ಲೂಟಿಯೇ ಮೈತ್ರಿ ಗುರಿ: ಸ್ಮೃತಿ ಇರಾನಿ ವಾಗ್ದಾಳಿ

7

ಲೂಟಿಯೇ ಮೈತ್ರಿ ಗುರಿ: ಸ್ಮೃತಿ ಇರಾನಿ ವಾಗ್ದಾಳಿ

Published:
Updated:
Prajavani

ಬೆಂಗಳೂರು: ‘ಮಹಾ ಮೈತ್ರಿಯ ಗುರಿ ಕೇವಲ ನರೇಂದ್ರ ಮೋದಿ ಅಲ್ಲ. ನೀವು ಮತ್ತು ನಿಮ್ಮ ಜೇಬು. ನಿಮ್ಮನ್ನು ಲೂಟಿ ಹೊಡೆಯಲು ಮೈತ್ರಿ ರಚಿಸಿದ್ದಾರೆ’ 

ಕೇಂದ್ರದ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಕಿಡಿನುಡಿ ಇದು.

ನಗರದಲ್ಲಿ ಭಾನುವಾರ ಸಂಜೆ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಪ್ರಬುದ್ಧರ ಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

‘ಮೋದಿ ಅವರನ್ನು ಕೆಳಗಿಳಿಸುವ ಹೆಸರಿನಲ್ಲಿ ದೇಶದ ಗೌರವ ಹಾಳು ಮಾಡಲು ಕಾಂಗ್ರೆಸ್‌ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಲಂಡನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ‘ದೇಶದ ಚುನಾವಣಾ ವ್ಯವಸ್ಥೆ ಸರಿಯಿಲ್ಲ. ಎಲೆಕ್ಟ್ರಾನಿಕ್‌ ಮತಯಂತ್ರಗಳು ಸರಿಯಿಲ್ಲ’ ಎಂದು ಆರೋಪ ಮಾಡುತ್ತದೆ’ ಎಂದರು.

‘ಮೋದಿ ಅವರನ್ನು ಟೀಕಿಸುವ ಯಾವ ಅವಕಾಶವನ್ನೂ ಕಾಂಗ್ರೆಸ್‌ ಬಿಟ್ಟಿಲ್ಲ. ಆದರೆ, ಮೋದಿ ಅವರದ್ದು ಒಂದೇ ಮಾತು. ಎಷ್ಟು ಟೀಕಾ ಪ್ರಹಾರ ಮಾಡುತ್ತೀರೋ ಮಾಡಿ. ಆದರೆ, ಲೂಟಿ ಹೊಡೆದವರು ಹೋಗಲೇಬೇಕು. ಹಾಗಾಗಿ ಲೂಟಿಕೋರರನ್ನು ವಾಪಸ್‌ ಕಳುಹಿಸಲೇ ಪ್ರಧಾನ ಸೇವಕ ನಿಂತಿದ್ದಾರೆ’ ಎಂದು ಕೇಂದ್ರ ಸರ್ಕಾರವನ್ನು ಸ್ಮೃತಿ ಇರಾನಿ ಸಮರ್ಥಿಸಿಕೊಂಡರು. 

‘ಅಮೇಠಿ ಕ್ಷೇತ್ರದಲ್ಲಿ ಗೆದ್ದ ‘ಜಂಟಲ್‌ಮನ್‌’ ತನ್ನ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಅಲ್ಲಿ ಕಲೆಕ್ಟರ್‌ ಕಚೇರಿ, ಆರೋಗ್ಯಾಧಿಕಾರಿ ಕಚೇರಿಗಳೇ ಇರಲಿಲ್ಲ. ಅವರಿಗೆ ಅಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಅನಿಸಲೇ ಇಲ್ಲ. ಹಾಗೆಂದು ಮೋದಿ ಅವರಿಗೆ ಬೈಯುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರು ಹೇಳದೆಯೇ ಚುಚ್ಚಿದರು. 

‘ನಾವು ಬದಲಾವಣೆಯ ಆಶಯವಿಟ್ಟುಕೊಂಡೇ ಅಲ್ಲಿಗೆ ಹೋದೆವು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಈಗ ಅಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗುತ್ತಿದೆ. ರಸಗೊಬ್ಬರ ರೇಕು ನಿರ್ಮಾಣವಾಗಿದೆ. ಹೀಗೆ ಅಭಿವೃದ್ಧಿ ಸಾಗಿದೆ. ಕೋಟ್ಯಂತರ ರೂಪಾಯಿ ಸಬ್ಸಿಡಿ ಕೊಳ್ಳೆ ಹೊಡೆಯುತ್ತಿರುವುದನ್ನು ತಡೆಗಟ್ಟಲು ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಅದನ್ನು ಎದುರಿಸಲು ಇವರಿಗೆ (ಕಾಂಗ್ರೆಸ್‌ಗೆ) ಆಗುತ್ತಿಲ್ಲ’ ಎಂದರು. 

‘ನವ ಭಾರತದ ಕಲ್ಪನೆ’

‘ನಮಗೆ ಮನೆಯೊಳಗೆ ನುಗ್ಗಿ ಹೊಡೆಯುವುದೂ ಗೊತ್ತು’ (ಘರ್‌ ಮೆ ಘುಸೇಗಾ ಬಿ ಮಾರೇಗಾ ಬಿ) ಎಂದು‘ಉರಿ’ ಚಿತ್ರದ ಸಂಭಾಷಣೆ ನೆನಪಿಸಿದ ಸ್ಮೃತಿ, ಇದು ಹೊಸ ಭಾರತ. ಈ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಮೋದಿ ಅವರು ಇನ್ನೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಬೇಕು’ ಎಂದು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !