ಇವರು ‘ಯೂಟ್ಯೂಬ್‌ ಸ್ಟಾರ್‌’

7

ಇವರು ‘ಯೂಟ್ಯೂಬ್‌ ಸ್ಟಾರ್‌’

Published:
Updated:

‘ಸರಿಯಾಗಿ ನೆನಪಿದೆ ನನಗೆ.. ಇದಕೆಲ್ಲ ಕಾರಣ ಕಿರುನಗೆ..’ – ‘ಮುಂಗಾರು ಮಳೆ–2’ ಸಿನಿಮಾದ ಮಧುರವಾದ ಗೀತೆ ನೆನಪಿದೆಯಲ್ಲವಾ? ಆ ಸಿಹಿಗನಸಿನ ಗೀತೆಗೆ ಹೊಸ ಉಸಿರನು ತುಂಬಿ, ವಿಶಿಷ್ಟ ಸಂಗೀತ ಸ್ಪರ್ಶ ನೀಡಿ, ವಿಭಿನ್ನವಾಗಿ ಪ್ರಸ್ತುಪಡಿಸಿದವರು ತುಮಕೂರಿನ ಯುವ ಗಾಯಕಿ ರಶ್ಮಿ ಮೂರ್ತಿ.

ಈ ‘ಕವರ್‌ ಸಾಂಗ್‌’ ಯೂಟ್ಯೂಬ್‌ ಗಲ್ಲಿಯಲ್ಲಿ ಮೆರವಣಿಗೆ ನಡೆಸಿದ ಕೆಲವೇ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದಾರೆ. ವಿಶೇಷವೆಂದರೆ ಈ ಹಾಡು, ರಶ್ಮಿ ಸಾರಥ್ಯದ ‘ಧ್ರುವ್‌ ಮ್ಯೂಸಿಕ್‌ ಬ್ಯಾಂಡ್‌’ನಿಂದ ಮೂಡಿಬಂದ ಮೊಟ್ಟ ಮೊದಲ ಕನ್ನಡ ಗೀತೆ. ರಶ್ಮಿ ಅವರನ್ನು ಹೊರತುಪಡಿಸಿದರೆ, ಆ ಬ್ಯಾಂಡ್‌ನಲ್ಲಿರುವವರೆಲ್ಲರೂ ಹೊರರಾಜ್ಯದವರು. ಆದರೆ, ರಾಗ ಸಂಯೋಜನೆ ಮಾಡಿರುವುದು ಹೆಚ್ಚಾಗಿ ಕನ್ನಡ ಹಾಡುಗಳಿಗೆ ಮಾತ್ರ.

ರಶ್ಮಿ, ತುಮಕೂರಿನ ಎಸ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (2010–12ನೇ ಸಾಲು) ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸಹಪಾಠಿಗಳೊಂದಿಗೆ ಸೇರಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ವ್ಯಾಸಂಗ ಮುಗಿಸಿದ ನಂತರ ಸಹಪಾಠಿಗಳು ದೂರವಾದರು, ಸಂಗೀತವೂ ಕೂಡ. ಆದರೆ, 2 ವರ್ಷಗಳ ನಂತರ ಅಂದರೆ, 2015ರಲ್ಲಿ ಗೆಳೆಯರು ಒಬ್ಬೊಬ್ಬರಾಗಿ ಸಂಪರ್ಕಕ್ಕೆ ಸಿಕ್ಕಿದರು. ವೃತ್ತಿಪರವಾದ ಬ್ಯಾಂಡ್‌ ಕಟ್ಟಬೇಕು ಎಂದು ನಿರ್ಧರಿಸಿದರು. ಆಗ, ಬಿಹಾರದ ಪವನ್‌, ಅಹಮದಾಬಾದ್‌ನ ಪ್ರಶಾಂತ್‌, ಹೈದರಾಬಾದ್‌ನ ಅಂಕುಶ್‌, ಕೊಲ್ಕತ್ತಾದ ಸೋಹಮ್‌ ಮತ್ತು ದೆಹಲಿಯ ನರೇನ್‌ ಕೈ ಜೋಡಿಸಿ, ‘ಧ್ರುವ್‌ ಮ್ಯೂಸಿಕ್‌ ಬ್ಯಾಂಡ್‌’ ಕಟ್ಟಿದರು.

ಕಸ್ತೂರಿ ನುಡಿಯಿದು, ಕರುನಾಡ ಮಣ್ಣಿದು...

ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಜೈ ಭಾರತ ಜನನಿಯ ತನುಜಾತೆ’, ಡಾ. ರಾಜ್‌ಕುಮಾರ್‌ ಜನ್ಮದಿನದ ಅಂಗವಾಗಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡುಗಳಿಗೆ ಹೊಸ ಧ್ವನಿ ಮತ್ತು ರಾಗ ಸಂಯೋಜಿಸಿದರು. ಅಷ್ಟೇ ಅಲ್ಲದೆ ಆ ಹಾಡುಗಳಿಗೆ ಪೂರಕವಾದ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಮಾಡಿದರು. ಈ ಹಾಡುಗಳನ್ನು ಮೆಚ್ಚಿಕೊಂಡ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌ ಹಾಗೂ ಕೆಲವು ಸಂಗೀತ ನಿರ್ದೇಶಕರು ತಂಡದ ಪ್ರಯತ್ನಕ್ಕೆ ಬೆನ್ನು ತಟ್ಟಿದರು. ಹೀಗೆ ಎರಡು ವರ್ಷಗಳ ಕಾಲ ‘ಧ್ರುವ್‌ ಮ್ಯೂಸಿಕ್ ಬ್ಯಾಂಡ್‌’ ಸಂಗೀತ ಕ್ಷೇತ್ರದಲ್ಲಿ ದೊಡ್ಡದಾಗೇ ಸದ್ದು ಮಾಡಿತು. 2017ರ ನಂತರ ತಂಡದ ಕೆಲವು ಕಲಾವಿದರು ಉದ್ಯೋಗ ನಿಮಿತ್ತ ಹೊರ ದೇಶ ಮತ್ತು ಹೊರ ರಾಜ್ಯಗಳಿಗೆ ಹೋದ ಕಾರಣ, ರಶ್ಮಿ, ಈಗ ಸ್ವತಂತ್ರವಾಗಿ ಸಂಗೀತದ ಪಯಣ ಮುಂದುವರಿಸಿದ್ದಾರೆ.

ಸಂಗೀತದ ಸಾಂಗತ್ಯ

ರಶ್ಮಿ ಅವರ ತಂದೆ ಲಕ್ಷ್ಮೀನಾರಾಯಣ ಮೂರ್ತಿ ಮತ್ತು ತಾಯಿ ನಾಗರತ್ನಾ. ಇಬ್ಬರೂ ಬ್ಯಾಂಕ್‌ ನಿವೃತ್ತ ನೌಕರರು. ಸಂಗೀತದ ಬಗ್ಗೆ ಆಸಕ್ತಿ, ಅಭಿರುಚಿ ಉಳ್ಳವರು. ಹಾಗಾಗಿಯೇ ತಮ್ಮ ಪುತ್ರಿ ರಶ್ಮಿಗೂ 3ನೇ ತರಗತಿಯಲ್ಲಿದ್ದಾಗಲೇ ಸಂಗೀತ, 5ನೇ ತರಗತಿಯಲ್ಲಿದ್ದಾಗ ಭರತನಾಟ್ಯ ತರಗತಿಗೆ ಕಳುಹಿಸಿದರು. ಬಾಲ್ಯದಿಂದ ಜತೆಯಾದ ಸಂಗೀತ, ರಶ್ಮಿ ಅವರಿಗೆ ಈಗ ಉತ್ತಮ ಸಂಗಾತಿಯೂ ಆಗಿದೆ.

ಎಂಜಿನಿಯರ್‌ ಪದವಿ ಮುಗಿಸಿ, ಪ್ರಸ್ತುತ ಬೆಂಗಳೂರಿನ ‘ಟಾಟಾ ಕನ್ಸಲ್‌ಟೆನ್ಸಿ ಸರ್ವಿಸ್‌’ನಲ್ಲಿ ನೌಕರಿ ಮಾಡುತ್ತಿರುವ ಅವರು, ಸಂಗೀತಾಭ್ಯಾಸಕ್ಕಾಗಿಯೇ ನಿತ್ಯ 2 ಗಂಟೆ ಸಮಯ ಮೀಸಲಿಟ್ಟಿದ್ದಾರೆ. ಮಾನಸಿಕ ಒತ್ತಡ ಮತ್ತು ಬೇಸರ ನಿವಾರಣೆಗೆ ಸಂಗೀತವನ್ನೇ ದಿವ್ಯೌಷಧವನ್ನಾಗಿ ಮಾಡಿಕೊಂಡಿದ್ದಾರೆ. ಗಾಯನ, ನೃತ್ಯ, ಅಭಿನಯ ಮೂರು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹೊಸ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ.

‘ನಮ್ಮ ತುಮಕೂರು ಸಾಂಗ್‌’

ತುಮಕೂರು ಜಿಲ್ಲೆಯ ಚಿತ್ರಣವನ್ನು ಕಟ್ಟಿಕೊಡುವ ‘ನಮ್ಮ ತುಮಕೂರು ಸಾಂಗ್‌’ ವಿಡಿಯೊ ತಯಾರಿಸಿದ ರಶ್ಮಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದರು. ಐದೇ ದಿನಗಳಲ್ಲಿ 1.20 ಲಕ್ಷ ಮಂದಿ ವೀಕ್ಷಿಸುವ ಮೂಲಕ ವಿಡಿಯೊ ವೈರಲ್‌ ಆಯಿತು. ಗೀತರಚನೆ, ಪರಿಕಲ್ಪನೆ, ಗಾಯನ ಹಾಗೂ ಅಭಿನಯದಲ್ಲೂ ರಶ್ಮಿ ಸೈ ಎನಿಸಿಕೊಂಡರು. ಈ ಹಾಡಿಗಾಗಿ ಮಧುಗಿರಿ ಏಕಶಿಲಾ ಬೆಟ್ಟ, ದೇವರಾಯನದುರ್ಗ, ಸಿದ್ಧಗಂಗಾ ಮಠ, ಗೂಳೂರು ಗಣಪತಿ, ಕುಣಿಗಲ್‌ ಕೆರೆ, ಕೈದಾಳದ ಚನ್ನಕೇಶವ ದೇಗುಲ, ಗುಬ್ಬಿ ಚನ್ನಬಸವೇಶ್ವರ ದೇಗುಲದಂತಹ ಸ್ಥಳಗಳಿಗೆ ಹೋಗಿ ಒಂದು ತಿಂಗಳು ಚಿತ್ರೀಕರಣ ಮಾಡಿದ್ದಾರೆ. ಒಟ್ಟು ₹ 2 ಲಕ್ಷ ವೆಚ್ಚದಲ್ಲಿ ಸಾಂಗ್ ತಯಾರಾಗಿದೆ. ಶೇ 50ರಷ್ಟು ಹಣ ಕ್ರೌಡ್‌ ಫಂಡಿಂಗ್‌ನಿಂದ ಬಂದರೆ, ಉಳಿದ ಹಣವನ್ನು ರಶ್ಮಿಯವರೇ ಭರಿಸಿದ್ದಾರೆ.

ಇವರು ಪ್ರಸ್ತುತಪಡಿಸಿದ ‘ಹೆಸರು ಪೂರ್ತಿ ಹೇಳದೆ..’, ‘ಕವಿತೆ ನೀನೇಕೆ ಪದಗಳಲಿ ಅವಿತೆ...’, ‘ಪ್ರೀತ್ಸೆ ಅಂತ ಪ್ರಾಣ ತಿನ್ನೊ..’, ‘ಒಮ್ಮೊಮ್ಮೆ ನನ್ನನ್ನು..’ ಮುಂತಾದ ಕವರ್‌ ಸಾಂಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸೂಪರ್‌ ಹಿಟ್‌ ಆಗಿವೆ. ರೇಡಿಯೊ ಸಿಟಿ ಸೂಪರ್‌ ಸಿಂಗರ್‌ ಸೀಸನ್‌–9ರಲ್ಲಿ ಭಾಗವಹಿಸಿ ‘ರನ್ನರ್‌ ಅಪ್‌’ ಸ್ಥಾನ ಗಳಿಸಿದ್ದಾರೆ. ಎಂ.ಎಂ.ಸಿ.ಎಚ್‌. ಕನ್ನಡ ಚಲನಚಿತ್ರದಲ್ಲಿ ‘ಚೆಲ್ಲೋರೆ ಚಮ್ಕಾ’ ಗೀತೆ ಹಾಡುವ ಮೂಲಕ ಹಿನ್ನೆಲೆ ಗಾಯಕಿಯಾಗಿ ಬಡ್ತಿ ಪಡೆದಿದ್ದಾರೆ.

‘ಅವಕಾಶ ಸಿಗದೆ ಎಷ್ಟೋ ಪ್ರತಿಭಾವಂತರು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಡುತ್ತಿದ್ದರು. ಈಗ ಸಾಮಾಜಿಕ ಜಾಲತಾಣ ಪ್ರತಿಭೆಯನ್ನು ಸಾಬೀತುಪಡಿಸಲು ಎಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸಿದೆ. ಹಾಗಾಗಿ ನಾನು ಕೂಡ ಯೂಟ್ಯೂಬ್‌ನಲ್ಲಿ Rashmi Murthy Music ಚಾನಲ್‌ ತೆರೆದು, ಕವರ್‌, ಮಾಶ್‌ಅಪ್‌, ರೆಂಡಿಶನ್‌ ಸಾಂಗ್ಸ್‌ಗಳನ್ನು ಅಪ್‌ಲೋಡ್‌ ಮಾಡಿ, ಲಕ್ಷಾಂತರ ಮಂದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇನೆ.

ಕನ್ನಡ ಗೀತೆಗಳಿಗೆ ಇಂಗ್ಲಿಷ್‌ ಗೀತೆಗಳನ್ನು ಮಿಕ್ಸ್‌ ಮಾಡಿ, ಪ್ರಸ್ತುತಪಡಿಸಿದ ‘ಮೆಡ್ಲೆ ಸಾಂಗ್‌’ಗಳನ್ನೂ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ದಾವಣಗೆರೆ ಬೆಣ್ಣೆ ದೋಸೆ, ಮದ್ದೂರು ವಡೆ, ಮೈಸೂರು ಪಾಕ್‌, ಕ್ಯಾತ್ಸಂದ್ರ ಇಡ್ಲಿ ಸೇರಿದಂತೆ ಪ್ರಸಿದ್ಧ ತಿಂಡಿ ತಿನಿಸುಗಳ ಚಿತ್ರಣ ಕಟ್ಟಿಕೊಡುವ ವಿಡಿಯೊ ತಯಾರಿಸುವ ಕನಸಿದೆ. ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ನನಗಿಷ್ಟ’ ಎನ್ನುತ್ತಾರೆ ರಶ್ಮಿ.

ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್‌ ಪಾಠ!

ರಶ್ಮಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವಾರಕ್ಕೊಮ್ಮೆ ಬೆಂಗಳೂರಿಗೆ ಸಮೀಪವಿರುವ ನಲ್ಲೂರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗಿ ಉಚಿತವಾಗಿ ಪಾಠ ಮಾಡುತ್ತಾರೆ.

‘ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್‌ ಕಬ್ಬಿಣದ ಕಡಲೆಯಾಗಿರುತ್ತದೆ. 3ನೇ ತರಗತಿಯಲ್ಲಿರುವ ಮಕ್ಕಳು ಎಬಿಸಿಡಿ ಮತ್ತು 11ರಿಂದ 20ರವರೆಗಿನ ಸಂಖ್ಯೆಗಳನ್ನು ಇಂಗ್ಲಿಷ್‌ನಲ್ಲಿ ಹೇಳಲು ತಡವರಿಸುತ್ತಾರೆ. ಹಾಗಾಗಿ, ನಾವು ಕಥೆ ಮತ್ತು ಆಟಗಳ ಮೂಲಕ ಮಕ್ಕಳ ಮನಸನ್ನು ಶಿಕ್ಷಣದತ್ತ ಕೇಂದ್ರೀಕರಿಸುವಂತೆ ಮಾಡುತ್ತೇವೆ’ ಎನ್ನುತ್ತಾ ತಮ್ಮ ಶೈಕ್ಷಣಿಕ ಸೇವೆ ಬಗ್ಗೆ ವಿವರಿಸುತ್ತಾರೆ.

ಕಥೆ ಹೇಳುತ್ತಲೇ, ಕಪ್ಪುಹಲಗೆಯ ಮೇಲೆ ಸಂಖ್ಯೆಗಳ ಜೊತೆಗೆ ಇಂಗ್ಲಿಷ್‌ ಅಕ್ಷರಗಳನ್ನು ಬರೆಯುತ್ತಾ, ಮಕ್ಕಳಿಗೆ ಆಭ್ಯಾಸ ಮಾಡಿಸುತ್ತಾರಂತೆ. ಇದರ ಜತೆಗೆ ವಿಜ್ಞಾನ, ಗಣಿತ ವಿಷಯಗಳನ್ನೂ ಬೋಧಿಸುತ್ತಾರೆ. ಇದರಿಂದ ಮಕ್ಕಳೂ ಖುಷಿಯಾಗಿ ಕಲಿತು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದಾರೆ. ‘ಎಷ್ಟೋ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುತ್ತದೆ. ವಿದ್ಯಾವಂತ ಯುವಕರು ಸ್ವಯಂಪ್ರೇರಿತವಾಗಿ ಶಾಲೆಗಳಿಗೆ ಹೋಗಿ ಪಾಠ ಮಾಡಿದರೆ, ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ’ ಎನ್ನುತ್ತಾರೆ ರಶ್ಮಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !