ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ಮಥನಿಗೆ ವರುಷಕೊಂದು ಹೊಸತು ಜನ್ಮ

Published 23 ಮಾರ್ಚ್ 2024, 23:42 IST
Last Updated 23 ಮಾರ್ಚ್ 2024, 23:42 IST
ಅಕ್ಷರ ಗಾತ್ರ

‘ನನಗ ಗೊತ್ತಿದ್ದಂಗ ಮುನ್ನೂರು ವರ್ಷದ ಸಂಪ್ರದಾಯ ನೋಡ್ರಿ ಇದು. ಈ ಕಾಮಣ್ಣನ ಮುಖೋಟ (ಮುಖವಾಡ) ಏನದ.. ಮುನ್ನೂರು ವರ್ಷ ಹಳತು. ಅದರ ಹಿಂದಕ್ಕೂ ಮಾಡಿರಬಹುದು. ನಮಗದು ಗೊತ್ತಿಲ್ಲ. ನಮ್ಮಜ್ಜ, ಮುತ್ತಜ್ಜನೂ ಈ ಹಬ್ಬ ಮಾಡ್ಯಾರ. ನನ್ನ ಮೊಮ್ಮಕ್ಕಳೂ ಮಾಡ್ತಾರ. ಈಗ ಪಿಚಕಾರಿ ಹಿಡಕೊಂಡು ಆಡುವ ಮೊಮ್ಮಗ, ಮುಂದ ಇದೇ ಕಾಮಣ್ಣನ ಪೂಜಾ ಮಾಡ್ತಾನ. ಆರು ತೆಲಿಮಾರಿನ ಲೆಕ್ಕ ನಾನೇ ಹೇಳ್ತೀನ್ರಿ ’– ಹೀಗೆ ಬಸವರಾಜ ಕುಂದಗೋಳ ಅವರು ಮಾತು ಶುರು ಮಾಡಿದ್ರು.

ಹುಬ್ಬಳ್ಳಿಯ ಮೇದಾರ ಓಣಿಯ ಕರಿಯಮ್ಮ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಅವರು, ಕಾಮಣ್ಣನ ಪ್ರತಿಷ್ಠಾಪನೆ ಕತೆಯನ್ನು ಬಿಚ್ಚಿಟ್ಟರು....

ಶಿವರಾತ್ರಿಯ ನಂತರ ನೀಳ, ಸಬೂಳ ಬಂಬೂಗಳನ್ನು ಹುಡುಕಿ ತರಲಾಗುತ್ತದೆ. ನಂತರ ಎಳೆಎಳೆಗಳನ್ನು ಬಿಡಿಸಿದಂತೆ ಬಿಡಿಸಿ, ಮೊದಲು ದೊಡ್ಡ ಗಾತ್ರದ ಟೊಪ್ಪಿಗೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಟೊಪ್ಪಿಗೆ ಹೆಣೆಯುವುದೇ ಒಂದು ಕಲೆ. ಮೇಲ್ನೋಟಕ್ಕೆ ಚಾಪೆಯಂತೆ ಕಂಡರೂ ಇದರ ಮಡಿಕೆಗಳು ಚಾಪೆಗಿಂತಲೂ ಸಪೂರವಾಗಿರುತ್ತವೆ. 

ಸುಮಾರು 300 ವರ್ಷಗಳಷ್ಟು ಹಳೆಯದಾದ ಮನ್ಮಥನ ಮುಖೋಟ, ತಲೆಗೆ ಹೊಂದುವ ಟೋಪಿ ಸಿದ್ಧಪಡಿಸುತ್ತಾರೆ. ನಂತರದ ಕೆಲಸ ಮೂವತ್ತು ಅಡಿ ಎತ್ತರದ ಕಾಮಣ್ಣನ ಪ್ರತಿಷ್ಠಾಪನೆ. ಇದು ಹೋಳಿ ಹುಣ್ಣಿಮೆ ದಿವಸ ಆಗುತ್ತದೆ. ನಾಲ್ಕನೆಯ ದಿನದ ರಾತ್ರಿ ಮೇದಾರ ಓಣಿಯಲ್ಲಿ ಟ್ರಾಲಿಯಂಥ ಗಾಡಿ ಮೇಲೆ ಮೆರವಣಿಗೆ ಮಾಡಲಾಗುತ್ತದೆ. ಅಂದು ಮೆರವಣಿಗೆಯ ನಂತರ ಭವ್ಯಪೂಜೆಯನ್ನು ನೆರವೇರಿಸಲಾಗುತ್ತದೆ. ಅದಾದ ನಂತರ ಮುಖೋಟವನ್ನು ತೆಗೆದು ಪೆಟ್ಟಿಗೆಯಲ್ಲಿ ಮುಚ್ಚಿ, ಕರಿಯಮ್ಮನ ದೇಗುಲದ ಅಟ್ಟದಲ್ಲಿ ಮನ್ಮಥ ವಿಶ್ರಮಿಸುತ್ತಾನೆ. ಉಳಿದ ದಂಡವನ್ನು ದಹನ ಮಾಡಲಾಗುತ್ತದೆ. ರಂಗ ಪಂಚಮಿಯಂದು ಓಕುಳಿಯಾಡಿ ಸಂಭ್ರಮಿಸುತ್ತಾರೆ.

ಪುರಾಣ ಕತೆ

ವಸಂತ (ಮನ್ಮಥ) ನ ಆಗಮನದ ಹೊಸ್ತಿಲಿನಲ್ಲಿ ಬರುವ ಈ ಹಬ್ಬದ ಹಿಂದೆ ಪುರಾಣದ ಕತೆಯೂ ಇದೆ. ತಾರಕಾಸುರನ ಸಂಹರಿಸಲು, ಶಿವ–ಶಿವೆಯ ಸಮಾಗಮ ಆಗಬೇಕಿರುತ್ತದೆ. ಅವರ ಶಿಶುವಿನಿಂದಲೇ ತಾರಕಾಸುರನಿಗೆ ಮರಣ ಎಂಬ ಬ್ರಹ್ಮನ ವರದಾನವಿರುತ್ತದೆ. ಸಮಾಧಿ ಸ್ಥಿತಿಯಲ್ಲಿರುವ ಶಿವನನ್ನೂ, ತಪಸ್ಸಾಚರಿಸುತ್ತಿರುವ ಪಾರ್ವತಿಯ ಸಮಾಗಮಕ್ಕಾಗಿ ಮನ್ಮಥನ ಮನ ಒಲಿಸಲಾಗುತ್ತದೆ. ಮನ್ಮಥನ ಹೂ ಬಾಣದಿಂದಾಗಿ ಸಮಾಧಿಸ್ಥಿತಿಯಿಂದ ಎಚ್ಚರಗೊಳ್ಳುವ ಶಿವ, ಮೂರನೆ ಕಣ್ಣು ಬಿಟ್ಟು ಮನ್ಮಥನನ್ನು ಭಸ್ಮ ಮಾಡುತ್ತಾನೆ. ರತಿಯ ಪ್ರಾರ್ಥನೆಯಿಂದ, ಲೋಕಕ್ಕೆಲ್ಲ ಮೃತನಾದ ಮನ್ಮಥ, ಈ ಐದು ದಿನಗಳಲ್ಲಿ ರತಿಗೆ ಮಾತ್ರ ಸಶರೀರಿಯಾಗಿ ದಕ್ಕುತ್ತಾನೆ. ಉಳಿದವರಿಗೆಲ್ಲ ಅನಂಗನಾಗುತ್ತಾನೆ. 

ಈ ಕತೆಯ ಜಾಡು ಹಿಡಿದು ಮನ್ಮಥನನ್ನು ಇಷ್ಟಾರ್ಥ ಸಿದ್ಧಿಸುವ ದೈವವಾಗಿ ಇಲ್ಲಿಯ ಜನ ಕಾಣುತ್ತಾರೆ. ಆದರೆ ಯಾವುದೂ ಶಾಶ್ವತವಲ್ಲ ಎಂಬ ಎಚ್ಚರಿಕೆಯೂ ಇರುವಂತೆ, ಈ ದೇವನಿಗೆ ಹರಕೆ ಹೊರುವವರು ಅಲ್ಲಲ್ಲೇ ಪ್ರಸಾದದ ವ್ಯವಸ್ಥೆ ಮಾಡುತ್ತಾರೆ. ಅನ್ನದಾನಕ್ಕೆ ಹೊರತಾಗಿ ಖರ್ಚುವೆಚ್ಚಗಳನ್ನು ಹೊರುವ ಜವಾಬ್ದಾರಿಯನ್ನೂ ಪಡೆಯುತ್ತಾರೆ. ಐದು ದಿನಕ್ಕೆ ಆಗುವ ದೀಪದ ಎಣ್ಣೆ ಪೂರೈಕೆ, ಪ್ರಸಾದದ ವೆಚ್ಚ, ಪ್ರಸಾದ ವಿತರಣೆ, ಅಲಂಕಾರ, ಅಲಂಕಾರಕ್ಕೆ ಬೇಕಾಗುವ ಸರಕುಗಳ ಪೂರೈಕೆ–ಹೀಗೆ ವಿವಿಧ ಬಗೆಯ ಹರಕೆಗಳನ್ನು ಹೊರುತ್ತಾರೆ. 

ನವಲಗುಂದದ ರಾಮಲಿಂಗೇಶ್ವರ ದೇಗುಲದಲ್ಲಿ ಮಾತ್ರ ಹರಕೆ ಹೊತ್ತವರು, ತಮ್ಮ ಇಷ್ಟಾರ್ಥ ಸಿದ್ಧಿಸಿದಾಗ ಬೆಳ್ಳಿ ದ್ರವ್ಯಗಳನ್ನು ದೇಗುಲಕ್ಕೆ ಒಪ್ಪಿಸುವ ಸಂಪ್ರದಾಯವಿದೆ. ವಿದ್ಯಾಭ್ಯಾಸದಲ್ಲಿರುವವರಿಗೆ ಅಭಯ ಹಸ್ತ, ಕೋರ್ಟು ಕಚೇರಿ ಗಲಾಟೆಗಳಲ್ಲಿದ್ದರೆ ತಕ್ಕಡಿ, ಹೊಲ, ಜಮೀನು, ತಕರಾರಿದ್ದರೆ ಎತ್ತು, ಕುದುರೆ, ಮನೆಗಾಗಿ ಛತ್ರಿ, ಮಗುವಿಗಾಗಿ ತೊಟ್ಟಿಲು... ಹೀಗೆ ವಿವಿಧ ಬಗೆಯ ಹರಕೆಗಳನ್ನು ಹೊರುತ್ತಾರೆ. ಅವನ್ನು ಒಪ್ಪಿಸುತ್ತಾರೆ. 

ರಾಮಲಿಂಗೇಶ್ವರ ದೇಗುಲದಲ್ಲಿರುವ ಮನ್ಮಥ ಸಶರೀರ ರೂಪದಲ್ಲಿದ್ದಾನೆ. ಮಳೆ ನಕ್ಷತ್ರಗಳ ಆಧಾರದ ಮೇಲೆ ಅಷ್ಟೂ ಬಗೆಯ ಕಾಷ್ಠಗಳಿಂದ ಇದನ್ನು ನೂರಾರು ವರ್ಷಗಳ ಹಿಂದೆಯೇ ತಯಾರಿಸಲಾಗಿದೆ. ಆದರೆ  ತಲೆ ಹಿಂದಿರುವ ಎರಡು ರಂಧ್ರಗಳನ್ನು ಪೂರ್ಣಗೊಳಿಸುವಾಗಲೇ ಶಿಲ್ಪಿಯು ನಿಧನರಾಗುತ್ತಾರೆ. ಅವೆರಡು ಯಾವ ನಕ್ಷತ್ರಬಿಂದುಗಳು, ಯಾವ ಕಟ್ಟಿಗೆಯನ್ನು ಬಳಸಬೇಕು ಎಂಬುದು ತಿಳಿಯದೇ ಅಪೂರ್ಣವಾಗಿದೆ. ಪೂರ್ಣವಾಗಿದ್ದರೆ ಜೀವಕಳೆಯೇ ಬರುತ್ತಿತ್ತು ಎಂಬ ನಂಬಿಕೆ ಇಲ್ಲಿಯವರದ್ದು. ಈ ಪ್ರತಿಮೆಗೆ ಹಲವಾರು ಕಡೆ ರಂಧ್ರಗಳಿವೆ. ಗಾಳಿ ಸುಳಿಯುವ ಸದ್ದು ಕೇಳುತ್ತದೆ. ಆ ಶಿಲ್ಪಿಯು ಇದನ್ನು ಪರಿಪೂರ್ಣಗೊಳಿಸಿದ್ದರೆ ಅನಂಗದೈವ ಸಶರೀರವಾಗಿ ಅವತರಿಸಬಹುದು ಎಂದು ಹೇಳಲಾಗುತ್ತದೆ. ಇಲ್ಲಿ ಹೋಳಿ ಹುಣ್ಣಿಮೆ ಮತ್ತು ಯುಗಾದಿಯಂದು ಲಕ್ಷಾಂತರ ಜನರು ಬಂದು ದರ್ಶನ ಪಡೆಯುತ್ತಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಹೋಗುತ್ತಾರೆ. ಕೆಲವರು ಪಾದಯಾತ್ರೆಯಲ್ಲಿಯೂ ಬರುತ್ತಾರೆ. ಬರಿಗಾಲಿನಲ್ಲಿ ಬರುವ ಹರಕೆ ಹೊತ್ತಿರುತ್ತಾರೆ. 

ಓಣಿ ಓಣಿಗಳಲ್ಲಿ ರತಿ–ಮನ್ಮಥರನ್ನು ಪ್ರತಿಷ್ಠಾಪಿಸುವ ಪರಂಪರೆ ಈ ಭಾಗದಲ್ಲಿದೆ. ಮೊದಲೆಲ್ಲ ನುಗ್ಗೆಗಿಡದಲ್ಲಿ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದರು. ಇದೀಗ ಮಣ್ಣಿನಲ್ಲಿಯೂ ಮೂರ್ತಿಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ. ನೀಲಕಂಠ ಕಾಂಬಳೆ ಎಂಬ ಕಲಾವಿದರ ಮನೆಯಲ್ಲಿ ತಲೆತಲಾಂತರದಿಂದ ರತಿ–ಮನ್ಮಥರ ಪ್ರತಿಮೆಗಳನ್ನು ತಯಾರಿಸುವ, ಅಲಂಕರಿಸುವ  ಕೆಲಸವನ್ನು ನಿರ್ವಹಿಸಲಾಗುತ್ತದೆ. 

ಸಂಕ್ರಾಂತಿ ಮುಗಿದ ಕೂಡಲೆ ಕೆಲಸ ಆರಂಭವಾಗುತ್ತದೆ. ಇದೀಗ ಯಾರಾದರೂ ಕಾಷ್ಠಶಿಲ್ಪಗಳನ್ನು ಕೇಳಿದರಷ್ಟೇ ತಯಾರಿ ಮಾಡಿಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಮಣ್ಣಿನ ಮೂರ್ತಿಗಳನ್ನೇ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಕಾಷ್ಠಶಿಲ್ಪಗಳ ತಯಾರಿಗೆ ಪ್ರತಿದಿನ ಇಬ್ಬರಿಂದ ಮೂವರು ಐದಾರು ಗಂಟೆಗಳಷ್ಟು ಶ್ರಮಿಸಿದರೆ ಒಂದು, ಒಂದೂವರೆ ತಿಂಗಳಿಗೆ ಒಂದು ಜೋಡಿ ಪ್ರತಿಮೆಯನ್ನು ಸಿದ್ಧಪಡಿಸಬಹುದಾಗಿದೆ. 

‘ನುಗ್ಗೆ, ಸಾಗವಾನಿ ಮರಗಳಲ್ಲಿಯೂ ಈ ಕಲಾಕೃತಿಗಳನ್ನು ಸಿದ್ಧಪಡಿಸಲು ಕೇಳಿಕೊಳ್ಳುತ್ತಿದ್ದರು. ಒಮ್ಮೆ ಮಾಡಿದರೆ ನೂರಾರು ವರ್ಷ ಬಾಳಿಕೆ ಬರುತ್ತವೆ. ಆದರೆ ಇದೀಗ ಬೆಲೆ ಏರಿಕೆಯಿಂದಾಗಿಯೂ ಕಡಿಮೆ ಬೇಡಿಕೆ ಇದೆ. ಶೋಕಿಗಾಗಿ ಕೇಳುವವರೇ ಬಹಳ ಜನರಿದ್ದಾರೆ. ಅವರಿಗಾಗಿ ಯಾವಾಗಲಾದರೂ ಮಾಡಿಕೊಡುತ್ತೇವೆ. ಈ ನಡುವೆ ಕೇರಳ, ಮುಂಬೈಗಳಿಂದ ಇಂಥ ಪ್ರತಿಮೆಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ನೀಲಕಂಠ ಹೇಳುತ್ತಾರೆ.

ಫಲವಂತಿಕೆಯ ಪ್ರತಿರೂಪವೆಂದೇ ನಂಬಿರುವುದರಿಂದ ಮಕ್ಕಳಾಗದವರು, ಮದುವೆಯಾಗದವರು ವಿಶೇಷ ಹರಕೆ ಹೊರುತ್ತಾರೆ. ಹಾವೇರಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ, ಧಾರವಾಡದ ಪೇಟೆ ಬೀದಿಯಲ್ಲಿ ಕಾಮಣ್ಣನ ವೇಷಧರಿಸಿ ಕೂರುವ ಕಲಾವಿದರಿದ್ದಾರೆ. ಘನಗಂಭೀರ ರೂಪದಲ್ಲಿ ಕೂರುವ ಈ ಕಲಾವಿದರು ನಗುವಂತೆ, ಮುಗುಳ್ನಗುವಂತೆ ಮಾಡುವುದೇ ಸವಾಲು. ಅಷ್ಟನ್ನು ಮಾಡಿದರೆ ಅನೇಕ  ನಗದು ಬಹುಮಾನಗಳನ್ನೂ ಇರಿಸಿರುತ್ತಾರೆ. ಈ ವರೆಗೆ ಈ ಸವಾಲು ಗೆದ್ದವರು ಯಾರೂ ಇಲ್ಲವೆಂಬುದೇ ಸೋಜಿಗ. ಮನ್ಮಥನ ಮುಂದೆ ಅಳುವುದು, ಅತ್ತಂತೆ ಮಾಡುವುದು, ನಗುವುದು, ಕುಡಿದವರಂತೆ ಆಡುವುದು, ಮಂಗನಂತೆ ಮಾಡುವುದು, ಜೋಕರ್‌ಗಳಂತೆ ಕುಣಿಯುವುದು, ಅನೇಕ ಹಾಸ್ಯದ ಪ್ರಸಂಗ ಹೇಳುವುದು, ಏನೆಲ್ಲ ಮಂಗಾಟಗಳನ್ನು ಮಾಡುತ್ತಿರುತ್ತಾರೆ. ಆದರೆ ಮನ್ಮಥ ಮಾತ್ರ, ಗುರಿಯೊಂದೇ ಸತ್ಯ ಎಂಬಂಥ ಮುಖಭಾವದಲ್ಲಿ ಕುಳಿತಿರುತ್ತಾನೆ.

ಈ ಏಕಾಗ್ರ ಮನೋಭಾವ ಮನ್ಮಥ ತಾನು ಅನಂಗನಾಗುವ ಅಥವಾ ಅಳಿಯುವ ಸಾಧ್ಯತೆ ಇದ್ದಾಗಲೂ ದೇವಲೋಕದ ಮನುಕುಲದ ಉದ್ಧಾರಕ್ಕಾಗಿ ತಾನು ಮುನ್ನುಗ್ಗಿದ. ಹೀಗೆ ನಿರುದ್ವಿಗ್ನವಾಗಿರುವುದನ್ನು ಮನ್ಮಥ ಕಲಿಸುತ್ತಾನೆ. 

ಫಲವಂತಿಕೆಗಾಗಿ, ಸುಖ, ಆಸೆ, ತುಂಟತನ, ನಶ್ವರ ಇವುಗಳಿಗೆಲ್ಲ ಹೆಸರಾಗಿರುವ ಮನ್ಮಥ ಇಲ್ಲಿ ಜೀವನಪ್ರೀತಿಯ ಪ್ರತಿಮೆಯಾಗಿಯೂ ಕಾಣಿಸುತ್ತಾನೆ. ರತಿದೇವಿ ಬದ್ಧತೆಯ ಪ್ರತಿಮೆಯಾಗಿ. ರತಿ–ಮನ್ಮಥರಂತೆ ಬದುಕುವುದೆಂದರೆ ಸಮಾಜಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂಬ ಪಾಠ ಹೇಳುತ್ತವೆ. ತನ್ನ ಹಟಕ್ಕಾಗಿ ಹೋಳಿಗೆ ದಹನವಾಗುವ, ಯುಗಾದಿಗೆ ಮರುಹುಟ್ಟು ಪಡೆಯುವಂತೆ ಕೆಟ್ಟದ್ದನ್ನು ದಹಿಸಿ, ಹೊಸತನಕ್ಕಾಗಿ ಮರುಹುಟ್ಟು ಪಡೆಯಬೇಕು ಎಂಬಂತೆ ಆಚರಣೆಗಳು ಸಂಪನ್ನವಾಗುತ್ತವೆ.

ನುಗ್ಗೆ ಗಿಡವೂ, ಹುಣಸೇಬೀಜವೂ

ರತಿ–ಮನ್ಮಥರ ಕಾಷ್ಠಶಿಲ್ಪಕ್ಕೆ ನುಗ್ಗೆಗಿಡದ ಕಟ್ಟಿಗೆಯನ್ನು ಬಳಸುತ್ತಾರೆ. ಜೊತೆಗೆ ಹೊಸ ಹುಣಸೆಹಣ್ಣು ತಂದು, ಬೀಜ ಬೇರ್ಪಡಿಸಿ, ಬೀಜವನ್ನು ನೆನೆಸಿಡುತ್ತಾರೆ. ಅವು ತಮ್ಮ ಗಾತ್ರಕ್ಕಿಂತ ಹೆಚ್ಚು ಹಿಗ್ಗುತ್ತವೆ. ಅವನ್ನು ನೆರಳಿನಲ್ಲಿ ಒಣಗಿಸಿ, ಪುಡಿಯಾಗುವಂತೆ ಬೀಸಲು ನೀಡುತ್ತಾರೆ. ಈ ಪುಡಿಯನ್ನು ಗಂಜಿಯಂತೆ ಬೇಯಿಸಿ, ಮೂರ್ತಿಗೆ ಲೇಪಿಸುತ್ತಾರೆ.

ಪ್ರತಿ ವರ್ಷವೂ ಬಿಳಿಯುಡುಗೆಯ ಮನ್ಮಥನಿಗೆ ಕೆಂಪು ಅಥವಾ ಹಳದಿ ಬಣ್ಣವನ್ನು ಮುಖಕ್ಕೆ ಬಳಿಯುತ್ತಾರೆ. ರತಿದೇವಿಯತ್ತ ಪ್ರೀತಿಯಿಂದ ನೋಡುವ ಮನ್ಮಥನಿಗೆ ದೊಡ್ಡ ಕಂಠೀಹಾರ ಹಾಕುತ್ತಾರೆ. ತೀಡಿದ ಕ್ರಾಪು, ಅರಳುಕಂಗಳು, ಚೂಪು ಗಡ್ಡ, ತುಂಬಿದ ಕೆನ್ನೆಯ ಮನ್ಮಥ ಸುರಸುಂದರಾಂಗನಂತೆ ತೀಡಿರುತ್ತಾರೆ. ಕಾಲಿಗೆ ರುಳಿ ಎಂಬ ಆಭರಣವನ್ನೂ, ಕೈಗೆ ಕಡಗವನ್ನೂ ಧರಿಸಿರುತ್ತಾನೆ. ಮನ್ಮಥನೊಂದಿಗೆ ಬಿಳಿ ಬಣ್ಣದ ಕುಬಸ ಧರಿಸಿದ ರತಿದೇವಿ ಬೋರಮಾಳ ಸರ, ಪದಕದ ಸರದೊಂದಿಗೆ ಮಿಂಚುತ್ತಿರುತ್ತಾಳೆ.

ಡಡ್ಡಣ್ಣಕ್ಕ ಣಕ್ಕ ಣ್ಣಕ್ಕ...

 ಜಕ್ಕಣಕ್ಕ ಣಕ್ಕ ಣಕ್ಕ...

ಹಿಂಗೆ ಸದ್ದು ಕೇಳತೊಡಗಿದರೆ ಮನದೊಳಗೆ ಆತಂಕ ಮತ್ತು ಖುಷಿ ಎರಡೂ ಒಟ್ಟೊಟ್ಟಿಗೆ ಸಮ್ಮಿಳಿತವಾಗುತ್ತದೆ. ಆತಂಕ ಇದು ಪರೀಕ್ಷೆಯ ಸಮಯ. ಪರೀಕ್ಷೆ ಇದ್ದಾಗಲೇ ಈ ಮೋಜಿನ ಹಬ್ಬ ಹೋಳಿ ಬರುತ್ತದಲ್ಲ ಅಂತ. ಆದರೆ ಆ ಒತ್ತಡ ನಿರ್ವಹಣೆಗೆಂದೇ ಹೋಳಿ ಬರುತ್ತದೇನೋ ಎಂಬ ಖುಷಿ.

ಹುಬ್ಬಳ್ಳಿ–ಧಾರವಾಡ, ಹಾವೇರಿ– ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ದುಡಿ ಮಾರುವವರು ಶಿವರಾತ್ರಿಯ ನಂತರ ನೆರೆಯತೊಡಗುತ್ತಾರೆ. ಊರು ಪ್ರವೇಶಿಸುವ ಹೆದ್ದಾರಿಗಳಲ್ಲಿ, ಪ್ರಮುಖ ದೇಗುಲಗಳ ಮುಂದೆ ನೀಲಿ, ಕೆಂಪು ಬಣ್ಣದ ದುಡಿ, ಪುಟ್ಟ ಡೊಳ್ಳುಗಳು ಮಾರಾಟಕ್ಕೆ ಇಡುತ್ತಾರೆ. ಪ್ಲಾಸ್ಟಿಕ್‌ ಮತ್ತು ಚರ್ಮ ಎರಡೂ ಬಗೆಯ ವಾದ್ಯಗಳು ಮಾರಾಟಕ್ಕೆ ಲಭ್ಯ ಇರುತ್ತವೆ.

ಡಿಜೆ ಪೂರ್ವದ ಕಾಲದಲ್ಲಿ ಎಲ್ಲ ಮಕ್ಕಳೂ ದುಡಿ ಮತ್ತು ಡೊಳ್ಳುಗಳೊಂದಿಗೆ ಹೋಲಿಕಾ ದಹನ ಮಾಡುತ್ತಿದ್ದರು. ಈ ಸದ್ದು ನರನಾಡಿಗಳಲ್ಲಿರುವ ರೋಷ, ಉದ್ವೇಗ, ಆವೇಶಗಳನ್ನು ಆಚೆ ಹಾಕುವಂತೆ ಪ್ರೇರೇಪಿಸುತ್ತಿತ್ತು. ಹೋಲಿಕಾ ದಹನದ ಸಂದರ್ಭದಲ್ಲಿ ಮನಸಿನಿಂದಾಚೆ ಎಲ್ಲ ಕಶ್ಮಲವನ್ನೂ ಹೊರಹಾಕುವಂತೆ ಅವಾಚ್ಯ ಪದ, ಬೈಗುಳ ಬಳಸಬಹುದಿತ್ತು. ಅದಕ್ಕೆ ತಕ್ಕನಾಗಿ ಈ ದುಡಿ–ಡೊಳ್ಳು ವಾದ್ಯಗಳು ನಾವು ಬೈದದ್ದು ನಮಗೇ ಕೇಳದಷ್ಟು ಜೋರಾಗಿ ಸದ್ದು ಮಾಡುತ್ತಿದ್ದವು. ಈ ದಿನ ಬಾಯಿಯಿಂದಾಚೆ ಬಂದ ಪದಗಳು, ವರ್ಷೊಪ್ಪತ್ತಿನ ವರೆಗೆ ಮತ್ತೆ ತುಟಿ ತುದಿಗೆ ಬರುವಂತಿರುವುದಿಲ್ಲ. ಈಗ ಬೈಗುಳ, ಅವಾಚ್ಯ ಪದಗಳ ಬಳಕೆ ಕಡಿಮೆಯಾಗಿದೆ. ಡಿಜೆ ಸದ್ದಿಗೆ ಹೆಜ್ಜೆ ಹಾಕುವ ಯುವಜನ ಆ ಕೇಕೆ ಹಾಕುವುದರಲ್ಲಿ, ನರ್ತಿಸುವುದರಲ್ಲಿಯೇ ಮೈಮರೆಯುತ್ತಾರೆ. ಆದರೆ ಅಲೆಮಾರಿಗಳಿಗೆ ಪ್ರತಿಸಲವೂ ವ್ಯಾಪಾರಕ್ಕಂತೂ ಮೋಸ ಆಗುವುದಿಲ್ಲ.

ಗುಲಾಲೂ... ಸಕ್ಕರೆ ಸರವೂ..

ಐದು ವರ್ಷಗಳ ಒಳಗಿನ ಮಕ್ಕಳಿಗೆ ಬಣ್ಣವನ್ನು ಬಳಿಯುವಂತಿಲ್ಲ. ಹಿರಿಯ ಜೀವಗಳಿಗೂ ಅವರ ಇಷ್ಟದ ವಿರುದ್ಧ ಬಣ್ಣ ಬಳಿಯುವಂತಿಲ್ಲ. ಹಿರಿಯರಿಗೆ ವೀರತಿಲಕವಿರಿಸಿ, ಪಾದಕ್ಕೆ ಶರಣೆಂದು ಆಶೀರ್ವಾದ ಪಡೆಯಬೇಕು. ಹಿರಿಯರೂ ಒಂದಷ್ಟು ಹಣವನ್ನು ಆಶೀರ್ವಾದದ ರೂಪದಲ್ಲಿ ಈ ಮಕ್ಕಳಿಗೆ ನೀಡಬೇಕು. ಇನ್ನು ಐದುವರ್ಷದ ಒಳಗಿನ ಎಳೆಯ ಮಕ್ಕಳಿಗೆ ಬಣ್ಣ ಬಣ್ಣದ ಬತ್ತಾಸುಗಳಿರುವ ಸಕ್ಕರೆ ಸರವನ್ನು ಹಾಕಿ ಶುಭ ಕೋರಲಾಗುತ್ತದೆ. ದೀರ್ಘಾಯುಗಳಾಗಲಿ, ಸದೃಢಕಾಯವಾಗಲಿ ಎನ್ನುವುದು ಸಕ್ಕರೆ ಸರ ಹಾಕುವ ಆಶಯವಂತೆ.

ಮನ್ಮಥನ ಆಕರ್ಷಕ ಮುಖವಾಡ
ಮನ್ಮಥನ ಆಕರ್ಷಕ ಮುಖವಾಡ
ಧಾರವಾಡದ ಲಕಮಾಪುರದಲ್ಲಿ ಚಿಣ್ಣರು ಹಲಿಗೆ ಬಾರಿಸಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು
ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಲಕಮಾಪುರದಲ್ಲಿ ಚಿಣ್ಣರು ಹಲಿಗೆ ಬಾರಿಸಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು ಚಿತ್ರ: ಬಿ.ಎಂ. ಕೇದಾರನಾಥ
ಹುಬ್ಬಳ್ಳಿಯಲ್ಲಿರುವ ಮೂವತ್ತು ಅಡಿ ಎತ್ತರದ ಕಾಮದೇವರು ನೈವೇದ್ಯ ಸಲ್ಲಿಸಿ ಹರಕೆ ಒಪ್ಪಿಸುತ್ತಿರುವ ಭಕ್ತರು
ಹುಬ್ಬಳ್ಳಿಯಲ್ಲಿರುವ ಮೂವತ್ತು ಅಡಿ ಎತ್ತರದ ಕಾಮದೇವರು ನೈವೇದ್ಯ ಸಲ್ಲಿಸಿ ಹರಕೆ ಒಪ್ಪಿಸುತ್ತಿರುವ ಭಕ್ತರು
ಬೃಹದಾಕಾರದ ಮನ್ಮಥನನ್ನು ತಯಾರಿಸುತ್ತಿರುವ ಹುಬ್ಬಳ್ಳಿಯ ಮೇದಾರ ಓಣಿಯ ಕಲಾವಿದರು
ಬೃಹದಾಕಾರದ ಮನ್ಮಥನನ್ನು ತಯಾರಿಸುತ್ತಿರುವ ಹುಬ್ಬಳ್ಳಿಯ ಮೇದಾರ ಓಣಿಯ ಕಲಾವಿದರು
ರತಿ ಮನ್ಮಥರ ಮೂರ್ತಿಗಳ ಅಲಂಕಾರದಲ್ಲಿ ನಿರತರಾಗಿರುವ ನೀಲಕಂಠ ಕಾಂಬಳೆ ಅವರು
ರತಿ ಮನ್ಮಥರ ಮೂರ್ತಿಗಳ ಅಲಂಕಾರದಲ್ಲಿ ನಿರತರಾಗಿರುವ ನೀಲಕಂಠ ಕಾಂಬಳೆ ಅವರು
ನುಗ್ಗೆ ಗಿಡವೂ ಹುಣಸೇಬೀಜವೂ
ರತಿ–ಮನ್ಮಥರ ಕಾಷ್ಠಶಿಲ್ಪಕ್ಕೆ ನುಗ್ಗೆಗಿಡದ ಕಟ್ಟಿಗೆಯನ್ನು ಬಳಸುತ್ತಾರೆ. ಜೊತೆಗೆ ಹೊಸ ಹುಣಸೆಹಣ್ಣು ತಂದು ಬೀಜ ಬೇರ್ಪಡಿಸಿ ಬೀಜವನ್ನು ನೆನೆಸಿಡುತ್ತಾರೆ. ಅವು ತಮ್ಮ ಗಾತ್ರಕ್ಕಿಂತ ಹೆಚ್ಚು ಹಿಗ್ಗುತ್ತವೆ. ಅವನ್ನು ನೆರಳಿನಲ್ಲಿ ಒಣಗಿಸಿ ಪುಡಿಯಾಗುವಂತೆ ಬೀಸಲು ನೀಡುತ್ತಾರೆ. ಈ ಪುಡಿಯನ್ನು ಗಂಜಿಯಂತೆ ಬೇಯಿಸಿ ಮೂರ್ತಿಗೆ ಲೇಪಿಸುತ್ತಾರೆ. ಪ್ರತಿ ವರ್ಷವೂ ಬಿಳಿಯುಡುಗೆಯ ಮನ್ಮಥನಿಗೆ ಕೆಂಪು ಅಥವಾ ಹಳದಿ ಬಣ್ಣವನ್ನು ಮುಖಕ್ಕೆ ಬಳಿಯುತ್ತಾರೆ. ರತಿದೇವಿಯತ್ತ ಪ್ರೀತಿಯಿಂದ ನೋಡುವ ಮನ್ಮಥನಿಗೆ ದೊಡ್ಡ ಕಂಠೀಹಾರ ಹಾಕುತ್ತಾರೆ. ತೀಡಿದ ಕ್ರಾಪು ಅರಳುಕಂಗಳು ಚೂಪು ಗಡ್ಡ ತುಂಬಿದ ಕೆನ್ನೆಯ ಮನ್ಮಥ ಸುರಸುಂದರಾಂಗನಂತೆ ತೀಡಿರುತ್ತಾರೆ. ಕಾಲಿಗೆ ರುಳಿ ಎಂಬ ಆಭರಣವನ್ನೂ ಕೈಗೆ ಕಡಗವನ್ನೂ ಧರಿಸಿರುತ್ತಾನೆ. ಮನ್ಮಥನೊಂದಿಗೆ ಬಿಳಿ ಬಣ್ಣದ ಕುಬಸ ಧರಿಸಿದ ರತಿದೇವಿ ಬೋರಮಾಳ ಸರ ಪದಕದ ಸರದೊಂದಿಗೆ ಮಿಂಚುತ್ತಿರುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT