ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: CSK vs SRH: ಋತುರಾಜ್, ಮಿಚೆಲ್ ಮಿಂಚು; ಚೆನ್ನೈ ಜಯಭೇರಿ

ತುಷಾರ್ ದಾಳಿಗೆ ಮಂಕಾದ ಸನ್‌ರೈಸರ್ಸ್
Published 28 ಏಪ್ರಿಲ್ 2024, 14:04 IST
Last Updated 28 ಏಪ್ರಿಲ್ 2024, 19:48 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ವೇಗಿ ತುಷಾರ್ ದೇಶಪಾಂಡೆ ಅವರ ಅಮೋಘ ಬೌಲಿಂಗ್ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್‌ಗಳು ಮಂಕಾದರು. 

ಲೆಗ್ ಕಟರ್, ಸ್ವಿಂಗ್  ಎಸೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ ತುಷಾರ್ (3–0–27–4) ಅವರ ಬೌಲಿಂಗ್‌ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 78 ರನ್‌ಗಳಿಂದ ಸನ್‌ರೈಸರ್ಸ್ ಎದುರು ಜಯಿಸಿತು.  ಹಾಲಿ ಚಾಂಪಿಯನ್ ತಂಡವು ಅಂಕ
ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. 

ಚೆಪಾಕ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 

ನಾಯಕ ಋತುರಾಜ್ ಗಾಯಕವಾಡ್ (98; 54ಎ, 4X10, 6X3) ಹಾಗೂ ಡ್ಯಾರಿಲ್ ಮಿಚೆಲ್ (52; 32ಎ, 4X7, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 107 ರನ್ ಸೇರಿಸಿದರು. ಇದರಿಂದಾಗಿ ಚೆನ್ನೈ ತಂಡವು   20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 212 ರನ್ ಗಳಿಸಿತು. ನಾಲ್ಕು ಸಿಕ್ಸರ್ ಬಾರಿಸಿದ ಶಿವಂ ದುಬೆ (ಅಜೇಯ 39; 20ಎ) ಕೂಡ ತಮ್ಮ ಕಾಣಿಕೆ ನೀಡಿದರು. 

ಸನ್‌ರೈಸರ್ಸ್ ತಂಡವು ಇದಕ್ಕುತ್ತರ ವಾಗಿ 18.5 ಓವರ್‌ಗಳಲ್ಲಿ 134 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. 

ಈ ಟೂರ್ನಿಯಲ್ಲಿ 250ಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಮೂರು ಬಾರಿ ಗಳಿಸಿರುವ ಸನ್‌ರೈಸರ್ಸ್ ತಂಡಕ್ಕೆ ಈ ಮೊತ್ತ ದೊಡ್ಡದೇನೂ ಆಗಿರಲಿಲ್ಲ. ಆದರೆ ತುಷಾರ್ ಶಿಸ್ತಿನ ಬೌಲಿಂಗ್ ಮುಂದೆ ಸನ್‌ರೈಸರ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ದೊಡ್ಡ ಹೊಡೆತಗಳನ್ನು ಪ್ರಯೋಗಿಸುವ ಯತ್ನದಲ್ಲಿ ಫೀಲ್ಡರ್‌ಗಳಿಗೆ ಸುಲಭದ ಕ್ಯಾಚ್ ಆದರು.   

ದುಬೆ ಮಿಂಚು: ಚೆನ್ನೈ ತಂಡವು ದ್ವಿಶತಕದ ಗಡಿ ಮುಟ್ಟಲು ಶಿವಂ ದುಬೆ ಕಾಣಿಕೆಯು ಮಹತ್ವದ್ದಾಗಿತ್ತು.  ಮಿಚೆಲ್ ಔಟಾದ ನಂತರ  ಕ್ರೀಸ್‌ಗೆ ಬಂದ ದುಬೆ ರನ್ ಗಳಿಕೆಯ ವೇಗ ಹೆಚ್ಚಿಸಿದರು. ಋತುರಾಜ್ ಅವರೊಂದಿಗಿನ ಜೊತೆಯಾಟದಲ್ಲಿ 32 ಎಸೆತಗಳಲ್ಲಿ 74 ರನ್‌ ಗಳಿಸಿದರು.  ಕೊನೆಯ ಓವರ್‌ನಲ್ಲಿ ಸಿಕ್ಸರ್‌ನೊಂದಿಗೆ ಶತಕ ಪೂರೈಸುವ ಋತುರಾಜ್ ಲೆಕ್ಕಾಚಾರ ಕೈಕೊಟ್ಟಿತು. 

ಆಗ ಚೆನ್ನೈ ಅಭಿಮಾನಿಗಳ ಕಣ್ಮಣಿ ಮಹೇಂದ್ರಸಿಂಗ್ ಧೋನಿ ಕ್ರೀಸ್‌ಗೆ ಬಂದರು.  ಒಂದು ಬೌಂಡರಿ ಸಹಿತ ಐದು ರನ್ ಗಳಿಸಿದ ಧೋನಿ ಟೂರ್ನಿಯಲ್ಲಿ ಏಳನೇ ಬಾರಿ ಅಜೇಯರಾಗುಳಿದರು. 

ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 3 ವಿಕೆಟ್‌
ಗಳಿಗೆ 212 (ಋತುರಾಜ್ ಗಾಯಕವಾಡ್ 98, ಡ್ಯಾರಿಲ್ ಮಿಚೆಲ್ 52, ಶಿವಂ ದುಬೆ ಔಟಾಗದೆ 39, ಭುವನೇಶ್ವರ್ ಕುಮಾರ್ 38ಕ್ಕೆ1, ಜೈದೇವ್ ಉನದ್ಕತ್ 38ಕ್ಕೆ1) ಸನ್‌ರೈಸರ್ಸ್ ಹೈದರಾಬಾದ್: 18.5 ಓವರ್‌ಗಳಲ್ಲಿ 134 (ಏಡನ್ ಮರ್ಕರಂ 32, ಹೆನ್ರಿಚ್ ಕ್ಲಾಸೆನ್ 20, ತುಷಾರ್ ದೇಶಪಾಂಡೆ 27ಕ್ಕೆ4, ಮುಸ್ತಫಿಜುರ್ ರೆಹಮಾನ್ 19ಕ್ಕೆ2, ಮಥೀಷ ಪಥಿರಾಣ 17ಕ್ಕೆ2) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 78 ರನ್ ಜಯ. ಪಂದ್ಯದ ಆಟಗಾರ: ಋತುರಾಜ್‌ ಗಾಯಕವಾಡ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT