ಮಹಿಳೆ ಧ್ವನಿಯಲ್ಲಿ ರೆಸಾರ್ಟ್‌ಗೆ ಕರೆಯುತ್ತಿದ್ದ!

7
ಫೇಸ್‌ಬುಕ್‌ ವ್ಯವಸ್ಥಾಪಕಿ ಸೋಗಿನಲ್ಲಿ ವಂಚನೆ

ಮಹಿಳೆ ಧ್ವನಿಯಲ್ಲಿ ರೆಸಾರ್ಟ್‌ಗೆ ಕರೆಯುತ್ತಿದ್ದ!

Published:
Updated:
ಅನಂತ ಹೆಬ್ಬಾರ್

ಬೆಂಗಳೂರು: ಮಹಿಳೆಯ ಧ್ವನಿ ಹೊರಡಿಸುವ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದ ಈತ, ಫೇಸ್‌ಬುಕ್‌ ವ್ಯವಸ್ಥಾಪಕಿಯ ಸೋಗಿನಲ್ಲಿ ಚೆಂದದ ಯುವತಿಯರಿಗೆ ಕರೆ ಮಾಡುತ್ತಿದ್ದ. ವಾರ್ಷಿಕ ₹10 ಲಕ್ಷ ಪ್ಯಾಕೇಜ್‌ನ ಉದ್ಯೋಗ ನೀಡುವುದಾಗಿ ನಂಬಿಸಿ, ಸಂದರ್ಶನದ ನೆಪದಲ್ಲಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಯುವತಿಯೊಬ್ಬರ ‘ಆಹ್ವಾನ’ ನಂಬಿ ರೆಸಾರ್ಟ್‌ಗೆ ತೆರಳಿದ್ದ ಆರೋಪಿಯನ್ನು ಪೊಲೀಸರು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.

ಕಾರವಾರದ ಅನಂತ ಹೆಬ್ಬಾರ್ ಅಲಿಯಾಸ್ ಮಹೇಶ್‌ ರಾವ್ (32) ಬಂಧಿತ ಆರೋಪಿ. ಈತನ ವಿರುದ್ಧ 28 ವರ್ಷದ ಯುವತಿಯೊಬ್ಬರು ಜುಲೈ 10ರಂದು ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದರು. ಬಂಧಿತನಿಂದ ನಾಲ್ಕು ಮೊಬೈಲ್‌ಗಳು ಹಾಗೂ ಎರಡು ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಎಂಜಿನಿಯರಿಂಗ್ ಪದವೀಧರನಾದ ಅನಂತ, ಕೆಲಸ ಹುಡುಕಿಕೊಂಡು ಮೂರೂವರೆ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಸ್ನೇಹಿತರ ಜತೆ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದ ಈತ, ಮೊದಲು ಜೆ.ಪಿ. ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿದ್ದ. ಸಹೋದ್ಯೋಗಿ ಯುವತಿಯರ ಜತೆ ಅಶ್ಲೀಲವಾಗಿ ವರ್ತಿಸಿದ್ದ ಕಾರಣಕ್ಕೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆ ನಂತರ ಖರ್ಚಿನ ಹಣಕ್ಕಾಗಿ ಈ ರೀತಿ ಅಡ್ಡದಾರಿ ತುಳಿದಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೆಸುಮೆ ಕದ್ದು ಕೃತ್ಯ: ಉದ್ಯೋಗದ ಮಾಹಿತಿಗಾಗಿ ‘ನೌಕರಿ ಡಾಟ್ ಕಾಂ’ ಜಾಲತಾಣದಲ್ಲಿ ಸಲ್ಲಿಕೆಯಾಗುತ್ತಿದ್ದ ಯುವತಿಯರ ರೆಸುಮೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ ಆರೋಪಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ತನ್ನ ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದ. ನಂತರ ವಾಟ್ಸ್‌ಆ್ಯಪ್‌ನಲ್ಲಿ ಅವರ ಪ್ರೊಫೈಲ್ ಪಿಕ್ಚರ್ ನೋಡಿ, ಯುವತಿ ಸುಂದರವಾಗಿದ್ದರೆ ಮಾತ್ರ ಕರೆ ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.

ಧ್ವನಿ ಬದಲಾಗುವ ಆ್ಯಪ್ ಬಳಸಿ ಜುಲೈ 6ರಂದು ಯುವತಿಯೊಬ್ಬರಿಗೆ ಕರೆ ಮಾಡಿದ್ದ ಅನಂತ, ‘ನನ್ನ ಹೆಸರು ಜಯಂತಿ ಸುರೇಶ್. ಫೇಸ್‌ಬುಕ್‌ ಸಂಸ್ಥೆಯ ವ್ಯವಸ್ಥಾಪಕಿ. ದೊಮ್ಮಲೂರಿನಲ್ಲಿ ಸಂಸ್ಥೆಯ ಪ್ರಾದೇಶಿಕ ಕಚೇರಿ ಇದೆ. ಮಾನವ ಸಂಪನ್ಮೂಲ ವಿಭಾಗದಲ್ಲಿ ನಿಮಗೆ ಉದ್ಯೋಗ ಕೊಡಲು ನಿರ್ಧರಿಸಿದ್ದೇವೆ. ವಾರ್ಷಿಕ ₹ 10 ಲಕ್ಷ ಪ್ಯಾಕೇಜ್ ನೀಡುತ್ತೇವೆ. ಮಹೇಶ್‌ ರಾವ್ ಎಂಬುವರು ನಿಮ್ಮನ್ನು ಸಂಪರ್ಕಿಸಿ ಸಂದರ್ಶನದ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುತ್ತಾರೆ’ ಎಂದು ಹೇಳಿದ್ದ.

ಆ ಮಾತುಗಳನ್ನು ನಂಬಿದ್ದ ಮಹಿಳೆ, ಆ ಕರೆಗಾಗಿಯೇ ಕಾಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಆ್ಯಪ್‌ನಲ್ಲಿ ಪುನಃ ಧ್ವನಿಯ ಆಯ್ಕೆ ಬದಲಿಸಿ ಕರೆ ಮಾಡಿದ್ದ ಆರೋಪಿ, ‘ನಾನು ಮಹೇಶ್‌ ರಾವ್. ಮೇಡಂ ನಿಮಗೆ ಕರೆ ಮಾಡಲು ಹೇಳಿದರು. ಸಂದರ್ಶನ ಭಿನ್ನವಾಗಿರುತ್ತದೆ. ನೀವು ಸಂಸ್ಥೆಯ ಮೇಲಧಿಕಾರಿ ಜತೆ ನಾಲ್ಕು ದಿನ ಡೇಟಿಂಗ್ ಮಾಡಬೇಕಾಗುತ್ತದೆ. ಡೇಟಿಂಗ್‌ನ ಕೊನೆಯ ದಿನ ದೈಹಿಕ ಸಂಪರ್ಕಕ್ಕೂ ಸಹಕರಿಸಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ಇದ್ದರೆ, ಮೈಸೂರು ರಸ್ತೆಯ ಯಾವುದಾದರೊಂದು ರೆಸಾರ್ಟ್‌ನಲ್ಲಿ ನೀವೇ ರೂಂ ಬುಕ್ ಮಾಡಿ ನಮಗೆ ಹೇಳಿ’ ಎಂದಿದ್ದ.

ಇದರಿಂದ ಮುಜುಗರಕ್ಕೆ ಒಳಗಾದ ಯುವತಿ, ಕೆಲಸದ ಆಸೆ ಕೈಬಿಟ್ಟು ಸುಮ್ಮನಾಗಿದ್ದರು. ಆದರೂ, ಆತ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಕಿರುಕುಳ ವಿಪರೀತವಾಗಿದ್ದರಿಂದ ಸಂತ್ರಸ್ತೆ ಜುಲೈ 10ರಂದು ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದರು.

ಬಳಿಕ ಸಂತ್ರಸ್ತೆಯ ಮೊಬೈಲ್‌ನಿಂದಲೇ ಆರೋಪಿಗೆ ಸಂದೇಶ ಕಳುಹಿಸಿದ ಪೊಲೀಸರು, ‘ನೀವು ಹೇಳಿದಂತೆ ಕೇಳಲು ಸಿದ್ಧಳಿದ್ದೇನೆ. ಆದರೆ, ವಿಷಯ ಬಹಿರಂಗವಾಗಬಾರದು. ಈ ರಾತ್ರಿಯೇ ರೂಂ ಬುಕ್ ಮಾಡಿರುತ್ತೇನೆ’ ಎಂದು ರೆಸಾರ್ಟ್‌ವೊಂದರ ವಿಳಾಸ ಕಳುಹಿಸಿದ್ದರು. ಆ ಆಹ್ವಾನ ನಂಬಿದ ಆರೋಪಿ, ಸೂಟು–ಬೂಟು ಹಾಕಿಕೊಂಡು ಅಲ್ಲಿಗೆ ತೆರಳಿದ್ದ. ಆದರೆ, ಆ ಕೊಠಡಿಯಲ್ಲಿ ಯುವತಿಯ ಬದಲಾಗಿ ಸೈಬರ್ ಕ್ರೈಂ ಪೊಲೀಸರು ಮಫ್ತಿಯಲ್ಲಿ ಕಾಯುತ್ತ ಕುಳಿತಿದ್ದರು.

‘ಮೋಸ ಹೋದವರು ದೂರು ಕೊಡಿ’

‘ಅನಂತ‌ ಹೆಬ್ಬಾರ್ ಇದೇ ರೀತಿ ಹಲವರಿಗೆ ವಂಚಿಸಿದ್ದಾನೆ. 2017ರಲ್ಲಿ ಮೂವರು ಯುವತಿಯರು ಈತನ ವಿರುದ್ಧ ಯಶವಂತಪುರ ಹಾಗೂ ರಾಮನಗರ ಠಾಣೆಗಳಿಗೆ ದೂರು ಕೊಟ್ಟಿದ್ದರು. 2017ರ ಮಾರ್ಚ್‌ನಲ್ಲಿ ಜೈಲು ಸೇರಿದ್ದ ಈತ, ಆರು ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಕೃತ್ಯ ಮುಂದುವರಿಸಿದ್ದ. ವಂಚನೆಗೆ ಒಳಗಾದವರು, ಸೈಬರ್ ಕ್ರೈಂ ಠಾಣೆಗೆ ದೂರು ಕೊಡಬಹುದು. ಅವರ ಹೆಸರನ್ನು ಗೋಪ್ಯವಾಗಿಟ್ಟು ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 34

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !