ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಷೋ’ ಬೇಡ; ನೈಜ ಪ್ರದರ್ಶನ ಬೇಕು!

ರಿಯಾಲಿಟಿ ಷೋ ಪರಿಣಾಮ
Last Updated 8 ನವೆಂಬರ್ 2013, 19:30 IST
ಅಕ್ಷರ ಗಾತ್ರ

ರಿಯಾಲಿಟಿ ಷೋಗಳು ನಮಗೆ ಹೊಸವೇನಲ್ಲ. ಕುಸ್ತಿ, ಮಲ್ಲಕಂಬ ಕ್ರೀಡೆಗಳ ರೂಪದಲ್ಲಿ ಬಹು ಹಿಂದೆಯೇ ಅವು ಪ್ರಚಲಿತದಲ್ಲಿದ್ದವು. ಆದರೆ, ಅವು ‘ಷೋ’ ಆಗಿರದೆ ಕೇವಲ ಆಟಗಳಾಗಿದ್ದವು. ಅಮೆರಿಕ ಮಾರುಕಟ್ಟೆಯನ್ನು ಕುರುಡಾಗಿ ಅನುಕರಣೆ ಮಾಡಿದ ಪರಿಣಾಮ ನಮ್ಮಲ್ಲೂ ‘ಷೋ’ಗಳು ಶುರುವಾಗಿವೆ. ಅಲ್ಲಿಯ ಸಂಸ್ಕೃತಿಯೇ ಬೇರೆ. ನಮ್ಮ ನೆಲದ ಗುಣವೇ ಬೇರೆ. ಅದನ್ನೇ ಏಕೆ ಇಲ್ಲಿ ಯಥಾವತ್ತಾಗಿ ನಕಲು ಮಾಡಬೇಕು?

ನಮ್ಮ ಚಾನೆಲ್‌ಗಳು ಹೊರಟ ರೀತಿಯನ್ನು ನೋಡಿದಾಗ ‘ಇವುಗಳನ್ನು ಕನ್ನಡದ ಚಾನೆಲ್‌ಗಳು ಎಂದು ಗುರುತಿಸಬೇಕೇ’ ಎನ್ನುವ ಅನುಮಾನ ಕಾಡುತ್ತದೆ. ನೆಲದ ಸಂಸ್ಕೃತಿಯಿಂದ ಅವು ಬಹುದೂರ ಹೋಗುತ್ತಿವೆ ಎನಿಸುತ್ತದೆ.

ಸ್ಪರ್ಧೆಯ ಏಕೈಕ ಉದ್ದೇಶದಿಂದ ಪ್ರಮಾದಗಳನ್ನೂ ಎಸಗುತ್ತಲೇ ಬರಲಾಗುತ್ತಿದೆ. ಆನಂದಕ್ಕಿಂತ ಹೆಚ್ಚಾಗಿ ನನ್ನದು ಗೆಲ್ಲಬೇಕೆಂಬ ಗುರಿಯೇ ‘ಷೋ’ಗೆ ಮುಖ್ಯವಾಗಿ ಸುಳ್ಳುಗಳನ್ನು ಹೆಣೆಯಲಾಗುತ್ತಿದೆ. ಅದಕ್ಕಾಗಿ ಫಿಕ್ಸಿಂಗ್ ಸಹ ಮಾಡಿಕೊಳ್ಳಲಾಗುತ್ತಿದೆ. ‘ಷೋ’ ನೋಡಿದವರಿಗೆ ಇದರಲ್ಲಿ ನೈಜತೆ ಇಲ್ಲವೇ ಇಲ್ಲ, ಪೂರ್ವ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬುದು ಎದ್ದು ಕಾಣುತ್ತಿದೆ. ಆದ್ದರಿಂದಲೇ ಪ್ರೇಕ್ಷಕರಿಗೆ ಇಂತಹ ಷೋಗಳೆಂದರೆ ಹೇವರಿಕೆ ಶುರುವಾಗಿದೆ.

ಸಾಂಸಾರಿಕ ಸಮಸ್ಯೆಗಳನ್ನೂ ಪಂಚಾಯಿತಿ ಮಾಡಿ ಬಗೆಹರಿಸುವ ಷೋಗಳೂ ಬರುತ್ತಿವೆ. ಅಲ್ಲಿಯೂ ಜಗಳ ಆಡುವುದನ್ನು ಮೊದಲೇ ಫಿಕ್ಸ್ ಮಾಡಲಾಗುತ್ತದೆ. ಇಂತಹ ಫಿಕ್ಸಿಂಗ್‌ಗಳು ಹೆಚ್ಚಾದಂತೆ ಜನ ಅದರಿಂದ ದೂರವಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.  ಈ ರೀತಿಯ ಷೋಗಳು ಅಮಾಯಕರ ಪಾಲಿಗೆ ‘ಲೂಸಿಯಾ ಮಾತ್ರೆ’ ಆಗುತ್ತವೆ. ಏನೂ ಅರಿಯದವರು ಇಂತಹ ಷೋಗಳಿಗೆ ಬಂದ ತಕ್ಷಣ ಕನಸುಗಳನ್ನು ತುಂಬಿಕೊಳ್ಳುತ್ತಾರೆ. ಮನಸ್ಸನ್ನು ಹಾಳು ಮಾಡಿಕೊಳ್ಳುತ್ತಾರೆ. ಮರಳಿ ವಾಸ್ತವಲೋಕಕ್ಕೆ ಬರುವುದೇ ಕಷ್ಟ. ರಾಜೇಶ್ ಪ್ರಕರಣ ಅದಕ್ಕೊಂದು ಜ್ವಲಂತ ಉದಾಹರಣೆ.

ಕೆಲವು ಷೋಗಳಲ್ಲಿ ೧೦ ಜನರನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಜಗಳ ಆಡುವ ಹೊಣೆಯನ್ನು ಮುಂಚಿತವಾಗಿಯೇ ಅವರಿಗೆ ವಹಿಸಲಾಗಿರುತ್ತದೆ. ಕಾರ್ಯಕಾರಣ ಸಂಬಂಧವೇ ಇಲ್ಲದಂತೆ, ಇಂತಹ ಷೋಗಳು ನಡೆಯುತ್ತವೆ. ಅಲ್ಲಿ ನಡೆಯುವುದು ಸತ್ಯ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆಗ ಅದರ ಒಟ್ಟಾರೆ ಉದ್ದೇಶ ಸೋತು ಹೋಗುತ್ತದೆ.

ಸಂಗೀತ ಮತ್ತು ನೃತ್ಯ ಪ್ರದರ್ಶನಗಳದ್ದೂ ಇದೇ ಹಣೆಬರಹ. ಇಂಥವರೇ ಗೆಲ್ಲಬೇಕು ಎನ್ನುವುದು ಪೂರ್ವನಿಗದಿ ಆಗಿರುತ್ತದೆ. ಯಾರನ್ನೋ ಹೀರೊ ಆಗಿ ಪ್ರತಿಬಿಂಬಿಸುವ ಭರದಲ್ಲಿ ಅಲ್ಲಿಯೂ ಪ್ರತಿಭೆಗಳಿಗೆ ಅನ್ಯಾಯ ಮಾಡಲಾಗುತ್ತದೆ.

ಫಿಕ್ಸಿಂಗ್‌ಗಳು ಇದ್ದಲ್ಲಿ ಅಂತಹ ಚಟುವಟಿಕೆ ಗಳಿಗೆ ಗೌರವ ಇರುವುದಿಲ್ಲ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಜನ ಗಂಭೀರವಾಗಿ ನೋಡುವುದನ್ನು ಬಿಟ್ಟುಬಿಟ್ಟಿದ್ದಾರೆ. ಫಿಕ್ಸಿಂಗ್ ಭೂತ ಅದನ್ನು ಬೆನ್ನು ಹತ್ತಿದ ಪರಿಣಾಮ ಎಲ್ಲವನ್ನೂ, ಎಲ್ಲರನ್ನೂ ಅನುಮಾನದಿಂದಲೇ ನೋಡುವಂತಾಗಿದೆ. ರಿಯಾಲಿಟಿ ಷೋಗಳೂ ಹಾಗೇ ಆಗಿವೆ. ಪ್ರದರ್ಶನದ ಬದಲು ವ್ಯವಸ್ಥಿತ ಸಂಚಿನಂತೆ ಅವು ಭಾಸವಾಗುತ್ತಿವೆ.

‘ಕೋಟ್ಯಾಧಿಪತಿ’ಯಂತಹ ಷೋಗಳು ಸಹ ಇದಕ್ಕೆ ಹೊರತಲ್ಲ. ಸೆಲೆಬ್ರಿಟಿಗಳು ಬಂದಾಗ, ಅವರಿಗೆ ಉತ್ತರ ಗೊತ್ತಿರುವ ಸುಲಭವಾದ ಪ್ರಶ್ನೆಗಳನ್ನು ಕೇಳುವುದು ಗುಟ್ಟಾಗಿ ಉಳಿದಿಲ್ಲ. ಅಡುಗೆ ಕಾರ್ಯಕ್ರಮದ್ದೂ ಇಂತಹದ್ದೇ ಒಂದು ಸುಳ್ಳು ಷೋ. ವಾಸ್ತವವಾಗಿ ಅದನ್ನು ಸಿದ್ಧಪಡಿಸುವವರು ಯಾರೋ? ಸೆಲೆಬ್ರಿಟಿಗಳು ಬಂದು ತಾವೇ ತಯಾರಿಸಿದಂತೆ ಪೋಸು ಕೊಡುತ್ತಾರೆ.

ಜಾಹೀರಾತುಗಳಿಂದ ಪ್ರೇರಿತರಾಗಿ, ಅಂಕಿ-ಸಂಖ್ಯೆಗಳ ಬೆನ್ನು ಹತ್ತಿದಾಗ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಪ್ರದರ್ಶನಗಳು ಮೂಡಿಬ ರಲು ಸಾಧ್ಯವಿಲ್ಲ. ಎಲ್ಲ ಮಾಧ್ಯಮಗಳಿಗೂ ಈ ಮಾತು ಅನ್ವಯವಾಗುತ್ತದೆ. ಟಿ.ವಿ ಚಾನೆಲ್‌ ಗಳು ಟಿಆರ್‌ಪಿ ಬೆನ್ನುಹತ್ತಿ ಬೇರೆ ಚಾನೆಲ್‌ಗಿಂತ ತಮ್ಮ ಷೋ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯ ಬೇಕೆಂಬ ಧಾವಂತಕ್ಕೆ ಬಿದ್ದಾಗ ಅನಾರೋಗ್ಯಕರ ಪೈಪೋಟಿ ಏರ್ಪಡುತ್ತದೆ. ಆಗ ಸಂಭವಿಸುವ ಅನಾಹುತವೇ ಇಂಥದ್ದು. ನಮಗೆ ಬೇಕಿರುವುದು ನೈಜ ಪ್ರದರ್ಶನವೇ ಹೊರತು ‘ಷೋ’ ಅಲ್ಲ.

ಸುಳ್ಳು ಷೋಗಳು ನಮಗೆ ನಾವೇ ಮಾಡಿಕೊಳ್ಳುವ ಮೋಸ ಎನ್ನುವುದು ಚಾನೆಲ್‌ಗಳ ಮುಖ್ಯಸ್ಥರಿಗೆ ಅರ್ಥವಾಗಬೇಕು. ಅದು ಜನರಿಗೆ ಬಗೆಯುವ ದ್ರೋಹವೂ ಹೌದು. ಭ್ರಮೆ ಮೂಡಿಸುವುದು, ಸುಳ್ಳು ಹೇಳುವುದನ್ನು ಬಿಟ್ಟು ಸಮಾಜ ಕಟ್ಟುವ ಕೆಲಸದಲ್ಲಿ ಚಾನೆಲ್‌ಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.

ರಿಯಾಲಿಟಿ ಷೋಗಳನ್ನೇ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಅಸ್ತ್ರಗಳನ್ನಾಗಿಯೂ ಬಳಸಲು ಸಾಧ್ಯವಿದೆ. ಸಾಂಸಾರಿಕ ಸಮಸ್ಯೆಗಳನ್ನು ಎಳೆದುತರುವ ಬದಲು ಸಮಸ್ಯೆ ಬಾರದಂತೆ ಹೇಗೆ ಬಾಳ್ವೆ ನಡೆಸಬೇಕು ಎನ್ನುವುದನ್ನು ಉತ್ತಮ ಮಾದರಿಗಳ ಮೂಲಕ ತೋರಿಸಬೇಕು. ಜನರಲ್ಲಿ ಹುಚ್ಚು ಭ್ರಮೆ ಮೂಡಿಸದೆ, ಹಾಯ್ ಎನಿಸುವಂತೆ ಅಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಒಂದು ಯಶಸ್ವಿ ಕಾರ್ಯಕ್ರಮ ನಾಲ್ಕು ಒಳ್ಳೆಯ ಕಾರ್ಯಕ್ರಮಗಳಿಗೆ ಬೆನ್ನೆಲುಬು ಆಗಬೇಕು. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯುತ್ತಾ ಹೋದಾಗ ‘ಗರ್ವ’ದಂತಹ ಉತ್ತಮ ಧಾರಾವಾಹಿ ಅರ್ಧಕ್ಕೆ ನಿಲ್ಲುತ್ತದೆ.       ‘ಮರಳಿ ಮಣ್ಣಿಗೆ’ ಕೃತಿಯು ದೃಶ್ಯ ರೂಪವನ್ನು ತಾಳುವುದೇ ಇಲ್ಲ.

ಅನಾರೋಗ್ಯಕರ ಪೈಪೋಟಿ ಕೈಬಿಟ್ಟು ಮನರಂಜನೆ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ನೈಜ ಪ್ರದರ್ಶನಗಳು ಬೇಕಾಗಿವೆ. ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ. ಭ್ರಮೆಗಳಿಗೆ ಬೈ ಬೈ ಹೇಳಬೇಕಿದೆ. ಆರೋಗ್ಯಪೂರ್ಣ ಮನಸ್ಸು ಹಾಜರಿರಬೇಕಿದೆ. ಗುಣಾತ್ಮಕವಾಗಿ ಬೆಳೆಯ ಬೇಕಿದೆ. ಪ್ರಾಮಾಣಿಕ ಮನೋಭಾವ ಅಗತ್ಯವಾ ಗಿದೆ. ಆದರೆ, ಮಾರುಕಟ್ಟೆ ಧಾವಂತದಲ್ಲಿ ಅವುಗಳನ್ನೆಲ್ಲ ಎಲ್ಲಿ ಹುಡುಕುವುದು?

(ಲೇಖಕರು ಕಿರುತೆರೆ, ಸಿನಿಮಾ ನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT