ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶಯದ ಸುಳಿಯಲ್ಲಿ ಇಸ್ರೊ

Last Updated 25 ಫೆಬ್ರುವರಿ 2011, 15:45 IST
ಅಕ್ಷರ ಗಾತ್ರ

ಇಸ್ರೊದ ವಾಣಿಜ್ಯ ಘಟಕವಾದ ಅಂತರಿಕ್ಷ್ ಮತ್ತು ದೇವಾಸ್ ಕಂಪೆನಿ ನಡುವಿನ ಕದ್ದುಮುಚ್ಚಿದ ಎಸ್-ಬ್ಯಾಂಡ್ ಒಪ್ಪಂದದಿಂದಾಗಿ ರಾಷ್ಟ್ರದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರು ತಡಬಡಾಯಿಸಿಕೊಂಡು ನವದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದರು. ‘ನಾವು ಈತನಕ ಯಾರಿಗೂ ತರಂಗಾಂತರವನ್ನು ನೀಡಿಲ್ಲ. ಹೀಗಾಗಿ ನಷ್ಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಮಜಾಯಿಷಿ ನೀಡಿದರು. ಅಷ್ಟೇ ಅಲ್ಲ, ‘ಈ ಒಪ್ಪಂದದಿಂದಾಗಿ-ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6ಎ- ಈ ಎರಡು ಉಪಗ್ರಹಗಳ ಶೇ 90ರಷ್ಟು ಟ್ರಾನ್ಸ್‌ಪಾಂಡರ್‌ಗಳನ್ನು ದೇವಾಸ್ ಬಳಕೆಗಾಗಿಯೇ ಮೀಸಲಿಡಬೇಕಾಗುತ್ತದೆ ಎಂಬ ಸಂಗತಿಯನ್ನು ಕೇಂದ್ರ ಸಂಪುಟಕ್ಕೆ ತಿಳಿಸಿರಲಿಲ್ಲ’ ಎನ್ನುವ ಮೂಲಕ, ಹಗರಣದಲ್ಲಿ ಸರ್ಕಾರದ್ದೇನೂ ತಪ್ಪಿಲ್ಲ ಎಂಬ ವಕಾಲತ್ತನ್ನೂ ಅವರು ವಹಿಸಿದರು!

ಆದರೆ ಇಂತಹ ಮಹತ್ವದ ವಿಷಯವನ್ನು ಕೇಂದ್ರ ಸಂಪುಟಕ್ಕೆ ತಿಳಿಸದೆ ಮರೆಮಾಚಿದ್ದಾದರೂ ಏಕೆ?- ಎಂಬ ಪ್ರಶ್ನೆ ಉದ್ಭವಿಸಿದಾಗ, ಖಚಿತ ಉತ್ತರ ನೀಡಲು ರಾಧಾಕೃಷ್ಣನ್ ತಡಬಡಾಯಿಸಿದರು. ಅದಾದ ನಂತರ, ರಾಷ್ಟ್ರದ ಪ್ರತಿಷ್ಠೆಯನ್ನು ನಭಕ್ಕೇರಿಸುತ್ತಿರುವ ಹೆಮ್ಮೆಯ ಇಸ್ರೊ ಸಂಸ್ಥೆಯ ಅಧ್ಯಕ್ಷರು ಹೇಳಿದ್ದು ನಿಜವೇ? ಇಸ್ರೊ ಸಂಸ್ಥೆಯೇ ಮಾಹಿತಿಯನ್ನು ಸರ್ಕಾರದಿಂದ ಮುಚ್ಚಿಟ್ಟು ತಪ್ಪು ಮಾಡಿತ್ತೇ? ಅಥವಾ, ಸರ್ಕಾರವನ್ನು ಮುಜುಗರದಿಂದ, ಇಕ್ಕಟ್ಟಿನಿಂದ ಪಾರು ಮಾಡುವ ಸಲುವಾಗಿ ಇಸ್ರೋ ಈ ತಪ್ಪನ್ನು ತನ್ನ ಮೈಮೇಲೆ ಎಳೆದುಕೊಂಡಿತೇ?- ಎಂಬ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕೆಲವು ವಿಜ್ಞಾನಿಗಳು ಮುಂದಿಡುವ ತರ್ಕ ಕೊನೆಯ ಸಾಧ್ಯತೆಯೆಡೆಗೇ ಬೆಟ್ಟು ಮಾಡುತ್ತದೆ. ರಾಧಾಕೃಷ್ಣನ್ ಅವರು ಸರ್ಕಾರವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡುತ್ತಿದ್ದಂತೆಯೇ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳಿಬ್ಬರು ಅದನ್ನು ಖಡಾಖಂಡಿತವಾಗಿ ಅಲ್ಲಗಳೆದರು.  ‘ಬಾಹ್ಯಾಕಾಶ ಆಯೋಗ ಪ್ರಧಾನಿ ಸಚಿವಾಲಯದ ಪ್ರತಿನಿಧಿಗಳನ್ನೂ ಒಳಗೊಂಡಿದ್ದು, ಅಂತರಿಕ್ಷ್ ಬಗ್ಗೆ ಸರ್ಕಾರಕ್ಕೆ ಗೊತ್ತಿಲದ್ಲ್ದು ಏನೂ ಇಲ್ಲ... ಒಪ್ಪಂದದ ಕುರಿತ ಮಾಹಿತಿಗಳ ಬಗ್ಗೆ ಪ್ರಧಾನಿ ಸಚಿವಾಲಯಕ್ಕೆ ಅರಿವಿರಲಿಲ್ಲ ಎಂದರೆ ನಂಬುವುದು ಕಷ್ಟ’ ಎಂದರು ಒಬ್ಬ ತಜ್ಞರು.

‘ದೇವಾಸ್ ಮಲ್ಟಿಮೀಡಿಯಾಗಾಗಿಯೇ ತಾನು ಜಿಸ್ಯಾಟ್ 6 ಮತ್ತು ಜಿಸ್ಯಾಟ್ 6ಎ ಉಪಗ್ರಹಗಳನ್ನು ನಿರ್ಮಿಸುತ್ತಿದ್ದುದನ್ನು ಇಸ್ರೊ ಮುಚ್ಚಿಟ್ಟಿತ್ತು’ ಎಂಬ ಹೇಳಿಕೆಯ ಬಗ್ಗೆ ಮತ್ತೊಬ್ಬ ವಿಜ್ಞಾನಿ ಸಂಶಯ ವ್ಯಕ್ತಪಡಿಸಿದರು. ‘ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯವರೇ ಬಾಹ್ಯಾಕಾಶ ಆಯೋಗದ ಅಧ್ಯಕ್ಷರೂ ಆಗಿರುತ್ತಾರೆ. ಇಸ್ರೊ ಅಧ್ಯಕ್ಷರು ಹೇಳುವುದನ್ನು ನೋಡಿದರೆ, ಎಡಗೈನಲ್ಲಿ ಮಾಡಿದ ಕೆಲಸ ಬಲಗೈಗೇ ಗೊತ್ತಾಗದು ಎಂಬಂತಿದೆ’ ಎಂದು ಅವರು ಅಚ್ಚರಿಪಟ್ಟರು.

ಮೊನ್ನೆ ಮೊನ್ನೆಯ ತನಕವೂ ಇಸ್ರೊ ಜನತೆಯ ದೃಷ್ಟಿಯಲ್ಲಿ ಕಳಂಕರಹಿತ ಹೆಮ್ಮೆಯ ಸಂಸ್ಥೆಯೇ ಆಗಿತ್ತು. ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯನ್ನು  ‘ಪವಿತ್ರ ಗೋವು’ ಎಂದೇ ಭಾವಿಸಿದ್ದ ಜನ ಅದು ಹೇಳಿದ್ದೆಲ್ಲವನ್ನೂ ಮರುಪ್ರಶ್ನೆ ಹಾಕದೆ ಕಿವಿಗೊಟ್ಟು ಆಲಿಸುತ್ತಿದ್ದರು. ಆದರೆ ದೇವಾಸ್‌ನೊಂದಿಗಿನ ಕಳಂಕಿತ ಒಪ್ಪಂದ ಬಯಲಾಗುತ್ತಿದ್ದಂತೆ ಅದರ ಆಡಳಿತ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಮೂಡಲಾರಂಭಿಸಿವೆ.

ಈ ಹಿನ್ನೆಲೆಯಲ್ಲಿ ಕೆಲವು ಹಿರಿಯ ವಿಜ್ಞಾನಿಗಳನ್ನು  ‘ಪ್ರಜಾವಾಣಿ’ ಮಾತಿಗೆಳೆದಾಗ ಸಂಸ್ಥೆಯ ಆಡಳಿತ ವಿಧಾನದ ಕುರಿತ ಇನ್ನಷ್ಟು ಮಾಹಿತಿಗಳು ಹೊರಬಿದ್ದವು.

ಉದ್ದೇಶಿತ ಉಪಗ್ರಹವೊಂದರ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ವಿಜ್ಞಾನಿಯೊಬ್ಬರು ಹೇಳುವಂತೆ, ಇಸ್ರೊ ಹಾಗೂ ಅಂತರಿಕ್ಷ್‌ದ ಆಡಳಿತ ನಿರ್ವಹಣಾ ವಿಧಾನಗಳು ಸಂಪೂರ್ಣ ಭಿನ್ನ. ಇಸ್ರೊದ ಪ್ರತಿಯೊಂದು ಕಾರ್ಯವೂ ಕೂಲಂಕಷ ಪರಿಶೀಲನೆಗೆ, ಪರಾಮರ್ಶೆಗೆ ಒಳಪಡುತ್ತದೆ. ಅದು ಒಂದು ಸಣ್ಣ ಬಿಡಿಭಾಗ ಖರೀದಿಸಬೇಕೆಂದರೂ ತಲೆಚಿಟ್ಟು ಹಿಡಿಸುವಷ್ಟು ನೀತಿ ನಿಯಮಾವಳಿ ಪಾಲಿಸಬೇಕು. ಇನ್ನು ಪ್ರಮುಖ ನಿರ್ಧಾರಗಳು ಅನುಮೋದನೆ ಪಡೆಯುವುದಂತೂ ಹಲವಾರು ವ್ಯಕ್ತಿಗಳು ಹಲವಾರು ಸುತ್ತುಗಳಲ್ಲಿ ಚರ್ಚಿಸಿದ ನಂತರವೇ. ಆದರೆ ಅಂತರಿಕ್ಷ್‌ದ ವಿಷಯದಲ್ಲಿ ಇದು ಉಲ್ಟಾ. ಅದಕ್ಕೆ ಇಂತಹ ಯಾವುದೇ ಕಟ್ಟುಪಾಡು ಇಲ್ಲ. ಸ್ವಾತಂತ್ರ್ಯ ಹೆಚ್ಚು. ಮೇಲಾಗಿ ಅದು ವಾಣಿಜ್ಯ ಘಟಕ. ಇಲ್ಲಿ ತಡಮಾಡದೆ ನಿರ್ಧಾರ ಕೈಗೊಳ್ಳುವುದು ಮುಖ್ಯವಾದ್ದರಿಂದ ಅದಕ್ಕೆ (ಅಂತರಿಕ್ಷ್‌ಗೆ) ಉದಾರತೆ ಹೆಚ್ಚು. ಹೀಗಾಗಿ ಅಂತರಿಕ್ಷ್ ಯಾವತ್ತೂ ಸ್ವಾಯತ್ತತೆಯ ಸುಖವನ್ನು ಅನುಭವಿಸಿಕೊಂಡು ಬಂದಿದೆ..... ಕೆಲವು ನೀತಿಗಳನ್ನು ಉಲ್ಲಂಘಿಸುವ ಅಧಿಕಾರವೂ ಅದಕ್ಕಿದೆ.

ಆದರೆ ಇಸ್ರೊದ ಕಟ್ಟುಪಾಡು ಕೂಡ ಹಳೆಯ ಮಾತಾಯಿತು ಎಂಬುದು ಇನ್ನು ಕೆಲವು ತಜ್ಞರ ಪ್ರತಿಪಾದನೆ. ಇಸ್ರೊದಲ್ಲಿನ ವ್ಯವಸ್ಥೆ ಶಿಥಿಲವಾಗುತ್ತಿರುವ ಬಗ್ಗೆ ಸಣ್ಣ ಧ್ವನಿಯಲ್ಲಿ ಅಸಮಾಧಾನದ ಮಾತುಗಳು ಅವರಿಂದ ಹೊರಬೀಳುತ್ತಿವೆ. ‘ಈ ಒಪ್ಪಂದದ ಹಗರಣವನ್ನು ಯಾರಾದರೂ ಬಯಲಿಗೆಳೆಯದೇ ಹೋಗಿದ್ದರೆ ರಾಷ್ಟ್ರದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತಿದ್ದುದ್ದು ನಿಶ್ಚಿತ’ ಎನ್ನುತ್ತಾರೆ ಇಸ್ರೊ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಕೆಲವು ಸಮಯದ ಹಿಂದೆ ನಿವೃತ್ತರಾದ ಒಬ್ಬ ಹಿರಿಯ ವಿಜ್ಞಾನಿ.

ಇದೆಲ್ಲದರ ನಡುವೆ ದೇವಾಸ್ ಸಂಸ್ಥೆಯ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಮುಂಚೆ ಇಸ್ರೊದಲ್ಲೇ ಸೇವೆಯಲ್ಲಿದ್ದು ಪ್ರತಿಭಾವಂತರೆಂದು ಹೆಸರಾಗಿದ್ದ ವಿಜ್ಞಾನಿ ಎಂ.ಜಿ.ಚಂದ್ರಶೇಖರ್ ಅವರೇ ಇದರ ಸ್ಥಾಪಕರು. ಬೊಕ್ಕಸಕ್ಕೆ ಭಾರಿ ನಷ್ಟ ತರುವಂತಹ ಒಪ್ಪಂದ ಕುದುರಿಸಲು ಪ್ರಭಾವ ಬೀರಿದ ಆರೋಪಕ್ಕೆ ಇದೀಗ ಅವರು ಸಿಲುಕಿದ್ದಾರೆ. ಉತ್ತಮ ಆಡಳಿತಗಾರನೆಂದು ಕರೆಸಿಕೊಂಡಿದ್ದ, ಅನ್ಯರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಹೆಸರಾಗಿದ್ದ ಎಂ.ಜಿ.ಚಂದ್ರಶೇಖರ್ ಬಗ್ಗೆ ಇಸ್ರೊದಲ್ಲಿ ಈಗಲೂ ಒಳ್ಳೆಯ ಅಭಿಪ್ರಾಯವೇ ಇದೆ. ರಾಷ್ಟ್ರದ ಜನತೆ ಅವರನ್ನು ಎಷ್ಟೇ ಸಂಶಯದಿಂದ ನೋಡುತ್ತಿದ್ದರೂ ಇಸ್ರೊ ತಜ್ಞರಿಗೆ ಮಾತ್ರ ಅವರ ಬಗ್ಗೆ ಸ್ಪಷ್ಟ ನಿಲುವು ತಳೆಯುವುದು ಕಷ್ಟವಾಗುತ್ತಿದೆ. ಅಷ್ಟೇ ಏಕೆ, ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುವ ತಜ್ಞರೂ ಸಾಕಷ್ಟಿದ್ದಾರೆ.

‘ನಮ್ಮ ರಾಷ್ಟ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಇಸ್ರೊಗಷ್ಟೇ ಸೀಮಿತವಾಗಿದೆ. ಹೀಗಾಗಿ, ಇಸ್ರೊದ ನಿವೃತ್ತ ತಜ್ಞರು ಖಾಸಗಿ ಕಂಪೆನಿಗಳನ್ನು ಸೇರಿದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದಾದರೂ ಏನು? ಅದನ್ನು ಅನುಮಾನದ ಕಣ್ಣಿನಿಂದ ನೋಡುವ ಅಗತ್ಯವಿಲ್ಲ’ ಎಂದು ಚಂದ್ರಶೇಖರ್ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ ಅಂತರಿಕ್ಷ್ ನಿರ್ದೇಶಕರ ಮಂಡಳಿಯ ಮಾಜಿ ಸದಸ್ಯರೊಬ್ಬರು.
 (ಪೂರಕ ಮಾಹಿತಿ: ಆರ್.ಗೋಪಕುಮಾರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT