸೀರೆ ಮತ್ತು ಹೆಣ್ಣುಮಕ್ಕಳ ಬದುಕು ಒಂದಕ್ಕೊಂದು ಹೆಣೆದುಕೊಂಡೇ ಇರುತ್ತವೆ. ತಬ್ಬಿಕೊಂಡೇ ಇರುತ್ತವೆ. ಜೀವಾಂಕುರವಾಗುವ ಸಂದರ್ಭದ ಸೀರೆ, ಸೀಮಂತದ ಸೀರೆ, ಋತುಮತಿಯಾದಾಗಲೂ ಸೀರೆ, ನಿಶ್ಚಿತಾರ್ಥ, ಮದುವೆ, ಕೊನೆಗೆ ಅಂತಿಮ ಸಂಸ್ಕಾರದ ಹೊತ್ತಿಗೂ ಜೊತೆಗೆ ಬರುವುದು ಸೀರೆಯೇ!

ಹೀಗೆ ಸೀರೆಗಳ ಬಗ್ಗೆ ಎಷ್ಟು ಹೇಳಿದರೂ ಮುಗಿಯದು. ಸೀರೆಗಳ ಸಂಗ್ರಹವೂ ಅಷ್ಟೇ ಆಸಕ್ತಿದಾಯಕವಾಗಿರುತ್ತದೆ. ಯೌವ್ವನಕ್ಕೆ ಬಂದ ತಕ್ಷಣ, ಉತ್ಸಾಹಕ್ಕೆ ತಕ್ಕಂತೆ ನೆರಿಗೆ ಚಿಮ್ಮಲೇಬೇಕು, ಜಾರ್ಜೆಟ್‌ ಅಥವಾ ಶಿಫಾನ್‌ ಸಂಗ್ರಹ ಆ ವಯಸ್ಸಿನಲ್ಲಿ ಹೆಚ್ಚಾಗಿರುತ್ತದೆ. ನಿಶ್ಚಿತಾರ್ಥ, ಮದುವೆಯೆಂದಾಗ ಅದ್ಯಾಕೋ ಕ್ರೇಪ್‌ ಅಥವಾ ಟಸ್ಸರ್‌ ಕಡೆಗೆ ಮನವಾಲುತ್ತದೆ. ಮೈಗಂಟಿಕೊಂಡು, ಲಜ್ಜೆಯ ಒಂದು ಪರದೆ ಎಲ್ಲವನ್ನೂ ಮುಚ್ಚುವಂತಿರುವ ಈ ಸೀರೆಗಳ ಕಡೆಗೆ ಹೆಚ್ಚು ಒಲವು.

ಮದುವೆಗೆ ಎಂದರೆ ಅಪ್ಪ ಅಮ್ಮನ ಪ್ರೀತಿಯಷ್ಟೇ ಬೆಚ್ಚಗೆ ಕಾಪಿಡುವ ಕಾಂಜೀವರಂ, ಮೊಳಕಾಲ್ಮೂರು, ಉಪ್ಪಡ, ಕುಟ್ಟು, ಇಳಕಲ್‌, ಪೈಠಾನಿ, ಬನಾರಸ್‌ ಹೀಗೆ ಜರಿ ಇರುವ, ರಾಯಲ್‌ ಲುಕ್ ನೀಡುವ ಸಂಗ್ರಹ ಮನ ಸೆಳೆಯುತ್ತದೆ. ಗ್ರ್ಯಾಂಡ್‌ ಫೀಲ್‌ ಉಡಲು, ನೋಡಲು ಬೇಕೆಬೇಕು ಎನ್ನುವಂತಿರುತ್ತದೆ ಈ ಆಯ್ಕೆ.

ಇವೆಲ್ಲ ಒತ್ತಟ್ಟಿಗಿಟ್ಟರೆ, ಅಣ್ಣನ ಮದುವೆ, ಅಕ್ಕನ ಮದುವೆ, ತಂಗಿ, ತಮ್ಮನ ಮದುವೆಗಳಿಗೆ ಸಂಜೆಯ ಸಮಾರಂಭಗಳಿಗೆ ನೆಟ್‌ ಸೀರೆ, ಬಾಂಧನಿ, ಹೆಚ್ಚು ಜರ್ದೋಸಿ ವರ್ಕ್‌ ಇರುವ ಸೀರೆಗಳು ಬೇಡವೇ?

ಹೀಗೆ ಸೀರೆಗಿರುವಷ್ಟೇ ಮಹತ್ವ ಸೀರೆಯಲ್ಲಿರುವ ಬಗೆಗಳಿಗೂ ಇದೆ. ಪ್ರತಿಪ್ರದೇಶ, ಪ್ರತಿ ಸಂಸ್ಕೃತಿಗೂ ಒಂದೊಂದು ಬಗೆಯ ಸೀರೆಗಳಿವೆ.  ಇದೇ ಕಾರಣಕ್ಕೆ ಭಾರತೀಯರು ಎಲ್ಲೇ ಹೋದರೂ ಆ ಊರಿನ ವಿಶೇಷ ಸೀರೆಯನ್ನು ಕೊಡುಗೆಯಾಗಿ ತರುವುದು, ನೀಡುವುದು ಇದ್ದೇ ಇದೆ. ಕೋಲ್ಕತ್ತದ ಬಂಗಾಳಿ ಕಾಟನ್‌, ಭಾಗಲ್‌ಪುರ್‌ ಸಿಲ್ಕ್‌, ಜಾಮದಾನಿ, ಆಂಧ್ರಪ್ರದೇಶದ ಗದ್ವಾಲ್‌, ಇಕತ್‌, ನಾರಾಯಣ ಪೇಟ್‌, ಪೊಂಡುರು, ಕರ್ನಾಟಕದ ಭಾಗ್ಯನಗರ ಕಾಟನ್‌, ಇಳಕಲ್‌, ಮೊಳಕಾಲ್ಮೂರು, ದೊಡ್ಡಬಳ್ಳಾಪುರದ ರೇಷ್ಮೆ, ಮೈಸೂರು ಸಿಲ್ಕ್‌ ಎಂದೇ ಪ್ರಸಿದ್ಧವಾದ ಕ್ರೇಪ್‌ ಮರೆಯಲಾದೀತೆ? ತಮಿಳುನಾಡಿನ ಉಪ್ಪಡ, ಕಾಂಜೀವರಂ, ಮಧುರೈ, ಉತ್ತರದ ಚಾಂದೇರಿ, ಮಾಹೇಶ್ವರಿ, ಬಾಂಧನಿ, ಬನಾರಸಿ ಹೀಗೆ ಮುಗಿಯದ ಸಂಗ್ರಹ. ಈ ಉತ್ತರಿಯ ಬಿಸಿಲಿನಲ್ಲಿ ಸೀರೆಗಳೆಲ್ಲ ಮಡಿಕೆ ಬಿಚ್ಚಿಕೊಂಡು, ಬಯಲಿಗೆ ಬಂದು ಬಿಸಿಲು ತಿನ್ನುತ್ತವೆ. ಬಿಸಿಲು ತಿಂದ ಸೀರೆಗಳನ್ನೆಲ್ಲ ಒಮ್ಮೆ ನೇವರಿಸಿ, ಅದರೊಂದಿಗೆ ಇರುವ ನೆನಪುಗಳನ್ನೂ ಮತ್ತೊಮ್ಮೆ ಬದುಕಿ ಮತ್ತೆ, ಕಪಾಟಿಗೋ, ಟ್ರಂಕಿಗೋ ಎತ್ತಿಡುವುದು ವಾಡಿಕೆ.

ಹೀಗೆ ಎತ್ತಿಡುವಾಗಲೂ ಶರನ್ನವರಾತ್ರಿಯ ಸಂಭ್ರಮಕ್ಕೆಂದೇ ಒಂದಷ್ಟು ಸೀರೆಗಳನ್ನು ಎತ್ತಿ ಪಕ್ಕಕ್ಕಿಡಲಾಗುತ್ತದೆ. ಈ ನವರಾತ್ರಿಯ ಸಂಭ್ರಮಕ್ಕೆ ಸೀರೆ ಮತ್ತು ನೀರೆಯರ ಅಲಂಕಾರವಷ್ಟೇ ಅಲ್ಲ, ಜಗಜ್ಜನನಿ ಹಾಗೂ ದುಷ್ಟನಿಗ್ರಹದ ಆರಾಧನೆಯೂ ಮುನ್ನೆಲೆಗೆ ಬರುತ್ತದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !