ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ಮಾಲುಗಳ ಕಥೆ

Last Updated 12 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಅಮೆರಿಕದ ಮೆಟ್ರೊಪಾಲಿಟನ್‌ ಕಲಾ ವಸ್ತುಸಂಗ್ರಹಾಲಯದಲ್ಲಿ ಇರುವ ಹಲವು ಅಮೂಲ್ಯ ವಸ್ತುಗಳು ಸುಭಾಷ್ ಕಪೂರ್‌ ಎಂಬ ವ್ಯಕ್ತಿ ಕದ್ದು ತಂದವುಗಳೇ ಎಂಬ ಚರ್ಚೆ ಭಾರತದ ಸರ್ಕಾರ ಹಾಗೂ ವಸ್ತು ಸಂಗ್ರಹಾಲಯದ ಅಧಿಕಾರಿಗಳ ನಡುವೆ ನಡೆದಿದೆ. ವಸ್ತುಸಂಗ್ರಹಾಲಯವು ಮೂರು ದಶಕಗಳಿಂದ ಪಡೆದುಕೊಂಡು ಬಂದಿರುವ ಪುರಾತನ ವಸ್ತುಗಳಿಗೆ ಸಂಬಂಧಿಸಿವೆ ಈ ಮಾತುಕತೆಗಳು. ಈ ಸುಭಾಷ್‌ ಕಪೂರ್‌, ಮ್ಯಾನ್‌ಹಟನ್‌ ಪ್ರದೇಶದಲ್ಲಿ ಇರುವ ಕಲಾತ್ಮಕ ವಸ್ತುಗಳ ವರ್ತಕ. ಈತ, ‘ಕಳವು ಮಾಡಿದ ಕಲಾತ್ಮಕ, ಪುರಾತನ ವಸ್ತುಗಳನ್ನು ಅತ್ಯಂತ ಜಾಣ್ಮೆಯಿಂದ ಕಳ್ಳಸಾಗಣೆ ಮಾಡುವವ’ ಎಂಬ ಅಪಖ್ಯಾತಿ ಹೊತ್ತಿದ್ದಾನೆ.

1990ರ ನಂತರ ಈ ವಸ್ತುಸಂಗ್ರಹಾಲಯವು ಕಪೂರ್‌ ಕೈಯಿಂದ 15 ಪುರಾತನ ವಸ್ತುಗಳನ್ನು ಪಡೆದುಕೊಂಡಿದೆ. ಇವನ ಕಳ್ಳಸಾಗಣೆ ಜಾಲ ಸಕ್ರಿಯವಾಗಿ ಇದ್ದಿದ್ದು ಇದೇ ಅವಧಿಯಲ್ಲಿ. ಈ ಅವಧಿಯಲ್ಲಿ ಈತ ಅತ್ಯಂತ ಅಪರೂಪದ ಹಾಗೂ ಬೆಲೆಬಾಳುವ ವಸ್ತುಗಳನ್ನು ಅಮೆರಿಕದ ವಸ್ತು ಸಂಗ್ರಹಾಲಯಗಳಿಗೆ ಒಂದೋ ದಾನ ಮಾಡಿದ್ದಾನೆ ಅಥವಾ ಮಾರಾಟ ಮಾಡಿದ್ದಾನೆ.

ದೇವಸ್ಥಾನಗಳಿಂದ ಕದ್ದು ಹಾಗೂ ಕಳ್ಳಸಾಗಣೆದಾರರ ಮೂಲಕ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಭಾರತದಿಂದ ಹೊರಹೋದ ಸಾವಿರಾರು ಪವಿತ್ರ ವಿಗ್ರಹಗಳನ್ನು ಮತ್ತು ಪುರಾತನ ವಸ್ತುಗಳನ್ನು ವಾಪಸ್ ಪಡೆಯಲು ಭಾರತವು ಭಾರಿ ಸಾಹಸ ಮಾಡುತ್ತಿದೆ. ಅದರ ಭಾಗವಾಗಿ ಈ ಮಾತುಕತೆ ನಡೆಯುತ್ತಿದೆ. ನ್ಯೂಯಾರ್ಕ್‌ನ ಅಧಿಕಾರಿಗಳು ಈಚೆಗೆ ಕಪೂರ್‌ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, ಈತ ಒಟ್ಟು 145 ಮಿಲಿಯನ್‌ ಡಾಲರ್‌ ಮೌಲ್ಯದ (₹ 1 ಸಾವಿರ ಕೋಟಿ) ವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಕಪೂರ್‌ ಮೂಲಕ ಮೆಟ್ರೊಪಾಲಿಟನ್‌ ವಸ್ತುಸಂಗ್ರಹಾಲಯ ತಲುಪಿದ ಮೊದಲ ವಸ್ತು ಟೆರ್‍ರಾಕೊಟ್ಟಾ (ಜೇಡಿಮಣ್ಣಿನ) ಯಕ್ಷ. ಈತನಿಂದ ಈ ವಸ್ತುಸಂಗ್ರಹಾಲಯ ತಲುಪಿದ ಕಡೆಯ, ಅಂದರೆ 2015ರಲ್ಲಿ, ವಸ್ತು 11ನೆಯ ಶತಮಾನದ್ದು. ಒಟ್ಟು 15 ವಸ್ತುಗಳನ್ನು ಕಪೂರ್‌ ವಸ್ತುಸಂಗ್ರಹಾಲಯಕ್ಕೆ ಮಾರಾಟ ಅಥವಾ ಹಸ್ತಾಂತರ ಮಾಡಿದ್ದ, ಕೆಲವು ವಸ್ತುಗಳನ್ನು ಅಮೂಲ್ಯ ವಸ್ತುಗಳ ಸಂಗ್ರಾಹಕರು ಈತನಿಂದ ಖರೀದಿಸಿ ವಸ್ತುಸಂಗ್ರಹಾಲಯಕ್ಕೆ ನೀಡಿದ್ದಾರೆ.

‘ಆರ್ಟ್‌ ಆಫ್‌ ದಿ ಪಾಸ್ಟ್‌’ ಹೆಸರಿನ ಈತನ ಅಂಗಡಿಯು ಒಳ್ಳೆಯ ಹೆಸರು ಹೊಂದಿದ್ದ ಸಂದರ್ಭದಲ್ಲೇ ಹೆಚ್ಚಿನ ವಸ್ತುಗಳು ಸಂಗ್ರಹಾಲಯ ಸೇರಿದವು. ಅಂದರೆ, 2011ರಲ್ಲಿ ಜರ್ಮನಿಯಲ್ಲಿ ಕಪೂರ್‌ ಬಂಧನ ಹಾಗೂ 2012ರಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಮೊದಲೇ ಈ ಅಮೂಲ್ಯ ವಸ್ತುಗಳು ಸಂಗ್ರಹಾಲಯದಲ್ಲಿ ಜಾಗ ಪಡೆದಿದ್ದವು. ಈತ ಈಗ ಭಾರತದಲ್ಲಿ ಇದ್ದು, ಕಳ್ಳಸಾಗಣೆ ಆರೋಪಗಳಿಗೆ ಸಂಬಂಧಿಸಿದ ವಿಚಾರಣೆ ನಡೆಯಬೇಕಿದೆ. ಕಪೂರ್‌ಗಿಂತ ಮೊದಲು ವಸ್ತುಗಳನ್ನು ನೀಡಿದವರ ಹೆಸರು ಸಂಗ್ರಹಾಲಯದ ವೆಬ್‌ಸೈಟ್‌ನಲ್ಲಿ ನಮೂದಾಗಿಲ್ಲ. ಹಲವು ವರ್ಷಗಳ ಹಿಂದೆ ಅಧಿಕಾರಿಗಳು, ಕಪೂರ್‌ನಿಂದ ನಡೆದಿದೆ ಎನ್ನಲಾದ ಕಳ್ಳಸಾಗಣೆ ಬಗ್ಗೆ ಮಾತನಾಡಿದ್ದರು. ಆದರೆ ಆ ಸಂದರ್ಭದಲ್ಲಿ ಸಂಗ್ರಹಾಲಯದ ಅಧಿಕಾರಿಗಳು, ತಮ್ಮಲ್ಲಿ ಇರುವ ವಸ್ತುಗಳು ಅನುಮಾನದ ಕೇಂದ್ರ ಎಂದು ತಾವು ಭಾವಿಸಿಲ್ಲವೆಂದೂ, ವಸ್ತುಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕಾಗಿಲ್ಲವೆಂದೂ ಹೇಳಿದ್ದರು. ಆದರೆ, ಈಚೆಗೆ ತಮ್ಮ ನಿಲುವು ಬದಲಿಸಿದ ಈ ಅಧಿಕಾರಿಗಳು, ಕಪೂರ್‌ ಮೂಲಕ ಬಂದ ವಸ್ತುಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಿದರು.

‘ಕಾನೂನು ಜಾರಿ ಸಂಸ್ಥೆಗಳು ಹಲವು ಕ್ರಮಗಳನ್ನು ಜರುಗಿಸುತ್ತಿರುವುದು ಗೊತ್ತಾಗಿರುವ ಕಾರಣ ಹಾಗೂ ನಮ್ಮಲ್ಲಿ ಪಾಲಿಸಬೇಕಿರುವ ನಿಯಮಗಳನ್ನು ಈಚಿನ ವರ್ಷಗಳಲ್ಲಿ ಇನ್ನಷ್ಟು ಬಿಗಿಗೊಳಿಸಿರುವುದರಿಂದ, ಪ್ರಾಚೀನ ವಸ್ತುಗಳ ಮೂಲಗಳನ್ನು ತಿಳಿದುಕೊಳ್ಳಲು ಇನ್ನೂ ಏನೇನು ಮಾಹಿತಿ ಪಡೆಯಬಹುದು ಎಂಬುದನ್ನು ಗುರುತಿಸುತ್ತಿದ್ದೇವೆ’ ಎಂದು ವಸ್ತುಸಂಗ್ರಹಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ಆದರೆ, ಭಾರತದ ಜೊತೆಗಿನ ಮಾತುಕತೆ ಯಾವ ಹಂತದಲ್ಲಿ ಇದೆ ಎಂಬುದನ್ನು ತಿಳಿಸಲು, ತಮ್ಮಲ್ಲಿನ ಕೆಲವು ವಸ್ತುಗಳು ಕದ್ದವು ಎಂಬ ನಂಬಿಕೆ ಮೂಡಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ‘ಇನ್ನೂ ಏನೇನು ಮಾಹಿತಿ ಪಡೆಯಬಹುದು ಎಂಬುದನ್ನು ಗುರುತಿಸುತ್ತಿದ್ದೇವೆ’ ಎಂದು ವಸ್ತುಸಂಗ್ರಹಾಲಯ ತೆಗೆದುಕೊಂಡಿರುವ ನಿಲುವನ್ನು ಭಾರತದ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಇದು ಉತ್ತಮ ನಡೆ ಎಂದು ಭಾರತೀಯ ಪುರಾತತ್ವ ಇಲಾಖೆಯ ವಕ್ತಾರ ಡಿ.ಎಂ. ದಿಮ್ರಿ ಹೇಳಿದ್ದಾರೆ. ‘ಇತರ ವಸ್ತುಸಂಗ್ರಹಾಲಯಗಳೂ ಇದೇ ನಡೆಯನ್ನು ಅನುಕರಿಸುತ್ತವೆ, ಅವು ಕೂಡ ತಮ್ಮಲ್ಲಿನ ವಸ್ತುಗಳ ಮೂಲವನ್ನು ಪರಿಶೀಲಿಸುತ್ತವೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಮ್ಯಾನ್‌ಹಟನ್‌ನ ದಿ ಏಷ್ಯಾ ಸೊಸೈಟಿಯು ಕನಿಷ್ಟ ಒಂದು ವಸ್ತುವಿನ – 12ನೆಯ ಶತಮಾನದ ನಟರಾಜ ವಿಗ್ರಹದ – ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತ ಇದೆ. ಇದು ಕದ್ದುಕೊಂಡು ಹೋದದ್ದು ಎಂಬುದು ಭಾರತೀಯ ಅಧಿಕಾರಿಗಳ ನಂಬಿಕೆ.

ಆದರೆ, ಈ ವಸ್ತುವಿಗೂ ಕ‍‍ಪೂರ್‌ಗೂ ಸಂಬಂಧ ಇಲ್ಲ. ‘ಅಕ್ರಮ ಮಾರ್ಗದ ಮೂಲಕ ಪಡೆದ ವಸ್ತುಗಳನ್ನು ವಾಪಸ್ ಕೊಡುವುದನ್ನು ಸಂಸ್ಥೆಯು ಈ ಹಿಂದೆ ಬೆಂಬಲಿಸಿತ್ತು’ ಎಂದು ಹೇಳುತ್ತಾರೆ ಸೊಸೈಟಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟಾಮ್ ನಾಗೋರ್ಸ್ಕಿ. ‘ಈ ವಸ್ತು ಕದ್ದಿದ್ದು ಎಂಬ ವಾದ ಸತ್ಯವೇ ಎಂಬುದನ್ನು ಪರಿಶೀಲಿಸಲು ನಾವು ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ಹೇಳುತ್ತಾರೆ. ಮೂಲ ಯಾವುದು ಎಂಬುದು ಖಚಿತವಾಗಿಲ್ಲದಿದ್ದ, ಎಂಟನೆಯ ಶತಮಾನಕ್ಕೆ ಸೇರಿದ ಬುದ್ಧನ ವಿಗ್ರಹವನ್ನು ಲಾಸ್ ಏಂಜಲೀಸ್ ಕೌಂಟಿ ವಸ್ತು ಸಂಗ್ರಹಾಲಯವು ಈಚೆಗೆ ತನ್ನ ಸಂಗ್ರಹಗಳ ಸಾಲಿನಿಂದ ಹೊರಗಿಟ್ಟಿದೆ. ಅದನ್ನು ಏನು ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಆರಂಭಿಸಿದೆ. ಈ ವಿಗ್ರಹ ಕೂಡ ಕಪೂರ್‌ಗೆ ಸಂಬಂಧಿಸಿದ್ದಲ್ಲ. ಆದರೆ, ಇದು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತ ಅನುಭವಿಸಿದ ಲೂಟಿಯ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಹುದು ಎಂಬ ನಂಬಿಕೆ ಭಾರತದ ಅಧಿಕಾರಿಗಳದ್ದು.

ಐತಿಹಾಸಿಕ ಮಹತ್ವದ ಐವತ್ತು ಸಾವಿರಕ್ಕೂ ಹೆಚ್ಚಿನ ಮೂರ್ತಿಗಳು, ಲಾಂಛನಗಳು, ಕಲಾಕೃತಿಗಳನ್ನು ಭಾರತದಿಂದ ಲೂಟಿ ಮಾಡಿರಬಹುದು ಎಂದು ಯುನೆಸ್ಕೊ ಅಂದಾಜಿಸಿದೆ. ಆದರೆ, ಲೂಟಿ ಆಗಿರುವ ಇಂತಹ ವಸ್ತುಗಳ ನಿಖರ ಸಂಖ್ಯೆ ಎಷ್ಟು ಎಂಬುದು ತಿಳಿದಿಲ್ಲ. ಅದು ಎಂದಿಗೂ ತಿಳಿಯುವ ಸಾಧ್ಯತೆಯೂ ಇಲ್ಲ ಎಂಬುದನ್ನು ಅಧಿಕಾರಿಗಳು ಒಪ್ಪುತ್ತಾರೆ.

ಕಪೂರ್‌ ಅವರಿಂದ ಬಂದಿರುವ ವಸ್ತುಗಳ ವಿಚಾರವಾಗಿ ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯದ ಅಧಿಕಾರಿಗಳ ಜೊತೆ ಮಾತುಕತೆ ಶುರುವಾಗಿದ್ದು ಕಳೆದ ವರ್ಷ ಎಂದು ಭಾರತದ ಅಧಿಕಾರಿಗಳು ತಿಳಿಸಿದರು. ಅಲ್ಲಿನ ಆಗ್ನೇಯ ಏಷ್ಯಾ ವಸ್ತುಗಳ ಮೇಲ್ವಿಚಾರಕ ಜಾನ್ ಗಯ್ ಅವರು ಕಳೆದ ಆಗಸ್ಟ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅವರು ತಮ್ಮ ಜೊತೆ, ಭಾರತದಿಂದ ಲೂಟಿ ಮಾಡಲಾಗಿದ್ದು ಎನ್ನಲಾದ ಎರಡು ಪುರಾತನ ವಸ್ತುಗಳನ್ನೂ ತಂದಿದ್ದರು. ಆ ಎರಡೂ ವಸ್ತುಗಳು ಕಪೂರ್ ಜೊತೆ ಸಂಬಂಧ ಹೊಂದಿರುವಂತೆ ಕಾಣಲಿಲ್ಲ. ಆದರೆ, ಈ ಎರಡು ವಸ್ತುಗಳನ್ನು ಹಿಂದಿರುಗಿಸಿದ ಕ್ರಮವು, ಪುರಾತನ ವಸ್ತುಗಳ ಮೂಲವನ್ನು ಪರಿಶೀಲಿಸುವ ವಿಚಾರದಲ್ಲಿ ತಾನು ಹೆಚ್ಚು ಸೂಕ್ಷ್ಮವಾಗಿರುವುದನ್ನು ತೋರಿಸುತ್ತದೆ ಎಂದು ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯ ಹೇಳಿದೆ.

ಪುರಾತನ ವಸ್ತುಗಳು ತಮ್ಮ ಮೂಲ ದೇಶದಿಂದ ಕಾನೂನುಬದ್ಧವಾಗಿ ಹೊರದೇಶಕ್ಕೆ ಬಂದಿವೆ ಎಂಬುದನ್ನು ತೋರಿಸುವ ಪರವಾನಗಿ ಪತ್ರಗಳು ಇರುವ ವಸ್ತುಗಳನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಲಾಗುವುದು ಎಂಬ ನೀತಿಯನ್ನು ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯವು ದಶಕಗಳ ಕಾಲ ಪಾಲಿಸುತ್ತಿತ್ತು. ಆದರೆ, ಕಪೂರ್ ಅವರು ನಕಲಿ ಪರವಾನಗಿ ಪತ್ರಗಳನ್ನು ತೋರಿಸಿ ವಸ್ತುಸಂಗ್ರಹಾಲಯದ ಅಧಿಕಾರಿಗಳನ್ನೂ ಇತರ ಕೆಲವು ಗ್ರಾಹಕರನ್ನೂ ಮೋಸಗೊಳಿಸಿದ್ದ. ಕಪೂರ್‌ನಿಂದ ವಸ್ತುಗಳನ್ನು ಪಡೆದುಕೊಂಡಾಗ ಪರವಾನಗಿ ಪತ್ರ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ ಈ ವಸ್ತುಸಂಗ್ರಹಾಲಯದ ಅಧಿಕಾರಿಗಳು ಉತ್ತರಿಸಲಿಲ್ಲ.

ಭಾರತವು ಯಾವುದೇ ವಸ್ತುವನ್ನು ತನ್ನಿಂದ ಲೂಟಿ ಮಾಡಿದ್ದು ಎಂದು ಹೇಳುವಾಗ, ಅದನ್ನು ಯಾವಾಗ ತೆಗೆದುಕೊಂಡು ಹೋಗಿರಬಹುದು ಹಾಗೂ ಎಲ್ಲಿಂದ ಅದು ಹೋಗಿರಬಹುದು ಎಂಬುದಕ್ಕೆ ದಾಖಲೆ ಕೊಡಬೇಕು. ಕಪೂರ್‌ ವಿರುದ್ಧದ ತನಿಖೆ ತೀವ್ರಗೊಳಿಸಿರುವ ಅಮೆರಿಕವು ಅವನ ನಿಯಂತ್ರಣದಲ್ಲಿ ಇದ್ದ 2,500ಕ್ಕೂ ಹೆಚ್ಚಿನ ವಸ್ತುಗಳನ್ನು ವಶಪಡಿಸಿಕೊಂಡಿದೆ. ಹೀಗೆ ವಶಪಡಿಸಿಕೊಂಡ ವಸ್ತುಗಳ ಪರಿಶೀಲನೆಯಲ್ಲಿ ಭಾರತದ ಅಧಿಕಾರಿಗಳು ತೊಡಗಿದ್ದಾರೆ. ಯಾವ ವಸ್ತು ಭಾರತದಿಂದ ಕದ್ದೊಯ್ದಿದ್ದು ಎಂಬುದನ್ನು ಖಚಿತವಾಗಿ ಹೇಳಬಹುದು ಎಂಬ ಪರಿಶೀಲನೆ ನಡೆಸುತ್ತಿದ್ದಾರೆ.

ಭಾರತದಿಂದ ಹೊರಹೋದ ವಸ್ತುಗಳ ಪೈಕಿ ಬಹುಪಾಲು ಇನ್ನಷ್ಟೇ ಭಾರತಕ್ಕೆ ಮರಳಬೇಕಿದೆ. 2016ರಲ್ಲಿ ಅಮೆರಿಕದ ಅಟಾರ್ನಿ ಜನರಲ್ ಲೊರೆಟ್ಟಾ ಲಿಂಚ್ ಅವರು 200 ಕದ್ದ ವಸ್ತುಗಳನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ ನಂತರದ ದಿನಗಳಲ್ಲಿ ಅಂದಾಜು 40 ವಸ್ತುಗಳು ಭಾರತಕ್ಕೆ ಮರಳಿವೆ. ಆದರೆ ಅವುಗಳಲ್ಲಿ ಯಾವ ವಸ್ತುವೂ ಇನ್ನೂ ಅವುಗಳ ಮೂಲ ನೆಲೆಯಾದ ದೇವಸ್ಥಾನ ತಲುಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT