ಬಾನಂಗಳದಲ್ಲಿ ಯೋಧರ ಸಾಹಸ

7
ಆಗಸದಲ್ಲಿ ತ್ರಿವರ್ಣ ಧ್ವಜದ ಹಾರಾಟ–ಪುಳಕಗೊಂಡ ವೀಕ್ಷಕರು

ಬಾನಂಗಳದಲ್ಲಿ ಯೋಧರ ಸಾಹಸ

Published:
Updated:
Deccan Herald

ಮೈಸೂರು: ಹೆಲಿಕಾಪ್ಟರ್‌ನಿಂದ ಪ್ಯಾರಾಚೂಟ್‌ ಧರಿಸಿ ಜಿಗಿದ ಯೋಧರು ಆಗಸದಲ್ಲಿ ತ್ರಿವರ್ಣಧ್ವಜ ಪ್ರದರ್ಶಿಸುತ್ತಿದ್ದಂತೆ ಮೈದಾನದಲ್ಲಿ ಭಾವುಕ ವಾತಾವರಣ. ‘ಇಂಡಿಯಾ, ಇಂಡಿಯಾ’ ಎಂಬ ಕೂಗು ಮಾರ್ದನಿಸಿತು. ಯೋಧರು ‘ಜೈಹಿಂದ್‌‍, ಜೈಹಿಂದ್‌’ ಎಂದು ಜೈಕಾರ ಹಾಕಿದರು.

ದಸರಾ ಮಹೋತ್ಸವ ಪ್ರಯುಕ್ತ ಶನಿವಾರ ಬನ್ನಿಮಂಟದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನದ ತಾಲೀಮು ಕಣ್ಮನ ಸೆಳೆಯಿತು. ಬಾನಂಗಳದಲ್ಲಿ ಹೆಲಿಕಾಪ್ಟರ್‌ಗಳು ಚಿತ್ತಾರ ಮೂಡಿಸುತ್ತ ಸಾವಿರಾರು ಅಡಿ ಎತ್ತರದಿಂದ ಹಾರಿ ಬಂದು ಪ್ರೇಕ್ಷಕರ ಮನದಂಗಳಕ್ಕೆ ಇಳಿದವು.

ಮೈನವಿರೇಳಿಸುವ ವೈವಿಧ್ಯಮಯ ಸಾಹಸ ಪ್ರದರ್ಶನ ನೀಡಿದ ಯೋಧರು ತಮ್ಮ ಕೌಶಲ ತೋರಿದರು. ಈ ಸಾಹಸಕ್ಕೆ ಐದು ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾದರು.

ಏರ್‌ ಡೆವಿಲ್‌, ಆಕಾಶ ಗಂಗಾ ಹೆಲಿಕಾಪ್ಟರ್‌ಗಳಲ್ಲಿ ಯೋಧರು ಆಗಸದಲ್ಲಿ ಸಾಹಸ ಪ್ರದರ್ಶನ ನೀಡಿದರು. ಆಕಾಶ ಗಂಗಾ ಹೆಲಿಕಾಪ್ಟರ್‌ನಿಂದ ಪ್ಯಾರಾಚೂಟ್‌ ಧರಿಸಿ ಜಿಗಿದ ಯೋಧರು ಆಗಸದಲ್ಲಿ ತ್ರಿವರ್ಣಧ್ವಜ ಪ್ರದರ್ಶಿಸಿದ ಪರಿ ಮನಸೂರೆಗೊಂಡಿತು. ಮೂವರು ಯೋಧರು ರಾಷ್ಟ್ರಧ್ವಜ ಹಿಡಿದು 7 ಸಾವಿರ ಅಡಿ ಎತ್ತರದಿಂದ ಭುವಿಗೆ ಜಿಗಿದರು. ಗಜಾನಂದ ಯಾದವ್‌ ಸಾರಥ್ಯದ ಒಟ್ಟು ಒಂಬತ್ತು ಯೋಧರು ಸ್ಕೈ ಡೈವಿಂಗ್‌ ಕಸರತ್ತು ನಡೆಸಿದರು.

ಆಸ್ಟೆ (ಎಸ್‌ಎಸ್‌ಟಿಇ) ಹೆಲಿಕಾಪ್ಟರ್‌ನಲ್ಲಿ ಬಂದ ಯೋಧರು 115 ಅಡಿ ಎತ್ತರದಿಂದ ಧರೆಗೆ ಪುಷ್ಪಾರ್ಚನೆ ಮಾಡಿದರು. ಆಗ ಜನರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಸುಮಾರು ಎರಡು ಚೀಲದಷ್ಟು ಪುಷ್ಪಗಳನ್ನು ಆಗಸದಿಂದ ಕೆಳ ಚೆಲ್ಲಿದರು.

ಹೆಲಿಕಾಪ್ಟರ್‌ನಲ್ಲಿ ಬಂದ ಗರುಡಾ ಕಮಾಂಡೊ ತಂಡದವರು 50 ಅಡಿ ಎತ್ತರದಿಂದ ಹಗ್ಗದ ನೆರವಿನಿಂದ ಸರಸರನೆ ಕೆಳಗಿಳಿದರು. ಮೈದಾನದಲ್ಲಿ ಓಡಾಡುತ್ತಾ ಅಣಕು ಯುದ್ಧ ಪ್ರದರ್ಶನ ನೀಡಿದರು. ಮೈದಾನದಲ್ಲಿ ದೂಳೆದ್ದ ಪರಿಣಾಮ ಸರಿಯಾಗಿ ಕಾಣಿಸುತ್ತಿರಲಿಲ್ಲ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !