‘ನಂಗ ಅಂವಾ ಬ್ಯಾಡಂತ ಹೇಳಲೇ ಇಲ್ಲ. ಆದ್ರ ನಂಗೇ ಸಾಕಾಗಿತ್ತು. ಯಾಕೋ ಆ ಅವಮಾನ, ಉಪೇಕ್ಷೆ ತಡಕೋಳ್ಳಾಕ ಆಗವಲ್ದಾಗಿತ್ತು. ಹಂಗಿರೂದ್ರೊಳಗ ಅರ್ಥನೂ ಇರಲಿಲ್ಲ. ನಾನೂ ತಣ್ಣಗಾಗಿದ್ದೆ. ದಣಿವು ಆಗಿತ್ತು. ಕಣ್ಣಾಗ ಪ್ರೀತಿ ಐತೇನು? ಮನಸಿನಾಗ ಐತೇನು? ಎಲ್ಲರೆ ಎಳ್ಳಿನಷ್ಟರೆ ಕಾಣ್ತದೇನು? ಭರವಸೆಯ ಎಳಿಯರೇ ಕಾಣ್ತದೇನು... ಇಲ್ಲಾ... ಏನೂ ಇಲ್ಲ. ಕಲ್ಲಾಗಿದ್ದ.

ಇನ್ನೇನೂ ಕರಗೂದಿಲ್ಲ ಅನಸೂಮುಂದ ಅಲ್ಲಿಂದ ಎದ್ದು ಬಂದಿದ್ದೆ’ ಅಕಿ ಹಂಗ ಹೇಳ್ಕೊಂತ ಕಣ್ಣೀರಾಗಿದ್ಲು. ಎಷ್ಟೇ ಗಟ್ಟಿ ಆಗೇನಿ ಅಂದ್ರೂ... ಮನಸೊಳಗಿನ ಸಮುದ್ರದಲೆ ಉಕ್ಕಿದಾಗ ಸಿಡಿದ ಹನಿ ಗಲ್ಲದ ಮ್ಯಾಲೆ ಕುಂತ್ಹಂಗ ಆಗಿತ್ತು. ಒಂದೆರಡಲ್ಲ ಹತ್ತು ವರ್ಷ ಪ್ರೀತಿ ಮಾಡಿ ಮದಿವಿ ಆಗಿದ್ರು... ಮದಿವಿ ಆದಮ್ಯಾಲೂ ಪ್ರೀತಿಯಿಂದಲೇ ಇದ್ರು. ಆದ್ರೂ...

ಪ್ರೀತಿ ಮಾಡೂದೇ ಬ್ಯಾರೆ... ಜೊತಿಗೆ ಬಾಳೇ ಮಾಡೂದೇ ಬ್ಯಾರೆ. ಪ್ರೀತಿ ಮಾಡ್ಕೊಂತ ಜೊತಿಗಿರೂದು, ಜೊತಿಗಿದ್ದು ಪ್ರೀತಿ ಮಾಡೂದು ಇನ್ನಾ ಬ್ಯಾರೆ.
ಗದ್ದಲ, ಗೊಂದಲ ಅನ್ನಸ್ತಲ್ಲ... ಪ್ರೀತಿ ಅಂದ್ರ ಥೇಟ್ ಹಿಂಗೆನೆ. ಏನಂತ ಗೊತ್ತಿರೂದಿಲ್ಲ. ಗೊತ್ತದ ಅಂದ್ಕೊಂಡಿದ್ದು ಪ್ರೇಮ ಆಗಿರ್ತದ. ಇಲ್ಲಾಂದ್ರ ಮೋಹ ಆಗಿರ್ತದ. ಅದೆರಡೂ ಆಗಿರದಿದ್ದರ ಬರೇ ಅವಲಂಬನೆ ಆಗಿರ್ತದ. ಅದು ಭಾವನಾತ್ಮಕವಾಗಿರಬಹುದು ಅಥವಾ ಹಣಕಾಸಿನ ವಿಷಯ ಆಗಿರಬಹುದು.

ಇವರಿಬ್ಬರ ವಿಷಯದೊಳಗ ಇದ್ಯಾವುದೂ ದೊಡ್ಡದಾಗಿರಲಿಲ್ಲ. ಅದ್ಯಾವುದೋ ಕ್ಷಣದೊಳಗ ಹುಡುಗನ ಮನಸಿನಾಗ ಇಕಿ ನನಗ ತಕ್ಕವಳಲ್ಲ ಅಂತ ಅನಸಾಕ ಸುರು ಆಗಿತ್ತು ಅನ್ನೂದು ಆ ಹುಡುಗಿಯ ಗುಮಾನಿ. ಇಲ್ಲಾಂದ್ರ ಯಾಕ ಯವಾಗಲೂ ‘ನಂಗ ಅಷ್ಟು ವರದಕ್ಷಣಾ ಕೊಡವರು ಇದ್ರು, ಇಷ್ಟು ರೊಕ್ಕಾ ಕೊಡೋವರು ಇದ್ರು. ಡಾಕ್ಟರ್, ಲೆಕ್ಚರ್, ಎಂಜಿನಿಯರ್ ಹುಡುಗ್ಯಾರು ಸೈತ ಮದಿವಿ ಆಗಾಕ ನಿಂತ ಕಾಲಮ್ಯಾಲಿದ್ರು’ ಅಂತ ಮ್ಯಾಲಿಂದ ಮ್ಯಾಲೆ ಹೇಳ್ತಿದ್ದ?

ನೀನು ಎಲ್ಲಿಂದ ಗಂಟುಬಿದ್ದಿ.., ನಂಗವಾಗ ಬುದ್ಧಿ ಮ್ಯಾಲೆ ಮಂಕು ಕವಿದಿತ್ತು... ಇಲ್ಲಾಂದ್ರ ನೀನೇ ಮಾಟಾ ಮಾಡಿಸಿರಬೇಕು... ಇಂಥವೆಲ್ಲ ಮಾತು ಮ್ಯಾಲಿಂದ ಮ್ಯಾಲೆ ಅಕಿನ್ನ ಕಿವಿಗೆ ಅಪ್ಪಳಿಸ್ತಿದ್ವು. ಮೊದಮೊದಲು ಅದನ್ನೂ ಹೊಗಳಿಕೆ ಅಂತನೇ ತಿಳಕೊಂಡಿದ್ರು... ದಿನಾ ಕೇಳಿಕೇಳಿ... ಅಕಿ ಒಳಗೊಳಗೇ ಕುಸದು ಹೋಗಿದ್ಲು.

ಭರವಸೆಯ ಒಂದೇ ಒಂದು ಎಳಿ ಇದ್ರೂ ಕೊನೀತನಾ... ಜೀವದ ಕೊನಿ ಉಸುರಿನ ತನಾ ಜೋತಾಡಾಕ ಕೈಗೆ ಕಸುವು ಉಳಸ್ಕೊತಿದ್ದೆ. ಆದ್ರ ಕನಸೇ ಇರದ ಕಣ್ಣೊಳಗ ಜೀವನಾನೇ ಬತ್ತಿ ಹೋಗಿತ್ತು. ಅಗಲಿಕೆ ಅನಿವಾರ್ಯವೇ ಅನ್ನೂ ಪ್ರಶ್ನೆಗಿಂತ ಮೊದಲು ಅಕಿ ಜೊತಿಗಿರೂದು ಅನಿವಾರ್ಯನಾ ಅನ್ನೂದಕ್ಕ ಉತ್ತರ ಹುಡುಕಾಕ ಸುರು ಮಾಡಿದ್ಲು.

ಜೊತಿಗಿರೂದು ಅಂದ್ರೇನು? ಜೊತಿಗೆ ಉಣ್ಣೂದು, ತಿನ್ನೂದು, ಖರ್ಚು ಮಾಡೂದು ಜಗಳಾಡೂದು, ಮಾತು ಬಿಡೂದು, ತ್ರಾಸ್ ಕೊಡೂದು, ಪಡೂದು ಎಲ್ಲಾ... ಎಲ್ಲವೂ... ಕೊಡುಕೊಳ್ಳುವ ಬಾಂಧವ್ಯ ಆದ್ರ ಎಲ್ಲಾನೂ ಸಹನೀಯ. ನೀ ಪ್ರೀತಿ ಕೊಡ್ಕೊಂತ ಹೋಗು... ನಾ ತ್ರಾಸ ನೀಡ್ಕೊಂತ ಇರ್ತೀನಿ ಅನ್ನುವ ಭಾವ ಗಟ್ಟಿಯಾದ್ರ... ಪ್ರತಿ ಮನಶಾನ ಮನಸೂ ಒಂದು ಬ್ಯಾಂಕ್ ಇದ್ದಂಗ. ನೀವೇನು ಕೊಡ್ತೀರೋ ಅದೇ ಬಡ್ಡಿ ಜೊತಿಗೆ ವಾಪಸು ಬರ್ತದ. ಸುರಕ್ಷಿತ ಇರ್ತದ.

ಆದ್ರ ಕೊಡೂಮುಂದ ಪ್ರತಿ ಸಲೆನೂ ನಿರ್ಲಕ್ಷ್ಯ, ಅಸಡ್ಡೆ, ಅಪಮಾನ, ಅನುಮಾನಗಳನ್ನೇ ಕೊಟ್ರ ಅಕಿನ್ನ ಹತ್ರ ಏನು ಉಳಿದೀತು ಕೊಡಾಕ? ಹಂಗೇ ಅಕಿನ್ನ ಪ್ರೀತಿಪಾತ್ರೆನೂ ಖಾಲಿಯಾಗಾಕ ಹತ್ತಿತ್ತು. ಎಂದೂ ಮುಗಿಯದ ಅಕ್ಷಯ ಪಾತ್ರೆಯಂದ್ರ ಪ್ರೀತಿಯ ಬಟ್ಟಲು ಅಂತಾರ. ಆದ್ರ ಅದೂ ಬತ್ತತದ. ಕೂರಲಗಿನ ಮಾತುಗಳಿಗೆ. ಮಾತಿಲ್ಲದ ಅಸಡ್ಡೆ, ಭಾವನೆಗಳಿಗೆ ಬೆಲಿ ಇಲ್ಲದ ನಿರ್ಲಕ್ಷ್ಯಕ್ಕ. ಹಂಗೇ ಆಗಿತ್ತು ಆ ಹುಡುಗಿ ಜೊತಿಗೆ.

ಇರಲಿ ಬಿಡವ್ವಾ.. ಬರೇ ನನ್ ಕತಿನೇ ಆತು... ಬಾಂಧವ್ಯದೊಳಗ ದೂರ ಇರೂದು ಒಂಥರಾ ಅಗತ್ಯ. ಅವಾಗರೆ ನಮ್ಮ ತಪ್ಪು ನಾವು, ಅವರ ಅಗತ್ಯ ಅವರಿಗೆ ಎರಡೂ ಎದ್ದು ಕಾಣಬಹುದು. ಸ್ವಲ್ಪ ದಿನಾ ಆದ ಮ್ಯಾಲೆ ಮತ್ತ ಅಲ್ಲೊಂದು ಪ್ರೀತಿ ಒರತಿ ಹುಟ್ಟಬಹುದು... ಅಂದಕ್ಕಿನೇ ‘ದೂರಿಯಾಂ... ಹೈ ಜರೂರಿ; ಹಾಡ್ಕೊಂತ ನಕ್ಕಿದ್ಲು. ನಕ್ಕೊಂತ ಕಣ್ಣೊರಸಿಕೊಂಡಿದ್ಲು.

ಒಂದು ಮದಿವಿ ಅನ್ನೂ ಬಾಂಧವ್ಯ ಕೊನೀತನಾ ಉಳೀಬೇಕಂದ್ರ ಒಂದು ಹತ್ತು ವರ್ಷ... ಹಲ್ಲು ಕಚ್ಚಿ, ನಿಂತುಬಿಡಬೇಕು. ಕಲ್ಲಾಗಬೇಕು ಎಲ್ಲಾ ಅಪಮಾನ, ಅನುಮಾನಗಳಿಗೆ. ಆಮ್ಯಾಲೆ ಒಂದೋ ಅದೆಲ್ಲ ತಿಳಿಯಾಗಿ ಸುಖೀ ದಾಂಪತ್ಯ ನಿಮ್ಮ ಹಾದಿಗಿರ್ತದ. ಇಲ್ಲಾಂದ್ರ ಅವೆಲ್ಲಾ ಅಭ್ಯಾಸ ಆಗಿಬಿಡ್ತಾವ. ಜೊತಿಗಿದ್ದೂ ದೂರ ಇರುವ ದುರಂತನೂ ಅನುಭವದ ಬುತ್ತಿಯೊಳಗ ಜಾಗ ಪಡದೇ ಬಿಡ್ತದ.

ನಾವ್ಯಾಕ ಇಷ್ಟು ಒಬ್ಬರನ್ನೇ ನೆಚ್ಕೊಂತೀವಿ? ಹಚ್ಕೊಂತೀವಿ? ಇಡೀ ಜಗತ್ತನ್ನೇ ಅವರೊಳಗ ಹುಡುಕತೀವಿ. ಅವರೊಳಗೇ ಪಡೀಬೇಕು ಅಂತ ತಹತಹಸ್ತೀವಿ. ಅವರೊಳಗ ಅಪ್ಪನ ವಾತ್ಸಲ್ಯ ಇರಬೇಕು. ಅಣ್ಣನ ರಕ್ಷಣೆ ಇರಬೇಕು. ಗಂಡನ ಒಲುಮೆ ಇರಬೇಕು. ಸ್ನೇಹಿತನ ಸಾಂಗತ್ಯ ಇರಬೇಕು... ಇವೆಲ್ಲಾ ಕೊಡದಿದ್ರೂ ಇದರೊಳಗ ಒಂದರೆ ಕೊಟ್ರೂ... ಆ ಭರವಸೆಯ ಸೆರಗಿನ ಚುಂಗ ಹಿಡಕೊಂಡು ದಿನಾ ನೂಕಿ ಬಿಡ್ತೀವಿ. ಬಯಕೆ ಈ ಮನಕೆ ಒಂದೆರಡು ಒಳಿತಿನ ಮಾತುಗಳದ್ದು... ಒಂದಿನಿತು ಸಹಾನುಭೂತಿಯದ್ದು.

ಹಂಗೇ ಗಂಡಸರೇನು ಬಯಸ್ತಾರ? ಆ ಕಾರ್ಯೇಶು ಮಂತ್ರಿ... ಅವೆಲ್ಲ ಹೇಳಾಕ ಹೋಗಬ್ಯಾಡ್ರಿ... ಅವರಿಗೆ ತಮ್ಮ ಏಕಾಂತವನ್ನು, ಏಕಾಂಗಿತನವನ್ನು ಸಹನೀಯವಾಗಿಸುವ ಸಾಂಗತ್ಯ ಬೇಕು. ಅಗತ್ಯಗಳನ್ನು ಪೂರೈಸುವ ಯಂತ್ರ ಬೇಕು. ಅರಾಮ ಇರದಾಗ ನೋಡ್ಕೊಳ್ಳುವ ಮಮತೆ ಬೇಕು. ಬದಲಿಗೆ ಏನನ್ನೂ ನಿರೀಕ್ಷಿಸಬಾರದು. ನಿರೀಕ್ಷೆನೇ ಇರದ ಬಾಂಧವ್ಯ ಬೇಕು. ಹೆಂಡತಿಯಾದ ಕೂಡಲೇ ತಮ್ಮ ವ್ಯಕ್ತಿತ್ವನೇ ಮರೆಯುವ ತಾದಾತ್ಮ್ಯ ಬೇಕು.

ಇದರೊಳಗ ಒಂಚೂರು ಏರುಪೇರು ಆದ್ರೂ ಸಮನ್ವಯದ ಬದಲು ಸಂಘರ್ಷನೇ ಹುಟ್ತದ. ಇಡೀ ಸಂಗಾತದ ಬದುಕು ಅಸ್ತಂಗತ ಆಗ್ತ ಹೋಗ್ತದ. ಎಷ್ಟೇ ಪ್ರೀತಿ ಇದ್ರೂ... ಅದರ ಹರಿವಿಗೆ ನಮ್ಮ ಅಹಂಕಾರದ ಒಡ್ಡು ಕಟ್ಟಬಾರದು. ಶಾಂತಕೊಳದ್ಹಂಗ ನಮ್ಮನಸು ಸಮಾಧಾನ ಇರ್ತದ. ಇಲ್ಲಾಂದ್ರ ಆಗಾಗ ಉಕ್ಕಿಳಿಯುವ ಸಮುದ್ರ, ಗಲ್ಲದ ಮ್ಯಾಲೆ ಕಣ್ಣಿನ ಮೂಲಕ ಹನಿ ಸಿಡಿಸಿಯೇ ಬಿಡ್ತದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.