ಕೊಳ್ಳೇಗಾಲ: ಕಾಮಗಾರಿ ನಿಧಾನ, ಜನರಿಗೆ ದೂಳಿನ ಮಜ್ಜನ

7
ಐಬಿ ವೃತ್ತದಿಂದ ಕುರುಬನ ಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆ ಅಭಿವೃದ್ಧಿ

ಕೊಳ್ಳೇಗಾಲ: ಕಾಮಗಾರಿ ನಿಧಾನ, ಜನರಿಗೆ ದೂಳಿನ ಮಜ್ಜನ

Published:
Updated:
Deccan Herald

ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರ (ಐಬಿ) ವೃತ್ತದಿಂದ ಕುರುಬನ ಕಟ್ಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಇಲ್ಲಿ ಪ್ರತಿ ದಿನ ಸಂಚರಿಸುವ ಜನರು ದೂಳು ಸೇವನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರೋತ್ಥಾನ 2ನೇ ಹಂತದಲ್ಲಿ ₹2.30 ಕೋಟಿ ಅನುದಾನದಲ್ಲಿ ಐಬಿ ವೃತ್ತದಿಂದ ಕೆಎಸ್‍ಆರ್‌ಟಿಸಿ ಡಿಪೊವರೆಗೆ ರಸ್ತೆಯನ್ನು ವಿಸ್ತರಣೆ ಮಾಡುವ ಕಾಮಗಾರಿಯನ್ನು ನಗರಸಭೆ ಕೈಗೆತ್ತಿಕೊಂಡಿತ್ತು. ಅಂದಿನ ಶಾಸಕ ಎಸ್‌.ಜಯಣ್ಣ ಅವರು ಭೂಮಿಪೂಜೆ ನೆರವೇರಿಸಿದ್ದರು. ಸರ್ಕಾರಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಕೆಲವು ಮನೆಗಳನ್ನು ಕೂಡ ತೆರವುಗೊಳಿಸಲಾಗಿತ್ತು. ಆದರೆ, ಕಾಮಗಾರಿ ಇನ್ನೂ ಮುಗಿದಿಲ್ಲ, ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿ ದಿನ ದೂಳಿನ ಸ್ನಾನ ಮಾಡಿಕೊಂಡೇ ಇಲ್ಲಿ ಸಂಚರಿಸುತ್ತಿದ್ದಾರೆ.

ದೂಳು ಮಯ: ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಕಾಣುವುದು ದೂಳು ಮಾತ್ರ. ಪಟ್ಟಣದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು. ಸುಮಾರು 10 ಹಳ್ಳಿಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಸುಪ್ರಸಿದ್ಧ ಕುರುಬನ ಕಟ್ಟೆ ಕ್ಷೇತ್ರಕ್ಕೂ ಇದೇ ರಸ್ತೆಯಲ್ಲಿ ಹೋಗಬೇಕು. ಸೋಮವಾರ ಮತ್ತು ಶುಕ್ರವಾರಗಳಂದು ಇಲ್ಲಿಗೆ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ರಸ್ತೆ ಸರಿ ಇಲ್ಲದ ಕಾರಣ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ.

ಅನಾರೋಗ್ಯ: ದೂಳಿನಿಂದಾಗಿ ಈ ರಸ್ತೆಯಲ್ಲಿ ಪ್ರತಿ ದಿನ ಓಡಾಡುವ ಶಾಲಾ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಅವರು ಕೂಡ ಇದೇ ರಸ್ತೆಯಲ್ಲಿ ಸಂಚರಿಸುವವರೇ.

‘ನಾವು ಪ‍್ರತಿದಿನ ದೂಳನ್ನೇ ಸೇವಿಸುವ ಪರಿಸ್ಥಿತಿ ಇದೆ. ಜನಸಾಮಾನ್ಯರು ಹಾಗೂ ಈ ಭಾಗದ ಬಡಾವಣೆಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಆದರೆ. ಯಾರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ವಿನ್ಸೆಂಟ್ ಹೇಳಿದರು.

ಸಣ್ಣ ಪುಟ್ಟ ಅಪಘಾತ: ರಸ್ತೆ ಕಾಮಗಾರಿ ನಿಧಾನವಾಗಿ ಆಗುತ್ತಿರುವುದರಿಂದ ಅಲ್ಲಲ್ಲಿ ಗುಂಡಿಗಳು ಉಂಟಾಗಿದ್ದು, ದ್ವಿಚಕ್ರ ವಾಹನಗಳ ಸವಾರರು ಬಿದ್ದಿರುವ ಹಲವು ಪ್ರಕರಣಗಳು ನಡೆದಿವೆ. ಮಳೆ ಬಂದರೆ ಇಡೀ ರಸ್ತೆ ಕೆಸರು ಗದ್ದೆಯಾಗುತ್ತದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

‘ತಿಂಗಳಲ್ಲಿ ಕಾಮಗಾರಿ ಪೂರ್ಣ’

ರಸ್ತೆ ವಿಸ್ತರಣೆ ಮಾಡುವಾಗ ಅಕ್ರಮವಾಗಿ ಕಟ್ಟಿದ ಕೆಲವು ಮನೆಗಳನ್ನು ತೆರವು ಮಾಡಿಸಿದ್ದೆವು. ಕೆಲ ಮನೆಯವರು ನಗರಸಭೆಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದ ಕಾರಣ ಕಾಮಗಾರಿ ತಡವಾಗಿದೆ.  ಇನ್ನು ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಯಲಿದೆ ಎಂದು ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !