ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌’ ಆಗುವುದೆಂದರೆ...

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

‘ಸ್ಮಾರ್ಟ್‌ ಸಿಟಿ’ಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆ ಆಗದೆ ಇದ್ದರೂ ಆಯ್ಕೆ ಆಗಿರುವ 98 ನಗರಗಳ ಬಗ್ಗೆ ದೇಶದಲ್ಲಿ ಈಗ ದೊಡ್ಡ ಮಟ್ಟದ ಸಡಗರ ಇದೆ. ಹೆಚ್ಚಿನ ಜನರಲ್ಲಿ ಇರುವ ಪ್ರಶ್ನೆ ಏನೆಂದರೆ, ಒಂದು ನಗರವನ್ನು ಸ್ಮಾರ್ಟ್‌ ಮಾಡುವ ಅಂಶಗಳು ಯಾವುವು ಮತ್ತು ಬೆಂಗಳೂರನ್ನು ಈ ಪಟ್ಟಿಗೆ ಪರಿಗಣಿಸದೆ ಇರಲು ಇರುವ ಕಾರಣಗಳು ಏನು?

ಬಿಬಿಎಂಪಿಯ ಹಿಂದಿನ ಲೆಕ್ಕಪರಿಶೋಧನೆ ವರದಿಗಳು ಲಭ್ಯವಿಲ್ಲದೆ ಇರುವುದು, ಜನಸಂಖ್ಯೆಯ ತುಲನೆಯಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಮುಂತಾದ ಕೆಲವು ಪ್ರಮುಖ ಮಾನದಂಡಗಳನ್ನು ಬೆಂಗಳೂರು ಪೂರೈಸದೆ ಇರುವುದು ಈ ನಗರ ಪಟ್ಟಿಗೆ ಸೇರ್ಪಡೆ ಆಗದೆ ಇರಲು ಕಾರಣ.
ರಾಜ್ಯದ ಆರು ಸಣ್ಣ ನಗರಗಳು ‘ಸ್ಮಾರ್ಟ್‌ ಸಿಟಿ’ ಪಟ್ಟಿಗೆ ಸೇರಿವೆ. ಸೇರ್ಪಡೆ ಆಗದಿರುವ ವಿಷಯದಲ್ಲಿ ಬೆಂಗಳೂರನ್ನು ಮೈಸೂರು ಕೂಡ ಸೇರಿಕೊಂಡಿದೆ.

ಜೆ ನರ್ಮ್‌  ಯೋಜನೆಯಲ್ಲಿ ಈ ಎರಡೂ ನಗರಗಳು ಒಳಗೊಂಡಿದ್ದವು ಮತ್ತು ಸಣ್ಣ ನಗರಗಳಿಗೆ ಆದ್ಯತೆ ನೀಡುವುದು ರಾಜ್ಯ ಸರ್ಕಾರದ ಚಿಂತನೆ ಆಗಿರಬಹುದು. ಬೆಂಗಳೂರು ಸ್ಮಾರ್ಟ್‌ ಪಟ್ಟಿಗೆ ಸೇರದೆ ಇರುವುದು ಒಳ್ಳೆಯದೇ ಆಯಿತು. ಏಕೆಂದರೆ ಸ್ಮಾರ್ಟ್‌ ಪಟ್ಟಿಗೆ ಸೇರದೆ ಇದ್ದರೂ ಸೇರ್ಪಡೆ ಆಗಿರುವ ಇತರ ನಗರಗಳಿಗಿಂತ ಬೆಂಗಳೂರು ಇನ್ನೂ ಉತ್ತಮ ನಗರ ಎಂಬುದನ್ನು ಸಾಧಿಸಿ ತೋರಿಸಲು ಇದೊಂದು ಅವಕಾಶವಾಗಿ ಒದಗಿಬಂದಿದೆ.

ಹಾಗಾದರೆ ‘ಸ್ಮಾರ್ಟ್‌ ಸಿಟಿ’ ಎಂದರೇನು? ಬ್ರಾಡ್‌ಬ್ಯಾಂಡ್‌ ಸಂಪರ್ಕ, ವಿದ್ಯುನ್ಮಾನ ಉಪಕರಣಗಳು ಮತ್ತು ಸಾಫ್ಟ್‌ವೇರ್‌ನಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಿರುವ ಕಂಪೆನಿಗಳು ಪಶ್ಚಿಮದ ದೇಶಗಳಲ್ಲಿ ಈ ಪದವನ್ನು ಜನಪ್ರಿಯಗೊಳಿಸಿವೆ. ಸ್ಮಾರ್ಟ್‌ ಮೀಟರ್ ವ್ಯವಸ್ಥೆ, ಸಮನ್ವಯ ಹೊಂದಿರುವ ಸಂಚಾರ ದೀಪಗಳು, ಸ್ಮಾರ್ಟ್‌ ವಾಹನ ನಿಲುಗಡೆ ವ್ಯವಸ್ಥೆ, ಯಂತ್ರಗಳ ನಡುವೆ ಸಂವಹನ ಇತ್ಯಾದಿ ತಂತ್ರಜ್ಞಾನ ಆಧಾರಿತವಾದ ಭವಿಷ್ಯದ ನಗರಗಳ ಪರಿಕಲ್ಪನೆಯನ್ನು ಈ ಕಂಪೆನಿಗಳು ಜನರಿಗೆ ತಲುಪಿಸಿದವು.

ಆದರೆ ಭಾರತದಲ್ಲಿ ಈ ಪರಿಕಲ್ಪನೆ ಅತ್ಯಂತ ಸೀಮಿತ ಅನಿಸುತ್ತದೆ. ಏಕೆಂದರೆ ಇಲ್ಲಿನ ಜನಸಂಖ್ಯೆಯ ಬಹುದೊಡ್ಡ ವರ್ಗ ವಸತಿ, ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವುದಕ್ಕೇ ಹೆಣಗುತ್ತಿದೆ. ಭಾರತದಲ್ಲಿ ಸ್ಮಾರ್ಟ್‌ ನಗರಗಳು ಎಂದರೆ, ಸೂಕ್ತ ಆಡಳಿತ ವ್ಯವಸ್ಥೆಯೊಳಗೆ ಅಗತ್ಯ ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಹೆಚ್ಚು ಪರಿಸರ ಸ್ನೇಹಿ ಹಾಗೂ ಸುಸ್ಥಿರ ರೀತಿಯಲ್ಲಿ ನಮ್ಮ ನಗರಗಳನ್ನು ಯೋಜಿಸುವುದಾಗಿದೆ.

ಇಂತಹ ಸ್ಮಾರ್ಟ್‌ ನಗರಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಜನರ ಧ್ವನಿಯನ್ನು ಆಲಿಸಲೇಬೇಕು ಮತ್ತು ಜಗತ್ತಿನ ವಿವಿಧ ಭಾಗಗಳಲ್ಲಿನ ಅತ್ಯುತ್ತಮ ಪದ್ಧತಿಗಳಿಂದ ಕಲಿಯುವ ಮತ್ತು ಅವುಗಳನ್ನು ಅಳವಡಿಸಿಕೊಳ್ಳುವ ಮುಕ್ತ ಮನಸ್ಸು ಬೇಕೇ ಬೇಕು. ಸ್ಮಾರ್ಟ್‌ ನಗರಗಳ ಪಟ್ಟಿಗೆ ಸೇರಿರುವುದರಿಂದಾಗಿ ಕರ್ನಾಟಕದ ಆರು ನಗರಗಳು ಹೇಗೆ ಬದಲಾಗಲಿವೆ?: ಮುಂದಿನ  ಮೂರು ವರ್ಷಗಳ ಅವಧಿಯಲ್ಲಿ ಇವು ಯಾವಾಗ ಯೋಜನೆ ಅನುಷ್ಠಾನಕ್ಕೆ ಅರ್ಹತೆ ಪಡೆಯುತ್ತವೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ.

ಒಂದು ನಗರ ಅರ್ಹತೆ ಪಡೆದುಕೊಂಡ ನಂತರ ಮುಂದಿನ ಐದು ವರ್ಷಗಳ ಕಾಲ ವರ್ಷಕ್ಕೆ ನೂರು ಕೋಟಿ ರೂಪಾಯಿಯಂತೆ ಅನುದಾನವನ್ನು ಪಡೆಯಲಿದೆ. ಇದಕ್ಕೆ ಅನುಗುಣವಾದ ಅನುದಾನವನ್ನು ರಾಜ್ಯ ಸರ್ಕಾರವೂ  ಒದಗಿಸಲಿದೆ. ಆದರೆ ಆರಂಭದಲ್ಲಿ, ಈ ಹಣವನ್ನು ಹೇಗೆ ವಿವೇಕದಿಂದ ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ.

ಆಯ್ಕೆಯಾದ ನಗರಗಳು ಇನ್ನಷ್ಟು ಉತ್ತಮವಾಗಿ ರೂಪು ಗೊಳ್ಳುವುದಕ್ಕೆ ಇರುವ ಸವಾಲುಗಳು ಯಾವುವು? ಮೊದಲನೆಯದಾಗಿ, ಹೆಚ್ಚು ಜನ ಕೇಂದ್ರಿತ ನಗರಪಾಲಿಕೆಗಳನ್ನು ಹೊಂದುವುದಕ್ಕಾಗಿ ಆಡಳಿತ ಸುಧಾರಣೆ ಅಗತ್ಯವಾಗಿದೆ. ಯಾವ ಕೆಲಸ ಆಗಬೇಕು ಎಂಬುದನ್ನು ಗುರುತಿಸುವಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವ ಮತ್ತು ಯೋಜನೆಗಳನ್ನು ಸಹಭಾಗಿಯಾಗಿ ಅನುಷ್ಠಾನಗೊಳಿಸುವ ವಿಧಾನಗಳನ್ನು ಕಂಡುಕೊಳ್ಳಬೇಕು.

ನಗರಪಾಲಿಕೆಗಳು ತಮ್ಮ ಹಣಕಾಸು ವರದಿಯನ್ನು ಸಮರ್ಪಕವಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಲೆಕ್ಕಪತ್ರಗಳು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಮಾರುಕಟ್ಟೆಯಿಂದ ಹಣ ಸಾಲ ಪಡೆಯಲು ಇದು ನೆರವಾಗುತ್ತದೆ. ಕೊನೆಯದಾಗಿ, ಸ್ಮಾರ್ಟ್‌ ನಗರ ಅಭಿವೃದ್ಧಿ ಯೋಜನೆಯ ಭಾಗವಾಗಿ ತೊಡಗಿಸಿಕೊಳ್ಳುವುದಕ್ಕೆ ಖಾಸಗಿ ವಲಯ ಮತ್ತು ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವೂ ಇದೆ.
*
ಅನುಷ್ಠಾನ ಹೀಗೆ...

* ಜನರ ಜೀವನಮಟ್ಟ ಸುಧಾರಣೆಯೇ ಯೋಜನೆಯ ಮುಖ್ಯ ಉದ್ದೇಶ
* 5 ವರ್ಷಗಳಲ್ಲಿ ಹಂತಹಂತವಾಗಿ ದೇಶದ 100 ನಗರಗಳ ಅಭಿವೃದ್ಧಿ
* ಒಟ್ಟು ₹ 48 ಸಾವಿರ ಕೋಟಿ ವೆಚ್ಚ
* ವರ್ಷಾಂತ್ಯಕ್ಕೆ 20 ನಗರಗಳಲ್ಲಿ ಯೋಜನೆ  ಕಾರ್ಯಾರಂಭ
* ಎರಡನೇ ಹಂತದಲ್ಲಿ 40 ನಗರಗಳ ಅಭಿವೃದ್ಧಿ ಗುರಿ
* ಸುಸಜ್ಜಿತ ನಗರಗಳ ನೀಲನಕ್ಷೆ ಸಿದ್ಧಪಡಿಸಲು ಪ್ರತಿ ನಗರಕ್ಕೂ ಸದ್ಯದಲ್ಲೇ ತಲಾ ₹ 2 ಕೋಟಿ ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT