ಸಾಮಾಜಿಕ ಜಾಲತಾಣದಲ್ಲಿ ವೈಚಾರಿಕತೆ

ಬುಧವಾರ, ಮೇ 22, 2019
29 °C
ಪ್ರಜಾಪ್ರಭುತ್ವ ಎಂದರೆ ಅಶಿಸ್ತಲ್ಲ. ಸಂವಾದ ಎಂದರೆ ಬಾಯಿ ಮುಚ್ಚಿಸುವುದಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈಚಾರಿಕತೆ

Published:
Updated:
Prajavani

ಸಾಮಾಜಿಕ ಜಾಲತಾಣಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಉತ್ತಮೀಕರಿಸುವ ಅತ್ಯುತ್ತಮ ವೇದಿಕೆಗಳು. ಪತ್ರಿಕೆ ಮಾತ್ರವೇ ಜನಾಭಿಪ್ರಾಯದ ವೇದಿಕೆಯಾಗಿದ್ದಾಗ, ಯಾರು ಬೇಕಾದರೂ ತಮ್ಮ ವಿಚಾರವನ್ನು ಹೇಳಲು ಸಾಧ್ಯವಿರಲಿಲ್ಲ. ಬಯಸಿದವರು ಬಯಸಿದ್ದನ್ನೆಲ್ಲ ಹೇಳಲು ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲು ಯಾವ ಪತ್ರಿಕೆಗೂ ಸಾಧ್ಯವಿರಲಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳು ಒದಗಿಸಿರುವ ವಿಪುಲ ಅವಕಾಶ ಒಂದು ದೊಡ್ಡ ಕೊಡುಗೆಯೇ.

ಭಾರತದ ವೈಚಾರಿಕ ಪರಂಪರೆಯ ಬಹು ದೀರ್ಘ ಹಿನ್ನೆಲೆ ಇರುವುದು ಬ್ರಾಹ್ಮಣ, ಜೈನ, ಬೌದ್ಧ, ಶರಣ ಮುಂತಾದ ನೆಲೆಗಳ ವೈಚಾರಿಕರಲ್ಲಿ. ಇದು, ಓಲೆಗರಿಯ ಕಾಲದ್ದು ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದದ್ದು. ಜನಪದೀಯ ಸ್ವರೂಪದ ವೈಚಾರಿಕ ಪರಂಪರೆ ದೊಡ್ಡದಾಗಿಯೇ ಇದೆ. ಆದರೆ ಅದನ್ನು ‘ಈ ರೂಪದ್ದೆಂದು’ ಹಿಡಿದಿಡುವ ಕಷ್ಟವಿದೆ. ಆದರೆ ಅದು ಕೂಡ ಸಾಂಸ್ಕೃತಿಕ ಸ್ವರೂಪದ್ದೇ. ನಂತರ ಪತ್ರಿಕೆಗಳ ಯುಗದಲ್ಲಿ ಪ್ರಧಾನವಾಗಿ ನಿಂತದ್ದು ಆರ್ಥಿಕ ಸ್ವರೂಪದ ವಿಶ್ವವಿದ್ಯಾಲಯ ಚಿಂತನೆಯನ್ನು ಅನುಸರಿಸಿದ ವೈಚಾರಿಕತೆ. ಇದರ ಹಿಂದೆ ಬಹುದೊಡ್ಡ ಬೌದ್ಧಿಕ ಶಕ್ತಿಯಾಗಿ ನಿಂತದ್ದು ಮಾರ್ಕ್ಸ್‌ವಾದಿ ವಿಚಾರಧಾರೆ. ಇದು ಬಹಿರಂಗದಲ್ಲಿ ಸೆಕ್ಯುಲರ್ ಆಗಿ ಕಾಣಿಸಿಕೊಂಡು ಬಂದ ವೈಚಾರಿಕ ಕ್ರಮದಲ್ಲಿದೆ.

ಈ ಎರಡೂ ವೈಚಾರಿಕ ಪರಂಪರೆಗಳು ಸೀಮಿತ ಜನರಿಂದ ಪ್ರತಿಪಾದಿಸಲ್ಪಟ್ಟ (ಇದನ್ನು ‘ರೂಪಿಸಲ್ಪಟ್ಟ’ ಎಂದು ಭಾವಿಸಬಾರದು) ವೈಚಾರಿಕತೆ. ಈಗ ಬಂದಿರುವ ಸಾಮಾಜಿಕ ಜಾಲತಾಣದ ವೈಚಾರಿಕತೆಯು ಮತೀಯವಾದಿ ಸ್ವರೂಪದ್ದು. ಇದನ್ನು ಯಾವುದೇ ಕಾರಣಕ್ಕೂ ಪಾರಂಪರಿಕವಾದ ಬ್ರಾಹ್ಮಣ, ಜೈನ, ಬೌದ್ಧ, ಶರಣ ಸ್ವರೂಪದ್ದಾಗಿ ನೋಡಬಾರದು. ಆ ವೈಚಾರಿಕ ಪರಂಪರೆಯ ಹಿಂದೆ ಅಧ್ಯಯನ, ಅನುಭವವಿದೆ; ಪ್ರತಿಪಾದನೆಯಲ್ಲಿ ಅಪಾರ ಸಂಯಮವಿದೆ. ಈ ಪರಂಪರೆಯನ್ನು ಅನುಸರಿಸುವ ವ್ಯವಧಾನ ಸಾಮಾಜಿಕ ಜಾಲತಾಣದ ಸಂವಾದಗಳಲ್ಲಿ ಇಲ್ಲ. ಈ ಪಾರಂಪರಿಕ ವಿನ್ಯಾಸವನ್ನು, ಅದರಲ್ಲೂ ಬ್ರಾಹ್ಮಣೀಯ ವೈಚಾರಿಕ ಕ್ರಮವನ್ನು ತನ್ನ ಪ್ರಬಲ ಎದುರಾಳಿಯಾಗಿಯೇ ಪರಿಗಣಿಸಿದ್ದರೂ, ಅದರ ಸಂಯಮವನ್ನು ಸ್ವಲ್ಪಮಟ್ಟಿಗೆ ಅಳವಡಿಸಿಕೊಂಡದ್ದು ವಿಶ್ವವಿದ್ಯಾಲಯ ಕೇಂದ್ರಿತ ವೈಚಾರಿಕ ಪ್ರತಿಪಾದನೆಯೇ ಹೊರತು ಸಾಮಾಜಿಕ ಜಾಲತಾಣದ ವೈಚಾರಿಕ ಪ್ರತಿಪಾದನೆಗಳಲ್ಲ.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಮತೀಯವಾದಿ ವಿನ್ಯಾಸದ ಪ್ರತಿಪಾದನೆಯನ್ನು ಎದುರಿಸುತ್ತಿರುವುದು ವಿಶ್ವವಿದ್ಯಾಲಯ ಚಿಂತನಾ ಕ್ರಮದ ಪ್ರತಿಪಾದನೆಗಳು. ವಿಶ್ವವಿದ್ಯಾಲಯ ಚಿಂತನಾ ಕ್ರಮಕ್ಕೆ ಆಕ್ರಮಣಕಾರಿಯಾಗಿಯೂ ಒರಟಾಗಿಯೂ ಇರುವ ಮತೀಯವಾದಿ ಚಿಂತನಾಕ್ರಮ ಎದುರಿಸಿದ ಅನುಭವವಿಲ್ಲ. ಆದ್ದರಿಂದ ಅದು ಬಹುಬೇಗ ವಿಚಲಿತಗೊಳ್ಳುತ್ತದೆ. ಆಗ ಅದು ಬಹಿರಂಗದಲ್ಲಿ ತೊಟ್ಟುಕೊಂಡ ಸೆಕ್ಯುಲರಿಸಂನ ಪೋಷಾಕನ್ನು ಕಳಚಿ ಜಾತಿವಾದಿಯಾಗಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಮಾರ್ಕ್ಸ್ ತತ್ವಜ್ಞಾನವನ್ನು ಬಿಟ್ಟ ವಿಶ್ವವಿದ್ಯಾಲಯ ಕೇಂದ್ರಿತ ಚಿಂತನಾ ಕ್ರಮವೂ, ವೇದ ಮತ್ತು ಉಪನಿಷತ್ತುಗಳ ತತ್ವಜ್ಞಾನವನ್ನು ಕೈಬಿಟ್ಟ ಹಿಂದುತ್ವದ ಚಿಂತನೆಯೂ ಸಾಮಾಜಿಕ ಜಾಲತಾಣಗಳು ಕೊಡಮಾಡಿದ ಪ್ರಜಾಸತ್ತಾತ್ಮಕ ಅವಕಾಶವನ್ನು ಉನ್ನತೀಕರಿಸುವ ಬದಲು ಅವನತೀಕರಿಸುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳನ್ನು ಹರಡುವುದು ಅತಿ ಹೆಚ್ಚಾಗಿದೆ. ಅಲ್ಲಿ ನಡೆಯುವ ಕೆಲವು ಸಂವಾದಗಳು ಅದೆಷ್ಟು ಬಾಲಿಶವೆಂದರೆ, ಮುಸ್ಲಿಮರ ಕಡೆಯಿಂದ ಮಾತನಾಡುವವನು ‘ಮಹಮ್ಮದ್ ಘಜ್ನಿ ದಾಳಿ ಮಾಡುವಾಗ ನಿಮ್ಮ ದೇವರೇಕೆ ತಡೆಯಲಿಲ್ಲ?’ ಎಂದು ಕೇಳುವುದು, ಹಿಂದೂಗಳ ಕಡೆಯಿಂದ ಮಾತಾಡುವವನು ‘ನಿಮ್ಮ ದೇವರು ಅರೇಬಿಯಾದಲ್ಲಿ ಗಂಗಾ ನದಿಯನ್ನೇಕೆ ಹರಿಸಲಿಲ್ಲ?’ ಎನ್ನುವುದು... ಹಿಂದೂ ದೇವರುಗಳಿಂದ ಮಾತ್ರ ಪವಾಡ ನಿರೀಕ್ಷಿಸುವ ನಾಸ್ತಿಕವಾದಿ, ‘ಗಂಗಾ ನದಿಯಲ್ಲಿ‌ ಮುಳುಗಿದವನನ್ನು ಕಾಶಿ ವಿಶ್ವನಾಥನಿಗೆ ರಕ್ಷಿಸಲು ಆಗಲಿಲ್ಲ?’ ಎನ್ನುವುದೂ ಉಂಟು. ದೇವರು ಎನ್ನುವುದನ್ನು ಒಂದು ಶ್ರದ್ಧೆಯ ಮೂಲ ಎನ್ನುವುದನ್ನೇ ಒಪ್ಪಿಕೊಳ್ಳದೆ ‘ನಿನ್ನ ದೇವರು ಸುಳ್ಳು. ನನ್ನ ದೇವರು ಸತ್ಯ’ ಎನ್ನುವ ವಾದಗಳ ಉದ್ದೇಶ ಜಗಳ ಕಾಯುವುದೇ ಹೊರತು ಜಿಜ್ಞಾಸೆ ಅಲ್ಲ.

ಭಯೋತ್ಪಾದಕನೊಬ್ಬ ಏನಾದರೂ ಮಾಡಿದರೆ ಮುಸ್ಲಿಮರ ಧರ್ಮ, ಗ್ರಂಥ, ಜೀವನ ವಿಧಾನ ಎಲ್ಲದರ ಮೇಲೂ ಲೇವಡಿಯೇ. ದೇಶದ ನಾಗರಿಕತೆಯ ನಿರ್ಮಾಣದಲ್ಲಿ ಮುಸ್ಲಿಮರ ಕೊಡುಗೆಯೂ ಇದೆ ಎಂಬ ಆಲೋಚನೆ ಅಲ್ಲಿರದು. ಸ್ತ್ರೀಯರು, ದಲಿತರ ಪರ ಮಾತನಾಡುವುದನ್ನು ನೋಡಿದರೆ, ಅವರಿಗೆ ಅನ್ಯಾಯವೇ ಆಗಲು ಸಾಧ್ಯವಿಲ್ಲ. ಆದರೆ ಅವರೇ ಮರುದಿನ ತಮ್ಮ ವಿಚಾರಧಾರೆಯನ್ನು ಮೀರಿದ್ದಕ್ಕಾಗಿ ಮಹಿಳೆಯನ್ನು ಹೀನಾಯವಾಗಿ ನಿಂದಿಸುತ್ತಿರುತ್ತಾರೆ. ಯಾರು ಏನು ಹೇಳಿದರೂ ಆಕ್ಷೇಪಿಸುವುದು, ‘ನನ್ನ ಅಭಿಪ್ರಾಯಕ್ಕೆ ಭಿನ್ನವಾಗಿರುವ ನಿನಗೆ ಮಾತನಾಡುವ ಅಧಿಕಾರವೇ ಇಲ್ಲ’ ಎಂಬ ಸಂದೇಶ ನೀಡುವುದೇ ಸಾಮಾಜಿಕ ಜಾಲತಾಣಗಳಲ್ಲಿನ ಸಂವಾದದ ಉದ್ದೇಶವಾಗಿರುತ್ತದೆ.

ಒಬ್ಬ ಹಿಂದೂ, ಮುಸ್ಲಿಂ ಒಳ್ಳೆಯ ಸ್ನೇಹಿತರಿರುತ್ತಾರೆ. ಅವನು ಹೇಳಿದ್ದಕ್ಕೆ ಇವನು ಏನೋ ಹೇಳಿರುತ್ತಾನೆ. ಆಗ ಮುಸ್ಲಿಮರೆಲ್ಲ ಸೇರಿ ಈ ಹಿಂದೂ ಕನಸಿನಲ್ಲೂ ಯೋಚಿಸದ್ದನ್ನೆಲ್ಲ ಆರೋಪಿಸುವುದು, ಹಿಂದೂಗಳೆಲ್ಲ ಸೇರಿ ಆ ಮುಸ್ಲಿಂ ಕನಸಿನಲ್ಲೂ ಯೋಚಿಸದ್ದನ್ನೆಲ್ಲ ಆರೋಪಿಸುವುದು. ಹೀಗೆ ಆದಾಗ ಸಂವಾದ ಕ್ಷೇತ್ರ, ಹುಚ್ಚರ ಯುದ್ಧಭೂಮಿಯಂತೆ ಆಗಿರುತ್ತದೆ.

ಪ್ರಜಾಪ್ರಭುತ್ವ ಎಂದರೆ ಸಾರ್ವಜನಿಕ ಅಶಿಸ್ತು ಎಂದಲ್ಲ. ಸಂವಾದ ಎಂದರೆ ಬಾಯಿ ಮುಚ್ಚಿಸುವುದು ಎಂದು ಅರ್ಥವಲ್ಲ. ಧೈರ್ಯವೆಂದರೆ ಆರ್ಭಟವೆಂದೂ ಅಲ್ಲ. ಸ್ವಾಭಿಮಾನವೆಂದರೆ ಇನ್ನೊಬ್ಬರ ತೇಜೋವಧೆ ಅಲ್ಲ. ಒಗ್ಗಟ್ಟು ಎಂದರೆ ಏಕರೂಪತೆ ಅಲ್ಲ. ವಿಕೇಂದ್ರೀಕರಣ ಎಂದರೆ ಒಡೆದು ಒಡೆದು ಛಿದ್ರಗೊಳಿಸುವುದಲ್ಲ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಬಳಿ ಮಾತ್ರ ಜ್ಞಾನ ಇರುವುದಲ್ಲ, ನಮ್ಮ ಬಳಿಯೂ ಇದೆ ಎನ್ನುವುದು ಸರಿ. ಆದರೆ ಪ್ರಾಧ್ಯಾಪಕರೆಲ್ಲ ಅಯೋಗ್ಯರು, ನಾವು ಅವರ ಬಾಯಿ ಮುಚ್ಚಿಸುತ್ತೇವೆ ನೋಡಿ ಎನ್ನುವ ದುರಹಂಕಾರ ಸರಿಯಲ್ಲ. ಅವರೂ ಅಧ್ಯಯನ ಮಾಡಿರುತ್ತಾರೆ, ಅವರ ಒಲವು ನಿಲುವು ಬೇರೆ ಇದ್ದ ಮಾತ್ರಕ್ಕೆ ಅವರು ಶತ್ರುಗಳಾಗಿರುವುದಿಲ್ಲ ಎಂಬ ಅರಿವಿರಬೇಕು.

ಸಂವಾದಿಸುವವನಿಗೆ ವಿನಯ ಇರಬೇಕು. ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು. ನಮ್ಮ ನಂಬಿಕೆಯನ್ನು ನಾವೇ ಪ್ರಶ್ನಿಸಿಕೊಳ್ಳುವ ಆತ್ಮಸಾಕ್ಷಿ ಇರಬೇಕು. ನಮ್ಮದರಲ್ಲಿರುವ ದೋಷಗಳನ್ನು ಹೇಳುವ; ಕನಿಷ್ಠ ಬೇರೆಯವರು ಹೇಳಿದಾಗ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರಬೇಕು. ಇದರರ್ಥ ನಮ್ಮ ನಂಬಿಕೆಯನ್ನು ಕೈಬಿಡಬೇಕೆಂದಲ್ಲ. ನಾವು ದೃಢವಾಗಿರಬೇಕು. ಆದರೆ ಕಠಿಣರಾಗಬಾರದು. ಮನುಷ್ಯರನ್ನು ಪ್ರೀತಿಸಲಾಗದವರು ಸಂವಾದ ನಡೆಸಲಾರರು. ಸಂವಾದವೇ ಪ್ರಜಾಪ್ರಭುತ್ವದ ಆತ್ಮ. ಆದರೆ ಪ್ರಜಾಪ್ರಭುತ್ವ ಎನ್ನುವುದು ಬರಿಯ ಸರ್ಕಾರವಲ್ಲ. ಅದು ಎಲ್ಲರಲ್ಲೂ ಇರಬೇಕಾದ ಮನೋಧರ್ಮ.

ಸಾಮಾಜಿಕ ಜಾಲತಾಣಗಳು ಈಗಿನ್ನೂ ಶೈಶವಾವಸ್ಥೆಯಲ್ಲಿವೆ. ಒಂದೇ ಒಂದು ಉಪನ್ಯಾಸ ಮಾಡದವರು, ಒಂದೇ ಒಂದು ಲೇಖನ ಬರೆಯದವರು, ಒಂದೇ ಒಂದು ವೈಚಾರಿಕ ಪುಸ್ತಕವನ್ನು ಅಭ್ಯಾಸ ಮಾಡದವರೂ ಅಲ್ಲಿ ತಮ್ಮ ಅಭಿಪ್ರಾಯವನ್ನು ಬರೆಯುತ್ತಾರೆ. ಆಗ ಈ ರೀತಿಯ ಮಿತಿಗಳು ಸಹಜ. ಆದರೆ ವಿಚಾರ ಪ್ರತಿಪಾದನೆಯಲ್ಲಿ ನಾವು ತಪ್ಪು ಮಾಡಿರುತ್ತೇವೆ, ಏನನ್ನೂ ಹೇಳಬಹುದಾದರೂ ಹೇಳಲು ನಾಗರಿಕವಾದ ಒಂದು ವಿಧಾನ ಇದೆ, ನಾವೆಲ್ಲರೂ ಸೇರಿಯೇ ಸಾಮಾಜಿಕ ಜಾಲತಾಣಗಳನ್ನು ಉತ್ತಮೀಕರಿಸಬೇಕಾಗಿದೆ ಎಂಬ ಅರಿವು ಅದರ ಬಳಕೆದಾರರಿಗೆ ಇರಬೇಕಾಗುತ್ತದೆ.


ಅರವಿಂದ ಚೊಕ್ಕಾಡಿ

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !