ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು, ಹರಿಯುವ ತಿಳಿ ನೀರಿನಂತೆ

Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ
ADVERTISEMENT

ದೇಶದ ಉನ್ನತ ನ್ಯಾಯಾಂಗ­ದಲ್ಲಿನ ನೇಮಕಾತಿಗಳಿಗೆ ಪರಿಣಾಮ­ಕಾರಿ ವ್ಯವಸ್ಥೆ ಜಾರಿಗೆ ಬರ­ಬೇಕು ಎಂಬ ಶಿಫಾರಸನ್ನು ಕಾನೂನು ಆಯೋಗ ಬಹಳ ಹಿಂದೆಯೇ ಮಾಡಿತ್ತು. ಆ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಸಂಸತ್ತಿನ ಅನುಮೋದನೆ ಪಡೆದು­ಕೊಂಡಿರುವ ರಾಷ್ಟ್ರೀಯ ನ್ಯಾಯಾಂಗ ನೇಮ ಕಾತಿ ಮಸೂದೆ ರಚ­ನೆಯ ಹಿಂದೆ ಅನೇಕ ವರ್ಷಗಳ ಚಿಂತನೆ ಇದೆ. ಕಾನೂನು ಆಯೋ­ಗದ ವರದಿಯಲ್ಲಿ ಹೇಳಿರು­ವಂತೆ, ನೇಮಕಾತಿಗೆ ಸಂಬಂಧಿಸಿದಂತೆ ಒಂದು ಪಾರದರ್ಶಕ ವ್ಯವಸ್ಥೆ ಖಂಡಿತ ಬೇಕು.

ನ್ಯಾಯಾಂಗದಂಥ ಉನ್ನತ ಸಂಸ್ಥೆ­ಗಳಲ್ಲಿ ಆಗುವ ನೇಮಕಗಳ ವಿಚಾರ­ದಲ್ಲಿ ಸಂವಿಧಾನ ಸ್ಪಷ್ಟ ನಿಯಮ ರೂಪಿಸಿಲ್ಲ. ಅದಕ್ಕೆ ಹಲವು ಕಾರಣ­ಗಳಿರ­ಬಹುದು. ನ್ಯಾಯಾಂಗದಂಥ ವ್ಯವಸ್ಥೆಗೆ ಬಾಧಕ­ವಾಗುವ ಸಂದರ್ಭ ಮುಂದೊಂದು ದಿನ ಎದುರಾಗುತ್ತದೆ ಎಂಬ ಯೋಚನೆ ಆವಾಗ ಬಂದಿರಲಿಲ್ಲ­ವೇನೋ. ಆದರೆ ಕಾಲಾನಂತರ ಘಟಿ­ಸಿದ ವಿವಿಧ ವಿದ್ಯಮಾನಗಳ ಕಾರಣ, ಇಲ್ಲಿ ಒಂದು ಸ್ಪಷ್ಟ ಪ್ರಕ್ರಿಯೆ ಬೇಕು ಎಂಬ ಚಿಂತನೆ ಟಿಸಿಲೊಡೆಯಿತು.

ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸ­ಕಾಂಗಕ್ಕೆ ನಮ್ಮ ಸಂವಿಧಾನ ಅದ­ರದ್ದೇ ಆದ ಇತಿಮಿತಿಗಳನ್ನು ಹೇರಿದೆ. ಪ್ರತಿ­ಯೊಂದು ಅಂಗ ಕೂಡ ತನ್ನ ಕಾರ್ಯ­ಕ್ಷೇತ್ರದಲ್ಲಿ ಸ್ವತಂತ್ರವಾಗಿದೆ. ಆದರೆ ನ್ಯಾಯಾಂಗಕ್ಕೆ ನಡೆಯುತ್ತಿರುವ ನೇಮಕ ಪ್ರಕ್ರಿಯೆಗಳು ಪರಿಣಾಮಕಾರಿ­ಯಾಗಿ, ಪಾರದರ್ಶಕವಾಗಿ ನಡೆಯು­ತ್ತಿಲ್ಲ ಎಂಬ ವಾದ ಕೆಲವರಿಂದ ಕೇಳಿಬಂತು.

ಕಾರ್ಯಾಂಗವು ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯ­ಮೂರ್ತಿ­ಗಳ ಜೊತೆ ಸಮಾಲೋಚಿಸಿ ನ್ಯಾಯ­ಮೂರ್ತಿಗಳ ನೇಮಕ ಮಾಡು­ವುದು ನಮ್ಮಲ್ಲಿ ಹಿಂದೆ ಇದ್ದ ವ್ಯವಸ್ಥೆ. ಇಲ್ಲಿ ರಾಷ್ಟ್ರಪತಿ ನೇಮಕಾತಿ ನಿರ್ಧಾರ ಕೈಗೊಳ್ಳುವಾಗ, ಕಾರ್ಯಾಂಗ ನೀಡುವ ಸಲಹೆಯನ್ನು ಆಧಾರವಾ ಗಿಟ್ಟು­ಕೊಳ್ಳು­ತ್ತಾರೆ. ಅಮೆರಿಕದಂಥ ದೇಶ­ಗಳಲ್ಲಿ ನ್ಯಾಯಾಂಗ ನೇಮಕಾತಿ­ಗಳಲ್ಲಿ ಕಾರ್ಯಾಂಗವೇ ಹೆಚ್ಚಿನ ಸ್ವಾತಂತ್ರ್ಯ ಹೊಂದಿದೆ.
ಸಂವಿಧಾನದ ಪರಿಚ್ಛೇದ 124ನ್ನು ವಿಶ್ಲೇಷಿಸುವಾಗ ಸುಪ್ರೀಂ ಕೋರ್ಟ್‍, ನ್ಯಾಯಮೂರ್ತಿಗಳ ನೇಮಕ ಕುರಿತು ನ್ಯಾಯಮೂರ್ತಿಗಳ ಮಂಡಳಿಯೇ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿತು. ಇದನ್ನು ಕೊಲಿಜಿಯಂ ಎಂದು ಹೇಳ­ಲಾಯಿತು. ಆದರೆ ಅದು ಸಂವಿಧಾನದ ಮಾನ್ಯತೆ ಪಡೆ­ದಿದ್ದಲ್ಲ, ನ್ಯಾಯಾಲಯವೇ ಮಾಡಿದ ನಿಯಮ.

ಸಾಮಾನ್ಯ ಸಂದರ್ಭಗಳಲ್ಲಿ ‘ಕೊಲಿಜಿಯಂ’ಗೆ ಸಮಿತಿ, ಮಂಡಳಿ ಎಂಬ ಅರ್ಥ­ವಿದೆ. ನ್ಯಾಯಾಂಗದ ನೇಮಕಾತಿ­ಗಳಿಗೆ ಸಂಬಂಧಿಸಿದ ನೇಮಕಾತಿ ಮಂಡಳಿ ಹೇಗಿರಬೇಕು ಎಂಬುದನ್ನು ಈ ಮಸೂದೆಯು ಸ್ಪಷ್ಟವಾಗಿ ವ್ಯಾಖ್ಯಾನಿ­ಸಿದೆ. ನೇಮಕ ಪ್ರಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನೂ ಒಳ­ಗೊಂಡಿದೆ. ಸಂವಿಧಾನ ತಿದ್ದುಪಡಿ ಮಸೂದೆ ಮೂಲಕ, ಇದಕ್ಕೆ ಸಾಂವಿ­ಧಾನಿಕ ಮಾನ್ಯತೆ ನೀಡಲಾಗುತ್ತಿದೆ.

ಹೊಸ ಮಸೂದೆಯಿಂದಾಗಿ ನ್ಯಾಯಾಂ­ಗದ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ ಎಂಬ ವಾದದಲ್ಲಿ ಹುರು­ಳಿಲ್ಲ. ಹೊಸ ವ್ಯವಸ್ಥೆಯಲ್ಲೂ ನ್ಯಾಯಾಂ­ಗಕ್ಕೇ ಹೆಚ್ಚಿನ ಸ್ವಾತಂತ್ರ್ಯ ಇದೆ. ಮಸೂದೆ­ಯಲ್ಲಿ ವಿವರಿಸಲಾದ ನೇಮಕಾತಿ ಆಯೋಗದಲ್ಲಿ, ನ್ಯಾಯಾಂಗಕ್ಕೆ ಸೇರಿದ ಮೂವರು (ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು) ಇರುತ್ತಾರೆ.

ಆಯೋಗದ ಸದಸ್ಯರಾಗಿ­ರುವ ಕಾನೂನು ಸಚಿವರು ಕೂಡ ಸಾಮಾನ್ಯ­ವಾಗಿ ನ್ಯಾಯಾಂಗದ ಕರ್ತವ್ಯ­ಗಳ ಅರಿವು ಇರುವವರೇ ಆಗಿ­ರು­ತ್ತಾರೆ. ಆಯೋಗದ ಸದಸ್ಯರಾಗುವ ಇಬ್ಬರು ಗಣ್ಯ ವ್ಯಕ್ತಿಗಳನ್ನು ಮಸೂದೆ­ಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ ಎಂಬ ಆರೋಪಗಳಿವೆ. ನ್ಯಾಯಾಂಗದ ನೇಮಕಾತಿಗಳಿಗೆ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿ ಈ ಮಸೂದೆಯ ವ್ಯಾಪ್ತಿಯಲ್ಲಿ ಗಣ್ಯ ವ್ಯಕ್ತಿ ಎಂಬ ಅರ್ಥ ಪಡೆ ಯುತ್ತಾನೆ. ಈ ಮಸೂದೆಯ ವ್ಯಾಪ್ತಿ­ಯಲ್ಲಿ ಒಬ್ಬ ನ್ಯಾಯಶಾಸ್ತ್ರಜ್ಞ ‘ಗಣ್ಯ ವ್ಯಕ್ತಿ’ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತಾನೆ.

ಗಣ್ಯ ವ್ಯಕ್ತಿಗಳ ನೇಮಕದ ಅಧಿಕಾರವನ್ನು ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿಗೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ನೇಮಕ ಈ ಮೂವರ ಸಾಮೂಹಿಕ ನಿರ್ಧಾರ. ಪ್ರಧಾನಿ, ಹಿರಿಯ ನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕ ಒಟ್ಟಾಗಿ ಕೈಗೊಳ್ಳುವ ನಿರ್ಧಾರಗಳನ್ನೂ ನಾವು ಸಂಶಯದಿಂದ ನೋಡಬೇಕೆ? ಪ್ರಧಾನಿ ಸ್ಥಾನದಲ್ಲಿರುವ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿ ಅಸಮರ್ಥನೊಬ್ಬನನ್ನು ನ್ಯಾಯಾಂಗ ನೇಮಕಾತಿ ಆಯೋಗದ ಸದಸ್ಯನನ್ನಾಗಿ ನೇಮಿಸಲು ಯತ್ನಿಸಿ­ದರೆ, ಅದನ್ನು ಮತ್ತಿಬ್ಬರು ತಡೆಯ­ಬಹುದು. ಇವರಿಬ್ಬರ ನಡುವೆ ಸಹ­ಮತ ಬಾರದಿದ್ದರೆ ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯ­ಮೂರ್ತಿ ಮಧ್ಯಪ್ರವೇಶಿಸಬಹುದು. ಇಲ್ಲಿ ಕೂಡ ನ್ಯಾಯಾಂಗಕ್ಕೇ ಹೆಚ್ಚಿನ ಅಧಿ­ಕಾರ ದೊರೆಯುತ್ತದೆ.

ಆಯೋಗದಲ್ಲಿರುವ ಆರು ಜನರ ಪೈಕಿ ಮೂವರು ಸುಪ್ರೀಂ ಕೋರ್ಟ್‌ನ  ನ್ಯಾಯ­ಮೂರ್ತಿ­ಗಳೇ ಆಗಿರುತ್ತಾರೆ. ಅವರಲ್ಲಿ ಇಬ್ಬರು ನ್ಯಾಯ­ಮೂರ್ತಿಗಳು ಒಬ್ಬ ಅಭ್ಯರ್ಥಿಯ ನೇಮಕವನ್ನು ವಿರೋಧಿಸಿ­ದರೆ, ಅವರನ್ನು ನೇಮಕ ಮಾಡಲು ಅವಕಾಶ ಇಲ್ಲ. ಈ ಮೇಲೆ ತಿಳಿಸಿದ ಮೂರು ಜನ ಒಪ್ಪಿ ನೇಮಕಗೊಂಡ ಗಣ್ಯ ವ್ಯಕ್ತಿ ನ್ಯಾಯಮೂರ್ತಿ­ಗಳ ನೇಮಕಾತಿಯಲ್ಲಿ ನಗಣ್ಯನಾಗಲು ಸಾಧ್ಯವಿಲ್ಲ. ಇಲ್ಲಿ ವೈಯಕ್ತಿಕವಾಗಿ ಯಾರಿಗೂ ವೀಟೊ ಅಧಿಕಾರ ಇಲ್ಲ. ಆದರೆ ಅಸಮರ್ಥ ಮತ್ತು ಸೂಕ್ತವಲ್ಲದ ವ್ಯಕ್ತಿ ನ್ಯಾಯಾಂಗದ ಹುದ್ದೆ ಅಲಂಕರಿಸುವುದನ್ನು ತಡೆಯಬಹುದು. ಮಸೂದೆ ಸಮತೋಲನದಿಂದ ಕೂಡಿದೆ.

ಈ ಮಸೂದೆಯ ಮೂಲಕ ನ್ಯಾಯಾಂಗ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಕಂಡುಬರಬಹುದು ಎಂಬ ಆರೋಪವೂ ಇದೆ. ಕೊಲಿಜಿಯಂ ವ್ಯವಸ್ಥೆ ಜಾರಿಗೆ ಬರುವ ಮುನ್ನವೂ ನಮ್ಮ ದೇಶ ಸ್ಮರಣಾರ್ಹ ನ್ಯಾಯಮೂರ್ತಿಗಳನ್ನು ಕಂಡಿದೆ. ಸಾಂವಿಧಾನಿಕವಾಗಿ ಅತ್ಯಂತ ಮಹತ್ವದ ತೀರ್ಪು­ಗಳನ್ನು ಅವರು ನೀಡಿದ್ದಾರೆ. ಸರ್ಕಾರದ ವಿರುದ್ಧವೂ ಸಾಕಷ್ಟು ತೀರ್ಪುಗಳು ಬಂದಿವೆ. ಕೃಷ್ಣ ಅಯ್ಯರ್‍ ಅವರಂಥ ಪ್ರಖರ ನ್ಯಾಯಮೂರ್ತಿಗಳು ಕೊಲಿ­ಜಿಯಂ ಮೂಲಕ ನೇಮಕಗೊಂಡವರಲ್ಲ. ಹೊಸ ಮಸೂದೆಯಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಸಂಘ­ರ್ಷಕ್ಕೆ ಅವಕಾಶ ನೀಡುವ ಯಾವುದೇ ಅಂಶ ಇಲ್ಲ. ಮಸೂದೆ ಪಾರದರ್ಶಕತೆಗೆ ಪ್ರಾಧಾನ್ಯ ನೀಡಿದೆ.

ಒಂದು ವ್ಯವಸ್ಥೆಯಾಗಿ ಈಗಿರುವ ಕೊಲಿಜಿಯಂ ಪದ್ಧತಿ ಪಾರದರ್ಶಕವಾಗಿ ಇದ್ದಂತೆ ಕಾಣುತ್ತಿಲ್ಲ. ಈಗ ನ್ಯಾಯಾಂಗದ ನೇಮಕಾತಿಯಲ್ಲಿ ಸಂವಿ­ಧಾನದ ಯಾವುದೇ ಅಂಗಕ್ಕೆ ಯಾವ ಮಾತನ್ನೂ ಹೇಳುವ ಅಧಿಕಾರ ಇಲ್ಲ. ಕೊಲಿಜಿಯಂ ನಿರ್ದೇಶನ­ವನ್ನು ರಾಷ್ಟ್ರಪತಿ ಪಾಲಿಸಬೇಕು, ಅನ್ಯ ಮಾರ್ಗ­ವಿಲ್ಲ. ವ್ಯಕ್ತಿಯ ಸಾಂವಿಧಾನಿಕ ಮತ್ತು ಸಾಮಾಜಿಕ ಬದ್ಧತೆ, ಅರ್ಹತೆ, ಯೋಗ್ಯತೆ, ಪ್ರತಿಭೆ ಮತ್ತು ಸೂಕ್ತತೆಗಳನ್ನು ಪರಿಗಣಿಸಿ ನೇಮಕಾತಿ ಮಾಡು­ವಂಥದ್ದು ನ್ಯಾಯಾಂಗದಂಥ ಗೌರವಾನ್ವಿತ ಸಂಸ್ಥೆಗೆ ಅವಶ್ಯಕ. ಇದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿ­ಯೊಬ್ಬ ಪ್ರಜೆಗೂ ಇದೆ, ಇದು ಪಾರದರ್ಶಕತೆಯ ಮೂಲ ಸಿದ್ಧಾಂತ.

ನೇಮಕಾತಿ ಮತ್ತು ನ್ಯಾಯದಾನದ ನಡುವೆ ವ್ಯತ್ಯಾಸ ಇದೆ. ಉನ್ನತ ನ್ಯಾಯಾಂಗದಲ್ಲಿ ಇರುವ­ವರಿಗೆ ಸಾಂವಿಧಾನಿಕ ರಕ್ಷಣೆಗಳಿವೆ. ಇವೆಲ್ಲ ಮುಂದೆಯೂ ಇರುತ್ತವೆ. ಹೊಸ ಮಸೂದೆಯಿಂದ ನ್ಯಾಯ­ದಾನ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಇಲ್ಲ. ಹೊಸ ಮಸೂದೆಯ ಅನ್ವಯ, ನೇಮಕಾತಿಗೆ ಕಾರಣಗಳನ್ನು ದಾಖಲಿಸಬೇಕು. ಇದರಲ್ಲಿ ಪರಿಣಾಮಕಾರಿ ಮತ್ತು ವಿಶಾಲವಾದ ಭಾಗವಹಿಸುವಿಕೆ ಇರುವ ಕಾರಣ ಈ ವ್ಯವಸ್ಥೆ ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿ.

ದೇಶದ ಒಳಿತಿಗಾಗಿ ಕಾನೂನು ರೂಪಿಸುವ ಸಂಸತ್ತಿನ ಅಧಿಕಾರವನ್ನು ಗೌರವಿಸ­ಬೇಕು. ಸಂಸತ್ತು ರೂಪಿಸುವ ಕಾನೂನು ಸಂವಿಧಾ­ನದ ಮೂಲ ಸ್ವರೂಪಕ್ಕೆ ಧಕ್ಕೆ ತರಬಾರದು. ನ್ಯಾಯಾಂಗದ ಸ್ವಾತಂತ್ರ್ಯ ಕೂಡ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು. ಆದರೆ ನ್ಯಾಯಮೂರ್ತಿಗಳ ನೇಮಕಕ್ಕೆ ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ರೂಪಿಸಿದ ಮಾತ್ರಕ್ಕೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ, ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಆಗುವುದಿಲ್ಲ. ನ್ಯಾಯಾಂಗಕ್ಕೆ ಇರುವ ಸ್ವಾತಂತ್ರ್ಯ ಮತ್ತು ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಇರುವ ರಕ್ಷಣೆಗೆ ಈ ಮಸೂದೆಯಿಂದ ಅಪಾಯ ಇಲ್ಲ.

ಕಾನೂನುಗಳು ಎಂದಿಗೂ ನಿಂತ ನೀರಾಗಿರ­ಬಾರದು. ಹರಿಯುವ ನೀರು ಯಾವತ್ತಿಗೂ ಶುದ್ಧವಾಗಿ­ರುತ್ತದೆ. ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ತನಗಿಷ್ಟವಾದ ಅಭ್ಯರ್ಥಿಯನ್ನು ನೇಮಕ ಮಾಡುವ ಅಧಿಕಾರವನ್ನು ಈ ಮಸೂದೆ ಯಾರಿಗೂ ನೀಡುವುದಿಲ್ಲ. ಆದರೆ ಒಬ್ಬ ಅಭ್ಯರ್ಥಿ ನ್ಯಾಯಾಂಗಕ್ಕೆ ಸೂಕ್ತವಲ್ಲ ಎಂದು ಮನವರಿಕೆ­ಯಾದರೆ ಆತನ ನೇಮಕ ತಡೆಯಲು ಅವಕಾಶ ನೀಡುತ್ತದೆ. ನ್ಯಾಯಾಂಗದ ನೇಮಕಾತಿ­ಯಲ್ಲಿ ಹಿರಿತನ ಮಾತ್ರವಲ್ಲದೆ ಸಾಮರ್ಥ್ಯ, ಪ್ರತಿಭೆ, ಅರ್ಹತೆಯನ್ನು ಪರಿಗಣಿಸಲೇ ಬೇಕೆಂಬ ಅಂಶ ಹೊಸ ಮಸೂದೆಯಲ್ಲಿದೆ, ಇದು ನ್ಯಾಯಾಂಗ ಹೆಚ್ಚು ದಕ್ಷವಾಗಲು ಪೂರಕ­.

(ಲೇಖಕರು ರಾಜ್ಯದ ಮಾಜಿ ಹೆಚ್ಚುವರಿ ಅಡ್ವೊಕೇಟ್‍ ಜನರಲ್‍)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT