ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ‘ಪ್ರಾಣಿ ಭಂಡಾರ’

Last Updated 12 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಲ್ಲಿ ಹೆಬ್ಬಾವು ನಿದ್ರಿಸುತ್ತಿತ್ತು. ಕಾಳಿಂಗಸರ್ಪ ನಡು ಬಗ್ಗಿಸಿ ಸುರಳಿ ಸುತ್ತಿಕೊಂಡಿತ್ತು. ಕಾಡು ಹಂದಿ ಬೇಟೆಗೆ ಸಿದ್ಧವಾಗಿದ್ದರೆ, ಬಾವಲಿ ಹಾರಲು ರೆಕ್ಕೆ ಬಿಚ್ಚಿತ್ತು.. ಇಂಥ ಅನೇಕ ಪ್ರಾಣಿಪ್ರಪಂಚವನ್ನು ಒಂದೇ ಸೂರಿನಡಿ ಕಂಡಿದ್ದು, ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಭಾಗವಾಗಿರುವ ‘ಪ್ರಾಣಿ ವಸ್ತುಸಂಗ್ರಹಾಲಯ’ದಲ್ಲಿ.

ಅಂದ ಹಾಗೆ, ಇಲ್ಲಿರುವ ಪ್ರಾಣಿಗಳಿಗೆ ಜೀವವಿಲ್ಲ. ಆದರೆ ಜೀವಂತಿಕೆ ಇದೆ. ಚರ್ಮಪ್ರಸಾಧನ/ಪ್ರಾಣಿಪ್ರಸಾಧನ ಕಲೆಯ ಮೂಲಕ ಸತ್ತ ಪ್ರಾಣಿಗಳೂ ಜೀವಂತವಿರುವ ಪ್ರಾಣಿಗಳ ಹಾಗೆ ಕಾಣುವಂತೆ ಮಾಡಲಾಗಿದೆ. ಅಳಿವಿನಂಚಿನ ಸರೀಸೃಪಗಳು, ಪ್ರಾಣಿ, ಪಕ್ಷಿ ಸೇರಿದಂತೆ 2500ಕ್ಕೂ ಹೆಚ್ಚು ಸತ್ತ ಪ್ರಾಣಿಗಳು ಈ ಸಂಗ್ರಹಾಲಯದಲ್ಲಿ ಜೀವಂತಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕಾಗಿ ಈ ಮ್ಯೂಸಿಯಂ ಅನ್ನು ‘ಅಳಿದು–ಬದುಕಿದ ಪ್ರಾಣಿಗಳ ತಾಣ’ ಎನ್ನುತ್ತಾರೆ. ಇದು ದೇಶದ ಅತಿ ಹಳೆಯ ಪ್ರಾಣಿ ವಸ್ತು ಸಂಗ್ರಹಾಲಯಗಳಲ್ಲಿ ಒಂದು. ಮಾತ್ರವಲ್ಲ, ದಕ್ಷಿಣಭಾರತದಲ್ಲೇ ಅತಿ ದೊಡ್ಡದಾದ ಸಂಗ್ರಹಾಲಯ.

ಸ್ವಾತಂತ್ರ್ಯ ವರ್ಷದಲ್ಲಿ ಆರಂಭ

ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ (ಕೆ.ಸಿ.ಡಿ)1934ರಲ್ಲಿ ಪ್ರಾಣಿವಿಜ್ಞಾನಶಾಸ್ತ್ರ ವಿಭಾಗ ಆರಂಭವಾಯಿತು. ಈ ವಿಭಾಗದಲ್ಲಿ ಪ್ರಾಣಿ ವಸ್ತುಸಂಗ್ರಹಾಲಯ ಆರಂಭವಾಗಿದ್ದು 1947ರಲ್ಲಿ. ಅಂದು ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಪಿ.ಡಬ್ಲ್ಯು.ಗಿಡಿಯನ್‌, ತುಂಬಾ ಆಸಕ್ತಿವಹಿಸಿ ಸಂಗ್ರಹಾಲಯಕ್ಕೆ ಚಾಲನೆ ನೀಡಿದರು. ಕೆ.ವಿ. ಕಾಡಿಲಕರ್‌ ಅವರನ್ನು ಚರ್ಮ ಪ್ರಸಾಧನ ಕಲಾತಜ್ಞರಾಗಿ (Taxidermist) ನೇಮಕ ಮಾಡಿದರು. ಈ ಸಂಗ್ರಹಾಲಯದ ಉಸ್ತುವಾರಿವಹಿಸಿದರು.

ಕಾಡಿಲಕರ್‌ ಅವರು ಅಂದಿನ ಮದ್ರಾಸ್‌ನ ಎಗ್ಮೋರ್‌ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಚರ್ಮ ಪ್ರಸಾಧನ ಕಲೆ ಕಲಿತಿದ್ದರು. ಆ ತಜ್ಞತೆಯಿಂದ ಕಾಡಿಲಕರ್‌ ಸತ್ತ ಪ್ರಾಣಿ, ಪಕ್ಷಿಗಳನ್ನು ತಂದು, ಸಂರಕ್ಷಿಸಿ ಸಂಗ್ರಹಾಲಯದಲ್ಲಿ ಜೋಡಿಸಲು ಆರಂಭಿಸಿದರು. 1960ರಲ್ಲಿ ಪ್ರಾಣಿವಿಜ್ಞಾನಿ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಸಿ.ಉತ್ತಂಗಿ ಇದನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಆಸಕ್ತಿ ತೋರಿದರು. ಕೋಲ್ಕತ್ತಾದಲ್ಲಿದ್ದ ಭಾರತದ ಪ್ರಾಣಿವಿಜ್ಞಾನದ ಸಮೀಕ್ಷೆಯಲ್ಲಿ ಚರ್ಮಪ್ರಸಾಧನ ಕಲೆ ಕಲಿತಿದ್ದ ಮೋಹನ್‌ ಮೋರೆ ಅವರೊಂದಿಗೆ ಸೇರಿ, ಪ್ರಾಣಿ, ಪಕ್ಷಿ, ಮೀನು, ಕಪ್ಪೆ ಚಿಪ್ಪು ಸೇರಿದಂತೆ ಸಾವಿರಾರು ಪ್ರಾಣಿ ವಸ್ತುಗಳನ್ನು ಸಂಗ್ರಹಿಸಿದರು.

ಪ್ರಾಣಿ ವಸ್ತುಗಳ ಸಂಗ್ರಹದ ಜೊತೆಗೆಮೋಹನ ಮೋರೆ ಅವರು ಚರ್ಮ ಪ್ರಸಾಧನ ಪರಿಣತಿಯೊಂದಿಗೆ ಸತ್ತ ಪ್ರಾಣಿಗಳ ಚರ್ಮವನ್ನು ಬಳಸಿಕೊಂಡು ಆ ಪ್ರಾಣಿಗಳಿಗೆ ‘ಮರುಜೀವ’ ನೀಡುವ ಕಾಯಕ್ಕೆ ಒತ್ತು ನೀಡಿದರು. ಇದರ ಫಲವಾಗಿಯೇ ಈ ಸಂಗ್ರಹಾಲಯದಲ್ಲಿಕಾಳಿಂಗ ಸರ್ಪ, ಹೆಬ್ಬಾವು, ಹಾರುವ ಅಳಿಲು, ಪುನುಗಿನ ಬೆಕ್ಕು, ಕಾಡು ಹಂದಿಯ ತಲೆ, ಜಿಂಕೆಯ ತಲೆ, ಸುವರ್ಣ ಬೆಕ್ಕು, ಕಾಡು ಬೆಕ್ಕು, ಚಿಪ್ಪು ಹಂದಿ, ಸ್ಟಿಂಗ್ ರೇ ಮೀನು, ಅಕ್ಟೋಪಸ್, ವಿದ್ಯುತ್-ಕಿರಣ ಮೀನು, ಹದ್ದುಗಳು, ಗೂಬೆಗಳ ಗೊಂಬೆಗಳನ್ನು ಕಾಣಲು ಸಾಧ್ಯವಾಗುತ್ತಿದೆ.

ಸೊರಗಿದ್ದ ಸಂಗ್ರಹಾಲಯ

1999ರಲ್ಲಿ ಮೋಹನ ಮೋರೆ ಅವರು ನಿವೃತ್ತರಾದ ಮೇಲೆ 18 ವರ್ಷ ಸಂಗ್ರಹಾಲಯದ ನಿರ್ವಹಣೆ ಕಷ್ಟವಾಗಿತ್ತು. ಕಾರಣ, ಚರ್ಮ ಪ್ರಸಾಧನ ತಜ್ಞರು ಕೊರತೆ. ಪರಿಣಾಮವಾಗಿ ಸಂಗ್ರಹಾಲಯದಲ್ಲಿದ್ದ ಪ್ರಾಣಿಗೊಂಬೆಗಳನ್ನು ನಿರ್ವಹಿಸುವುದಕ್ಕೆ ಆಗುತ್ತಿರಲಿಲ್ಲ. ಪ್ರಾಣಿವಿಜ್ಞಾನ ವಿಭಾಗದ ಮುಖಸ್ಥೆ ಡಾ.ಎ.ಎಸ್‌. ಬೆಲ್ಲದ ಹಾಗೂ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಸಂಯೋಜಕರಾದ ಡಾ.ಎಂ.ಎಸ್‌. ನಾಯಕ ಅವರ ಒತ್ತಾಸೆ ಮೇರೆಗೆ ಕುಲಪತಿಯವರು 2017ರಲ್ಲಿ ನವೀನ ಪ್ಯಾಟಿಮನಿ ಅವರನ್ನು ಚರ್ಮಪ್ರಸಾಧನ ತಜ್ಞರನ್ನಾಗಿ ನೇಮಿಸಿದರು. ಅಂದಿನಿಂದ ನವೀನ ಪ್ಯಾಟಿಮನಿ ಪ್ರಾಣಿ ವಸ್ತು ಸಂಗ್ರಹಾಲಯದ ಮುಖ್ಯಸ್ಥರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಒಂದು ಆಸಕ್ತಿದಾಯ ವಿಷಯವೆಂದರೆ, ಚರ್ಮ ಪ್ರಸಾಧನ ಕಲೆಯನ್ನು ನವೀನ ಪ್ಯಾಟಿಮನಿ ಕಲಿತದ್ದು ಮೋಹನ ಮೋರೆ ಅವರಿಂದ.

ಮತ್ತೆ ಮರುಜೀವ

ನಿರ್ವಹಣೆಯಿಲ್ಲದೇ ಸೊರಗುತ್ತಿದ್ದ ಕಾಳಿಂಗ ಸರ್ಪ, ಹೆಬ್ಬಾವು, ಜಿಂಕೆಯ ತಲೆ, ಕಾಡು ಹಂದಿ, ಬಾವಲಿಯಂತಹ ಪ್ರಾಣಿಗಳಿಗೆ ಪ್ಯಾಟಿಮನಿ ಅವರು ‘ಮರುಜೀವ’ ನೀಡಿದರು. ಮಾತ್ರವಲ್ಲ, ತಾವು ಮೊಲ, ಏಡಿ, ಮೀನು, ಬಾವಲಿಯನ್ನು ಈ ಸಂಗ್ರಹಕ್ಕೆ ಕೊಡುಗೆಯಾಗಿ ಸೇರಿಸಿದ್ದಾರೆ. ಇವರೊಂದಿಗೆ ಕೆಸಿಡಿ ಮನೋವಿಜ್ಞಾನ ವಿಭಾಗದ ಮುಖಸ್ಥ ಡಾ.ರಾಜೇಶ್ವರಿ ಕೆಂಚಪ್ಪನವರ ದಾನ ನೀಡಿರುವ 5 ತಿಂಗಳ ಭ್ರೂಣದ ಸಂರಕ್ಷಣೆಯೂ ಇದೆ. ಇದೇ ರೀತಿ ಇತ್ತೀಚೆಗೆ ಕೆಯುಡಿ ಆರೋಗ್ಯಾಧಿಕಾರಿ ಡಾ. ಮುತಾಲಿಕ್ ದೇಸಾಯಿ ನಾಲ್ಕು ಅಡಿ ಎತ್ತರದ ಕಣಜದ ಬೃಹತ್‌ ಗೂಡನ್ನು ಕೊಡುಗೆಯಾಗಿ ನೀಡಿದ್ದಾರೆ.

ದೊಡ್ಡ ಕಟ್ಟಡದ ಅಗತ್ಯ

ಹಂತ ಹಂತವಾಗಿ ಸಂಗ್ರಹಾಲಯಕ್ಕೆ ವಸ್ತುಗಳು ಸೇರ್ಪಡೆಗೊಳ್ಳುತ್ತಿ ರುವುದರಿಂದ, ಈಗಿರುವ ಕಟ್ಟಡ ಕಿರಿದಾಗುತ್ತಿದೆ. ಪ್ರತಿ ನಿತ್ಯ ಪ್ರಾಣಿ ವಸ್ತುಗಳನ್ನು ನೋಡಲು, ಪ್ರಾಯೋಗಿಕ ಮಾಹಿತಿ ಪಡೆಯಲು ಇಲ್ಲಿಗೆ ನಾಲ್ಕಾರು ಬ್ಯಾಚ್‌ಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಬರುತ್ತಾರೆ. ಜತೆಗೆ ಹಲವು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿ ಗಳೂ ಭೇಟಿ ನೀಡುತ್ತಿರುತ್ತಾರೆ. ಸಾರ್ವಜನಿಕರಿಗೂ ಮುಕ್ತ ಪ್ರವೇಶ ಕೊಡಲಾಗಿದೆ. ಜನಸಂದಣಿ ಹೆಚ್ಚಾದಾಗ, ಜಾಗದ ಕೊರತೆ ಕಾಡುತ್ತದೆ. ಹೀಗಾಗಿ, ಈ ಸಂಗ್ರಹಾಲಯಕ್ಕೆ ದೊಡ್ಡ ಕಟ್ಟಡದ ಅಗತ್ಯವಿದೆ.

ಇದನ್ನು ಅರಿತ ಅಂದಿನ ಕುಲಪತಿ ಪ್ರೊ. ಪ್ರಮೋದ ಭೀ.ಗಾಯಿ 2ಸಾವಿರ ಚದರ ಅಡಿಗಳ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಗಿನ ಪ್ರಭಾರಿ ಕುಲಪತಿ ಪ್ರೊ.ಎ.ಎಸ್‌.ಶಿರಾಳಶೆಟ್ಟಿ ಅವರೂ ಸಾಕಷ್ಟು ಆಸಕ್ತಿ ತೋರಿದರೆ. ಆದರೆ, ಇನ್ನೂ ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬುದೇ ಬೇಸರದ ಸಂಗತಿ.

‘ಸತ್ತ ಪ್ರಾಣಿಗಳ ಚರ್ಮ ಸಂರಕ್ಷಿಸಿದರೆ ಅವುಗಳ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಸಂಗ್ರಹಾಲಯದಲ್ಲಿ ಆರೇಳು ದಶಕದ ಹಿಂದೆ ಸಾವನ್ನಪ್ಪಿದ ಪ್ರಾಣಿಗಳನ್ನು ಸಂರಕ್ಷಿಸಿಡಲಾಗಿದೆ. ಇದು ಶೈಕ್ಷಣಿಕವಾಗಿ ಪ್ರಯೋಜನಕಾರಿಯಾಗಿರುವ ಜೊತೆಗೆ ಅವುಗಳನ್ನು ನೈಜವಾಗಿ ಕಾಣುವ ಅವಕಾಶ ಒದಗಿಸಿದಂತಾಗಿದೆ. ಅರಣ್ಯ ಇಲಾಖೆ ಸಹಕಾರ ನೀಡಿದರೆ ಮತ್ತಷ್ಟು ಪ್ರಾಣಿಗಳನ್ನು ಈ ಸಂಗ್ರಹಾಲಯದಲ್ಲಿ ಇರಿಸಬಹುದು. ಅಲ್ಲದೆ, ಇನ್ನೊಂದು ವರ್ಷದಲ್ಲಿ ಹೊಸ ಕಟ್ಟಡಕ್ಕೆ ಸಂಗ್ರಹಾಲಯವನ್ನು ಸ್ಥಳಾಂತರಿಸುವುದರಿಂದ ಹೆಚ್ಚಿನ ಸ್ಥಳಾವಕಾಶವಾಗಲಿದೆ’ ಎಂದು ಕೆಸಿಡಿ ಪ್ರಾಣಿವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಎ.ಎಸ್‌. ಬೆಲ್ಲದ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT