ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಹುಟ್ಟಿಸುವ ಪಿಚ್

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಕ್ರಿಕೆಟ್ ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಆಟಗಾರರ ಪ್ರದರ್ಶನದ ಜೊತೆಗೆ `ಪಿಚ್~ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿರುವ 20.12 ಮೀ (22 ಗಜ) ಉದ್ದ ಮತ್ತು 3 ಮೀ. ಪಟ್ಟಿಯಲ್ಲಿಯೇ ಪಂದ್ಯದ ಭವಿಷ್ಯ ಅಡಗಿರುತ್ತದೆ.

ಭಾರತ ತಂಡ ವಿದೇಶಿ ನೆಲದಲ್ಲಿ ಸೋಲು ಅನುಭವಿಸಿದಾಗ `ಪಿಚ್~ ಸಾಕಷ್ಟು ಸುದ್ದಿಮಾಡುವುದು ವಾಡಿಕೆ. ಈ ಬಾರಿಯೂ ಅದು ನಡೆದಿದೆ. ಆಸ್ಟ್ರೇಲಿಯಾದಲ್ಲಿರುವಂತಹ ಪಿಚ್‌ಗಳನ್ನು ಭಾರತದಲ್ಲಿ ನಿರ್ಮಿಸಲು ಸಾಧ್ಯವಿಲ್ಲ.

ಕಷ್ಟಪಟ್ಟು ಸಿದ್ಧಗೊಳಿಸಿದರೂ ಅದು ಅಲ್ಲಿಯಂತೆಯೇ ಗಟ್ಟಿ ಗುಣವನ್ನೇ ಹೊಂದಲಾರದು. ಕ್ರೀಡಾಂಗಣ ಇರುವ ಪ್ರದೇಶದ ವಾತಾವರಣ ಹಾಗೂ ಮಣ್ಣಿನ ಗುಣ ಕೂಡಾ ಪರಿಣಾಮ ಬೀರುತ್ತದೆ. ಆಯಾ ದೇಶದ ಹವಾಮಾನಕ್ಕೆ ಅನುಗುಣವಾಗಿ ಅಂಗಳದ ಸ್ಪಂದನೆಯ ಗುಣವು ಭಿನ್ನವಾಗಿರುತ್ತದೆ.

ದೂಳಿನಿಂದ ಕೂಡಿರುವ ಪಿಚ್ ಸ್ಪಿನ್ ಬೌಲಿಂಗ್‌ಗೆ ನೆರವು ನೀಡುತ್ತದೆ. ಈ ಉಪಖಂಡದ (ಭಾರತ, ಪಾಕಿಸ್ತಾನ) ಬ್ಯಾಟ್ಸ್‌ಮನ್‌ಗಳು ಇಂತಹ ಪಿಚ್‌ಗಳಲ್ಲಿ ಆಡಲು ಇಷ್ಟಪಡುತ್ತಾರೆ. ಭಾರತದ ಅಂಗಳಗಳು ಸ್ಪಿನ್ನರ್‌ಗಳಿಗೆ ನೆರವು ನೀಡುತ್ತವೆ. ಆದ್ದರಿಂದ ಇಲ್ಲಿನ ಬ್ಯಾಟ್ಸ್‌ಮನ್‌ಗಳು ಸ್ಪಿನ್ ದಾಳಿಯನ್ನು ಎದುರಿಸುವ ಕಲೆಯಲ್ಲಿಯೂ ಪಳಗಿದ್ದಾರೆ.

ಆದರೆ ಬಿಗಿದುಕೊಂಡು ಬೆಳೆದ ಹುಲ್ಲುಹಾಸಿನ ಗಟ್ಟಿಯಾದ ಪಿಚ್‌ನಲ್ಲಿ ಚೆಂಡು `ಸ್ವಿಂಗ್~ ಆಗುತ್ತದೆ. ವೇಗದ ಬೌಲರ್‌ಗಳು ಇದರ ನೆರವನ್ನು ಚೆನ್ನಾಗಿ ಪಡೆಯುತ್ತಾರೆ.

ಅಂಗಳದಲ್ಲಿನ ತೇವವೂ ಸಹಕಾರಿ ಆಗುತ್ತದೆ. ಈ ಕಾರಣ ಆಸ್ಟ್ರೇಲಿಯಾದ ಪಿಚ್‌ಗಳು ಭಾರತ ಮಾತ್ರವಲ್ಲ, ಉಪಖಂಡದ ಎಲ್ಲ ದೇಶಗಳ ಬ್ಯಾಟ್ಸ್‌ಮನ್‌ಗಳಿಗೆ ಕಠಿಣವಾಗಿ ಪರಿಣಮಿಸುತ್ತದೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಸ್ಪಿನ್ ಬೌಲಿಂಗ್‌ಗೆ ನೆರವು ನೀಡುವ ಮೃದು ಗುಣ ಮಣ್ಣಿನಲ್ಲಿಲ್ಲ. ಆದ್ದರಿಂದಲೇ ಆ ದೇಶದವರು ಭಾರತಕ್ಕೆ ಬಂದರೆ ಸ್ಪಿನ್ ಮೋಡಿಯ ಎದುರು ತಡಬಡಾಯಿಸುತ್ತಾರೆ.

ಇದಕ್ಕೆ ಉತ್ತಮ ಉದಾಹರಣೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಇತ್ತೀಚೆಗೆ ನಡೆದ ಸರಣಿ. ದೋನಿ ಬಳಗ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು 0-4 ರಲ್ಲಿ ಸೋತಿತ್ತು. ಇದಾದ ಬಳಿಕ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ಏಕದಿನ ಸರಣಿಯನ್ನು 0-5ರಲ್ಲಿ ಕಳೆದುಕೊಂಡಿತ್ತು! 

ಕಳೆದ ವರ್ಷದ ಆರಂಭದಲ್ಲಿ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ, ಟೆಸ್ಟ್ ಸರಣಿಯನ್ನು 0-2ರಲ್ಲಿ ಕಳೆದುಕೊಂಡಿತ್ತು. ಇಲ್ಲಿಗೆ ಆಗಮಿಸುವ ವಿದೇಶಿ ತಂಡಗಳನ್ನು ಸ್ಪಿನ್ ಬಲೆಯಲ್ಲಿ ಸಿಲುಕಿಸುವುದು ಹಿಂದಿನಿಂದಲೂ ಬಂದ ಕ್ರೀಡಾತಂತ್ರ. ವಿದೇಶದ ತಂಡಗಳೆಲ್ಲ ಈಡನ್  ಗಾರ್ಡನ್ಸ್, ಫಿರೋಜ್ ಷಾ ಕೋಟ್ಲಾ ಮತ್ತು ಚಿದಂಬರಂ ಕ್ರೀಡಾಂಗಣದಲ್ಲಿ ಅವಮಾನ ಎದುರಿಸಿದ ಹಲವು ಉದಾಹರಣೆಗಳಿವೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ ವೇಗದ ಬೌಲರ್‌ಗಳಿಗೆ ನೆರವು ನೀಡಬಲ್ಲ ಕೆಲವು ಪಿಚ್‌ಗಳನ್ನು ಕಾಣಲು ಸಾಧ್ಯ. ಆದರೆ ಆಸ್ಟ್ರೇಲಿಯಾದ ಪಿಚ್‌ಗಳಿಗೆ ಹೋಲಿಸಿದರೆ ಇವು ಏನೂ ಅಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ `ಸ್ಪೋರ್ಟಿಂಗ್~ ಪಿಚ್ ಸಿದ್ಧಪಡಿಸುವ ಮಾತು ಆರಂಭಿಸಿ ದಶಕವೇ ಕಳೆದಿದೆ. ಇನ್ನೊಂದೆಡೆ ವಿದೇಶಿ ನೆಲದಲ್ಲಿ ಭಾರತದ ಸೋಲಿನ ಕತೆ ಮುಂದುವರೆದಿದೆ. 

ಮಹೇಂದ್ರ ಸಿಂಗ್ ದೋನಿ ಬಳಗದ ಕೆಲವು ಆಟಗಾರರು ಆಸ್ಟ್ರೇಲಿಯಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸರಣಿಯ ಆರಂಭಕ್ಕೆ ಬಹಳ ಮುನ್ನವೇ ಅಲ್ಲಿಗೆ ತೆರಳಿದ್ದರು. ಆದರೂ ಟೆಸ್ಟ್ ಪಂದ್ಯಗಳಲ್ಲಿ ಪೆಟ್ಟು ತಿಂದರು. ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರಿಗೆ ಆಸೀಸ್ ಅಂಗಳಗಳಲ್ಲಿ ಆಡಿದ ಉತ್ತಮ ಅನುಭವಿದೆ. ಅವರು ಕೂಡಾ ವಿಫಲರಾದರು.

ವೇಗದ ಬೌಲಿಂಗ್ ದಾಳಿಯನ್ನು ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಂಡು ತೆರಳಿದ್ದರೆ ಇಂತಹ ಅವಮಾನ ತಪ್ಪುತ್ತಿತ್ತು. ಭಾರತದ ಆಟಗಾರರು ಭಯದ ನೆರಳಿನಲ್ಲಿಯೇ ಕ್ರೀಸ್‌ಗೆ ಆಗಮಿಸಿದ್ದನ್ನು ನೋಡಿದ್ದಾಗಿದೆ. ಕಳೆದ ಸಲ ಆಸೀಸ್ ಪ್ರವಾಸದ ವೇಳೆ ಭಾರತ ಪರ್ತ್‌ನಲ್ಲಿ ಗೆಲುವು ಪಡೆದಿತ್ತು.

ಅಲ್ಲಿನ ಪಿಚ್ ಜಗತ್ತಿನ ಅತ್ಯಂತ ವೇಗದ ಅಂಗಳಗಳಲ್ಲಿ ಒಂದಾಗಿದೆ. ಅದೇ ರೀತಿ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲೂ ಕೆಲವು ಐತಿಹಾಸಿಕ ಟೆಸ್ಟ್ ಗೆಲುವು ಲಭಿಸಿದೆ. ವಿದೇಶದಲ್ಲಿ ಅಪರೂಪಕ್ಕೊಮ್ಮೆ ಸಿಕ್ಕ ಅಂಥ ಜಯದಿಂದ ಭಾರತವು `ವಿಶ್ವಶ್ರೇಷ್ಠ~ ತಂಡ ಎನಿಸಿಕೊಳ್ಳಲು ಸಾಧ್ಯವಿಲ್ಲ. ವೇಗದ ಪಿಚ್ ಎಂಬ ಭಯದ `ಭೂತ~ವನ್ನು ಮನಸ್ಸಿನಿಂದ ಹೊಡೆದೋಡಿಸುವುದು ಅಗತ್ಯ.                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT