ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ–ಕ ಭಾಗದಲ್ಲಿ ಹಾಹಾಕಾರ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನದಿ, ಕೆರೆಗಳಲ್ಲಿ ನೀರು ಬತ್ತಿದೆ. ವಾರಕ್ಕೆ ಮೂರು ದಿನ ಸರಬರಾಜು ಆಗುತ್ತಿದ್ದ ನೀರು ಇದೀಗ ಐದು ದಿನಕ್ಕೊಮ್ಮೆ ಬರುತ್ತಿದೆ. ಕೆಲವೆಡೆ ನದಿಯಲ್ಲಿ ಮರಳು ಬಗೆದಾಗ ಸಿಗುವ  ನೀರು ತುಂಬಿಸಿಕೊಳ್ಳುವ ಪರಿಸ್ಥಿತಿಯೂ ಇದೆ. ಬೆಳಗಾದರೆ ನೀರಿನದೇ ಚಿಂತೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬಹುತೇಕ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಐದು ದಿನಕ್ಕೊಮ್ಮೆ ನೀರು ಬರುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಭೀಮಾ, ಕಾಗಿನಾ, ಅಮರ್ಜಾ ಹಾಗೂ ಬೆಣ್ಣೆತೊರಾಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಸದ್ಯ ಭೀಮಾ ನದಿಯಿಂದ ನಿತ್ಯ 55 ದಶಲಕ್ಷ ಲೀಟರ್‌ ಹಾಗೂ ಬೆಣ್ಣೆತೊರಾದಿಂದ 15 ದಶಲಕ್ಷ ಲೀಟರ್‌ ನೀರನ್ನು ಗುಲ್ಬರ್ಗ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. 400 ಕೊಳವೆ ಬಾವಿಗಳಿಂದಲೂ ನೀರು ಪಡೆಯಲಾಗುತ್ತಿದೆ. ಆದರೆ, ಈ ನೀರಿನಲ್ಲಿರುವ ‘ಆರ್ಸೆನಿಕ್’ ಹಾಗೂ ‘ಫ್ಲೋರೈಡ್’ ಅಂಶ ಜನರ ಜೀವ ಹಿಂಡುತ್ತಿವೆ.

ಗುಲ್ಬರ್ಗ ಜಿಲ್ಲೆಯ ಆಳಂದ, ಅಫಜಲಪುರ ಹಾಗೂ ಚಿಂಚೋಳಿ ತಾಲ್ಲೂಕುಗಳಲ್ಲಿ ಅಭಾವ ಜಾಸ್ತಿಯೇ ಇದೆ. ಜಿಲ್ಲೆಯಲ್ಲಿ 239 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಪೈಕಿ ಪಸ್ತಾಪುರ, ಶೇರಿ ತಾಂಡಾ, ಮಣ್ಣೂರ ಮತ್ತು ಕೋರಳ್ಳಿ ತಾಂಡಾಗಳಲ್ಲಿ ಜನರು ನೀರಿಗೆ ಕಿಲೋಮೀಟರ್‌ಗಟ್ಟಲೆ ಅಲೆಯಬೇಕಿದೆ. ಕೊಪ್ಪಳದಲ್ಲಿ ತುಂಗೆಯ ದಡದಲ್ಲೇ ನೀರಿನ ಬವಣೆ ಎದುರಾಗಿದೆ. ತಿಗರಿ, ಬೆಟಗೇರಿ ಗ್ರಾಮಗಳು, ಯಲಬುರ್ಗಾ ತಾಲ್ಲೂಕಿನ ಗ್ರಾಮೀಣ ಭಾಗ, ಲಂಬಾಣಿ ತಾಂಡಾಗಳು, ಕುಷ್ಟಗಿ, ಮುನಿರಾಬಾದ್‌ನ ಕೆಲವು ಭಾಗಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ.  60 ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

ಯಾದಗಿರಿ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯ ಸುರಪುರ ತಾಲ್ಲೂಕಿನ 19 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ 106 ಹಳ್ಳಿಗಳಲ್ಲಿ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ. ಈ ಭಾಗದಲ್ಲಿ ನೀರು ಶುದ್ಧೀಕರಣ ಘಟಕವಿದ್ದರೂ ವಿದ್ಯುತ್ ಕೊರತೆಯಿಂದ ಆರ್ಸೆನಿಕ್ ಅಂಶವಿರುವ ನೀರನ್ನೇ ಕುಡಿಯುವಂತಾಗಿದೆ. ಗುರುಮಠಕಲ್ ಕೂಡ ಇದಕ್ಕೆ ಹೊರತಾಗಿಲ್ಲ.

ಬೀದರ್‌ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಬೀದರ್‌ ನಗರದ ಹಳೆ ಸಿಟಿ ಪ್ರದೇಶದಲ್ಲಿ ಹೆಚ್ಚಿನ ಸಮಸ್ಯೆ ಇದೆ. ಉಳಿದಂತೆ ಬೀದರ್ ತಾಲ್ಲೂಕಿನ ಕಮಠಾಣಾ, ಜನವಾಡ ಮತ್ತಿತರ ಕಡೆಯೂ ಸಮಸ್ಯೆ ಇದೆ. ಔರಾದ್ ತಾಲ್ಲೂಕಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ತಾಲ್ಲೂಕುಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT