ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಸ್ಪರ್ಶಿ ನಿಸರ್ಗ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಹೃದಯವೆಂಬ ಜೀವದ ಗುಡಿಯನ್ನು ಮೊದಲ ಸಲ ನೋಡಿದ ಕ್ಷಣವದು. ಆ ಹೃದಯಕ್ಕೆ ತೊಂದರೆ ಇದೆ ಎಂಬ ಮಾತು ಸುಳ್ಳೆನಿಸಿತು. ಹತ್ತು ಜೀವಗಳನ್ನು ಬೇಕಾದರೂ ಬದುಕಿಸಬಲ್ಲೆ ಎಂಬಂತೆ ಆತ್ಮವಿಶ್ವಾದಿಂದ ಪುಟಿಯುತ್ತಿದ್ದ ಹೃದಯವದು. ತನ್ನೊಳಗಿನ ಜೀವವನ್ನು ಕಸಿದುಕೊಳ್ಳಲು ಬಂದವನೊಂದಿಗೆ ಗುದ್ದಾಟ ನಡೆಸುತ್ತಿದೆಯೇನೋ ಎಂಬಂತೆ ಭಾವ ಮೂಡಿಸುತ್ತಿದ್ದ ಬಡಿತದ ಆಳದಲ್ಲಿ ಕಣ್ಣು ನೆಟ್ಟಾಗ ಮೊದಲಿಗೆ ಆದದ್ದು ತಳಮಳ. ಜೊತೆಗೆ ರೋಮಾಂಚನ.

ಚಿಕ್ಕ ವಯಸ್ಸಿನಲ್ಲಿದ್ದಾಗ ರಕ್ತ ಕಂಡರೆ ಸಾಕು ತಾನು ಬಲುದೂರ. ಕೊಟ್ಟಿಗೆಯಲ್ಲಿ ಎಮ್ಮೆ ಕರು ಹಾಕಿದಾಗ ಅದನ್ನು ನೋಡಲೂ ಹಿಂಜರಿಕೆ. ನಿಜ. ಈಗ ರಕ್ತವೆಂದರೆ ಅಂಜಿಕೆಯಿಲ್ಲ. ಜೀವನಾಳದೊಳಗೆ ರಕ್ತವೆಂಬ ಸಂಜೀವಿನಿಯನ್ನು ಹರಿಸುವ ಹೃದಯವೆಂದರೆ ಪ್ರೀತಿ.

ಹೀಗಾಗಿಯೇ ಮೊದಲ ಕ್ಷಣ ಹೃದಯ ತನ್ನ ಚರ್ಮವೆಂಬ ಅಂಗಿಯನ್ನು ಕಳಚಿ ಬೆತ್ತಲಾಗಿ ಕಂಡಾಗ ಭಯದ ಬದಲು ಕಾತರ ಹೆಚ್ಚಾಗಿದ್ದು. ಅದರ ಬಿಳಿ ಕೆಂಪು ಮಿಶ್ರಿತ ಉಪ ಅಂಗಗಳನ್ನು ಸ್ಪರ್ಶಿಸಿದಾಗ ತನ್ನ ಹೃದಯ ಬಡಿತದ ವೇಗ ದ್ವಿಗುಣಗೊಂಡಂತ ಅನುಭವ.

ಒಂದು ಜೀವದ ಜೀವನಾಂಗ ತನ್ನ ಕೈಯೊಳಗಿದೆ ಎಂಬ ಕರ್ತವ್ಯಪ್ರಜ್ಞೆಯೂ ಜೊತೆಗೆ. ಹೀಗೆ ಹೃದಯಗಳ ಹತ್ತಿರದ ಒಡನಾಡಿಯಾಗಿ ಹೃದಯ ತಜ್ಞರಾಗಿ ವೈದ್ಯಕೀಯ ಲೋಕದಲ್ಲಿ ತಮ್ಮ ಹೆಜ್ಜೆಗಳನ್ನು ಮೂಡಿಸುತ್ತಿರುವವರು ಡಾ. ನಿಸರ್ಗ.

ಚಿಕ್ಕವಯಸ್ಸಿನಲ್ಲೇ ತನ್ನ ಆಯಸ್ಸು ಮುಗಿಯಿತು ಎಂಬಂತೆ ಸುಸ್ತಾಗಿದ್ದ ನೂರಾರು ಹೃದಯಗಳು ಅದೇ ಕೈಯಲ್ಲಿ ಮರುಜನ್ಮ ಪಡೆದಿವೆ. ತನ್ನೊಳಗೆ ಮೂಡಿದ್ದ ಬಿರುಕನ್ನು ಕಂಡು ನಲುಗಿದ್ದ ಹೃದಯಗಳು ಮತ್ತೆ ಬೆಸೆದುಕೊಂಡ ತನ್ನ `ಕುಟುಂಬ~ದೊಂದಿಗೆ ಸಂಭ್ರದಿಂದ ಕೆಲಸದಲ್ಲಿ ಮಗ್ನವಾಗಿವೆ.

ಬಾಲ್ಯದಲ್ಲಿ ರಕ್ತವೆಂದರೆ ಅಂಜುತ್ತಿದ್ದವರಿಗೀಗ ಹೃದಯಕ್ಕೆ ಪುನರ್ಜನ್ಮ ನೀಡುವ ಕೆಲಸವೆಂದರೆ ಸಲೀಸು. ಒಂದೇ ತಿಂಗಳಿನಲ್ಲಿ 50ಕ್ಕೂ ಅಧಿಕ ಪುಟ್ಟ ಹೃದಯಗಳಲ್ಲಿ ಇತರ ಆರೋಗ್ಯಶಾಲಿ ಹೃದಯಗಳಂತೆ ಮಿಡಿಯುವ ಭರವಸೆಯ ಬೆಳಕು ಮೂಡಿಸಿದ್ದಾರೆ.

ಆಸ್ಪತ್ರೆ ಪ್ರಾರಂಭವಾಗಿ ಹದಿನೈದೇ ದಿನದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ವಿಭಾಗವನ್ನು ಕಟ್ಟಿದ್ದಲ್ಲದೆ ಒಂದೇ ತಿಂಗಳಲ್ಲಿ ಸುಮಾರು 50 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿರುವ 34ರ ಹರೆಯದ ಈ ಯುವ ವೈದ್ಯರ ಸಾಧನೆ ಹೃದಯದ ಸವಾಲಿಗೇ ಸವಾಲು ಹಾಕಿದಂತಿದೆ.

ಚಿಕ್ಕವಯಸ್ಸಿನಲ್ಲಿಯೇ ನೂರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಿರುವ ಡಾ. ನಿಸರ್ಗ ಸಾಗರ ತಾಲ್ಲೂಕಿನ ಈಚಲುಕೊಪ್ಪ ಎಂಬ ಹಳ್ಳಿಯ ಸುಂದರ ನಿಸರ್ಗದ ನಡುವೆ. ತಂದೆ ಶರಾವತಿ ಹಿನ್ನೀರಿನ ಮುಳುಗಡೆ ಪ್ರದೇಶವಾದ ತುಮ್ರಿಯಿಂದ ಬಂದವರು.

ಪ್ರಾಥಮಿಕ ವಿದ್ಯಾಭ್ಯಾಸ ಊರಿನಲ್ಲಿ ಮುಗಿಸಿದ ಬಳಿಕ ಪ್ರೌಢಶಾಲೆ ಕಲಿತದ್ದು ಹೆಗ್ಗೋಡಿನಲ್ಲಿ. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಂಟು ಬೆಸೆದಿದ್ದು ಸಹ ಅಲ್ಲಿಯೇ.

ಶಾಲಾ ದಿನಗಳಿಂದಲೂ ಓದಿನಲ್ಲಿ ಸದಾ ಮುಂದು. ಇಂದಿಗೂ ಹೆಗ್ಗೋಡಿನ ಶಾಲೆಯಲ್ಲಿ ಅವರ ಹೆಚ್ಚು ಅಂಕದ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.

ಪಿಯುಸಿಗೆ ಸೇರಿಕೊಂಡಿದ್ದು ಉಜಿರೆಯ ಸಿದ್ಧವನ ಗುರುಕುಲಕ್ಕೆ.  ಪಿಯುಸಿ ಆದಮೇಲೆ ಮುಂದೇನು ಎಂಬ ಗೊಂದಲ ಕಾಡುತ್ತಿತ್ತು. ಮೂಲತಃ ಕೃಷಿಕ ಕುಟುಂಬವಾದ್ದರಿಂದ ಕೃಷಿ ವಿಷಯದಲ್ಲಿ ಬಿ.ಎಸ್ಸಿ ಮಾಡುವುದು ತಂದೆ ನೀಡಿದ ಸಲಹೆ. ಜೊತೆಗಿರಲಿ ಎಂದು ಮೆಡಿಕಲ್ ಪ್ರವೇಶ ಪರೀಕ್ಷೆಯನ್ನೂ ಕಟ್ಟಿದರು. ಸಂದರ್ಶನಕ್ಕೆ ಮೊದಲ ಆಹ್ವಾನ ಬಂದಿದ್ದು ಮೆಡಿಕಲ್‌ನಲ್ಲಿ.
 
ಹಿಂದೆ ಮುಂದೆ ನೋಡದೆ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೇರಿಕೊಂಡರು. ಆದರೆ ಆರಂಭದ ದಿನಗಳಲ್ಲಿ ಸಹ ಭವಿಷ್ಯದ ನಡೆಯ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿರಲಿಲ್ಲ. ದಿನಕಳೆದಂತೆ ಒಂದು ವಿಭಾಗದಲ್ಲಿ ಪರಿಣಿತಿ ಪಡೆಯುವ ಆಸಕ್ತಿ ಮೊಳಕೆಯೊಡೆಯಿತು. ಆಗ ಮನಸಿಗೆ ಬಂದಿದ್ದು ಹೃದಯ ವಿಜ್ಞಾನ. ಆಗಿನ ವೊಕಾರ್ಡ್ (ಈಗಿನ ಫೋರ್ಟಿಸ್) ನಲ್ಲಿ ಹಿರಿಯ ಹೃದ್ರೋಗ ತಜ್ಞರಾಗಿದ್ದ ವಿವೇಕ್ ಜವಳಿ ಅವರ ಸಾಧನೆಗಳು ಅದರತ್ತ ಆಕರ್ಷಿಸಿತು.

ಹೃದ್ರೋಗ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದುದು ಆಗಿನ ಕಾಲಕ್ಕೆ ತುಂಬಾ ಕಡಿಮೆ. ಅಲ್ಲದೆ ಅದು ತುಂಬಾ ಕ್ಲಿಷ್ಟಕರ ಮತ್ತು ಸೂಕ್ಷ್ಮ ವಿಷಯ ಕೂಡ. ಸ್ವಲ್ಪ ಎಡವಿದರೂ ರೋಗಿಯ ಜೀವಕ್ಕೆ ಅಪಾಯವುಂಟಾಗುವ ಸಾಧ್ಯತೆಯೇ ಹೆಚ್ಚು. ಹಿತೈಷಿಗಳು, ಗುರುಗಳ ಅಭಿಪ್ರಾಯವೂ ಅದೇ ಆಗಿತ್ತು.
 
ಆದರೆ ಅದನ್ನು ಸವಾಲಾಗಿ ತೆಗೆದುಕೊಳ್ಳುವ ಛಾತಿ ಬೆಳೆಯಿತು. ಬಡತನವೂ ಸಂಗಾತಿಯಾಗಿ ಜೊತೆಯಲ್ಲೇ ಇತ್ತು. ಇಂಥ ಸಮಯದಲ್ಲಿ ನಿಸರ್ಗ ಅವರಿಗೆ ಆಧಾರವಾಗಿದ್ದು ಎಜುಕೇಶನ್ ಲೋನ್. ಆರಂಭದಿಂದ ನನ್ನ ಕೊನೆಯ ವಿದ್ಯಾಭ್ಯಾಸದವರೆಗೂ ಓದಿದ್ದು ಶೈಕ್ಷಣಿಕ ಸಾಲದ ಹಣದ ಮೂಲಕವೇ ಎನ್ನುತ್ತಾರೆ ಅವರು.ಎಂಬಿಬಿಎಸ್ ಮುಗಿಸಿದಾಗಲೂ ಮನಸು ತೂಗುಯ್ಯಾಲೆಯಾಡುತ್ತಿತ್ತು. ಎಂ.ಎಸ್ ಬರೆಯುವ ಹಂಬಲ ಹುಟ್ಟಿಕೊಂಡಿತು. ಹಾಗೆಯೇ ಬರೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಬಂತು. ಮಣಿಪಾಲ ವಿಶ್ವವಿದ್ಯಾಲಯದ ಮಾಹೆ ಕಾಲೇಜಿನಲ್ಲಿ ಇದ್ದ ಒಂದೇ ಸೀಟು ಇವರಿಗೇ ದಕ್ಕಿತು. ಎಂ.ಎಸ್ ಮುಗಿದಾಗ ಮತ್ತೆ ಅದೇ ಹಾಡು-ಮುಂದೇನು...?
ಎಂದು. ಸೂಕ್ತ ಮಾರ್ಗದರ್ಶನ ಮಾಡುವವರೂ ಇರಲಿಲ್ಲ. ಆದದ್ದಾಗಲಿ ಎಂದು ಬಸ್ ಹತ್ತಿದ್ದು ಬೆಂಗಳೂರಿನ ಕಡೆಗೆ. ಮೆಜೆಸ್ಟಿಕ್‌ನಲ್ಲಿ ಇದ್ದ ಡಾರ್ಮಿಟರಿಯಲ್ಲಿ ಉಳಿದುಕೊಂಡಿದ್ದು. ಅಲ್ಲಿ ಶುರುವಾಗಿದ್ದು ಉದ್ಯೋಗದ ಬೇಟೆ.
 
ಮಣಿಪಾಲ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳ ಮೆಟ್ಟಿಲೇರಿ ಬಂದರು. ಪ್ರಯೋಜನವಾಗಲಿಲ್ಲ. ಆಗಿನ್ನೂ ಮೊಬೈಲ್ ಫೋನ್‌ಗಳು ಇಷ್ಟೊಂದು ಚಾಲ್ತಿಗೆ ಬಂದಿರಲಿಲ್ಲ. ಮೆಜೆಸ್ಟಿಕ್‌ನಿಂದ ದೂರವಾಣಿ ಕರೆ ಮಾಡಿ ತಂದೆಯ ಬಳಿ ನೋವನ್ನು ಹೇಳಿಕೊಂಡರು. ಕೈಯಲ್ಲಿ ಹಣವೂ ಹೆಚ್ಚು ಇರಲಿಲ್ಲ. ಆಗ ತಂದೆಗೆ ವೊಕಾರ್ಡ್ ಆಸ್ಪತ್ರೆ ಬಗ್ಗೆ ಸ್ನೇಹಿತರೊಬ್ಬರು ಹೇಳಿದ್ದರು. ಅಲ್ಲಿ ಪ್ರಯತ್ನಿಸು ಎಂದು ತಂದೆ ಸಲಹೆ ನೀಡಿದರು.

ಹೀಗೆ ಅವಕಾಶ ಕೇಳಿಕೊಂಡು ವೊಕಾರ್ಡ್‌ಗೆ ಹೋದಾಗ ತೆರೆದಿದ್ದು ಅದೃಷ್ಟದ ಬಾಗಿಲು. ಅವರ ನೆಚ್ಚಿನ ವೈದ್ಯರಾದ ವಿವೇಕ್ ಜವಳಿ ಅವರ ಕೈಗೆಳಗೆ ಕೆಲಸ ಮಾಡುವ ಸುಯೋಗ ಲಭಿಸಿತು.

ಜೀವನದ ನಡೆನುಡಿಯಿಂದ ಹಿಡಿದು ಚಿಕಿತ್ಸೆಯ ಒಳಗಣ್ಣಿನ ಪರಿಚಯವಾಗಿದ್ದು ಅವರಿಂದಲೇ. ಸರ್ಜನ್ ಆಗಬೇಕೆನ್ನುವ ತುಡಿತ ಹೆಚ್ಚಾಯಿತು. ಆದರೆ ಮನಸ್ಸು ಇನ್ನೂ ಹೊಯ್ದಾಟದಲ್ಲಿತ್ತು. ಒಂದೂವರೆ ವರ್ಷ ಅವರ ಬಳಿ ಕೆಲಸ ಮಾಡಿದ ಬಳಿಕ ದೃಢನಿರ್ಧಾರ ತೆಗೆದುಕೊಂಡು ಜಯದೇವದಲ್ಲಿ ಎಂಸಿಎಚ್ (ಮಾಸ್ಟರ್ ಆಫ್ ಸರ್ಜಿಕಲ್) ಪರೀಕ್ಷೆ ಕಟ್ಟಿದರು.
 
ಕೇವಲ 15ದಿನಗಳ ಪೂರ್ವಸಿದ್ಧತೆ ನಡೆಸಿದ್ದರೂ ಬಂದಿದ್ದು ಮೊದಲ ರ‌್ಯಾಂಕ್. ಮೂರು ವರ್ಷದ ಎಂಸಿಎಚ್ ಕೋರ್ಸನ್ನು ಮುಗಿಸಿದ ಬಳಿಕ ಮತ್ತೆ ಹಾದಿ ತುಳಿದಿದ್ದು ವೊಕಾರ್ಡ್‌ನತ್ತ. ಜವಳಿ ಅವರ ಜೊತೆಯಲ್ಲಿ ಜೂನಿಯರ್ ಕನ್ಸಲ್ಟೆಂಟ್ ಆಗಿ ಮತ್ತೆ ಸೇರಿಕೊಂಡರು. ಹೃದ್ರೋಗ ಚಿಕಿತ್ಸೆಗೆ ವಿಶ್ವಮಟ್ಟದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದ ಆಸ್ಪತ್ರೆ ಅದು. ಹೀಗಾಗಿ ಹೃದಯ ಚಿಕಿತ್ಸೆಯ ಒಳಹೊರಗುಗಳ ಸೂಕ್ಷ್ಮ ಪರಿಚಯವಾಯಿತು.

ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯಿರುವ ಸಪ್ತಗಿರಿ ಮೆಡಿಕಲ್ ಕಾಲೇಜು ವಿಶೇಷ ತಜ್ಞರ ವಿಭಾಗವನ್ನು ತೆರೆಯುವ ಸಿದ್ಧತೆ ನಡೆಸಿತ್ತು. ಆಗ ಅಲ್ಲಿ ಸರ್ಜನ್ ಆಗುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿತು. ಹಿರಿಯ ವಿವೇಕ್ ಜವಳಿ ಅವರ ಬಳಿ ಕಲಿತ ಪಾಠ ಜೊತೆಗಿತ್ತು. ಜಯದೇವದ ಡಾ. ಸೀತಾರಾಮ್ ಭಟ್ ಮತ್ತು ಫೋರ್ಟಿಸ್‌ನ ಡಾ. ಜೋಸೆಫ್ ಜೇವಿಯರ್ ಅವರೊಂದಿಗಿನ ಅನುಭವವೂ ಸಿದ್ಧಿಸಿತ್ತು.
 
ಆಸ್ಪತ್ರೆಯ ಆರಂಭದ ದಿನದಲ್ಲಿ ಸಿಕ್ಕಿದ್ದು ನಾಲ್ಕನೇ ಮಹಡಿಯ ಖಾಲಿ ಜಾಗ ಮಾತ್ರ. ಹೃದ್ರೋಗ ವಿಭಾಗಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತರಿಸಿಕೊಳ್ಳಬೇಕಿತ್ತು. ಮುಖ್ಯವಾಗಿ ಸಿಬ್ಬಂದಿಗಳ ತಂಡವನ್ನು ಕಟ್ಟಬೇಕಿತ್ತು. ಅದೆಲ್ಲವನ್ನೂ ಕೇವಲ ಹದಿನೈದು ದಿನದಲ್ಲಿ ಸಿದ್ಧಗೊಳಿಸಿದ್ದು ನಿಸರ್ಗ ಅವರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ.
 
ಇದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಅಧ್ಯಕ್ಷ ಜಿ.ದಯಾನಂದ್ ಸಹಕಾರವೂ ಮುಖ್ಯಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅವರು. ಸಪ್ತಗಿರಿ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗ ಆರಂಭವಾದದ್ದು 2011ರ ನವೆಂಬರ್ ತಿಂಗಳಲ್ಲಿ. ಅದರ ನಂತರದ ತಿಂಗಳೊಂದರಲ್ಲಿಯೇ (ಡಿಸೆಂಬರ್) ಸುಮಾರು 50 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ಡಾ.ನಿಸರ್ಗ ಅವರ ದಾಖಲೆ. ವಿವಿಧ ಖ್ಯಾತ ಆಸ್ಪತ್ರೆಗಳ ವೈದ್ಯರು ಕೈಚೆಲ್ಲಿದ ಪ್ರಕರಣಗಳನ್ನು ಇಲ್ಲಿ ಯಶಸ್ವಿಯಾಗಿ ಪರಿಹರಿಸಿದ ಉದಾಹರಣೆಗಳಿವೆ.

ಪ್ರತಿಯೊಬ್ಬ ರೋಗಿಯ ಬದುಕಲ್ಲೂ ಒಂದೊಂದು ಕಥೆಯಿರುತ್ತದೆ. ಅಂಥಹ ಮನಕಲಕುವ ಘಟನೆಗಳು ನಮ್ಮೆದುರಿಗೆ ನಡೆಯುತ್ತವೆ ಎನ್ನುವ ಡಾ.ನಿಸರ್ಗ ನೈಜೀರಿಯಾ ಹೃದಯ ರೋಗಿಯೊಬ್ಬರನ್ನು ನೆನಪಿಸಿಕೊಳ್ಳುತ್ತಾರೆ. ನೈಜೀರಿಯಾದ ದಂಪತಿಗೆ ಹುಟ್ಟಿದ ಮೊದಲ ಮಗು ಹೃದಯದ ತೊಂದರೆಯಿಂದ ಮೃತಪಟ್ಟಿತ್ತು. ಎರಡನೇ ಮಗುವಿಗೂ ಸಹ ಅದೇ ಸಮಸ್ಯೆ. ಕೊನೆಗೆ ಕೃತಕ ಗರ್ಭದಾರಣೆಯ ಮೊರೆಹೊಕ್ಕರು. ಆದರೆ ಅಲ್ಲಿ ಜನಿಸಿದ ಮಗು ಕೂಡ ಹೃದಯದ ಖಾಯಿಲೆಯಿಂದ ನರಳುತ್ತಿತ್ತು. ಇಂತಹ ಮನಸಿಗೆ ನೋವುಂಟು ಮಾಡುವ ದೃಷ್ಟಾಂತಗಳನ್ನು ಕಾಣುತ್ತಿರುತ್ತೇವೆ ಎನ್ನುತ್ತಾರೆ.

ಡಾ.ನಿಸರ್ಗ ವೈದ್ಯರಾಗಿ ಮಾತ್ರವಲ್ಲ ಅಭಿರುಚಿಯ ವಿಷಯದಲ್ಲೂ ಭಿನ್ನ ಜಾಡು ತುಳಿದವರು. ವೈದ್ಯಲೋಕವಷ್ಟೆ ಅವರ ಬದುಕಲ್ಲ. ಛಾಯಾಗ್ರಹಣ, ಕೊಳಲು ವಾದನ, ಸಾಹಿತ್ಯ, ಓದು, ಕಲಾತ್ಮಕ ಚಿತ್ರಗಳ ವೀಕ್ಷಣೆ ಹೀಗೆ ಹವ್ಯಾಸಗಳ ಪಟ್ಟಿ ದೀರ್ಘವಿದೆ. ಹೃದಯ ಚಿಕಿತ್ಸೆಯೆಂದರೆ ನಿರಂತರ ಒತ್ತಡ, ಉದ್ವೇಗಗಳನ್ನು ಹುಟ್ಟಿಸುವ ವಿಷಯ. ಇವುಗಳನ್ನು ಎದುರಿಸಿ ಲವಲವಿಕೆಯಿಂದಿರಲು ಅದರಾಚೆಗಿನ ಅಭಿರುಚಿಗಳು ಅತ್ಯಗತ್ಯ ಎಂಬುದು ಡಾ.ನಿಸರ್ಗ ಅವರ ಅಭಿಪ್ರಾಯ.

ಛಾಯಾಗ್ರಹಣ ಆರಂಭಿಸಿದ್ದು ಒಂದು ಸಣ್ಣ ಡಿಜಿಟಲ್ ಕ್ಯಾಮೆರಾದ ಮೂಲಕ. ಪರಿಸರ, ಜನಜೀವನ, ಮನುಷ್ಯ ಭಾವನೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಲ್ಲಿಯೂ ಅವರ ಕೈಚಳಕವಿದೆ. ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಒಲಿದಿವೆ. ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ವಸ್ತುವನ್ನು ನೋಡುವ ಕಣ್ಣು ಚೆನ್ನಾಗಿ ಗ್ರಹಿಸಬೇಕು ಎಂಬ ನೀತಿ ಅವರದು.

ಸಾಂಸ್ಕೃತಿಕ ಊರಾದ ಹೆಗ್ಗೋಡಿನಲ್ಲಿ ಬೆಳೆದಿದ್ದರಿಂದ ಸಾಹಿತ್ಯದ ಒಲವು ಸಹಜವಾಗಿಯೇ ಬಂದಿತ್ತು. ಬೆಂಗಳುರಿನಲ್ಲಿ ರಂಗಶಂಕರ ನಿಸರ್ಗ ಅವರ ಮೆಚ್ಚಿನ ಜಾಗ. ನಾಟಕ ಮತ್ತು ಕಲಾತ್ಮಕ ಚಿತ್ರಗಳೆಂದರೆ ಪಂಚಪ್ರಾಣ. ರಂಗಚಟುವಟಿಕೆ, ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿದೆಸೆಯಿಂದಲೇ ತೊಡಗಿಸಿಕೊಂಡು ಹಲವು ಬಹುಮಾನಗಳನ್ನೂ ಮುಡಿಗೇರಿಸಿಕೊಂಡಿದ್ದರು.

ಹೃದ್ರೋಗ ಸಮಸ್ಯೆ ಈಗಿನದ್ದಲ್ಲ. ಮಕ್ಕಳಲ್ಲೂ ಅಧಿಕ ಪ್ರಮಾಣದಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಹಿಂದೆ ಇದರ ಬಗ್ಗೆ ಅರಿವು ಇರಲಿಲ್ಲ.  ಈಗ ಮಾಹಿತಿ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಜನರಲ್ಲಿ ತಿಳಿವಳಿಕೆ ಮೂಡುತ್ತಿದೆ. ಹೀಗಾಗಿಯೇ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚು. ವಿಪರ್ಯಾಸವೆಂದರೆ ನಮ್ಮಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರಿಲ್ಲ.

ಹೃದ್ರೋಗ ವಿಷಯದಲ್ಲಿ ಪರಿಣಿತಿ ಪಡೆದವರೂ ಕಡಿಮೆಯೇ. ವೈದ್ಯರ ಸಂಖ್ಯೆ ಹೆಚ್ಚಾದರೆ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯೂ ದೊರೆಯುತ್ತದೆ ಎನ್ನುತ್ತಾರೆ ಡಾ.ನಿಸರ್ಗ.
ಹಳ್ಳಿಗಾಡಿನಲ್ಲಿ ಬಡತನದ ಬೇಗೆಯಲ್ಲಿರುವವರಿಗೆ ಚಿಕಿತ್ಸೆ ಪಡೆಯುವುದು ಕಷ್ಟ. ಅದರಲ್ಲೂ ಚಿಕಿತ್ಸೆಗೆ ಬೆಂಗಳೂರಂತಹ ನಗರಕ್ಕೆ ಬರಬೇಕಾದ ಅನಿವಾರ್ಯತೆಯಿದೆ.
 
ಇದು ಬದಲಾಗಬೇಕು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ತಜ್ಞರ ಆಸ್ಪತ್ರೆಗಳು ಸ್ಥಾಪನೆಯಾಗಬೇಕು. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗುವಂತಾಗಬೇಕು.

ಹಂತಹಂತವಾಗಿ ಇದು ತಾಲ್ಲೂಕು ಮಟ್ಟಕ್ಕೂ ವಿಸ್ತರಣೆಯಾಗಬೇಕು ಎಂಬುದು ಅವರ ಆಶಯ. ದೂರದೂರಿಂದ ಬರುವ ಜನರಿಗೆ ಅದರಲ್ಲೂ ಮಕ್ಕಳಿಗೆ ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡುವ ಹೆಬ್ಬಯಕೆಯೂ ಅವರದು.

ಹೃದ್ರೋಗ ಶಸ್ತ್ರ ಚಿಕಿತ್ಸೆ ಹಲವು ಅಚ್ಚರಿಗಳನ್ನು ನೀಡುತ್ತವೆ. ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದಾಗ ಕಾಣುವ ಸಮಸ್ಯೆ ಒಂದಾಗಿದ್ದರೆ, ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ ಬಳಿಕ ಗೊತ್ತಾಗುವ ಸಮಸ್ಯೆಯೇ ಬೇರೆಯದಾಗಿರಬಹುದು. ಇಂಥಹ ಅತಿಸೂಕ್ಷ್ಮ ಸಮಸ್ಯೆಗಳು ಇಲ್ಲಿ ಎದುರಾಗುತ್ತವೆ. ಆ ಕ್ಷಣಕ್ಕೆ ಎಂತಹ ತೊಂದರೆ ಇದ್ದರೂ ಅದನ್ನು ಎದುರಿಸಲು ನಾವು ಮಾನಸಿಕವಾಗಿ ಮತ್ತು ವೈದ್ಯಕೀಯ ನೆಲೆಗಟ್ಟಿನಲ್ಲಿ ಸಿದ್ಧರಿರಬೇಕಾಗುತ್ತದೆ ಎಂಬುದು ಅವರ ಮಾತು.
 
ಹೃದಯ ತಜ್ಞನಿಗೆ ಹದ್ದಿನ ಕಣ್ಣು, ಸಿಂಹದ ಸ್ಥೈರ್ಯ, ಸ್ತ್ರೀಯ ಮೃದು ಬೆರಳುಗಳಿರಬೇಕೆನ್ನುವುದು ಆಂಗ್ಲ ಗಾದೆ. ಅದಕ್ಕೆ ಕುದುರೆಯಂತೆ ಗಂಟೆಗಟ್ಟಲೆ ನಿಲ್ಲುವ ಛಾತಿಯೂ ಬೇಕು ಎಂಬ ಮಾತನ್ನು ನಿಸರ್ಗ ಸೇರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT