ಶನಿವಾರ, ಮೇ 8, 2021
17 °C

ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ

ಎಚ್.ಎಸ್.ವೆಂಕಟೇಶಮೂರ್ತಿ Updated:

ಅಕ್ಷರ ಗಾತ್ರ : | |

ಕಳೆದ ತಿಂಗಳು ಹದಿನಾಲ್ಕು ದಿನಗಳ ಸಿಂಗಪುರ ಪ್ರವಾಸ ಮುಗಿಸಿಕೊಂಡು ಬಂದೆ. ಇದು ನಾಲ್ಕನೇ ಬಾರಿ ನಾನು ಸಿಂಗಪುರಕ್ಕೆ ಹೋಗಿ ಬಂದಿರುವುದು. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿಯಾಗಿದೆ. ಆ ಪುಟ್ಟ ದೇಶದ ಜನ ಮತ್ತು ಅವರ ಜೀವನ ವಿಧಾನವನ್ನು ಅರ್ಥಮಾಡಿಕೊಳ್ಳಲು ಕೆಲವು ದಿನಗಳ ಪ್ರವಾಸದಿಂದ ಅಂಥ ಉಪಯೋಗವಾಗದು. ಪ್ರವಾಸ ಮುಗಿಸಿಕೊಂಡು ಬಂದಾಗ ಮೊದಲಿಗೆ ಇದುರಾಗುವ ಪ್ರಶ್ನೆ: ಸಿಂಗಪುರದಲ್ಲಿ ಏನು ಮಾಡಿದಿರಿ?

ಈ ಕಿರುಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸೋದು ಕಷ್ಟ. ಸಿಂಗಪುರದಲ್ಲಿ ಏನೇನು ನೋಡಿದಿರಿ?: ಎರಡನೇ ಪ್ರಶ್ನೆ. ಸೆಂತೋಸಾ ದ್ವೀಪ, ಲಿಟಲ್ ಇಂಡಿಯಾ, ಮುಸ್ಥಾಫ ಮಾರುಕಟ್ಟೆ, ಕಾರ್ಕೀ, ಪಾರ್ಲಿಮೆಂಟ್ ಹೌಸ್, ಸಮುದ್ರ ತೀರ, ನೈಟ್ ಸಫಾರಿ, ಮ್ಯೂಜಿಯಮ್... ಅವೆ ಅವೇ ಸ್ಥಳನಾಮಗಳು. ಏನು ಶಾಪಿಂಗ್ ನಡೆಸಿದಿರಿ? ಇದು ಮೂರನೆಯ, ಆದರೆ ಮೊದಲೇ ಕೇಳಬೇಕಾಗಿದ್ದ ಮಹಾ ತಾತ್ವಿಕ ಪ್ರಶ್ನೆ.

ಸಿಂಗಪುರದಲ್ಲೂ ನನ್ನ ದೈನಿಕ ಎಂದಿನಂತೇ ಇತ್ತು. ಪ್ರಾತರ್ವಿಧಿಗಳು, ಆಹಾರ ಸ್ವೀಕಾರ, ಔಟ್ ಸೈಡ್ ಈಟಿಂಗ್, ಮಾತುಕತೆ, ಹರಟೆ, ಬಿಡುವಾದಾಗ ಏನಾದರೂ ಓದು, ರಾತ್ರಿಯ ನಿದ್ದೆ, ಹಗಲಿನ ಎಚ್ಚರ ಇತ್ಯಾದಿ. ಬರಹವೊಂದು ಬಿಟ್ಟು ಉಳಿದಿದ್ದೆಲ್ಲ ಎಲ್ಲಿದ್ದರೂ ಆಗುವಂಥದ್ದೆ. ತಿನ್ನುವುದರಲ್ಲಿ ಸಿಂಗಪುರಕ್ಕೆ ಉಳಿದ ದೇಶಗಳಂತೆಯೇ ಅಪಾರ ಆಸಕ್ತಿ. ಒಂದು ವ್ಯತ್ಯಾಸವೆಂದರೆ ಸಿಂಗಪುರದ ಬಹುಪಾಲು ತಿನ್ನಾಟ ಮನೆಯ ಹೊರಗೇ. ಕಿಚನ್ ಎಂಬುದು ಬಹುಸಂಖ್ಯೆಯ ಮನೆಗಳಲ್ಲಿ (ಮನೆ? ಗಗನಚುಂಬಿ ಸೌಧಗಳಲ್ಲಿ ಮಾಡಿದ ಪುಟ್ಟ ಪುಟ್ಟ ಗೂಡುಗಳು ಅನ್ನುವುದೇ ಹೆಚ್ಚು ವಿಹಿತ) ಅಲಂಕಾರ ಸಾಮಗ್ರಿ. ದಿನವೂ ಅಡುಗೆ ಮಾಡುವಿರಾ ಎಂದು ಸಿಂಗಪೂರಿಗಳು ಭಾರತೀಯರನ್ನು ನೋಡಿದಾಗ ಹುಬ್ಬೇರಿಸುತ್ತಾರಂತೆ.

ಸಿಂಗಪುರದಲ್ಲಿ ಎಲ್ಲೆಲ್ಲೂ ತಿನ್ನುವ ಮಳಿಗೆಗಳು. ಈ ತಿನ್ನುದಾಣಗಳು ಬೆಂಗಳೂರಿನ ಬಿಡಿ ಬಿಡಿ ಹೋಟೆಲ್ಲುಗಳಂತೆ ಅಲ್ಲ. ಇಲ್ಲಿನ ಮಾಲುಗಳಂತೆ ಅಲ್ಲಿ ಬೃಹತ್- ತಿನ್ದಾಣಗಳಿವೆ. ಅಲ್ಲಿ ಥರಾವರಿ ತಿನಿಸುಗಳನ್ನು ಬಿಸಿ ಬಿಸಿಯಾಗಿ ತಯಾರಿಸಿ ಕೊಡುವ ವ್ಯವಸ್ಥೆ ಇದೆ. ಅದೆಷ್ಟು ಬಗೆಯ ಮಾಂಸಾಹಾರಗಳು. ಹಣ್ಣು ಹಂಪಲುಗಳು. ನಾನಾ ಬಗೆಯ ವರ್ಣಾಕಾರ ವೈವಿಧ್ಯಗಳು. ನೋಡಿದರೇ ಸುಸ್ತಾಗಿ ಹೋಗುವಿರಿ. ಅಲ್ಲಿ ಮಕ್ಕಳು, ಮಧ್ಯವಯಸ್ಕರು, ಪ್ರಾಯಸ್ಥರು, ಪರಮ ವೃದ್ಧರು ತಮ್ಮ ತಮ್ಮ ಶಕ್ತ್ಯಾನುಸಾರ ತಿನ್ನಾಟದಲ್ಲಿ ತತ್ಪರರು. ಇಂಥ ಅನೇಕ ತಿನ್ದಾಣಗಳಿಗೆ ಗೆಳೆಯ ವೆಂಕಟ್ ನಮ್ಮನ್ನು ಕರೆದೊಯ್ದಿದ್ದರು.

ಮತ್ತೊಬ್ಬ ರಸಿಕ ಗೆಳೆಯ ಉಮೇಶರಿಂದ ಸಿಂಗಪುರದ ಇರುಳಬಾಳ ಪಾರ್ಶ್ವದರ್ಶನವೂ ಆಯಿತು. ಕಡಿಮೆ ಮಾತು ಹೆಚ್ಚು ಕೆಲಸ ತತ್ವದ ಆಜಾನುಬಾಹು ಗೆಳೆಯ ವೆಂಕಟೇಶ್ ತಮ್ಮ ನೀಳ್ಗಾರಲ್ಲಿ ನಮ್ಮನ್ನು ಸಿಂಗಪುರದ ಸ್ವಚ್ಛ ಬೀದಿಗಳಲ್ಲಿ ಧೂಳೆಬ್ಬಿಸದೆ ಸುತ್ತಿಸಿದ್ದೂ ಸುತ್ತಿಸಿದ್ದೆ. ಬದುಕು ಸಹಜ ಲಯದಲ್ಲಿ ಕಾಣತಕ್ಕ ಬೇರೆ ಬೇರೆ ಅಪ್ರಸಿದ್ಧ ಸ್ಥಳಗಳಿಗೆ ನನ್ನನ್ನು ಕರೆದೊಯ್ಯುವಂತೆ ವೆಂಕಟ್ ಅವರಿಗೆ ಮನವಿ ಮಾಡಿದ್ದೆ. ಹಾಗೋ? ಸರಿ! ಇವತ್ತು ವೃದ್ಧಗ್ರಾಮಕ್ಕೆ ಹೋಗೋಣ ಎಂದರು ಅವರು.

ವೃದ್ಧಗ್ರಾಮ ಎನ್ನುವುದು ಒಂದು ಹಳ್ಳಿ ಎಂದು ಭಾವಿಸಬೇಡಿ. ಅದೊಂದು ವಿರಾಡ್ರೂಪದ ಬಹುಅಂತಸ್ತಿನ, ಅಪಾರ ವಿಸ್ತಾರದ ತ್ರಿವಿಕ್ರಮ ಕಟ್ಟಡ. ಕೊನೆಯ ಅಂತಸ್ತೊಂದನ್ನು ಬಿಟ್ಟು ಉಳಿದೆಲ್ಲ ಕಡೆ ಲಿಫ್ಟ್‌ಗಳ ಜರ‍್ರನೆ ಏರಿಳಿವಾಟ. ಅಲ್ಲಿ ಪರಿತ್ಯಕ್ತ(?) ವೃದ್ಧರ ಸುಸಜ್ಜಿತ ಕಿರುಮನೆಗಳಿವೆ. ಅವರಿಗಾಗಿ ಕ್ಲಿನಿಕ್ ಹೋಮುಗಳಿವೆ. ನಡೆಪಥಗಳಿವೆ. ಈಜುಕೊಳವಿದೆ. ಆಟದ ಕೋರ್ಟುಗಳಿವೆ. ಗ್ರಂಥಾಲಯಗಳಿವೆ. ಆರಾಮಾಗಿ ಕೂತು ಕುತ್ತುಬ್ಬಸದೊಂದಿಗೆ ಕ್ಷೇಮಾಲಾಪ ನಡೆಸಲು ಇದಿರಾಬದರಿನ ನೀಳಾಸನಗಳಿವೆ. ಅಷ್ಟೇಕೆ ಮಹಾರಾಯರೇ, ಲಿಫ್ಟಿಲ್ಲದ ಮೇಲಂತಸ್ತಿನಲ್ಲಿ ಎತ್ತೆರೆತ್ತರ ಬೆಳೆದ ಮರಗಳ ನೆಡುದೋಪಿದೆ. ಬೆಟ್ಟದ ಮೇಲೆ ಮರಗಿಡಗುಲ್ಮಗಳ ಹಸಿರು ಟೊಪ್ಪಿಗೆ ನಮ್ಮ ಮಲೆನಾಡಲ್ಲಿ ಕಾಣುವಂತೆ ಈ ವೃದ್ಧಾಲಯದಲ್ಲಿ ವಿಸ್ತಾರವಾದ ನೆಡುದೋಪು ಕೊನೆಯ ಅಂತಸ್ತಲ್ಲಿದೆ.

ಪುಟ್ಟ ಪುಟ್ಟ ಮಕ್ಕಳೆ ತುಂಬಿದ್ದ ಮಕ್ಕಳ ಮನೆಯೂ ಇದೆ. ವೃದ್ಧರನ್ನು ನೋಡಿಕೊಂಡು ಒಂದು ಹಗಲು ಅವರೊಂದಿಗೆ ಕಳೆದು ಅಪ್ಪ, ಅಮ್ಮಂದಿರ ಗೂಡಿಗೆ ರಾತ್ರಿ ಮರಳುವ ವ್ಯವಸ್ಥೆಯೂ ಉಂಟು. ಕಿಟಕಿಯ ಮೂಲಕ ಕಂಡದ್ದು; ವಿಶಾಲವಾದ ಹಾಲಿನ ತುಂಬ ನಾನಾ ಬಗೆಯ ಆಟಿಕೆಗಳು, ಹಾಸಿಗೆಗಳು. ಅಲ್ಲಲ್ಲಿ ಮಖಾಡಿ ಮಲಗಿ ನಿದ್ರಾಮಗ್ನರಾಗಿದ್ದ ಬೊಂಬೆಗಳಂಥ ಪುಟಾಣಿಗಳು.

ಇನ್ನೊಂದು ದಿನ ವೆಂಕಟ್ ತಮ್ಮ ಹಕ್ಕಿಗೂಡಿನ ಸಮೀಪದಲ್ಲೇ ಇರುವ ಗ್ರಂಥಾಲಯಕ್ಕೆ ನನ್ನನ್ನು ಕರೆದೊಯ್ದರು. ಮೊದಲ ಅಂತಸ್ತಲ್ಲಿ ಜನಸಂದಣಿಯೋ ಜನಸಂದಣಿ. ಅಲ್ಲೊಂದು ಬಯಲು ರಂಗವೇದಿಕೆಯೂ ಉಂಟು. ನಾವು ಅಲ್ಲಿಗೆ ಹೋದ ದಿನ ಇಂಡೊನೇಷ್ಯಾದ ಯಾವುದೋ ಉತ್ಸವ. ಯಕ್ಷಗಾನದ ಪುತ್ಥಳಿಗಳಂತೆ ಅಲಂಕೃತರಾಗಿದ್ದ ಮಕ್ಕಳು ಕಾರ್ಯಕ್ರಮ ನೀಡಲು ಸಿದ್ಧರಾಗಿ ನಿಂತಿದ್ದ ಸಮಯ. ನಾವು ಸ್ವಲ್ಪ ಹೊತ್ತು ಹಳ್ಳಿ ಗುಣಿತದ ಅವರ ಕಾರ್ಯಕ್ರಮ ನೋಡಿದೆವು.ನಾನಾ ಬಗೆಯ ವಾದ್ಯಗಳನ್ನು ನುಡಿಸುತ್ತಾ, ವಿಲಂಬಗತಿಯಲ್ಲಿ ವೃತ್ತಾಕಾರವಾಗಿ ಬಗ್ಗಿ ಎದ್ದು ಚಲಿಸುತ್ತಾ ಕೊರೆದ ಕಣ್ಣಿನ ಹುಡುಗಿಯರು ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಅನುಭವ. ಪ್ರೇಕ್ಷಕರು ಪ್ರತಿ ನಡೆಗೂ ಕರತಾಡನದೊಂದಿಗೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು. ರಂಗಭೂಮಿಯ ಎದುರಿಗೇ ಇದ್ದ ತಿನ್ದಾಣದಲ್ಲಿ ಮಗ್ನರಾಗಿದ್ದ ಭೋಜನ ರಸಿಕರು ಕಡೆ ನೋಟದಲ್ಲಿ ಕಾರ್ಯಕ್ರಮ ನೋಡುತ್ತಾ ತಮ್ಮ ತಾಟಿನಲ್ಲಿದ್ದ ಸಾಮಗ್ರಿಯನ್ನು ಚೇಧಿಸುವ, ಬೇಧಿಸುವ, ಆಸ್ವಾದಿಸುವ, ಬೆರಳ್ಗೋಲಿನ ಚಕಮಕಿಯೊಂದಿಗೆ ಜೋಲು ಸೇವಿಗೆಯನ್ನು ಪುಸಕ್ಕನೆ ಬಾಯಿಗೆ ಎಸೆದು ಸೊರ‍್ರನೆ ಅದನ್ನು ಎಳೆದುಕೊಳ್ಳುವ ಆಟದಲ್ಲಿ ತನ್ಮಯರಾಗಿದ್ದಾರೆ. ಆ ಭೋಜನದ ಉಗ್ರ ಕಂಪು ಮೂಗಿನ ಸೆಲೆ ಒಡೆಯುವಂತಿದೆ.

ಎರಡನೇ ಅಂತಸ್ತಿನಲ್ಲಿ ಮೊದಲ ಅಂತಸ್ತಿಗೆ ತದ್ವಿರುದ್ಧವಾದ ಗಾಢ ಮೌನ. ಎಲ್ಲ ವಯಸ್ಸಿನ ಓದಾಳಿಗಳೂ ಅಲ್ಲಿ ಪುಸ್ತಕ ಪಾಣಿಗಳಾಗಿ ಧ್ಯಾನಮಗ್ನರಾಗಿದ್ದಾರೆ.

ಮೂರನೇ ಅಂತಸ್ತು ಮಕ್ಕಳಿಗೆ ಮೀಸಲು. ಅಲ್ಲಿ ನಾನಾ ಬಗೆಯ ಆಟಿಕೆಗಳು. ಕೃತಕ ಮೃಗಾದಿಗಳು. ಚಾವಣಿಗೆ ರೆಕ್ಕೆ ಬಡಿಯುವಂತಿರುವ ಎಲೆ ತುಂಬಿದ ಹರೆಗಳು. ಮರದ ಕೆಳಗೆ ಕೃತಕ ಹುಲ್ಗಾವಲು. ಇದಕ್ಕೂ ಮೇಲೆ ರೆಫರೆನ್ಸ್ ಸೆಕ್ಷನ್ ಇದೆ ಅಂದರು ವೆಂಕಟ್. ನನಗೆ ಹೊಟ್ಟೆ ತಾಳ ಹಾಕುತ್ತಿದ್ದ ಕಾರಣ ಈವತ್ತಿಗೆ ಇಷ್ಟು ಸಾಕು ಮಾರಾಯರೇ ಎಂದು ಮನೆಯ ಹಾದಿ ಹಿಡಿದಿದ್ದಾಯಿತು.

ಕಡಲು ಭೂಮಿಯನ್ನು ನುಂಗುವುದು ಸಹಜ. ಸಿಂಗಪುರದಲ್ಲಿ ಭೂಮಿಯೇ ಕಡಲನ್ನು ನುಂಗಿ ಬಾಯಾಡಿಸುತ್ತಿದೆ. ಹೀಗೆ ಸಾಗರಾಕ್ರಮಿತ ಭೂ ಪ್ರದೇಶಗಳು ವಿಸ್ತೀರ್ಣವಾಗಿವೆ. ಅದೆಷ್ಟೋ ಆಕಾಶಚುಚ್ಚಿನ ತ್ರಿವಿಕ್ರಮಸೌಧಗಳ ಭಾರ ಹೊತ್ತು, ಗೋವರ್ಧನಧಾರಿಯಾಗಿವೆ. ಆಕ್ರಮಿತ ಪ್ರದೇಶದಲ್ಲಿ ತರುಲತೆ ಗುಲ್ಮಾದಿಗಳು ರಗಡ್ಡಾಗಿ ಬೆಳೆದಿವೆ.

ಒಂದು ಮುಂಜಾನೆ ನಮ್ಮ ಪಾಲಿನ ಅನ್ನಪೂರ್ಣೆಯರಲ್ಲಿ ಒಬ್ಬರಾದ ಶ್ರೀವಿದ್ಯಾ ನಮ್ಮನ್ನು ತಮ್ಮ ಮಾಮನೆಯ ಸಮೀಪದ ಪಾರ್ಕೊಂದಕ್ಕೆ ಕರೆದೊಯ್ದರು. ಅಲ್ಲಿ ಜುಳು ಜುಳು ಹರಿಯುವ ಕಿರು ಝರಿ. ಕಮಾನಾಗಿ ಕಾಂಕ್ರಿಟ್ ಕಾಮನ ಬಿಲ್ಲಿನಂತೆ ಕಂಗೊಳಿಸುವ ಸೇತುವೆ. ಬೆಳಗಿನ ನಡೆ ವ್ಯಾಯಾಮಕ್ಕೆ ಸಾಕಪ್ಪಾ ಸಾಕು ಅನ್ನಿಸುವಂಥ ಬಹುಉದ್ದದ ಅಂಕೊಡೊಂಕಿನ (ಜಟಿಲ ಕಾನನದ ಕುಟಿಲ ಪಥಗಳು) ಪದಪಥಗಳು. ಅಲ್ಲೊಂದು ಮರ ವಿಶೇಷವಾಗಿ ನನ್ನನ್ನು ಆಕರ್ಷಿತು. ಅದರ ತುಂಬ ಗಜ್ಜುಗ ಗಾತ್ರದ ರಾಶಿ ರಾಶಿ ಬಣ್ಣಗಾಯಿಗಳು. ಕೈನಿಲುಕಲ್ಲಿದ್ದ ಒಂದು ಬಣ್ಣದ ಗೋಲಿಯನ್ನು ಸ್ಪರ್ಶ ಸುಖಕ್ಕಾಗಿಯಷ್ಟೇ ನಾನು ಮುಟ್ಟಿದ್ದು. ಮರುಕ್ಷಣದಲ್ಲಿ ಹತ್ತಾರು ಕೆಂಪಿರುವೆಗಳು ನನ್ನ ಕೈಮೇಲೆ ಹರಿದಾಡುತ್ತಿವೆ. ಪಕ್ಕದಲ್ಲಿದ್ದ ವಿದ್ಯಾ, ಉಪಾಸನಾ, ಮೇಘನಾ ಅವನ್ನು ಪಟಪಟ ತಾಡಿಸಿ ಕೈಯಿಂದುದುರಿಸಿದರು.

ಅದೇನು ಕಾರಣವೋ ಕಾಣೆ. ನಮ್ಮ ಉಪಾಸನ ಕೊಟ್ಟಪೆಟ್ಟು ಸ್ವಲ್ಪ ಚುರುಕಾಗಿಯೇ ಇತ್ತು. ಇರುವೆಗಳು ಕಡಿತವನ್ನು ಕೈಯಲ್ಲಿ ಇಟ್ಟು ಮಾಯವಾಗಿದ್ದವು. ಕೈ ಅಲ್ಲಲ್ಲಿ ಚುರುಗುಟ್ಟುತ್ತಿತ್ತು. ಇರುವೆಯ ಕಡಿತವೋ, ನಮ್ಮ ತುರ್ತು ರಕ್ಷಕ ಪಡೆಯ ಹೊಡೆತವೋ. ಕಡಿತದ ಮೂಲ ನಾನು ಊಹಿಸಲಾರೆ.

ಅನ್ನಪೂರ್ಣೆಯರು ಅಂದ ಕೂಡಲೆ ವೆಂಕಟ್ ಪತ್ನಿ ಮಮತಾ ನನಗೆ ನೆನಪಾಗುತ್ತಾರೆ. ನಿಮಗೆ ಇವತ್ತು ಬೆಳಿಗ್ಗೆ ಏನು ತಿಂಡಿ ಆಗಬೇಕು? ಅಡುಗೆಗೆ ಏನು ಮಾಡಲಿ ಎಂದೇ ಅವರ ಮನೆಯ ಶುಭೋದಯ ಪ್ರಾರಂಭವಾಗುವುದು. ಒಂದು ದಿನ ಸೌತೆಕಾಯಿ ಮೊಸರು ಸಾಸುವೆ, ಮೈಗಂಟಿಲ್ಲದ ಬಿಸಿಬಿಸಿ ರಾಗಿ ಮುದ್ದೆ. ಅದನ್ನು ನೆನೆದಾಗ ಈಗಲೂ ನನ್ನ ಬಾಯಲ್ಲಿ ನೀರೂರುವುದು. ಇನ್ನೊಂದು ದಿನ ಅಕ್ಕಿಹಿಟ್ಟಿನ ತಾಲಿಪಟ್ಟು, ಮತ್ತೊಂದು ದಿನ ಸೊಪ್ಪಿನ ಎಸರು, ತರಾವರಿ ತರಕಾರಿ. ಊಟ ಮುಗಿದರೆ ಮುಗಿಯಿತೆ? ಇಲ್ಲ! ಈಗ ನೀವು ಹಣ್ಣು ತಿನ್ನಲಿಕ್ಕುಂಟು. ನಿಮಗೆ ಪ್ರಿಯವಾದ ಗೋವಾ ಹಣ್ಣು ಆಗಬಹುದೆ? ಎನ್ನುವರು ಮಮತಾ. 

ನೃತ್ಯಾಸಕ್ತಿಯ ಆ ಹೆಣ್ಣುಮಗಳು ನರ್ತನ ತರಗತಿಗಳನ್ನು ನಡೆಸುವರು. ಒಂದು ಕ್ಲಾಸಿಗೆ ನಾನು ಪ್ರತ್ಯಕ್ಷದರ್ಶಿ ಕೂಡ. ಆ ಕ್ಲಾಸಲ್ಲಿ ಇದ್ದವರೆಲ್ಲಾ ಪ್ರಾಯ ಸ್ವಲ್ಪವೇ ಜಾರುತ್ತಿರುವ ನಡು ವಯಸ್ಕರು. ಮುಂದೆ ನಿಂತು ಮಮತ ಹಾಡಿಗೆ ತಕ್ಕಂತೆ ನರ್ತಿಸುವುದು, ಅದನ್ನು ಉಳಿದವರೆಲ್ಲಾ ಅನುಸರಿಸುವುದು. ಮುಖ್ಯವಾಗಿ ನೃತ್ಯ ಅವರಿಗೆ ವ್ಯಾಯಾಮದ ಒಂದು ಅಗತ್ಯವಾಗಿತ್ತು. ನಗುತ್ತಾ ಬೆವರು ಸುರಿಸುತ್ತಾ ಗಟ್ಟಿಯುಸಿರು ಹಾಯಿಸುತ್ತಾ ಮಧ್ಯೆ ಮಧ್ಯೆ ಪಾನೀಯ ಸ್ವೀಕರಿಸುತ್ತಾ ಆ ಅಕ್ಕತಂಗಿಯರು ತಮ್ಮ ನರ್ತನಲ್ಲಾಟದಲ್ಲಿ ತೊಡಗಿದ್ದನ್ನು ನೋಡಿದಾಗ ಕಾಲಲ್ಲಿ ಕಸುವಿದ್ದರೆ ನಾನೂ ಒಂದು ಕಾಲು ನೋಡಬಹುದಿತ್ತು ಎಂದು ನನಗನ್ನಿಸಿದ್ದಂತೂ ನಿಜ.

ನಾವು ಹದಿನಾಲಕ್ಕು ದಿನ ಸಿಂಗಪುರದಲ್ಲಿ ಇದ್ದೆವಲ್ಲವೇ? ಮೊದಲ ವಾರ ನಾನು ವೆಂಕಟೇಶ್ -ಶ್ರೀವಿದ್ಯಾ ಮನೆಯಲ್ಲಿ. ಕೊನೆಯ ಒಂದು ವಾರ ಮಮತಾ- ವೆಂಕಟ್ ಮನೆಯಲ್ಲಿ. ಸ್ನಾತಕೋತ್ತರ ಪದವೀಧರೆಯಾದ ಶ್ರೀವಿದ್ಯಾ ತಮ್ಮ ಬಿಡುವಿನ ವೇಳೆಯಲ್ಲಿ ಹೈಸ್ಕೂಲ್‌, ಕಾಲೇಜು ವಿದ್ಯಾರ್ಥಿಗಳಿಗೆ ಟ್ಯೂಷನ್ ನಡೆಸುತ್ತಾರೆ. ಪಾದರಸದಂಥ ಹೆಣ್ಣುಮಗಳು ಈಕೆ. ಅವರ ಪುಟ್ಟ ಮಗಳು ಮಾನ್ಯಾ ಕೂಡ ಅಷ್ಟೇ ಚುರುಕು. ಮೇಲಂತಸ್ತು ಕೆಳ ಅಂತಸ್ತಿನ ಮನೆಯ ಗೃಹಿಣಿಯರೆಲ್ಲಾ ವಿದ್ಯಾಗೆ ಅತ್ಯಾಪ್ತರು. 

ಆ ಮನೆಗಳ ಮಕ್ಕಳೂ ಅವರಿಗೆ ದತ್ತು. ಬಾಲಕೃಷ್ಣನಂಥ ಒಂದು ಪುಟ್ಟ ಮಗುವಂತೂ ಇವರ ಮನೆಯಿಂದ ಹೊರಡಲಾರೆನೆಂದು ಮುಷ್ಕರವನ್ನೇ ಮಾಡುತ್ತಾ ಇತ್ತು. ಮನೆಯ ಮಗಳು ಮಾನ್ಯಾಗೆ ಪಕ್ಕದ ಮನೆಯ ಹಂಚಿಕಡ್ಡಿ ಚೆಲುವೆ ಆಪ್ತ ಗೆಳತಿ. ಅವಳ ಹೆಸರೇನೋ! ಮೂಸಿ ಮೂಸಿ ಎನ್ನುತ್ತಿದ್ದರು ಎಲ್ಲ. ಆ ಮಗುವಿಗೆ ಕನ್ನಡ ಬರದು. ಕಿರುಗಣ್ಣು ತೆರೆದಬಾಯಿಯ ಆ ತೆಳ್ಳನೆ ಹುಡುಗಿ ವಿದ್ಯಾಗೆ ಬಹು ಪ್ರಿಯಳಾದವಳು. ಏನು ವಿಶೇಷ ಮಾಡಿದರೂ ಮೂಸಿಗೆ ಅವಳ ಪಾಲು ಇದ್ದೇ ಇರುವುದು. ಕೆಲವೊಮ್ಮೆ ನಮ್ಮೊಂದಿಗೆ ಅವಳೂ ಊಟ ಮಾಡುವಳು. ಕಾರ್ಡ್ಸ್ ಆಡುವಳು. ಅವಳ ಮಾತು ಹುರುಳಿ ಹುರಿದ ಹಾಗ. ನನಗದು ಅರ್ಥವಾಗದು. ಮಹರಾಯ್ತಿ ಸ್ವಲ್ಪ ನಿಧಾನವಾಗಿ ಮಾತಾಡಮ್ಮ ಎಂದು ನಾನು ಮೊರೆಯಿಟ್ಟಿದ್ದೂ ಇಟ್ಟಿದ್ದೆ.

ನಮ್ಮ ವೆಂಕಟ್ ಕಾವ್ಯ ಪ್ರಿಯರು. ಅತ್ಯಂತ ಗಂಭೀರವಾದ ಕವಿತೆಗಳನ್ನು ತಮ್ಮ ಗೆಳೆಯ ಕುಲಕರ್ಣಿ ಅವರೊಂದಿಗೆ ಅಭ್ಯಾಸ ಮಾಡುವರು. ನಾನು ಕಳೆದ ಬಾರಿ ಕೊಟ್ಟ ದೀಕ್ಷೆಯ ಪ್ರಕಾರ ಅಡಿಗ, ಕೆಎಸ್‌ನ, ಕುವೆಂಪು, ಬೇಂದ್ರೆಯವರ ಅನೇಕ ಮುಖ್ಯ ಕವಿತೆಗಳನ್ನು ಕುಲಕರ್ಣಿ ಮತ್ತು ವೆಂಕಟ್ ಅಭ್ಯಾಸ ಮಾಡಿದ್ದರು. ಏನಾದರೂ ಕ್ಲೇಶ ಎದುರಾದರೆ ಬೆಂಗಳೂರಿಗೇ ಫೋನ್ ಹಚ್ಚಿ ನನ್ನೊಂದಿಗೆ ಮಾತಾಡುತ್ತಿದ್ದರು. ಕಲ್ಕಿ, ದೇವರು ರುಜು ಮಾಡಿದನು, ಭೂತ, ವರ್ಧಮಾನ, ಮನೆಯಿಂದ ಮನೆಗೆ, ತೆರೆದ ಬಾಗಿಲು ಎಲ್ಲಾ ಅವರಿಗೆ ಗೊತ್ತು. ನನ್ನ ಶ್ರೀ ಸಂಸಾರಿ, ಉತ್ತರಾಯಣ ಅವರಿಗೆ ಬಹು ಪ್ರಿಯವಾದ ಕವಿತೆಗಳು.

ಒಂದು ಸಂಜೆ ವೆಂಕಟ್ ಮನೆಯಲ್ಲಿ, ನಾನು, ವೆಂಕಟ್ ಮತ್ತು ಮಮತಾಗೆ ನನ್ನ ಕವಿತೆಗಳನ್ನು ಓದಿದ್ದನ್ನು ಮರೆಯಲಾರೆ. ವೈದೇಹಿ ಪದ್ಯ ಓದಿದಾಗ ವೆಂಕಟ್ ಕಣ್ಣಂಚಲ್ಲಿ ನೀರು. ಮಮತಾ ಅಂತು ಅಳಲಿಕ್ಕೇ ಶುರು. ಕವಿತೆಯ ಅಕ್ಷರಗಳನ್ನು ಕಣ್ಣಿರಲ್ಲೇ ಕವಿಗಳು ಪೋಣಿಸುವರೇನೋ. ಬೇಂದ್ರೆ ಕವಿತೆಗಳನ್ನು ಓದುತ್ತಾ ಕೇಳುತ್ತಾ ಧ್ಯಾನಿಸುತ್ತಾ ನಾನೂ ಹೀಗೆಯೇ ಅನೇಕ ಬಾರಿ ಕಣ್ಣೀರು ಕರೆದಿರುವೆನಲ್ಲವೆ? ಅಳಲಾರದವನು ಉತ್ತಮ ಕವಿಯೂ ಆಗಲಾರ; ಉತ್ತಮ ಓದುಗನೂ ಆಗಲಾರ.

ಇದನ್ನೂ ಓದಿ: ಬಿನ್ ಟ್ಯಾನ್ ಐಲ್ಯಾಂಡ್‌ : ಭುವಿಯ ಸ್ವರ್ಗ

ಸಿಂಗಪುರದಲ್ಲಿ ನಾನು ಏನು ಮಾಡಿದೆ? ಜೆಪಿ- ಅರ್ಚನಾ ಮನೆಯಲ್ಲಿ ಅಸಂಖ್ಯ ಗ್ರಂಥ ಭಂಡಾರ ನೋಡಿದೆ. ರಮ್ಯಾ ಮನೆಯಲ್ಲಿ ಸೊಗಸಾದ ಸಂಗೀತ ಕೇಳಿದೆ. ಉಮೇಶ್- ಅನುರಾಧಾ ಮನೆಯಲ್ಲಿ ಹಾಡು ಹಸೆ ಕುಣಿತದ ಖುಷಿ ಕಂಡೆ. ಮಮತಾ, ವಿದ್ಯಾ ಮನೆಯಲ್ಲಿ ಅಪಾರವಾದ ಅಕ್ಕರಾಸ್ತೆ ಕಂಡು ಉಂಡೆ. ಮಾನ್ಯಾಳ ಹಾಡು ಕೇಳಿ, ನವ್ಯಾಳ ನೃತ್ಯ ನೋಡಿದೆ. ಇಷ್ಟರ ಮಧ್ಯೆ ಒಂಬತ್ತು ಮನೆಗಳಲ್ಲಿ ರಾತ್ರಿಯ ಸುಗ್ರಾಸಭೋಜನಕ್ಕೆ ಅತಿಥಿಯಾಗಿ ಹೋಗಿಬಂದೆ. ಅದೆಷ್ಟು ಚರ್ಚೆ. ಲಘುವಾದದ್ದು, ಗಂಭೀರವಾದದ್ದು. ಅದೆಷ್ಟು ಹಾಡು. ಭಾವಗೀತೆಯಿಂದ ಪ್ರಾರಂಭವಾಗಿ ನಮ್ಮ ಕೈ ಮೀರಿ ಹಿಂದಿ ಸಿನಿಮಾ ಹಾಡಿನ ಸುಳಿಗೆ ಸಿಕ್ಕಿ ರಿವ್ವನೆ ರಿಂಗಣ ಮಾಡಿದ್ದು.

ನನ್ನ ಜೊತೆಯಲ್ಲಿ ಉಪಾಸನ, ಮೇಘನಾ ಉದ್ದಕ್ಕೂ ಇದ್ದರು. ತಮ್ಮ ಹಾಡು ಪಾಡಿನಿಂದ ನಮ್ಮೆಲ್ಲರ ಮನವರಳಿಸಿದರು. ನನ್ನ ಭಾರವಾದ ಲಗೇಜನ್ನು ನಾನು ಎತ್ತಲು ಬಿಡದ ಅವ್ಯಾಜ ಪ್ರೀತಿ ತೋರಿದರು. ನನ್ನನ್ನು ಮನೆಯ ಹಿರಿಯಣ್ಣನಂತೆ ನೋಡಿಕೊಂಡರು. ಜೊತೆಗೆ ನಾವು ಕರೆದಲ್ಲಿ ತೆಲುಗು ಸಿನಿಮಾದ ದೇವರಂತೆ ಢಣ್ ಎಂದು ಪ್ರತ್ಯಕ್ಷರಾಗುತ್ತಿದ್ದ ಉಮೇಶ. ಮೌನವಾಗಿ ರಿವ್ವನೆ ಕಾರೋಡಿಸುತ್ತಿದ್ದ. ಆಗಾಗ ಹರಳು ಗಲ್ಲಿನಂಥ ಒಂದೆರಡು ಮಾತುಗಳನ್ನು ಮರ್ಮಸ್ಥಾನಕ್ಕೆ ಎಸೆಯುತ್ತಿದ್ದ ವೆಂಕಟೇಶ್, ಗದ್ದಲದ ನಡುವೆಯೂ ಕವಿತೆಯ ಧ್ಯಾನಕ್ಕೆ ಥಟ್ಟನೆ ಹೊರಳುತ್ತಿದ್ದ ವೆಂಕಟ್.

ಬರುವಾಗ ನನ್ನ ಲಗೇಜು ಭಾರವಾಗಿದ್ದು ನಿಜ. ಅದರಲ್ಲಿ ಬಹುಪಾಲು ಮಮತಾ- ವಿದ್ಯಾ- ರಮ್ಯಾ ಮೊದಲಾದವರ ಉಡುಗೊರೆಗಳ ಭಾರ. ಅಪರಾತ್ರಿ 3.30ಕ್ಕೆ ನಾವು ಭಾರತಾಭಿಮುಖಿಗಳಾಗಿ ಚಾಂಗಿ ಏರ್‌ಪೋರ್ಟ್‌ಗೆ ಧಾವಿಸಿದ್ದು. ವೆಂಕಟೇಶರದ್ದು ಬಂಡಿಬೋವಿತನ. ವೆಂಕಟ್ ಧ್ವನಿಯಲ್ಲಿ ಏನೋ ಆರ್ದ್ರತೆ. ಮೇಘನ ಯಥಾಪ್ರಕಾರ ಮೌನ ಗೌರಿ. ಉಪಾಸನಗೆ ನಾಳೆ ಬೆಂಗಳೂರಲ್ಲಿ  ತೆಗೆದುಕೊಳ್ಳಬೇಕಾದ ಕ್ಲಾಸುಗಳ ಚಡಪಡಿಕೆ. ರಿವ್ವನೆ ಗುರಿಯಿಟ್ಟ ರಾಮಬಾಣದಂತೆ ಕಾರು ಧಾವಿಸುತ್ತಿದೆ. ನಿರ್ಜನವಾದ ಸಿಂಗಪೂರಿನ ವಿಶಾಲ ಸಾಫು ರಸ್ತೆಗಳು. ಆಗಾಗ ಎದುರಾಗುವ ವಾಹನಗಳನ್ನು ಬಿಟ್ಟರೆ ಸಂಚಾರ ನಿರ್ವಿಘ್ನ. ಟ್ರಾಫಿಕ್ ಇಲ್ಲದಿದ್ದರೂ, ವಾಹನಗಳ ಸುಳಿವು ಇಲ್ಲದಿರುವಲ್ಲಿಯೂ ಟ್ರಾಫಿಕ್ ಸಿಗ್ನಲ್ಲಲ್ಲಿ ಹಸುರು ದೀಪ ಕಾಯುತ್ತಾ ನಿಲ್ಲುವ ವಾಹನಗಳು. ಬೆಂಗಳೂರಿಗರನ್ನು ನೋಡಿ ಈ ಸಿಂಗಪೂರಿಗಳು ಕಲಿಯಬೇಕಪ್ಪ ಎಂದು ನಾನು ಮೆಲುದನಿಯಲ್ಲಿ ನಗುತ್ತಾ ಹೇಳಿದ್ದು ಯಾರಿಗೂ ಕೇಳಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು