ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹಾಸ್ಯ, ಪ್ರತಿರೋಧ, ಸ್ವೀಕಾರ

Last Updated 11 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಅಪ್ಪಟ ದೇಶಭಕ್ತ ಸಂತನ ಬಗ್ಗೆ ಹೀಗೆ ಹೇಳುತ್ತಿದ್ದರು `ಸ್ವಾಮಿ ವಿವೇಕಾನಂದರು ಹಿಂದುತ್ವ ಮತ್ತು ಭಾರತವನ್ನು ಸಂರಕ್ಷಿಸಿದರು. ಅವರಿಲ್ಲದಿದ್ದರೆ ನಾವು ನಮ್ಮ ಧರ್ಮವನ್ನೇ ಕಳೆದುಕೊಳ್ಳುತ್ತಿದ್ದೆವು.
 
ಅಷ್ಟೇ ಅಲ್ಲ ಸ್ವಾತಂತ್ರ್ಯವನ್ನು ಗಳಿಸಲು ಸಹ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿ ಇರಬೇಕಾಗುತ್ತದೆ. ವಿವೇಕಾನಂದರಿಂದ ನಾವು ಪಡೆದುಕೊಂಡಿರುವ ಇಂತಹ ಅಮೂಲ್ಯವಾದುದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಅವರ ನಂಬಿಕೆ, ಧೈರ್ಯ, ಶೌರ್ಯ ಮತ್ತು ವಿವೇಕ ಸದಾ ನಮಗೆ ಸ್ಫೂರ್ತಿದಾಯಕವಾಗಿರಲಿ~

ಟಿ.ಎಸ್.ಅವಿನಾಶಿಲಿಂಗಂ ಅವರಿಗೆ ಮಹಾತ್ಮ ಗಾಂಧಿ 1941ರ ಜುಲೈ 22ರಂದು ಬರೆದ ಪತ್ರದಲ್ಲಿ `ಖಚಿತವಾಗಿಯೂ ಸ್ವಾಮಿ ವಿವೇಕಾನಂದರ ಬರಹಗಳಿಗೆ ಯಾರದೇ ಪೀಠಿಕೆಯ ಅಗತ್ಯವಿಲ್ಲ. ಅವುಗಳಿಗೆ ತನ್ನದೇ ಆದ ತೀವ್ರ ಆಕರ್ಷಕ ಶಕ್ತಿ ಇದೆ~ ಎಂದು ಹೇಳಿದ್ದರು. ವಿವೇಕಾನಂದರ ಬರಹಗಳನ್ನು ಓದಿದ ಯಾರೇ ಆಗಲಿ, ರಾಷ್ಟ್ರ ಪುನರ್ ನಿರ್ಮಾಣದ ಬಗ್ಗೆ ಪ್ರೇರಣೆ ಪಡೆಯದೇ ಇರಲು ಸಾಧ್ಯವಿರಲಿಲ್ಲ.

ನೇತಾಜಿ ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಹಲವು ಯುವ ಸ್ವಾತಂತ್ರ್ಯ ಹೋರಾಟಗಾರರು ಸ್ಫೂರ್ತಿಗೊಂಡಿದ್ದು ವಿವೇಕಾನಂದರ ಬರವಣಿಗೆಯಿಂದಲೇ. ಅಷ್ಟೇ ಅಲ್ಲ ಈಗಿನ ಪೀಳಿಗೆಯ ಅನೇಕರು ಸಹ ಅವರ ಸಂದೇಶಗಳ ಪ್ರಚಾರಕ್ಕಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿದ್ದಾರೆ.

`ಜೀವನ ಅಲ್ಪಾವಧಿಯದು, ಮಹತ್ವದ ಗುರಿ ಸಾಧನೆಗಾಗಿ ಅದನ್ನು ಮೀಸಲಿಡಿ~ ಎಂದು ಸ್ವಾಮೀಜಿ ಹೇಳಿದ್ದರು. ಅವರ ಇಂತಹ ಪ್ರಬಲ ಸ್ಫೂರ್ತಿದಾಯಕ ಹೇಳಿಕೆಗಳು ನಾವು ಕಾರ್ಯಪ್ರವೃತ್ತರಾಗುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಸಮಾಜದ ಸಂಕೀರ್ಣತೆಗಳು ಹಾಗೂ ನಮ್ಮ ಕೆಲಸಕ್ಕೆ ಸಮಾಜ ತೋರಿಸುವ ಪ್ರತಿಸ್ಪಂದನವನ್ನು ನಾವು ಅರ್ಥ ಮಾಡಿಕೊಂಡ ನಂತರವಷ್ಟೇ ವಾಸ್ತವದ ಅರಿವು ನಮಗಾಗುತ್ತದೆ.

ಅಂತಹ ಒಂದು ಜಟಿಲ ಸನ್ನಿವೇಶದಲ್ಲೇ `ಎಲ್ಲ ಒಳ್ಳೆಯ ಕೆಲಸಗಳೂ ಮೂರು ಅವಸ್ಥೆಗಳನ್ನು ದಾಟಬೇಕು. ಅವೆಂದರೆ ಅಪಹಾಸ್ಯ, ಪ್ರತಿರೋಧ ಹಾಗೂ ಕಟ್ಟಕಡೆಗೆ ಸ್ವೀಕಾರ~ ಎಂಬ ವಿವೇಕಾನಂದರ ಅತ್ಯಂತ ಪ್ರಾಯೋಗಿಕವಾದ ಹೇಳಿಕೆಯೊಂದು ನನ್ನ ನೆರವಿಗೆ ಬಂದಿತು.
ನನಗೆ ಇಂತಹ ಸ್ಫೂರ್ತಿ ಮೂಡಿದ್ದು ನನ್ನ 19ನೇ ವಯಸ್ಸಿನಲ್ಲಿ; ಅದರ ಫಲವಾಗಿ ಸ್ವಾಮಿ ವಿವೇಕಾನಂದ ಯುವ ಆಂದೋಲನವನ್ನು ನಾನು ಸ್ಥಾಪಿಸಿದೆ.
 
ಏನನ್ನು ಮಾಡಬೇಕು ಎಂದುಕೊಳ್ಳುತ್ತೇವೋ ಅದನ್ನು ಮಾಡಬಹುದು ಎಂಬ ನಂಬಿಕೆ ನನ್ನಲ್ಲಿ ಬಲವಾಗಿ ಬೇರೂರಿದ್ದು ಆ ಸಂದರ್ಭದಲ್ಲೇ. ಮೈಸೂರಿಗೆ ಸಮೀಪದ ಹಳ್ಳಿಯೊಂದರಲ್ಲಿ ವಾರದ ಔಷಧಾಲಯವೊಂದನ್ನು ನಡೆಸುತ್ತಿದ್ದ ನಾವು, ಅದರ ಸಲುವಾಗಿ ಪ್ರತಿ ಭಾನುವಾರ ಅಲ್ಲಿಗೆ ಹೋಗುತ್ತಿದ್ದೆವು.

ನನ್ನ ಈ ಕಾರ್ಯವನ್ನು ಸ್ನೇಹಿತರು ಮತ್ತು ಹಿತೈಷಿಗಳು ತುಂಬು ಹೃದಯದಿಂದ ಬೆಂಬಲಿಸುವರೆಂದು ನಾನು ನಿರೀಕ್ಷಿಸಿದ್ದೆ. ಆದರೆ ಅದಕ್ಕೆ ಬದಲಾಗಿ ಅವರಿಂದ ನನಗೆ ಸಿಕ್ಕ ಬಳುವಳಿ ಅಪಹಾಸ್ಯ. ಜನ ನಮ್ಮ ಕಾರ್ಯದ ಮೇಲೆ ಎಲ್ಲ ಬಗೆಯ ಸ್ವಾರ್ಥದ ಆರೋಪಗಳನ್ನೂ ಹೊರಿಸಿದರು.

ನಾವು ಔಷಧಿ ಪೆಟ್ಟಿಗೆಯೊಂದಿಗೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಅನ್ನು ಬಿಟ್ಟು ಗ್ರಾಮೀಣ ಔಷಧಾಲಯದತ್ತ ತೆರಳುತ್ತಿದ್ದಂತೆಯೇ ಅವರಿಗೆ ನಾವು ಗೇಲಿಯ ವಸ್ತುಗಳಾದೆವು. ಇಂತಹ ಸನ್ನಿವೇಶದಲ್ಲಿ ಗಾಳಿ ತೆಗೆದ ಬಲೂನಿನಂತೆ ನಮ್ಮ ಉತ್ಸಾಹ ಕುಗ್ಗಿಹೋಗುವ ಎಲ್ಲ ಸಾಧ್ಯತೆಯೂ ಇತ್ತು.

ಹಲವು ವರ್ಷಗಳ ಬಳಿಕ ನಮ್ಮ ಕೆಲಸ ವೇಗ ಪಡೆದುಕೊಂಡಿತು. ಆ ಸಂದರ್ಭದಲ್ಲಿ ನಾವು ನೆಲೆಸಿದ್ದ ಬುಡಕಟ್ಟು ಪ್ರದೇಶದಲ್ಲಿ ನಮಗೆ ಸಾಕಷ್ಟು ಪ್ರತಿರೋಧ  ಎದುರಾಯಿತು. ಸರ್ಕಾರದಲ್ಲಿ, ಸರ್ಕಾರೇತರ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ನಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೆವೋ ಆ ಸಮುದಾಯದ ಒಳಗೇ ನಮ್ಮ ಇರುವಿಕೆಯನ್ನು ಕಿರಿಕಿರಿ ಎಂದು ಭಾವಿಸಿದ್ದ ಸ್ವಾರ್ಥ ಶಕ್ತಿಗಳು ಇದ್ದವು.
 
ನಮ್ಮನ್ನು ದೂರ ಇಡಲು ಏನೇನು ಸಾಧ್ಯವೋ ಅವೆಲ್ಲವನ್ನೂ ಅವರು ಮಾಡಿದರು. ನಮ್ಮ ಬಗ್ಗೆ ಅಪಪ್ರಚಾರ, ಬಂಧನ, ಹಲ್ಲೆ ಮಾಡುವ ಬೆದರಿಕೆಯವರೆಗೆ ಎಲ್ಲವನ್ನೂ ಮಾಡಿದರಾದರೂ ನಾವು ಮಾತ್ರ ವಿಚಲಿತರಾಗಲಿಲ್ಲ. ಅಂತಿಮವಾಗಿ ಎದುರಾಳಿಗಳು ಸೋಲೊಪ್ಪಿಕೊಳ್ಳುವುದರೊಂದಿಗೆ ನಮ್ಮ ಸಂಕಲ್ಪ ಇನ್ನಷ್ಟು ಗಟ್ಟಿಯಾಯಿತು. ಏನೇ ಆದರೂ ಶೋಷಕರು ತಮ್ಮ ಶೋಷಣೆ ಬಯಲಾಗುವುದನ್ನು ಇಚ್ಛಿಸುವುದಿಲ್ಲ.

ಕಾಲಕ್ರಮೇಣ ನಮ್ಮ ಕಾರ್ಯಕ್ಕೆ ಬೆಂಬಲ ಹೆಚ್ಚಾಗುತ್ತಿದ್ದಂತೆಯೇ ಜನರ ಮನೋಧೋರಣೆಗಳೂ ಬದಲಾಗಿದ್ದು ನಮ್ಮ ಗಮನಕ್ಕೆ ಬಂದಿತು. ಇಂದು ನಮ್ಮ ಕೆಲಸಕ್ಕಾಗಿ ನಮಗೆ ಗೌರವ, ಮೆಚ್ಚುಗೆ ಎಲ್ಲವೂ ಸಿಗುತ್ತಿದೆ. ಅಂದರೆ ವಿವೇಕಾನಂದರು ಬರೆದಿರುವಂತೆ ನಮ್ಮ ಕಾರ್ಯ ಈಗ ಸಮಾಜದಿಂದ ಸ್ವೀಕೃತವಾಗಿದೆ.

ಸ್ವಾಮೀಜಿ ಹೇಳಿಕೆಯಲ್ಲಿ ನನಗೀಗ ಹೊಸ ಅರ್ಥ ಕಂಡುಬರುತ್ತಿದೆ. ನಾವು ಯಾವುದೇ ಕಾರ್ಯ ಕೈಗೊಂಡಾಗ ಅಪಹಾಸ್ಯ, ಪ್ರತಿರೋಧ, ಸಮಾಜದ ಸ್ವೀಕೃತಿ ಅಥವಾ ಇನ್ಯಾವುದೇ ಬಾಹ್ಯ ಅಂಶ ಮುಖ್ಯವಲ್ಲ ಎಂಬುದು ಅರ್ಥವಾಗುತ್ತಿದೆ. ಸ್ವಾಮೀಜಿ ಹೇಳಿದ್ದರಲ್ಲಿ ಮಹತ್ವದ ಅರ್ಥವೇ ಅಡಗಿದೆ.

ಹೊರ ಜಗತ್ತಿನಿಂದ ನಾವು ವಿಚಲಿತರಾಗುವುದು ಸುಲಭ, ಆದರೆ ನಿಜವಾಗಿಯೂ ನಾವು ಹೇಗೆ ಕೆಲಸ ಮಾಡುತ್ತೇವೆ ಹಾಗೂ ನಮ್ಮ ಕೆಲಸದ ಬಗ್ಗೆ, ನಮ್ಮ ಬಗ್ಗೆ ನಾವು ಏನು ಅಂದುಕೊಳ್ಳುತ್ತೇವೆ ಎಂಬುದು ಮುಖ್ಯ. ನಮ್ಮನ್ನು ನಾವೇ ಅಪಹಾಸ್ಯ ಮಾಡಿಕೊಂಡು ನಮ್ಮ ಮನಸ್ಸಿನೊಳಗೇ ನಮ್ಮ ಆದರ್ಶಗಳಿಗೆ ಪ್ರತಿರೋಧವನ್ನು ಸೃಷ್ಟಿಸಿಕೊಳ್ಳುವುದು ಅತ್ಯಂತ ಸುಲಭ. ಪ್ರತಿರೋಧ ಎನ್ನುವುದು ಅತ್ಯಂತ ಸೂಕ್ಷ್ಮವಾದ ಸಂಗತಿ.

ನಾವು ನಿಯಂತ್ರಣ ಸಾಧಿಸಬೇಕು, ಹೆಸರು ಗಳಿಸಬೇಕು ಎಂಬಿತ್ಯಾದಿ ಅಹಂಗಳ ರೂಪದಲ್ಲಿಯೂ ಅದು ತಲೆ ಎತ್ತಬಹುದು. ನಮ್ಮ ಬಗ್ಗೆ ನಾವೇ ಅಧಿಕ ಸಾಮರ್ಥ್ಯದ ಸಾಧನಗಳು ಎಂಬ ಭಾವನೆ ಮೂಡಲು ಸಾಧ್ಯವಾದಾಗ ನಮ್ಮಲ್ಲಿ ಸ್ವೀಕಾರಾರ್ಹ ಭಾವನೆ ಮೂಡಿ, ಎಲ್ಲವನ್ನೂ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT