ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್ ಬುಲೆಟ್ ವರ್ಸಸ್ ಪರಮ್ ರಾಕೆಟ್ !

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಿಂಎಂ ಸೈರಾಮ್ ಅವರ ಅಸಮಾಧಾನದ ನಡುವೆಯೂ ಕೈ ಪಕ್ಷದ ಲೋಕಮಾಂಡ್ ಪರಮ್ ಅವರು ಆಡಳಿತಾರೂಢ ಪಕ್ಷದ ಶಾಸಕರ ದಕ್ಷತೆಯನ್ನು ಒರೆಗೆ ಹಚ್ಚಲು ಮೌಲ್ಯಮಾಪನ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ  ಪ್ರಶ್ನೆ ಪತ್ರಿಕೆ ಸಿದ್ಧವಾಗಿದ್ದು, ಅದು ಹೇಗೋ ಲೀಕಾಗಿ ನಮ್ಮ ಕೈ ಸೇರಿದೆ. ಅದರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಲು ಕೆಲ ಶಾಸಕರಿಗೆ ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಪ್ರಶ್ನೆಗಳಿಗೆ ಸಂಭವನೀಯ ಉತ್ತರಗಳನ್ನೂ ನೀಡಲಾಗಿದೆ. ಶಾಸಕರು ಯಾವುದೇ (ಹಾರ್ಡ್)ಕೋರ್ ಮೊಬೈಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

 ಅನ್ನ ಭಾಗ್ಯ ಯೋಜನೆಗೆ ನೀವು ಹೇಗೆ ಶ್ರಮಿಸಿದ್ದೀರಿ?

* ಬಡವರಿಗೆ ರೂಪಾಯಿಗೊಂದು ಕೆ.ಜಿಯಂತೆ ಸರ್ಕಾರ ಅಕ್ಕಿ ನೀಡುತ್ತಿದೆ. ಆದರೆ ಬೇರೆ ಖರ್ಚಿಗೆ (ಗುಂಡು, ತುಂಡು ಇತ್ಯಾದಿ) ಹಣ ಸಾಲದಾಗುವ ಸಂಭವ ಇರುವುದರಿಂದ ಸದರಿ ಅಕ್ಕಿಯನ್ನು 2 ರೂಪಾಯಿಯಂತೆ ಬಡವರಿಂದ ಮರು ಖರೀದಿ ಮಾಡಿ ಅದನ್ನು ಸರ್ಕಾರಕ್ಕೆ ಮರು ವಿತರಣೆಗೆ ಕೆ.ಜಿಗೆ ರೂ.23ರಂತೆ ಮಾರಿದ್ದೇನೆ.
* ಅಕ್ಕಿ ಮೇಲೆ ರಾಮಾಯಣ ಮಹಾಭಾರತ ಬರೆದವರಿದ್ದಾರೆ, ನಾನು ಪ್ರತಿ ಅಕ್ಕಿ ಕಾಳಿನ ಮೇಲೆ ಸೋನಿಯಾಜಿ, ಮನಮೋಹನ್ ಜೀ, ಹಾಗೂ ನಮ್ ಸೈರಾಂ  ಅವರ ಚಿತ್ರ ಬರೆಸಿ ವಿತರಣೆ ಮಾಡಿಸಿದ್ದೇನೆ.
* ಅನ್ನಭಾಗ್ಯ ಯೋಜನೆಯ ಸೋನಾ ಮಸ್ಸೂರಿ ಅಕ್ಕಿಗೆ ಸೋನಿಯಾ ಮಿಸ್ಸೂರಿ  ಭಾಗ್ಯ ಎಂದು ಮರುನಾಮಕರಣ ಮಾಡಿ ಪ್ರಚಾರ ಮಾಡಿದ್ದೇನೆ.
* ಈ ಅನ್ನಭಾಗ್ಯ ಅಕ್ಕಿಯಲ್ಲಿ ಅಕ್ಷತೆ ಮಾಡಿಸಿ ವಧೂ ವರರಿಗೆ ವಿಶೇಷ ‘ಅಕ್ಷತೆ ಭಾಗ್ಯ’ ಶುರು ಮಾಡಿಸಿದ್ದೇನೆ. ಅಕ್ಕಿಯಲ್ಲಿ ಅನ್ನ ಮಾಡಿಸಿ ಬಡವರ ಸೀಮೆಎಣ್ಣೆ ಉಳಿಸಿ ಚಿತ್ರಾನ್ನವನ್ನೇ ನೇರವಾಗಿ ಹಂಚಿ ನನ್ನ ಕ್ಷೇತ್ರದಲ್ಲಿ ಚಿತ್ರಾನ್ನ ಭಾಗ್ಯವನ್ನೂ ಕರುಣಿಸಿದ್ದೇನೆ.

ಕ್ಷೀರ ಭಾಗ್ಯ ಯೋಜನೆಯನ್ನು ಹೇಗೆ ನಿಭಾಯಿಸಿದ್ದೀರಿ?

* ಕೆಎಂಎಫ್ ಎಂದರೆ ಕೈ ಮಿಲ್ಕ್ ಫೆಡರೇಶನ್ ಎಂದು ಪ್ರಚಾರ ಮಾಡಿದ್ದೇನೆ.
* ಕೈ ಮಿಲ್ಕ್ ಕುಡುದ್ರೆ ಮಿಲ್ಕಾ ಸಿಂಗ್ ಆಗಬಹುದು ಎಂದು ಬುಲೆಟ್ ರೈಲು ಬಿಟ್ಟಿದ್ದೇನೆ.
* ಅನ್ನಕ್ಕೇ ಹಾಲು ಕಲೆಸಿ ಕೊಟ್ಟು ಅನ್ನಭಾಗ್ಯ ಹಾಗೂ ಕ್ಷೀರ ಭಾಗ್ಯವನ್ನು ಕಸಿ ಮಾಡಿದ್ದೇನೆ.
* ಹಾಲನ್ನು ನಿಪ್ಪಲ್ ಮೂಲಕ ಕುಡಿಸುವಂತೆ ವ್ಯವಸ್ಥೆ ಮಾಡಿದ್ದು, ಭಾವೀ ಮತದಾರರು ಮುಗ್ಧರಾಗಿಯೇ ಉಳಿಯುವಂತೆ ಮಾಡಲಾಗಿದೆ.
* ಸ್ಕಿಮ್ಡ್ ಮಿಲ್ಕ್ ಪೌಡರ್ ಕೊಡೋದ್ರಿಂದ ವಿರೋಧಿಗಳು ಕೈನೋರು ಪುಡಿ ಹಾಕ್ತಾರೆ ಅನ್ನೋ ಆಪಾದನೆ ಇದೆ. ಅದಕ್ಕೇ ಸ್ಕಿಮ್ ಮಿಲ್ಕ್ ಬದ್ಲು ‘ಚಿಮ್ ಮಿಲ್ಕ್’ ಬರೋ ತರ ಪ್ರತಿ ಶಾಲೆಯಲ್ಲೂ ನಾಲ್ಕು ಎಮ್ಮೆ ಕಟ್ಟೋ ವ್ಯವಸ್ಥೆ ಮಾಡಿಸಿದೀನಿ. ಅವು ಗಂಡಸರಿಗೆ ಹಾಲು ಕೊಡದೆ ಒದ್ದ ಕಾರಣ ಹಾಲು ಕರೆಯಲು ಮಹಿಳಾ ಸಿಬ್ಬಂದಿ ನೇಮಿಸಲಾಗಿದೆ. ಹೀಗಾಗಿ ಉದ್ಯೋಗ ಭಾಗ್ಯ, ಸೆಗಣಿ ಭಾಗ್ಯ ಹೀಗೇ ಅನೇಕ ಭಾಗ್ಯಗಳು ಜಾರಿಗೆ ಬಂದಂತಾಗಿದೆ.

ಈಚಿನ ವರ್ಗಾವಣೆಯಲ್ಲಿ ನಿಮ್ಮ ಪಾತ್ರವೇನು?
* ಎಲೆಕ್ಷನ್ ಟೈಂನಲ್ಲಿ ನಂಗೆ ತೊಡರುಗಾಲು ಹಾಕಿದ್ದ ಎಲ್ಲಾ ಅಧಿಕಾರಿಗಳನ್ನೂ ನುಣ್ಣಗೆ ನೀರು ನೆರಳಿಲ್ಲದ ಜಾಗಕ್ಕೆ ಎತ್ತಂಗಡಿ ಮಾಡಿಸಿದ್ದೇನೆ.
* ವರ್ಷ ಪೂರ್ತಿ ವರ್ಗಾವಣೆ ಇರೋ ಹಾಗೆ ವರ್ಗಾವಣೆ ನೀತಿ ಬದಲಾಯಿಸೋಕೆ ಒತ್ತಾಯ ಮಾಡ್ತಿದೀನಿ.
* ಜನಗಳನ್ನ ಜನತಾ ದರ್ಶನದ ಕಡೆ ತಲೆ ಹಾಕದ ಹಾಗೆ ನೋಡ್ಕಂಡಿದೀನಿ.

ನಿಮ್ಮನ್ನು ಚೀನಾಗೆ ಕಳಿಸಿದರೆ ಏನು ಮಾಡುತ್ತೀರಿ?
* ಅನ್ನಭಾಗ್ಯ ಯೋಜನೆಗೆ ಅಕ್ಕಿ ಬೇಯಿಸಿ ಅದರೊಳಗೆ ಕಪ್ಪೆ, ಹಾವುಗಳನ್ನು ಬೇಯಿಸಿ ಹಾಕಿ ಪ್ಯಾಕ್ ಮಾಡಿಕೊಡುವ ಹೊಸ ಯೋಜನೆ ರೂಪಿಸುವುದು.
* ಜಪಾನ್ ಮತ್ತು ಕೊರಿಯಾ ತಾಂತ್ರಿಕತೆ ಹಾಗೂ ದುಡ್ಡಿನಲ್ಲಿ ರಾಜಧಾನಿಯಿಂದ ಜಿಲ್ಲೆಗೊಂದು ಬುಲೆಟ್ ಟ್ರೈನ್ ಬಿಡುವುದು.
* ಕೈ ಸರ್ಕಾರ ಚೀನಾ ಮಾಲ್ಗಳ ತರ ಖಂಡಂ ಆಗದೆ ಚೀನಾ ಗೋಡೆಯಂತೆ ಅಚಲವಾಗಿರುವ ಅಧ್ಯಯನ ನಡೆಸುವುದು.

ವಸ್ತ್ರಸಂಹಿತೆ ಬೇಕಾ ? ಬೇಡವಾ?
* ವಸ್ತ್ರ ಹೆಚ್ಚಾದಷ್ಟೂ ಕಳ್ಳಜೇಬು ಜಾಸ್ತಿಯಾಗುತ್ತೆ. ಆದ್ದರಿಂದ ಮಿನಿ, ಮಿಡಿ, ಟಿ ಶರ್ಟ್ ಇರೋದೇ ಸರಿ.
* ವಸ್ತ್ರ ಸಂಹಿತೆ ಮಾಡಿದ್ರೆ ಪರಿಷತ್ ಎಲೆಕ್ಷನ್ನಲ್ಲಿ, ಜನರಲ್ ಎಲೆಕ್ಷನ್ನಲ್ಲಿ  ನಾವು ಕೊಟ್ಟ ಸೀರೆ, ಪ್ಯಾಂಟ್ ಪೀಸ್ ಏನು ಮಾಡಬೇಕು? ಇದೆಲ್ಲಾ ಸರಿ ಇಲ್ಲ...
* ಏನು ಮಾಡುದ್ರೂ ಕಷ್ಟನೇ! ಸೀರೆ, ವೇಲ್ ಹಾಕ್ಕಳೋರು ಆಡಳಿತ ಯಂತ್ರಕ್ಕೆ ಸಿಕ್ಕಿಕೊಳ್ತಾರೆ, ಮಿನಿ, ಮಿಡಿ ಹಾಕೋರು ಯಂತ್ರನ ನಿಭಾಯಿಸೋ ಆಪರೇಟರ್ ‘ಕೈ’ಗೆ ಸಿಗೋ ಸಂಭವ ಇರುತ್ತೆ.
* ಬಿಚ್ಚಮ್ಮಗಳ ಬದಲು ಬಿಚ್ ಒಲ್ಲೆ ಅನ್ನೋ ಬಿಚ್ಚೋಲೆ ಗೌರಮ್ಮಗಳೇ ಇದ್ರೆ ಗೌರ್ಮೆಂಟ್ ಆಫೀಸು ಗಾರ್ಮೆಂಟ್  ಆಫೀಸು ಆಗುತ್ತೆ.
* ಏನಾದ್ರೂ ಮಾಡ್ಕೊಳಿ. ನಮಗೆ ಹೇಗಿದ್ರೂ ನೀಲಿಚಿತ್ರ ಇದೆಯಲ್ಲ..!

ಪಾರ್ಟಿ ಫಂಡಿಗೆ ಎಷ್ಟು ಕೊಡ್ತೀರಿ?
* ಇದು ನೀವು ನಿಗಮ ಮಂಡಳಿಗೆ ಛಾನ್ಸ್  ಕೊಡೋದರ ಮೇಲೆ ಅವಲಂಬಿಸಿರುತ್ತೆ

ಅಕ್ರಮ ಮರಳು ದಂಧೆ ಬಗ್ಗೆ ಯಾವ ಕ್ರಮ ತಗೊಂಡಿದೀರಿ?
* ನದಿಯಿಂದ ಮರಳೆತ್ತಿಸಿ ಲೋಡ್ಗಟ್ಟಲೆ ಬೆಂಗಳೂರಿಗೆ ಕಳಿಸಿ ಒಂದಿಷ್ಟು ಲೋಡನ್ನ ಸ್ಟೇಷನ್ ಮುಂದೆ ಹಾಕ್ಸಿ ವಿರೋಧಿಗಳು ಮರಳು ದಂಧೆ ಮಾಡ್ತಿದಾರೆ ಅಂತ ಕೇಸ್ ಹಾಕ್ಸಿದೀನಿ.
* ಬಂಡೆ ಕಲ್ಲು ಜಜ್ಜಿ ಹೊಸದಾಗಿ ಮರಳು ಮಾಡೋ ವಿಧಾನ ಬಂದಿದೆ. ಹಾಗಾಗಿ ಇರೋ ಬರೋ ಬಂಡೆನೆಲ್ಲಾ ಡೈನಾಮೈಟ್ ಇಟ್ಟು ಢಮಾರ್ ಅನಿಸಿದೀನಿ (ಫೈನ್ ಮರಳು ಜರಡಿ ಆಡುವಾಗ ಪಾಲಿಶ್ ಬಿಳಿ ಕಲ್ಲುಗಳು ಸಿಕ್ಕಿದ್ದು ಅವನ್ನು ಅನ್ನಭಾಗ್ಯಕ್ಕೆ ಬೆರೆಸಬಹುದೆಂದು ಕಂಡು ಹಿಡಿದಿದ್ದೇನೆ)
* ಹಳೇ ಡಿಸಿ ಸೀಜ್ ಮಾಡಿದ್ದ ಮರಳನ್ನೆಲ್ಲಾ ಎತ್ತಂಗಡಿ ಮಾಡಿ ಆ ಜಾಗದಲ್ಲಿ ತ್ಯಾಟೆ ಮಣ್ಣು ಹೊಡೆಸಿದೀನಿ.
ಏನಾದರೂ ಹಿಡನ್ ಅಜೆಂಡಾ ಇದೆಯಾ? (ಇದನ್ನು ಗುಪ್ತವಾಗಿರಿಸಲಾಗುತ್ತೆ)
* ನಿಮ್ಮನ್ನ ಡಿಸಿಎಂ ಮಾಡೋದು,
* ಸಿಎಂ ಸೈರಾಮ್ ಅವರನ್ನ ಇನ್ನೊಂದ್ಸಾರಿ ಚೀನಾಕ್ಕೆ ಕಳಿಸಿ ಭಿನ್ನಮತ ಶುರು ಮಾಡೋದು.
* ಸೈರಾಮ್ ಮತ್ತು ನೀವು ಭಾಯಿ ಭಾಯಿ ಅಂತ ತಬ್ಕಳ್ಳದ ಹಾಗೆ ನೋಡ್ಕೊಳೋದು..(ಇದು ಮೌಲ್ಯಮಾಪನದ ಹೆಸರಲ್ಲಿ ಸಿಎಂ ಬುಲೆಟ್ಗೆ ನೀವು ಹಾರಿಸ್ತಿರೋ ರಾಕೆಟ್  ಅಂತ ನಾವೂ ಹೇಳಲ್ಲ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT