ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿನಿಮಾದಲ್ಲೇ ಕಲಿಕೆ ಹೆಚ್ಚು’

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಡೆಲೆಂಗ್ ದಿನಗಳು...
ಮಾಡೆಲಿಂಗ್‌ನ ಅವಧಿ ಸಣ್ಣದಾಗಿತ್ತು. ಅಲ್ಲಿ ಕಲಿಯುವುದು ಹೆಚ್ಚೇನೂ ಇರಲಿಲ್ಲ ಅನಿಸಿತು. ಮಾಡೆಲಿಂಗ್‌ನ ಅಲ್ಪಾವಧಿಯಲ್ಲೇ ರೇಮಂಡ್, ತ್ರಿಭುವನ್ ದಾಸ್, ಏಷ್ಯನ್ ಪೇಂಟ್ಸ್‌ ಜಾಹೀರಾತುಗಳಿಗೆ ರೂಪದರ್ಶಿಯಾಗಿದ್ದೆ. ನನಗೆ ನಟನೆಯಲ್ಲೇ ಹೆಚ್ಚು ಆಸಕ್ತಿ ಇತ್ತು. ಹಾಗಾಗಿ ನಟನೆಯತ್ತ ಮುಖ ಮಾಡಿದೆ. ಸಿನಿಮಾದಲ್ಲಿ ಕಲಿಯಲು ಬಹಳಷ್ಟು ಅವಕಾಶಗಳಿವೆ.

ಅಭಿನಯಕ್ಕೆ ತೆರೆದುಕೊಂಡಿದ್ದು...
ಮುಂಬೈನಲ್ಲಿದ್ದಾಗ ಸ್ನೇಹಿತ, ನಟ ಕುಶಾಲ್ ಟಂಡನ್ ಜತೆಗಿದ್ದೆ. ಅವನ ಜತೆಗೇ ನಟನಾ ಬದುಕು ಆರಂಭಿಸಿದೆ. ಇಬ್ಬರೂ ಒಟ್ಟಿಗೆ ಆಡಿಷನ್‌ಗಳಿಗೆ ಹೋಗ್ತಾ ಇದ್ವಿ. ಸಿನಿಮಾದಲ್ಲೇ ಅಭಿಯಿಸಬೇಕು ಎಂದುಕೊಂಡು ಬಂದ ನನಗೆ ಮೊದಲು ಆಫರ್ ಸಿಕ್ಕಿದ್ದು ಕಿರುತೆರೆಯಿಂದ. ’ಜರ್ನಿ ನಂ. 10’ ಅನ್ನುವ ಕಾರ್ಯಕ್ರಮ ನಡೆಸಿಕೊಡಲು ಕೇಳಿದಾಗ ಮೊದಲು ಒಲ್ಲೆ ಎಂದಿದ್ದೆ. ಆದರೆ, ಕಾರ್ಯಕ್ರಮದ ವಿವರ ಕೇಳಿದ ಮೇಲೆ ಒಪ್ಪಿಕೊಂಡೆ. ಮುಂದೆ ಅದೇ ಕಾರ್ಯಕ್ರಮದಿಂದ ನಾನು ಜನಪ್ರಿಯನಾದೆ. ವೀಕ್ಷಕರೂ ನನ್ನನ್ನೂ ಗುರುತಿಸುವಂತಾಯಿತು. ಅಲ್ಲಿಂದ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಸಲು ಆರಂಭಿಸಿದೆ. ‘ರೋರ್‘ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ನಂತರ ಮೂರು–ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದೆ. ಅದರಲ್ಲಿ ಒಂದೂ ಶುರುವಾಗಲಿಲ್ಲ. ಎರಡು ವರ್ಷದ ನಂತರ ‘ಅಕ್ಸರ್–2’ ಸಿನಿಮಾ ಮಾಡಿದ್ದೇನೆ.

‘ಅಕ್ಸರ್–2‘ನಲ್ಲಿ ನಿಮ್ಮ ಪಾತ್ರ...
‘ಅಕ್ಸರ್‌‘ ಮೊದಲ ಭಾಗದಲ್ಲಿ ನಟ ಇಮ್ರಾನ್ ಹಶ್ಮಿ ಪಾತ್ರ ಹೇಗಿತ್ತೋ ಇಲ್ಲೂ ನನ್ನ ಪಾತ್ರ ಹಾಗೇ ಇದೆ. ಜರೀನ್ ಖಾನ್ ಜತೆ ಅಭಿನಯಿಸುವಾಗ ತುಸು ನರ್ವಸ್ ಆಗಿದ್ದೆ ಅಷ್ಟೇ. ಸಿನಿಮಾದ ಟೀಸರ್‌ ನೋಡಿದವರೆಗೆ ಇದು ‘ಸ್ಟೀಮಿ’ ಸಿನಿಮಾ ಅನಿಸಬಹುದು. ಆದರೆ, ಇದು ಪಕ್ಕಾ ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ. ನೋಡಿ... ಭಾರತೀಯರ ಪ್ರೇಕ್ಷಕರನ್ನು ಆಕರ್ಷಿಸಲು ಖಾನ್‌ಗಳು ಇರಬೇಕು. ಇಲ್ಲವೇ ಡಾನ್ಸ್‌, ಹಾಡು ಮತ್ತು ರೊಮ್ಯಾಂಟಿಕ್ ದೃಶ್ಯಗಳಿರಬೇಕು. ಹಾಗಾಗಿ ನಾವೂ ಅದನ್ನೇ ಕೊಟ್ಟಿದ್ದೇವೆ. ಇದರಲ್ಲಿ ತಪ್ಪೇನಿಲ್ಲ.

ಸವಾಲೆನಿಸುವ ಪಾತ್ರಗಳು...
ಅಂಗವಿಕಲರು ಹಾಗೂ ಗಂಭೀರ ಕಾಯಿಲೆಗಳಿಂದ ನರಳುವವರ ಪಾತ್ರಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲು.

ಚಿತ್ರೀಕರಣದ ಅನುಭವ...
ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿವೆ. ಅದರಲ್ಲಿ ಎರಡು ಹಾಡುಗಳಲ್ಲಿ ನಾನು ಮತ್ತು ಜರೀನ್ ಎದ್ದು ಕಾಣುತ್ತೇವೆ. ಹಾಡಿನ ಚಿತ್ರೀಕರಣಕ್ಕಾಗಿ ಮುಂಜಾನೆ ಐದು ಗಂಟೆಗೆ ಏಳಬೇಕಿತ್ತು. ಮಾರಿಷಸ್‌ನ ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಎಷ್ಟೇ ಬೇಗ ಶೂಟಿಂಗ್ ಆರಂಭಿಸಿದರೂ ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಒಂದೆಡೆ ಬಿಸಿಲು, ಇನ್ನೊಂದೆಡೆ ಸಮುದ್ರದಿಂದ ಬರುತ್ತಿರುವ ಅಲೆಗಳು. ಅದರ ನಡುವೆ ಡಾನ್ಸ್ ಮಾಡುತ್ತಲೇ ಲಿಪ್ ಸಿಂಕ್ ಮಾಡಬೇಕಿತ್ತು. ಇದು ನಿಜಕ್ಕೂ ಕಷ್ಟದ ವಿಷಯ. ನಿಧಾನವಾಗಿ ರೂಢಿಯಾಯಿತು. ಹಾಡುಗಳ ಚಿತ್ರೀಕರಣ ಮಾಡಿದ್ದು ಶಬೀನಾ ಅವರಂತೂ ತುಂಬಾ ಶಿಸ್ತಿನ ಮನುಷ್ಯ. ಸ್ವಲ್ಪ ತಪ್ಪಿದರೂ ಸಿಟ್ಟಾಗುತ್ತಿದ್ದರು. ಆದರೂ ಹಾಡುಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆವು.

ಫಿಟ್‌ನೆಸ್ ಗುಟ್ಟು...
ಜಿಮ್‌ಗೆ ಹೋದರೆ ಮಾತ್ರ ದೇಹ ಫಿಟ್‌ ಆಗಿರುತ್ತೆ ಅನ್ನೋದು ಸುಳ್ಳು. ಮನೆಯಲ್ಲಿರಲಿ, ಹೊರಗಿರಲಿ ನಿತ್ಯ ಜೀವನದಲ್ಲಿ ದೈಹಿಕ ಕಸರತ್ತು ಮಾಡೋದು ಅತ್ಯಗತ್ಯ. ನಾನಂತೂ ನನ್ನ ಕೆಲಸಗಳಿಗೆ ಮತ್ತೊಬ್ಬರ ಮೇಲೆ ಅವಲಂಬಿತ ಆಗೋದಿಲ್ಲ. ನನ್ನ ಕೆಲಸಗಳನ್ನೆಲ್ಲಾ ನಾನೇ ಮಾಡಿಕೊಳ್ಳುವೆ. ಬೈಕ್ ತೊಳೆಯೋದು, ಬಟ್ಟೆ ಒಗೆದುಕೊಳ್ಳುವುದು, ಮನೆ ಸ್ವಚ್ಛಗೊಳಿಸುವುದು ಈ ಕೆಲಸಗಳನ್ನು ಮಾಡುವ ಮೂಲಕ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಎರಡು ಕಿ.ಮೀ. ಹೋಗಬೇಕೆಂದರೂ ನಡೆದೇ ಹೋಗುತ್ತೇನೆ.

ಹೊಟ್ಟೆ ಹಸಿದಾಗ ಮಾತ್ರ ತಿನ್ನುವೆ. ಯಾರು ಎಷ್ಟೇ ಒತ್ತಾಯಿಸಿದರೂ ಹಸಿವು ಇಲ್ಲದಿದ್ದರೆ ತಿನ್ನುವುದಿಲ್ಲ. ‘ಸೋಷಿಯಲ್ ಈಟಿಂಗ್’ ಮಾಡೋದಿಲ್ಲ. ರುಚಿಯಾಗಿದೆ ಅಂತ ಸಿಕ್ಕಿದ್ದನ್ನೆಲ್ಲಾ ತಿನ್ನೋದಿಲ್ಲ.

ನಿಮ್ಮ ಮುಂದಿನ ಯೋಜನೆಗಳು...
2017ರಲ್ಲಿ ಅಡ್ವೆಂಚರ್ ಟ್ರಿಪ್‌ಗಳನ್ನು ಮಾಡಬೇಕು. ಅಂತೆಯೇ ಕಿರುಚಿತ್ರಗಳನ್ನು ನಿರ್ಮಿಸಬೇಕು ಎನ್ನುವ ಆಸೆ ಇದೆ.

ಜೀವನ ಎಂಜಾಯ್ ಮಾಡಿ...
ನಮಗೆ 40 ವರ್ಷ ಆದ ನಂತರವೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಬಹುದು. ಆದರೆ, ಸಾಹಸ ಪ್ರವೃತ್ತಿಯನ್ನು ರೂಢಿಸಿಕೊಳ್ಳಲಾಗದು. ನನ್ನದು ಮೂಲತಃ ಸಾಹಸ ಮನೋಭಾವ. ವಯಸ್ಸಿದ್ದಾಗಲೇ ಜೀವನವನ್ನು ಎಂಜಾಯ್ ಮಾಡಿಬಿಡಬೇಕು ಎನ್ನುವುದು ನನ್ನ ಜೀವನ ಮಂತ್ರ.
ಅಭಿನವ್ ಶುಕ್ಲಾ, ಬಾಲಿವುಡ್ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT