ಮರ್ಸಿಡೆಸ್ ಬೆಂಜ್ ವಾಹನವೆಂದರೆ ಅರ್ಧ ಕೋಟಿ ರೂಪಾಯಿ ಇದ್ದರೆ ಮಾತ್ರ ಶೋರೂಂ ಬಳಿ ತೆರಳಬೇಕು ಎನ್ನುವ ಮಾತನ್ನು ಸುಳ್ಳು ಮಾಡುವಂತೆ ತನ್ನ ಬೆಲೆಯನ್ನು ₹40 ಲಕ್ಷಕ್ಕಿಂತ ಕೆಳಗೆ ಇಳಿಸಿಕೊಂಡಿರುವ ಮರ್ಸಿಡೆಸ್ ಸಿಎಲ್ಎ 200 ಐಷಾರಾಮಿತನದಲ್ಲಿ ಮಾತ್ರ ಕಿಂಚಿತ್ತು ಚೌಕಾಸಿ ಮಾಡಿಕೊಂಡಿಲ್ಲ.
ತಂತ್ರಜ್ಞಾನ, ನಯ– ನಾಜೂಕು, ವೇಗವನ್ನು ಉಳಿಸಿಕೊಂಡು ವಾಹನದ ಗಾತ್ರ ಮತ್ತು ಬೆಲೆಯನ್ನು ಮಾತ್ರವೇ ಇಳಿಸಿಕೊಂಡಿದೆ.
ಕೆಲ ತಿಂಗಳ ಹಿಂದೆ ಇದೇ ಕಂಪೆನಿಯ ಜಿಎಲ್ಎ ಕಾರನ್ನು ಓಡಿಸುವ ಅವಕಾಶ ದೊರಕಿತ್ತು. ಇದೀಗ ಸಿಎಲ್ಎ 200ಡಿ ಅನ್ನು ಕಂಪೆನಿಯ ಕೋರಿಕೆ ಮೇಲೆ ನಗರ ಮತ್ತು ಹೆದ್ದಾರಿಯಲ್ಲಿ ಹಗಲು ರಾತ್ರಿ ಓಡಿಸಲಾಯಿತು. ಒಟ್ಟಾರೆ ಹೇಳುವುದಾದರೆ ಇದು ಆರಂಭಿಕ ಹಂತದ ಸಣ್ಣದಾದ ಐಷಾರಾಮಿ ಸೆಡಾನ್.
ಗಾತ್ರ ಮತ್ತು ಕಾರ್ಯಕ್ಷಮತೆಯಲ್ಲಿ ಆಡಿಯ ಎ4ಗೆ ಹೋಲಿಸಬಹುದಾದರೂ ವಿನ್ಯಾಸದಲ್ಲಿ ಸಿಎಲ್ಎ 200ಗೆ ಹೆಚ್ಚು ಅಂಕ ನೀಡಬೇಕಾಗುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆಯುವಂತಹ ಅಂಕುಡೊಂಕು, ಮುಂಭಾಗದ ಕಂಪ್ಯೂಟರ್ ನಿಯಂತ್ರಿತ ಎಲ್ಇಡಿ ಹೆಡ್ಲ್ಯಾಂಪ್, ಏರೋಡೈನಮಿಕ್ ವಿನ್ಯಾಸ, ಬಿಲ್ಲಿನಂಥ ಶರೀರ, ಎದ್ದು ಕಾಣುವ ಹಿಂಭಾಗದ ಟೈಲ್ ಲ್ಯಾಂಪ್ ವಾಹನಕ್ಕೆ ಗೌರವ ಭಾವನೆಯನ್ನು ತರುತ್ತದೆ.
ಕಳೆದ ವರ್ಷ ವಾಹನಕ್ಕೆ ತಂದ ಕೆಲ ಬದಲಾವಣೆಗಳಲ್ಲಿ ಡೈಮಂಡ್ ಕಟ್ನಂತಹ ಗ್ರಿಲ್, ಭಾರತದ ರಸ್ತೆಗಳ ಹಳ್ಳ–ದಿಣ್ಣೆಗಳಲ್ಲಿ ಬಂಪರ್ ಬಡಿಯದಂತೆ ಮಾಡಿದ ಬದಲಾವಣೆ ಫಲ ನೀಡಿದೆ.
2.1 ಲೀಟರ್ ಎಂಜಿನ್ 0–100 ಕಿ.ಮೀ ಗೆ ಕೇವಲ 9.5 ಸೆಕೆಂಡ್ಗಳಲ್ಲೇ ಜಿಗಿಯುತ್ತದೆ. ಮೈಲೇಜ್ ಸಹ ಅಷ್ಟೇ ಉತ್ತಮವಾಗಿದೆ. ಏಳು ಸ್ಪೀಡ್ನ ಆಟೊಮ್ಯಾಟಿಕ್ ಗೇರ್ ಬಹಳ ನಯ. ಗೇರ್ ಬದಲಾವಣೆ ಸಂದರ್ಭದಲ್ಲಿ ವಾಹನ ಜರ್ಕ್ ಒಡೆಯುವುದೇ ಇಲ್ಲ. ಹೆದ್ದಾರಿಗಳಲ್ಲಿ ಓಡುವಾಗ ಮ್ಯಾನುವಲ್ ಗೇರ್ ಬಳಸದಿದ್ದರೆ ಲೀಟರ್ಗೆ 24 ಕಿ.ಮೀ ಸಹ ನೀಡುತ್ತದೆ ಎನ್ನುವುದು ಮೈಲೇಜ್ ಚಾರ್ಟ್ನಿಂದ ಪತ್ತೆಯಾಯಿತು.